ಇತ್ತೀಚಿಗೆ ಕಾಶ್ಮೀರ ಫೈಲ್ಸ್ ಎಂದ ಚಲನಚಿತ್ರವು ಬಹಳಷ್ಟು ಕರ್ಕಶ ಶಬ್ಧ ಮಾಡಿದೆ. ಈ ಕಳಪೆ ಚಿತ್ರವನ್ನು ಇಡೀ ಸರಕಾರವೇ ಮುಂದೆ ನಿಂತು ಪ್ರಾಯೋಜಿಸಿದ್ದನ್ನೂ ನಾವು ನೋಡಿದ್ದೇವೆ. ಇತ್ತೀಚಿಗೆ ದಿ ವೈರ್ ವೆಬ್ ಜರ್ನಲ್ಲಿನಲ್ಲಿ ಹಿಡನಬರ್ಗ್ ವಿಶ್ವವಿದ್ಯಾಲಯದ ಸೌಥ್ ಏಷಿಯಾ ಇನ್ಸ್ಟಿಟ್ಯೂಟ್ ನ ಪ್ರಾಧ್ಯಾಪಕ ರಾಹುಲ್ ಮುಖರ್ಜಿಯವರು ಈ ಕುರಿತು ಒಂದು ಅಂಕಣವನ್ನು ಬರೆದಿದ್ದಾರೆ. ಆ ಲೇಖನದ ತಿರುಳನ್ನು ನಾನು ಇಲ್ಲಿ ಪುನರ್ ವಿಮರ್ಷಿಸಿದ್ದೇನೆ. ವೈದಿಕ ಮತದ ವೈಭವೀಕರಣ ಹಾಗು ಸರ್ವಧರ್ಮ ಸಮಭಾವದ ಖಂಡನೆಯ ಕತಾವಸ್ತು ಹೊಂದಿರುವ ಕಾಶ್ಮೀರಿ ಫೈಲ್ಸ್ ಚಿತ್ರವು ಭಾರತದಲ್ಲಿ ಜನಾಂಗೀಯ ದ್ವೇಷವನ್ನು ಹುಟ್ಟುಹಾಕಲು ಹೆಣೆದ ಹುನ್ನಾರದ ಭಾಗವಾಗಿದೆ ಎನ್ನುತ್ತಾರೆ ಮುಖರ್ಜಿಯವರು. ಚಿತ್ರವು ಕಾಶ್ಮೀರಿ ಮುಸ್ಲಿಮರು ಎಂದಿಗೂ ತಮ್ಮ ನೆಲದಲ್ಲಿ ಹಿಂದೂಗಳಿಗೆ ಅವಕಾಶ ಕಲ್ಪಿಸುವುದಿಲ್ಲ ಎಂಬ ಹುಸಿ ಸಂದೇಶ ಸಾರುತ್ತ ಮುಸ್ಲಿಮರು ಅಲ್ಲಿನ ಎಲ್ಲಾ ಪಂಡಿತರನ್ನು ಇಸ್ಲಾಂಗೆ ಪರಿವರ್ತಿಸಲು ಬಯಸುತ್ತಾರೆ ಎನ್ನುವ ಸುಳ್ಳು ಸಂದೇಶ ಸಾರುತ್ತದೆ. ಇದನ್ನೇ ಹಿಂದುತ್ವ ಬ್ರಿಗೇಡ್ ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದೆ ಎನ್ನುವ ವಾದವನ್ನು ರಾಹುಲ್ ಮುಖರ್ಜಿ ಮಂಡಿಸಿದ್ದಾರೆ.
