ನಾವು ಹಿಂದೂಗಳ ಪರ ಎಂದು ಹೇಳಿಕೊಳ್ಳುವ ಭಾರತೀಯ ಜನತಾ ಪಾರ್ಟಿ ಹಿಂದೂಗಳ ರಕ್ಷಣೆ ಹೆಸರಲ್ಲಿ ಹಿಂದೂಗಳನ್ನು ಬಳಸಿಕೊಂಡು ತನ್ನ ರಾಜಕೀಯ ಅಸ್ತಿತ್ವ ವೃದ್ಧಿಸಿಕೊಳ್ತಿದ್ಯಾ..? ಅನ್ನೋ ಅನುಮಾನ ಸಾಕಷ್ಟು ಜನರಲ್ಲಿ ದಟ್ಟವಾಗಿ ಕಾಡುವುದಕ್ಕೆ ಶುರುವಾಗಿದೆ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಹಿಂದುತ್ವದ ಹೆಸರಲ್ಲಿ ಸಾಕಷ್ಟು ಗಲಾಟೆ ಗದ್ದಲಗಳು ನಡೆದ ಬಳಿಕ, ಸ್ಟೇಷನ್, ಜೈಲು ಅಂತಾ ಸುತ್ತಾಡುವ ಹಿಂದೂ ಮುಖಂಡರು, ಒಂದು ಮಟ್ಟಕ್ಕೆ ನಾಯಕರು ಎಂದು ಗುರುತಿಸಿಕೊಳ್ಳಲು ಶುರು ಮಾಡಿದರೆ ಭಾರತೀಯ ಜನತಾ ಪಾರ್ಟಿ ಸಹಿಸುವುದಿಲ್ಲ. ಇದಕ್ಕೆ ಜೀವಂತ ಉದಾಹರಣೆ ಅಂದರೆ ಮಂಗಳೂರಿನ ಹಿಂದೂಪರ ಮುಖಂಡ ಸತ್ಯಜಿತ್ ಸುರತ್ಕಲ್.

ಹತ್ಯೆ ಆಗುವುದನ್ನೇ ಬಯಸಿದ್ಯಾ ಬಿಜೆಪಿ ಸರ್ಕಾರ..?
ಮಂಗಳೂರಿನ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಕರಾವಳಿ ಭಾಗದಲ್ಲಿ ಸಾಕಷ್ಟು ಸಂಘಟನೆ ಮಾಡಿದ ಮುಖಂಡ ಎಂದರೆ ಅತಿಶಯೋಕ್ತಿ ಅಲ್ಲ. ಸಾಕಷ್ಟು ಗಲಾಟೆ, ಕೋಮುಗಲಭೆ, ನೈತಿಕ ಪೊಲೀಸ್‌ಗಿರಿ ಕೇಸ್‌ಗಳೂ ಸೇರಿದಂತೆ ಹಿಂದೂ ಮುಸ್ಲಿಂ ಗಲಾಟೆಗಳಲ್ಲೂ ಸತ್ಯಜಿತ್ ಸುರತ್ಕಲ್ ಹೆಸರು ಕೇಳಿ ಬರ್ತಿತ್ತು. ಇನ್ನೂ ಇದೇ ಕಾರಣಕ್ಕೆ 15 ವರ್ಷಗಳ ಹಿಂದೆಯೇ ಪ್ರಾಣ ಬೆದರಿಕೆ ಅನ್ನೋ ಕಾರಣಕ್ಕೆ ಸರ್ಕಾರ ಗನ್ ಮ್ಯಾನ್ ನೀಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಗನ್ ಮ್ಯಾನ್ ವಾಪಸ್ ತೆಗೆದುಕೊಂಡಿದೆ. ಮೂಲಭೂತವಾದಿಗಳಿಂದ ನಿರಂತರವಾಗಿ ನನಗೆ ಬೆದರಿಕೆ ಇದೆ. ಆದರೆ ಈಗ ಏಕಾಏಕಿ ಸರ್ಕಾರ ಗನ್ ಮ್ಯಾನ್ ಹಿಂಪಡೆದುಕೊಂಡಿದೆ. ಮೂಲಭೂತವಾದಿಗಳಿಂದ ನಾನು ಹತ್ಯೆಯಾದರೆ ಅದಕ್ಕೆ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಂದು ನೇರವಾಗಿ ಆರೋಪ ಮಾಡಿದ್ದಾರೆ ಸತ್ಯಜಿತ್ ಸುರತ್ಕಲ್.
