ಬೀದರ್: ನಗರಸಭೆ ವ್ಯಾಪ್ತಿಯಲ್ಲಿ 358 ನಿವೇಶನಗಳಿಗೆ ಕಾನೂನುಬಾಹಿರ ಡಿಜಿಟಲ್ ಖಾತೆ ನೀಡಿದ್ದ ಹಾಗೂ ನಗರಸಭೆ ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮವೆಸಗಿದ್ದ ಆರೋಪದ ಮೇಲೆ ಬೀದರ್ ನಗರಸಭೆಯ ಹಿಂದಿನ ಪೌರಾಯುಕ್ತ, ಕಂದಾಯ ಅಧಿಕಾರಿ ಸೇರಿ ಒಟ್ಟು ಎಂಟು ಜನರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಅಮಾನತುಗೊಳಿಸಿದ್ದಾರೆ.
ಹಿಂದಿನ ಪೌರಾಯುಕ್ತ ರವೀಂದ್ರ ಅಂಗಡಿ, ಹಿಂದಿನ ಕಂದಾಯ ಅಧಿಕಾರಿ ಸವಿತಾರೇಣುಕಾ, ಕಂದಾಯ ನಿರೀಕ್ಷಕ ರಾಜಕುಮಾರ, ಸಂಗಮೇಶ, ತೆರಿಗೆ ವಸೂಲಿಗಾರ ರಮೇಶ ಎಲ್.ರಾವ್, ಹಿರಿಯ ಆರೋಗ್ಯ ನಿರೀಕ್ಷಕ ಸೈಯ್ಯದ್ ಶಾಹ ಅಶ್ಪಾಕ್ ಅಲ್ವಿ, ದ್ವಿತೀಯ ದರ್ಜೆ ಸಹಾಯಕ ಫರೀದ್ ಚಂದಾ ಅವರನ್ನು ಮೇ 20ರಂದು ಅಮಾನತು ಮಾಡಲಾಗಿದೆ.
ಬೀದರ್ ಜಿಲ್ಲಾ ಎಸ್.ಸಿ., ಎಸ್.ಟಿ. ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಜಯಕುಮಾರ ಅವರು ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಖಾತೆಗಳಿಗೆ ಡಿಜಿಟಲ್ ಖಾತೆ ಹಾಗೂ ಮ್ಯುಟೇಶನ್ ಮಾಡಿರುವುದು ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು.
ನಗರಸಭೆ ವ್ಯಾಪ್ತಿಯಲ್ಲಿ ಶೇಕಡ 22.75 ಯೋಜನೆಗೆ ಸಂಬಂಧಿಸಿದಂತೆ ಒಟ್ಟು 129 ಅವಧಿ ಪೂರ್ಣಗೊಂಡ ಮಳಿಗೆಗಳಿಗೆ ಬಹಿರಂಗ ಹರಾಜು ಮಾಡದೆ ಸರ್ಕಾರದ ಆದೇಶ ಉಲ್ಲಂಘಿಸಿ ನಿಯಮ ಬಾಹಿರವಾಗಿ ಹಂಚಿಕೆ ಮಾಡಿದ್ದನ್ನು ಉಲ್ಲೇಖಿಸಿ ಪೌರಾಡಳಿತ ಇಲಾಖೆಗೂ ಪತ್ರ ಬರೆದು ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದರು.
ಸರ್ಕಾರ ತನಿಖಾ ತಂಡ ನೇಮಕ ಮಾಡಿತ್ತು. ಈ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಡಾ.ಅಂಬೇಡ್ಕರ್ ವೃತ್ತ ಬಳಿಯ ನಗರಸಭೆಯ 23 ಮಳಿಗೆಗಳು, ರೈಲ್ವೆ ನಿಲ್ದಾಣ ಬಳಿಯ 18 ಮಳಿಗೆಗಳು, ಐಡಿಎಸ್‌ಎಂಟಿ ಯೋಜನೆಯ 62, ಝಡ್.ಎನ್ ರಸ್ತೆಯಲ್ಲಿರುವ 17 ಮಳಿಗೆಗಳ ವಿಲೇವಾರಿ ಕಡತ ಕೇಳಿದರೂ ಲಭ್ಯವಿಲ್ಲವೆಂದು ಸಿಬ್ಬಂದಿ ತಿಳಿಸಿದ್ದರು. 2017-2018ನೇ ಸಾಲಿನಿಂದ ನಿರ್ವಹಿಸಿದ ಕಡತಗಳನ್ನು ಪರಿಶೀಲಿಸಿದಾಗ ಮಳಿಗೆಗಳ ಬಾಡಿಗೆ ಅವಧಿ ಮುಕ್ತಾಯವಾದ ನಂತರ ವಿಲೇವಾರಿ ಕಡತ ಮಂಡಿಸಲಾಗಿತ್ತು.
ಪೌರಾಯುಕ್ತ ರವೀಂದ್ರ ಅಂಗಡಿ ಮಳಿಗೆಗಳ ಮುಂದಿನ ಬಾಡಿಗೆ ನಿರ್ಧರಿಸದೇ ಕಡತವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಕಂದಾಯ ನಿರೀಕ್ಷ ಬಾಡಿಗೆ ಅವಧಿ ಮುಂದುವರಿಸಲು ಕಡತ ಕೊಟ್ಟರೂ ಅದನ್ನು ಪರಿಗಣಿಸಿಲಿಲ್ಲ. ಪೌರಾಯುಕ್ತರು ಸುತ್ತೋಲೆ ಪ್ರಕಾರ ಕ್ರಮ ಕೈಗೊಳ್ಳದೇ ನಿಯಮ ಉಲ್ಲಂಘಿಸಿ 12 ವರ್ಷಗಳ ಅವಧಿಗೆ ಬಾಡಿಗೆ ಕರಾರು ಮಾಡಿ ನೀಡಿದ್ದಾರೆ.