ಕಾಶ್ಮೀರ ಫೈಲ್ಸ್ ಎನ್ನುವ ಕಳಪೆ ಗುಣಮಟ್ಟದ ಹಾಗು ಇತಿಹಾಸವನ್ನು ತಿರುಚುವ ಕತಾವಸ್ತುವಿನ ಚಿತ್ರವು ಬಲಪಂಥೀಯರು ಪ್ರತಿಪಾದಿಸುವ ಹಿಂದುತ್ವ ರಾಷ್ಟ್ರದ ಭ್ರಮೆಯನ್ನು ಬಿತ್ತಿ ಜನರನ್ನು ಮನವೊಲಿಸುವ ಒಂದು ಅಭಿವ್ಯಕ್ತಿಯಾಗಿದ್ದು ˌ ಭಾರತೀಯ ಮುಸ್ಲಿಮರು ಈ ಚಿತ್ರದ ನಿರೂಪಣೆಯ ಪ್ರಕಾರ ಪ್ರತ್ಯೇಕ ರಾಷ್ಟ್ರವನ್ನು ಬಯಸುತ್ತ ಅದರಲ್ಲಿ ಹಿಂದೂಗಳಿಗೆ ಅವಕಾಶ ಕಲ್ಪಿಸಲು ಬಯಸುವುದಿಲ್ಲ ಎನ್ನುವ ಹುಸಿ ಸಂದೇಶ ಸಾರುತ್ತದೆˌ ಹಾಗೆಯೇ ಅದು ದೇಶದ ಬಹುತ್ವˌ ಸಹೋದರತೆˌ ಸರ್ವ ಧರ್ಮ ಸಮ ಭಾವದ ಮೌಲ್ಯಗಳ ಪ್ರಬಲವಾದ ಖಂಡನೆಯಾಗಿದೆ ಎಂದು ಮುಖರ್ಜಿ ವಾದಿಸುತ್ತಾರೆ. ಮನುಷ್ಯನ ಒಳಿತಿಗಾಗಿ ಹುಟ್ಟಿಕೊಂಡ ಎಲ್ಲಾ ಧರ್ಮಗಳ ಗುರಿ ಮತ್ತು ದೃಷ್ಟಿಕೋನ ಒಂದೇ ಎನ್ನುವ ಸತ್ಯವನ್ನು ಈ ಚಿತ್ರ ಪರೋಕ್ಷವಾಗಿ ಅಲ್ಲಗಳೆಯುತ್ತದೆ ಎನ್ನುವ ಮಾತು ನಾವೆಲ್ಲರೂ ಒಪ್ಪಲೇಬೇಕಿದೆ.
ಭಾರತದ ಸರ್ವಧರ್ಮ ಸಮಭಾವ ಸಂಪ್ರದಾಯವನ್ನು ನಮ್ಮ ದಾರ್ಶನಿಕರು ಹೇಗೆ ಪ್ರತಿಪಾದಿಸಿದ್ದರೆನ್ನುವ ಕುರಿತು ಬರೆಯುತ್ತ ಮುಖರ್ಜಿಯವರು ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರ ದೃಷ್ಟಿಕೋನವನ್ನು ಹೀಗೆ ವಿವರಿಸುತ್ತಾರೆ: “ಸರ್ವಧರ್ಮ ಸಮಭಾವ ಕಲ್ಪನೆಯನ್ನು ಈ ದೇಶದ ಮಹಾನ್ ದಾರ್ಶನಿಕರಾದ ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರಂತಹ ಸಂತರು ಅರಿತುಕೊಂಡುˌ ಸ್ವೀಕರಿಸಿ ಅಳವಡಿಸಿಕೊಂಡಿದ್ದರು. ಶ್ರೀ ರಾಮಕೃಷ್ಣ ಪರಮಹಂಸರು ಕೇವಲ ಭಕ್ತಿˌ ಜ್ಞಾನ ಮತ್ತು ತಂತ್ರ ಸಾಧನಗಳ ಮಾರ್ಗಗಳನ್ನು ಮಾತ್ರ ಅನುಸರಿಸದೆ, ಅವರು ಸೂಫಿ ಸಂತರ ಮತ್ತು ಕ್ರೈಸ್ತ ಧರ್ಮದ ಸಾಧಕರ ಆದರ್ಶಗಳನ್ನು ಕೂಡ ಅನುಸರಿಸಿದ್ದರು. ಈ ಎಲ್ಲ ಬಗೆಯ ವೈವಿಧ್ಯಮಯ ಸಾಧನಾ ಮಾರ್ಗಗಳನ್ನು ಅನ್ವೇಷಿಸಿದ ನಂತರ, ಶ್ರೀ ರಾಮಕೃಷ್ಣ ಪರಮಹಂಸರು ಹಳೆಯ ವೈದಿಕ ಮತದ ಒಳನೋಟವನ್ನು ಪ್ರತಿಧ್ವನಿಸಿದರು.” ಹೀಗೆ ಭಾರತೀಯ ಬಹುತ್ವ ಪರಂಪರೆಗೆ ತದ್ವಿರುದ್ದವಾದ ಹಿದುತ್ವದ ದ್ವೇಷ ಸಿದ್ಧಾಂತ ಬಿತ್ತುವುದೇ ಈ ಚಲನಚಿತ್ರದ ಮುಖ್ಯ ಉದ್ದೇಶವಾಗಿದೆ.
