ಉದಯಪುರದಲ್ಲಿ ನಡೆದ ಚಿಂತನ ಮಂಥನ ಶಿಬಿರದಲ್ಲಿ ದೇಶವನ್ನು ಕೂಡಿಸಲು ಭಾರತ ಐಕ್ಯತೆ ಯಾತ್ರೆ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಲು ಎಲ್ಲಾ ನಾಯಕರು ತೀರ್ಮಾನಿಸಿದರು ಎಂದು ಮಅಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, ದೇಶದಲ್ಲಿ ಸಾಮಾಜಿಕ ಸಮರಸ್ಯ ಹಾಳಾಗುತ್ತಿದ್ದು ದೇಶದ ಐಕ್ಯತೆಗೆ ಧಕ್ಕೆ ಬರುತ್ತಿದೆ. ಸಮಾಜದಲ್ಲಿ ಮತ್ತೆ ಸಮರ್ಥ್ಯ ಸ್ಥಾಪಿಸಲು ದೇಶದ ಐಕ್ಯತೆಯನ್ನು ರಕ್ಷಿಸಲು, ಪ್ರಜಾಪ್ರಭುತ್ವ ಕಾಪಾಡಲು, ಸಂವಿಧಾನ ರಚಿಸಲು, ಹೆಚ್ಚಾಗುತ್ತಿರುವ ಧರ್ಮರಾಜ ಕರ್ಣ ಹಾಗೂ ಅದರ ಮೂಲಕ ಸಮಾಜವನ್ನು ಒಡೆಯುವುದರ ವಿರುದ್ಧ ಈ ಪಾದಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ..
ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದು ಅಷ್ಟೇ ಅಲ್ಲದೆ, ದೇಶದಲ್ಲಿರುವ ಎಲ್ಲರಿಗೂ ಸಮಾನತೆ ನೀಡಿ, ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು, ನಮ್ಮ ಬಹುತ್ವ ಸಮಾಜ ಕಾಪಾಡಿ, ಎಲ್ಲಾ ಧರ್ಮಗಳ ನಡುವೆ ಸಮನ್ವಯತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಸಹನೆ, ಸಹಿಷ್ಣುತೆ, ಸಹಬಾಳ್ವೆಯನ್ನು ನಾವು ಸಂವಿಧಾನದ ಮೂಲಕ ಒಪ್ಪಿಕೊಂಡಿದ್ದೇವೆ. ಇದು ಪಾಲನೆ ಆಗಬೇಕು. ಆ ಮೂಲಕ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕು. ಸರ್ವರ ಅಭಿವೃದ್ಧಿಯಾಗಬೇಕು. ಸಮ ಸಮಾಜದ ನಿರ್ಮಾಣ ಮಾಡಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದಿದ್ದಾರೆ.
ಇದೇ ಕಾರಣಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವು, ದೇಶದಲ್ಲಿ ವಿಭಜನೆಯಾಗಿದ್ದ 600 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಟ್ಟುಗೂಡಿಸಿ ಭಾರತ ಸಾರ್ವಭೌಮ ಹಾಗೂ ಒಕ್ಕೂಟ ರಾಷ್ಟ್ರವನ್ನಾಗಿ ಮಾಡಲಾಯಿತು ಎಂದು ಹೇಳಿದ್ದಾರೆ.
ಎಲ್ಲರಿಗೂ ಸಮಾನತೆ ನೀಡುವ ಉದ್ದೇಶದಿಂದ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನಿನ ಸಮಾನ ರಕ್ಷಣೆಯನ್ನು ಮಾಡಲಾಯಿತು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಮೂಲ ಉದ್ದೇಶವಾಗಿದೆ ಎಂದಿದ್ದಾರೆ.
ದೇಶದಲ್ಲಿನ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿತ್ತು. ಆದರೆ ಈಗ ಕೋಮುವಾದಿಗಳಿಗೆ ಅಧಿಕಾರ ಸಿಕ್ಕ ನಂತರ ಸಮಾಜ ಒಡಿಯುವಂತಹ, ಜಾತಿ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ಒಗ್ಗೂಡಿಸಲು, ನಾವೆಲ್ಲರೂ ಭಾರತೀಯರು ಮನುಷ್ಯರು ಎಂಬ ಭಾವನೆಗಳ ಮೂಲಕ ಜನರನ್ನು ಒಗ್ಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ. ಹೀಗಾಗಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ವಾತಂತ್ರ ಸಮಾನತೆ ಹಾಗೂ ಭ್ರಾತೃತ್ವ ಅಂಶಗಳನ್ನು ಪ್ರಸ್ತಾಪಿಸುತ್ತಾರೆ. ಈ ಮೂರು ವಂಶಗಳನ್ನು ನಾವು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಆಗ ಮಾತ್ರ ದೇಶ ಐಕ್ಯತೆಯಿಂದ ಒಗ್ಗಟ್ಟಾಗಿರಲು ಸಾಧ್ಯ. ಹೀಗಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ.

ದೇಶದ ಎಲ್ಲ ರಾಜ್ಯಗಳಲ್ಲೂ ಈ ಪಾದಯಾತ್ರೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3500 ಕಿ.ಮೀ ನಷ್ಟು ದೂರ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.
ಈ ಪಾದಯಾತ್ರೆ ಅನೇಕ ರಾಜ್ಯಗಳಲ್ಲಿ ಹಾದು ಹೋಗಲಿದ್ದು, ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ ದೂರ ಪಾದಯಾತ್ರೆ ಸಾಗಲಿದೆ. ಈ ಪಾದಯಾತ್ರೆಯಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ರಾಹುಲ್ ಗಾಂಧಿಯವರ ಜೊತೆ 125 ನಾಯಕರು ಭಾರತ ಯಾತ್ರಿಗಳಾಗಿ ಎಲ್ಲ ರಾಜ್ಯಗಳಲ್ಲೂ ಹೆಜ್ಜೆ ಹಾಕಲಿದ್ದಾರೆ. ರಾಜ್ಯ ಹಾಗೂ ಬೇರೆ ಬೇರೆ ರಾಜ್ಯದವರು ಸೇರಿದಂತೆ ಕನಿಷ್ಠ 300 ಮಂದಿ ಸದಾ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಅವರ ಜೊತೆ ಸ್ಥಳೀಯ ನಾಯಕರು ಹಾಗೂ ಸ್ಥಳೀಯ ಕಾರ್ಯಕರ್ತರು ಅವರ ಜೊತೆ ಸೇರಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಪಾದಯಾತ್ರೆ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಲಿತ್ತು 30 ರಂದು ಗುಂಡ್ಲುಪೇಟೆಗೆ ಪ್ರವೇಶಿಸುತ್ತಾರೆ. ನಂತರ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಪಾದಯಾತ್ರೆ ಸಾಗಲಿದೆ. ರಾಹುಲ್ ಗಾಂಧಿಯವರು 150 ದಿನಗಳಲ್ಲಿ 3500 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಆ ಮೂಲಕ ಅವರು ಜನರಲ್ಲಿ ಹೊಸ ಭರವಸೆ, ದೇಶ ಅಭಿಮಾನ, ಭಾವನೆ ಮೂಡಿಸಲಿದ್ದಾರೆ. ದೇಶದ 130 ಕೋಟಿ ಜನರು ಅಣ್ಣ-ತಮ್ಮಂದಿರಂತೆ ಬದುಕಬೇಕು.
ಇದರ ಜೊತೆಗೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.