ರವೀಂದ್ರ ಅಂಗಡಿ, ಕಂದಾಯ ಅಧಿಕಾರಿ ಸವಿತಾರೇಣುಕಾ, ಕಂದಾಯ ನಿರೀಕ್ಷಕ ರಮೇಶ ರಾವ್ ಹಾಗೂ ಸಂಗಮೇಶ ಅವರು ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆಯಾಗದ ನಗರದ ವ್ಯಾಪ್ತಿಯಲ್ಲಿ ವಿವಿಧ ಸರ್ವೆ ನಂಬರ್‌ನಲ್ಲಿರುವ ಭೂಪರಿವರ್ತಿತ ಜಮೀನುಗಳಿಗೆ ಖಾತೆ ನೋಂದಣಿ ಮಾಡಿದ್ದಾರೆ. ರಸ್ತೆ, ಉದ್ಯಾನ, ಸಾರ್ವಜನಿಕ ಸೌಲಭ್ಯಕ್ಕೆ ನಿವೇಶನ ಕಾಯ್ದಿರಿಸಿಲ್ಲ. ಇದರಿಂದ ಮೂಲಸೌಕರ್ಯ ಒದಗಿಸಲು ನಗರಸಭೆಗೆ ಆರ್ಥಿಕ ನಷ್ಟ ಆಗಿದೆ ಎಂದು ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.
ಹಿಂದಿನ ಪೌರಾಯುಕ್ತರು ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದ 18 ಕಡತಗಳ ಅನಧಿಕೃತ ವರ್ಗಾವಣೆ ಮಾಡಿ 511 ಅನಧಿಕೃತ ಖಾತೆಗಳಿಗೆ ಅನುಮೋದನೆ ನೀಡಿದ್ದಾರೆ.
ನೆಲ ಭರ್ತಿ ಜಾಗದಲ್ಲಿ ₹ 9,71,316 ಮೊತ್ತದ ಕಾಮಗಾರಿಗಳಿಗೆ ಕೆಟಿಟಿಪಿ ಪ್ರಕಾರ ಟೆಂಡರ್ ಕರೆಯದೇ ಒಂದೇ ದಿನ 10 ಪ್ರತ್ಯೇಕ ಕಡತಗಳನ್ನು ಸೃಷ್ಟಿಸಿ ಐಟಂವಾರು ಕೊಟೇಷನ್ ಆಹ್ವಾನಿಸಿ ಒಂದೇ ಚೆಕ್ ಮೂಲಕ ಹಣ ಪಾವತಿಸಿದ್ದಾರೆ. ಬ್ಲೀಚಿಂಗ್ ಸೇರಿದಂತೆ ₹ 22,74,989 ವೆಚ್ಚದ ಖರೀದಿಗೂ ಟೆಂಡರ್ ಕರೆದಿಲ್ಲ. ಅವರೇ ಕೊಟೇಶನ್ ಸೃಷ್ಟಿಸಿ ಒಂದೇ ಚೆಕ್ ಮೂಲಕ ಹಣ ಪಾವತಿ ಮಾಡಿದ್ದಾರೆ. ಇದಲ್ಲದೇ ವಿವಿಧ ಸಾಮಗ್ರಿಗಳ ಖರೀದಿಗೆ ಟೆಂಡರ್ ಕರೆಯದೇ ಒಂದೇ ದಿನ 31 ಕಡತಗಳನ್ನು ಸೃಷ್ಟಿಸಿ ₹ 22,21,094 ಹಣ ಪಾವತಿ ಮಾಡಿದ್ದಾರೆ. ರವೀಂದ್ರ ಅಂಗಡಿ ಅವರ ಮೇಲೆ ಒಟ್ಟು ಮೂರು ಗಂಭೀರ ಆರೋಪಗಳು ಸಾಬೀತಾಗಿವೆ.
ಪೌರಾಡಳಿತ ಇಲಾಖೆಯ ತನಿಖಾ ತಂಡ ಬೀದರ್‌ಗೆ ಬಂದು ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಪೌರಾಡಳಿತ ಇಲಾಖೆಯ ನಿರ್ದೇಶಕಿ ಎನ್. ಮಂಜುಶ್ರೀ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ರವೀಂದ್ರ ಅಂಗಡಿ ದೇವದುರ್ಗ ಪುರಸಭೆಯಲ್ಲಿ ಪರಿಸರ ಎಂಜಿನಿಯರ್, ಸವಿತಾರೇಣುಕಾ ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ ಕಂದಾಯ ನಿರೀಕ್ಷಕಿ, ಸಂಗಮೇಶ ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಕಂದಾಯ ನಿರೀಕ್ಷಕ, ರಮೇಶ ಎಲ್.ರಾವ್ ಹೂವಿನಹಡಗಲಿ ಪುರಸಭೆಯಲ್ಲಿ ತೆರಿಗೆ ವಸೂಲಿಗಾರ, ಸೈಯದ್ ಶಾಹಾ ಅಶ್ಪಾಕ್ ಅಲ್ವಿ ಸುರಪುರ ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ, ದೀಪಕ ಸಿರುಗುಪ್ಪದ ನಗರಸಭೆಯಲ್ಲಿ ತೆರಿಗೆ ವಸೂಲಿದಾರ, ಫರೀದ್ ಚಂದಾ ಯಡ್ರಾಮಿಯ ಪಟ್ಟಣ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.