“ಪರಮಹಂಸ ಮತ್ತು ವಿವೇಕಾನಂದರು ಅಧ್ಯಾತ್ಮ ಸಾಧನೆಗೆ ಹಲವು ಮಾರ್ಗಗಳು ಎನ್ನುವ ಹೊಸ ಸಿದ್ದಾಂತವನ್ನು ಅವರು ಅವಿಷ್ಕರಿಸಿದ್ದರು. ಪರಮಹಂಸರ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರು ಕ್ರೈಸ್ತ ಕ್ಯಾಥೋಲಿಕ್ ಮತ್ತು ವಿವಿಧ ನಂಬಿಕೆಗಳ ಅಗತ್ಯವನ್ನು ಪ್ರಚಾರ ಮಾಡಿದರು ಮಾತ್ರವಲ್ಲದೆ ಪ್ರತಿಯೊಂದು ಧರ್ಮದ ಸಾಧಕ ಇನ್ನೊಂದು ಧರ್ಮದ ಸಾಧಕರಿಂದ ಕಲಿಯಬೇಕು ಎಂದು ಭೋದಿಸಿದರು. ಇದುವೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬದುಕಿನ ಜೀವಂತ ನಂಬಿಕೆಯೂ ಆಗಿತ್ತು. ಈ ಎಲ್ಲ ಐತಿಹಾಸಿಕ ಹಿನ್ನೆಲೆಗಳ ಕಾರಣಗಳಿಗಾಗಿ ಭಾರತೀಯ ಸಂವಿಧಾನವು ಪ್ರತಿಯೊಂದು ಧರ್ಮವನ್ನು ಗೌರವಿಸುವ ಸಂದೇಶ ಹೊಂದಿದ್ದಷ್ಟೇ ಅಲ್ಲದೆ ಇದುವೆ ಭಾರತೀಯ ಮತ್ತು ಹಿಂದೂ ಸಂಪ್ರದಾಯದ ಪ್ರಬಲ ಹಾಗು ಪ್ರಧಾನವಾದ ಮೌಲ್ಯವೆಂದು ಪರಿಗಣಿಸಿದೆ.” ಇದರಿಂದ ವೇದ್ಯವಾಗುವುದೇನೆಂದರೆ ನಮ್ಮ ದಾರ್ಶನಿಕ ಪರಂಪರೆಯನ್ನು ಹಿಂದುತ್ವವಾದಿಗಳು ನಾಶಮಾಡುತ್ತಿದ್ದಾರೆನ್ನುವುದು.