ʻಅಂತಿಮ ದರ್ಶನಕ್ಕೆ ಸಂಘ ಪರಿವಾರ, ಬಿಜೆಪಿ ನಾಯಕರು ಬರಬೇಡಿʼ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಸತ್ಯಜಿತ್ ಸುರತ್ಕಲ್ ವಾಗ್ದಾಳಿ ನಡೆಸಿದ್ದು, ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಲಾಗಿದೆ. ನನಗೆ ನೀಡಿದ ಭದ್ರತೆಯನ್ನು ವಾಪಸ್ ತೆಗೆದುಕೊಳ್ಳುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕುತಂತ್ರವಿದೆ. ಗೃಹ ಸಚಿವರು ಭದ್ರತೆ ನೀಡಲು ಹೇಳಿದರೂ ಭದ್ರತೆ ಕೊಟ್ಟಿಲ್ಲ ಅಂದ್ರೆ ಅದಕ್ಕೆ ನೇರ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಎಂದಿದ್ದಾರೆ. ನಾನು ರಾಜ್ಯಾದ್ಯಂತ ಸಂಘಟನೆಯ ವಿಚಾರವಾಗಿ ಪ್ರವಾಸ ಮಾಡುತ್ತೇನೆ. ಒಂದು ವೇಳೆ ನನ್ನ ಹತ್ಯೆಯಾದರೆ ನನ್ನ ಅಂತಿಮ ದರ್ಶನಕ್ಕೆ ಬಿಜೆಪಿ ಮುಖಂಡರು ಹಾಗು ಸಂಘ ಪರಿವಾರದ ನಾಯಕರಿಗೆ ಅವಕಾಶ ಇಲ್ಲ. ಈ ಬಗ್ಗೆ ಹಿಂದೂ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದೇನೆ. ಹಿಂದುತ್ವಕ್ಕಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ. ಈಗ ಹಿಂದುತ್ವದ ನೈಜ ಹೋರಾಟಗಾರರಿಗೆ ಬೆಲೆ ಇಲ್ಲ. ಹಿಂದುತ್ವ ಸ್ವಾರ್ಥ ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ಜೀವಕ್ಕೆ ನೀವೇ ಹೊಣೆಗಾರರು, ಯಾರನ್ನೂ ನಂಬಿ ಹೋರಾಟಕ್ಕೆ ಇಳಿಯಬೇಡಿ, ಹಿಂದೂ ಸಂಘಟನೆಯಲ್ಲಿದ್ದವರು ಯಾವುದೇ ಕಾರಣಕ್ಕೂ ಪಕ್ಷ ಹಾಗೂ ಸರ್ಕಾರದ ವಿರುದ್ಧ ಮಾತನಾಡಬಾರದು. ಮಾತನಾಡಿದವರ ವಿರುದ್ಧ ಷಡ್ಯಂತ್ರ ಮಾಡಿ ಟಾರ್ಗೆಟ್ ಮಾಡಲಾಗುತ್ತದೆ ಎಂದು ಹಿಂದೂ ಕಾರ್ಯಕರ್ತರಿಗೆ ಬಹಿರಂಗವಾಗಿ ಸಂದೇಶ ನೀಡಿದ್ದಾರೆ.

ಬಿಜೆಪಿಯಲ್ಲಿ ಈ ರೀತಿಯ ಘಟನೆ ಇದೇ ಮೊದಲಾ..?
