ಸರ್ಕಾರ ಮಾತ್ರ ಬುಲೆಟ್ ಪ್ರೂಫ್ ಕಾರಿನಲ್ಲಿ ಯಾತ್ರೆ ಮಾಡಬೇಕೆಂದು ಬಯಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಕ್ರೋಶ ಹೊರ ಹಾಕಿದರು
ನವದೆಹಲಿ: ಭಾರತ್ ಜೋಡೋ ಯಾತ್ರೆಯ ಮೂಲಕ ಜನರೊಂದಿಗೆ ಹೆಚ್ಚು ಬೆರೆತು ಅವರ ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಹೀಗಿರುವಾಗ ನನಗೆ ಬುಲೆಟ್ ಪ್ರೂಫ್ ಕಾರಿನಲ್ಲಿ ಯಾತ್ರೆ ಮಾಡಲು ಸಾಧ್ಯವಿಲ್ಲ. ನಾನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೈಗೊಂಡಿರುವುದು ಪಾದಯಾತ್ರೆ.
ಆದರೆ ಸರ್ಕಾರ ಮಾತ್ರ ಬುಲೆಟ್ ಪ್ರೂಫ್ ಕಾರಿನಲ್ಲಿ ಯಾತ್ರೆ ಮಾಡಬೇಕೆಂದು ಬಯಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಕ್ರೋಶ ಹೊರ ಹಾಕಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸಾಕಷ್ಟು ಬಾರಿ ಭದ್ರತಾ ನಿಯಮಗಳನ್ನು ಮೀರುತ್ತಿದ್ದಾರೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ ಹೇಳಿತ್ತು. ಈ ವಿಚಾರವಾಗಿ ರಾಹುಲ್ ಗಾಂಧಿ ಪ್ರತಿಕ್ರಿಯಿಸುತ್ತಾ, ವಿವಿಧ ಸಂದರ್ಭಗಳಲ್ಲಿ ಬಿಜೆಪಿ ನಾಯಕರು ಭದ್ರತಾ ನಿಯಮಗಳನ್ನು ಮೀರಿದ್ದಾರೆ. ಹೀಗಿದ್ದೂ ಅವರ ಮೇಲೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಪಕ್ಷಕ್ಕೂ, ವಿರೋಧ ಪಕ್ಷಕ್ಕೂ ವಿಭಿನ್ನ ಪ್ರೋಟೋಕಾಲ್ಗಳು ಇವೆಯಾ ಎಂದು ಪ್ರಶ್ನಿಸಿದರು.
ಭಾರತ್ ಜೋಡೋ ಯಾತ್ರೆ ಜನರ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಹೀಗಿರುವಾಗ ಅಪಪ್ರಚಾರ ಹಾಗೂ ಹಣದ ಮೂಲಕ ಯಾತ್ರೆಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಗಮನ ದ್ವೇಷ ಮತ್ತು ಕೋಪದ ವಿರುದ್ಧ ಹೋರಾಡಲು ಮೀಸಲಿಟ್ಟಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.