ವೈದಿಕವಾದಿಗಳು ಹಿಂದಿನಿಂದಲೂ ಎಲ್ಲರನ್ನು ಒಳಗೊಳ್ಳುವಿಕೆಯ ಭಾರತೀಯ ಉದಾತ್ ಸಂಸ್ಕೃತಿಯನ್ನು ತನ್ನ ಭೇದಭಾವ ಹಾಗು ಜನಾಂಗೀಯ ದ್ವೇಷದ ಮನಸ್ಥಿತಿಯಿಂದ ಧಿಕ್ಕರಿಸುತ್ತ ಬರುತ್ತಿರುವುದನ್ನು ನಾವು ನೋಡುತ್ತ ಬಂದಿದ್ದೇವೆ. ರಾಹುಲ್ ಮುಖರ್ಜಿಯವರ ಪ್ರಕಾರ ಕಾಶ್ಮೀರ ಫೈಲ್ಸ್ ಚಿತ್ರವು ಮೂಲಭೂತವಾಗಿ ಸರ್ವ ಧರ್ಮ ಸಮ ಭಾವವನ್ನು ವಿರೋಧಿಸುತ್ತದೆ. ಕಾಶ್ಮೀರಿ ಮುಸ್ಲಿಮರು ಅಲ್ಲಿನ ಹಿಂದೂಗಳಿಗೆ ಅಲ್ಲಿರಲು ಎಂದಿಗೂ ಅವಕಾಶ ಕಲ್ಪಿಸಲಾರರು ಎಂದು ಈ ಚಿತ್ರ ಹೇಳುತ್ತದೆ. ಕಾಶ್ಮೀರಿ ಮುಸ್ಲಿಮರು ಭಾರತೀಯ ಸಾಧಕರ ಯಶಸ್ಸನ್ನು ಮೆಚ್ಚುವುದಿಲ್ಲ. ಅವರು ಅಲ್ಲಿರುವ ಎಲ್ಲಾ ಕಾಶ್ಮೀರಿ ಪಂಡಿತರನ್ನು ಇಸ್ಲಾಂಗೆ ಮತಾಂತರಿಸಲು ಬಯಸುತ್ತಾರೆ ಎನ್ನುವುದಾಗಿದೆ. ಈ ಚಲನಚಿತ್ರವು ಅಲ್ಲಿನ ಮುಸ್ಲಿಮರು ಕಾಶ್ಮೀರಿ ಮಹಿಳೆಯರ ಮೇಲೆ ಕೆಟ್ಟ ಕಣ್ಣು ಹಾಕಿರುವ ಅನಾಗರಿಕರೆಂತಲುˌ ಅವರು ಅಲ್ಲಿನ ಹಿಂದೂ ವ್ಯಕ್ತಿಯನ್ನು ಆತನ ಕುಟುಂಬದ ಸದಸ್ಯರ ಎದುರಿನಲ್ಲಿಯೇ ಗುಂಡು ಹಾರಿಸಿ ಸಾಯಿಸುತ್ತಾರೆ ಮತ್ತು ಆತನ ಪತ್ನಿಯು ತನ್ನ ಪತಿಯ ರಕ್ತವನ್ನು ನೆಕ್ಕುವಂತೆ ಮಾಡುತ್ತಾರೆಂತಲೂ ತೋರಿಸಿದೆ.