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಮುಖಂಡರ ತಾಯಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಹಿಂದೂ ಸಂಘಟನೆ ತಳ ಮಟ್ಟದಿಂದ ಕಟ್ಟಿ ಬೆಳೆಸಿದ ಅರುಣ್ ಪುತ್ತಿಲ ಬಂಡಾಯವಾಗಿ ಸ್ಪರ್ಧೆ ಮಾಡಿದ್ದು, ಆರ್‌ಎಸ್‌ಎಸ್ ಸಂಘಟನೆ ಅರುಣ್ ಪುತ್ತಿಲ ವಿರುದ್ಧ ಸೆಟೆದು ನಿಂತಿದೆ. ಸೋಲಿಸಲು ಪಣತೊಟ್ಟಿದೆ. ಇನ್ನೊಂದು ಕಡೆ ದಿವಂಗತ ನಾಯಕ ಮಹೇಂದ್ರ ಕುಮಾರ್ ಚಿಕ್ಕಮಗಳೂರು ಭಾಗದಲ್ಲಿ ಹಿಂದುತ್ವ ಭದ್ರಬುನಾದಿ ಹಾಕಿದ ನಾಯಕ. ಕೆಲವೇ ವರ್ಷಗಳ ಹಿಂದೆ ಹಿಂದುತ್ವ ಅಜೆಂಡ ಹಿಡಿದಿದ್ದ ಮಹೇಂದ್ರ ಕುಮಾರ್ ಅವರನ್ನು ತುಳಿಯಲಾಯ್ತು. ಆ ಬಳಿಕ ರಾಜಕೀಯ ಶಕ್ತಿ ಪಡೆಯಲು ಮುಂದಾಗಿದ್ದ ಮಹೇಂದ್ರ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇನ್ನು ರಾಷ್ಟ್ರಮಟ್ಟದಲ್ಲಿ ಗುರತಿಸಿಕೊಂಡಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ, ಕಳೆದ ಕೆಲವು ವರ್ಷಗಳಿಂದ ಕಾಣಿಸಿಕೊಳ್ತಿಲ್ಲ. ಅಬ್ಬರದ ಭಾಷಣಕಾರನಾಗಿದ್ದ ಪ್ರವೀಣ್ ತೊಗಾಡಿಯಾ ಹಿಂದುತ್ವವನ್ನು ಯುವಕರ ಮನಸ್ಸಲ್ಲಿ ತುಂಬುವಲ್ಲಿ ಎಕ್ಸ್‌ಫರ್ಟ್ ಆಗಿದ್ದರು. ಸಂಘ ಪರಿವಾರ ಹಾಗು ಬಿಜೆಪಿಯ ಮಸಲತ್ತಿನಿಂದ ಮೂಲೆ ಸೇರಿದ್ದಾರೆ.

ಇಲ್ಲಿ ನಾವು ಉಲ್ಲೇಖಿಸಿರುವುದು ಕೆಲವೊಂದು ಹೆಸರುಗಳು ಮಾತ್ರ. ಹಿಂದುಳಿದ ಸಮುದಾಯಗಳನ್ನು ಬಳಸಿಕೊಂಡು ಸಂಘಟನೆ ಮಡುವ ಆರ್‌ಎಸ್‌ಎಸ್ ಹಾಗು ಬಿಜೆಪಿ, ತಮ್ಮ ಕೆಲಸ ಮುಗಿದ ಬಳಿಕ ಅವರನ್ನು ಮೂಲೆ ಗುಂಪು ಮಾಡುವುದು ಸರ್ವೇ ಸಾಮಾನ್ಯ. ಈ ಸಂಗತಿ ಆಗಾಗ ಕರಾವಳಿ ಸೇರಿದಂತೆ ದೇಶಾದ್ಯಂತ ಚರ್ಚೆಗೆ ಬರುತ್ತದೆ ಆದರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಹಿಂದೂ ಯುವಕರು ಇದನ್ನು ಅರ್ಥ ಮಾಡಿಕೊಲ್ಳುವಲ್ಲಿ ವಿಫಲವಾಗಿದ್ದಾರೆ ಎನ್ನುತ್ತಾರೆ ಹಿರಿಯ ಪತ್ರಕರ್ತರು.