ಕಾಶ್ಮೀರಿ ಮುಸ್ಲಿಮರು ಮಾಡಿದ ಪಂಡಿತರ ನರಮೇಧವು ಜರ್ಮನಿಯಲ್ಲಿ ಯಹೂದಿಗಳನ್ನು ನಿರ್ನಾಮ ಮಾಡುವ ಹಿಟ್ಲರನ ಕೃತ್ಯವನ್ನು ನೆನಪಿಸುತ್ತದೆ ಎನ್ನುವ ದಾಟಿಯಲ್ಲಿ ಚಿತ್ರದ ಕತಾ ವಸ್ತು ಹೆಣೆಯಲಾಗಿದೆ ಎಂದು ರಾಹುಲ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯಾಗಿ ಹಿಂದುತ್ವವಾದಿಗಳು ಕಾಶ್ಮೀರಿ ಮುಸ್ಲಿಮರನ್ನು ರಾಕ್ಷಸರಂತೆ ವರ್ಣಿಸುವ ಗುಣಲಕ್ಷಣಗಳ ಪಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ ಎನ್ನುತ್ತಾರೆ ಮುಖರ್ಜಿ. ಆ ಕಾರಣದಿಂದಲೇ ಸಂವಿಧಾನದ ೩೭೦ ನೇ ಕಲಮ್ ಅನ್ನು ರದ್ದು ಪಡಿಸಿˌ ಬಹುಸಂಖ್ಯಾತ ಕಾಶ್ಮೀರಿ ಮುಸ್ಲಿಮರು ವಾಸಿಸುವ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಒಕ್ಕೂಟ ಸರಕಾರ ಮಾಡಿದೆ. ಕಾಶ್ಮೀರದಲ್ಲಿ ಚುನಾವಣಾ ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಿ ಹಿಂದೂ ಮತಗಳನ್ನು ಹೆಚ್ಚು ಪ್ರಬಲಗೊಳಿಸುವ ಹುನ್ನಾರ ಕೂಡ ಹಿಂದುತ್ವವಾದಿಗಳದ್ದಾಗಿದೆ.
ಮುಖರ್ಜಿಯವರು ಒಕ್ಕೂಟ ಸರಕಾರದ ಅನೇಕ ನಿರ್ಧಾರಗಳನ್ನು ಪುನರ್ ವಿಮರ್ಶಿಸಿದ್ದಾರೆ. ಕಲಮ್ ೩೭೦ ರ ರದ್ದತಿ ಮತ್ತು ಅಲ್ಲಿ ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಿರುವ ಕುರಿತು ಮುಖರ್ಜಿಯವರು ಬರೆದಿದ್ದಾರೆ. ಮತ್ತೊಂದೆಡೆ, ಬೌದ್ಧರು ಬಹುಸಂಖ್ಯಾತರಾಗಿರುವ ಲಡಾಖ್ ಪ್ರದೇಶವನ್ನು ಮತ್ತೊಂದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಲಡಾಖ್ˌ ಜಮ್ಮು ಮತ್ತು ಕಾಶ್ಮೀರ ಎರಡೂ ನೇರವಾಗಿ ದೆಹಲಿಯ ಮೇಲ್ವಿಚಾರಣೆಯಲ್ಲಿಡಲಾಗಿರುವ ಕುರಿತು ಮುಖರ್ಜಿಯವರು ಹಿಂದುತ್ವವಾದಿಗಳ ಮತಬ್ಯಾಂಕ್ ರಕ್ಷಣೆಯ ಹುನ್ನಾರಗಳೆಂದು ವಿಮರ್ಶಿಸಿದ್ದಾರೆ.
ಬಿಜೆಪಿ ಮತ್ತು ಹಿಂದುತ್ವವಾದಿಗಳ ಕೈಯಲ್ಲಿ ಸಿಲುಕಿರುವ ಭಾರತದ ಆಡಳಿತದಿಂದ ದೇಶವು ವಿನಾಶದೆಡೆಗೆ ಪಯಣಿಸುತ್ತಿದೆ ಎಂದು ಅನೇಕರು ನುಡಿಯಲಾದ ಭವಿಷ್ಯ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ರಾಹುಲ್ ಮುಖರ್ಜಿ ಬರೆದಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದ ನೆಲದಲ್ಲಿ ಬದುಕುವ ಸಮಾನ ಹಕ್ಕಿದೆ. ಅಲ್ಲಿನ ಮುಸ್ಲಿಮರು ಸರ್ವ ಧರ್ಮ ಸಮ ಭಾವದಿಂದ ಬದುಕಬೇಕು ಮತ್ತು ಹಿಂದೂಗಳ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ಅದರಂತೆ ವಾಸ್ತವವಾಗಿ, ಪ್ರತಿ ವರ್ಷ ಅಮರನಾಥಕ್ಕೆ ಭೇಟಿ ನೀಡುವ ಹಿಂದೂ ಯಾತ್ರಿಕರು ಕಾಶ್ಮೀರಿ ಮುಸ್ಲಿಮರ ಔದಾರ್ಯವನ್ನು ಅನುಭವಿಸಿದ್ದಾರೆ. ಕಾಶ್ಮೀರಿ ಪಂಡಿತರು ದಶಕಗಳಿಂದ ಮುಸ್ಲಿಮರೊಂದಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ ಮತ್ತು ಅದನ್ನು ಮುಂದುವರಿಸಿದ್ದಾರೆ. ಹಿಂದುತ್ವವಾದಿಗಳು ನಿರ್ಮಿಸಿರುವ ಈ ಚಿತ್ರವು ಕಾಶ್ಮೀರಿ ಪಂಡಿತರು ಕಣಿವೆಗೆ ಹಿಂತಿರುಗಿಸುವಂತೆ ಮಾಡುವುದಕ್ಕಿಂತ ಹೆಚ್ಚಾಗಿ ಹಿಂದುತ್ವ ರಾಷ್ಟ್ರದ ಕಲ್ಪನೆಯನ್ನು ಉತ್ತೇಜಿಸುತ್ತದೆ ಎಂದು ಕಾಶ್ಮೀರಿ ಪಂಡಿತರು ಅಭಿಪ್ರಾಯಪಟ್ಟಿರುವುದನ್ನು ಮುಖರ್ಜಿಯವರು ಚರ್ಚಿಸಿದ್ದಾರೆ.
ಈ ಚಲನಚಿತ್ರ ವಸತಿಹೀನರಾದ ತಮಗೆ ಯಾವುದೇ ಬಗೆಯಲ್ಲಿ ಸಹಾಯ ಮಾಡಲಾರದು ಎನ್ನುವ ಅಭಿಪ್ರಾಯ ಕಾಶ್ಮೀರಿ ಪಂಡಿತರಲ್ಲಿ ಮನೆಮಾಡಿದೆ ಎನ್ನುತ್ತಾರೆ ಮುಖರ್ಜಿಯವರು. 1990 ರವರೆಗೆ ಕಾಶ್ಮೀರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಶಾಂತಿಯಿಂದ ಬದುಕುತ್ತಿದ್ದರು ಎನ್ನುವ ಅಂಶವನ್ನು ಈ ಚಿತ್ರ ನಿರ್ಲಕ್ಷಿಸಿದೆ ಎನ್ನುತ್ತಾರೆ ರಾಹುಲ್ ಮುಖರ್ಜಿ. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ನ ಮಾಜಿ ಮುಖ್ಯಸ್ಥ ಎ ಎಸ್ ದುಲತ್ ಅವರು ಇತ್ತೀಚೆಗೆ ಈ ಚಲನಚಿತ್ರವನ್ನು ವೀಕ್ಷಿಸಲು ನಿರಾಕರಿಸಿದ್ದಾರಂತೆ. ಡಿಸೆಂಬರ್ 1989 ರಲ್ಲಿ ಐವರು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ ನ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ನಂತರವೇ ಉಗ್ರಗಾಮಿ ಚಟುವಟಿಕೆಗಳು ಕಣಿವೆಯಲ್ಲಿ ತೀವ್ರಗೊಂಡವು ಎಂದು ದುಲತ್ ವರ್ಣಿಸಿದ್ದಾರಂತೆ. ಅಂದು ಬಿಜೆಪಿ ಬೆಂಬಲಿತ ಕೇಂದ್ರ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ಡಾ. ರುಬೈಯಾ ಸಯೀದ್ ಅವರ ಅಪಹರಣ ಮತ್ತು ಆಕೆಯ ಬಿಡುಗಡೆಯ ಷರತ್ತಿಗೆ ಒಪ್ಪಿ ಅಪಾಯಕಾರಿ ಭಯೋತ್ಪಾದಕರನ್ನು ಬಂಧನದಿಂದ ಬಿಡುಗಡೆಗೊಳಿಸಿದ ನಂತರವೇ ಈ ಘಟನೆಗಳು ಸಂಭವಿಸಿವೆ ಎಂದು ದುಲತ್ ಹೇಳಿದ ಬಗ್ಗೆ ಮುಖರ್ಜಿ ವಿವರಿಸಿದ್ದಾರೆ.
1989 ರ ಚುನಾವಣೆಗಳನ್ನು ಹೇಗೆ ಸಜ್ಜುಗೊಳಿಸಲಾಯಿತು ಎಂಬುದನ್ನು ಈ ಚಿತ್ರವು ವಿವರಿಸಲು ವಿಫಲವಾಗಿದೆ ಎಂತಲುˌ ಮತ್ತು ಇದು ವಾಸ್ತವವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದಿಸಿತ್ತು ಎಂತಲೂ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ. ಅಂದು ದಿಲ್ಲಿಯಿಂದ ನಿಯಂತ್ರಿಸಲ್ಪಟ್ಟಿರುವ ಘಟನೆಗಳ ಸರಣಿಯಿಂದ ಚುನಾವಣಾ ಅಕ್ರಮಗಳು ವ್ಯವಸ್ಥಿತವಾಗಿ ನಡೆದವು, ಇದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪದಚ್ಯುತಿಗೆ ಕಾರಣವಾಯಿತು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆ (ಎಎಫ್‌ಎಸ್‌ಪಿಎ) ಮತ್ತು ಕಾಶ್ಮೀರಿ ಮುಸ್ಲಿಮರನ್ನು ಯಾವುದೇ ಕಾನೂನು ಸಹಾಯವಿಲ್ಲದೆ ಅಂದು ಹೇಗೆ ಕೊಲ್ಲಲಾಯಿತು ಮತ್ತು ಜೈಲಿನಲ್ಲಿಡಲಾಯಿತು ಎಂಬುದರ ಕುರಿತು ಈ ಚಿತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ರಾಹುಲ್ ಮುಖರ್ಜಿ ಹೇಳಿದ್ದಾರೆ. ಕಾಶ್ಮೀರವನ್ನು ಖಾಯಂ ಭಾರತ ವಿರೋಧಿ ಕ್ಷೇತ್ರವೆಂದು ಹಿಂದುತ್ವವಾದಿಗಳು ಪರಿಗಣಿಸಿದ್ದರು. ಕಾಶ್ಮೀರಿಗಳ ಪರವಾಗಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಯಶಸ್ವಿ ಉಪಕ್ರಮಗಳ ಬಗ್ಗೆಯಾಗಲಿ ಮತ್ತು ಅವರ ಉತ್ತರಾಧಿಕಾರಿ ಮನಮೋಹನ್ ಸಿಂಗ್ ಅನುಸರಿಸಿದ ಕ್ರಮಗಳ ಬಗ್ಗೆಯಾಗಲಿ ಈ ಚಲನಚಿತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಮುಖರ್ಜಿ ಹೇಳಿದ್ದಾರೆ.
ಭಾರತ ದೇಶವು ಸಂಪತ್ತನ್ನು ಮರುಹಂಚಿಕೆ ಮಾಡುವ ಸಾಮರ್ಥ್ಯ ಹೊಂದಿರುವ ಉದಯೋನ್ಮುಖ ಆರ್ಥಿಕತೆಯ ದೇಶವೆಂದು ಜಾಗತಿಕ ಸಮುದಾಯದಿಂದ ಪರಿಗಣಿಸಲ್ಪಟ್ಟ ಸಮಯದಲ್ಲಿ ಉದಾರವಾದಕ್ಕೆ ಉಭಯಪಕ್ಷೀಯರ ಬೆಂಬಲವಿತ್ತು. ಪಾಕ್ ಆಕ್ರಮಿತ ಕಾಶ್ಮೀರದೊಂದಿಗಿನ ಸರಂಧ್ರ ಗಡಿಗಳ ನೀತಿಯು ಭಾರತವನ್ನು ಹೇಗೆ ಬಲಪಡಿಸಿತು ಎಂಬುದನ್ನು ಸುಲಭವಾಗಿ ಉಪೇಕ್ಷಿಸಲಾಗಿದೆ. ಅಂದಹಾಗೆ, ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರಂತೆಯೇ ವಾಜಪೇಯಿಯವರನ್ನೂ ಕೂಡ ಹಿಂದುತ್ವವಾದಿಗಳು ದುಷ್ಟರೆಂದು ಪರಿಗಣಿಸಿದ್ದಾರೆ ಎಂದು ಮುಖರ್ಜಿ ಅಭಿಪ್ರಾಯ ಪಟ್ಟಿದ್ದಾರೆ. ಈ ಚಿತ್ರದಲ್ಲಿ ಗುಪ್ತವಾಗಿ ಕೆಲಸ ಮಾಡಿರುವ ಹಿಂದೂ ರಾಷ್ಟ್ರೀಯತಾವಾದಿ ನಿರೂಪಣೆಯು ಎಲ್ಲಾ ಜಾತ್ಯತೀತ-ಉದಾರವಾದಿ ಬುದ್ಧಿಜೀವಿಗಳನ್ನು ರಾಷ್ಟ್ರವಿರೋಧಿಗಳಂತೆ ಚಿತ್ರಿಸಿದೆ. ಇಂದಿನ ಒಕ್ಕೂಟ ಸರ್ಕಾರವು ಜೆಎನ್‌ಯು ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವುದರ ಹಿಂದಿನ ಕಾರಣವೇನೆಂದರೆ ಆ ಸಂಸ್ಥೆಯು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಭಾರತದ ಕಲ್ಪನೆಯನ್ನು ಎತ್ತಿಹಿಡಿಯುತ್ತಿರುವುದೆ ಆಗಿದೆ ಎನ್ನುತ್ತಾರೆ ಮುಖರ್ಜಿಯವರು.
ಇಂದಿನ ಒಕ್ಕೂಟ ಸರಕಾರದ ಸಂಪುಟದಲ್ಲಿ ಇಬ್ಬರು ಪ್ರಮುಖ ಕ್ಯಾಬಿನೆಟ್ ಮಂತ್ರಿಗಳು ಹಾಗು ಇನ್ನೂ ಅನೇಕ ನಾಗರಿಕ ಸೇವೆಯ ಅಧಿಕಾರಿಗಳು ಜೆಎನ್‌ಯುನಿಂದ ಬಂದವರಾಗಿರುವುದು ಆಶ್ಚರ್ಯದ ಸಂಗತಿಯೇನಲ್ಲ. ಜೆಎನ್‌ಯುನಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕನಾಗಿದ್ದ ನಾನು, ಮತ್ತು ನನ್ನಂತೆ ಅಲ್ಲಿನ ಎಲ್ಲಾ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಅಂಶವನ್ನು ಒಪ್ಪಿಕೊಂಡವರೇ ಆಗಿದ್ದೇವೆಂದು ದೃಢೀಕರಿಸುತ್ತೇನೆ ಎನ್ನುತ್ತಾರೆ ಮುಖರ್ಜಿಯವರು. ಆದರೆ ಕಾಶ್ಮೀರ್ ಫೈಲ್ಸ್ ಚಲನಚಿತ್ರವು JNU ನ ವಿದ್ವತ್ಪೂರ್ಣ ಸಾಧನೆಗಳನ್ನು ಹಾಗು ಅದು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರ ಶ್ರೇಯಾಂಕದ ಸಂಸ್ಥೆ ಎಂದು ಪರಿಗಣಿಸಿಲ್ಲ ಎನ್ನುತ್ತಾರೆ ಮುಖರ್ಜಿಯವರು. ಸರ್ವ ಧರ್ಮ ಸಮ ಭಾವದ ಭಾರತೀಯ ಉನ್ನತ ಪರಂಪರೆಯನ್ನು ನಾವು ಏಕೆ ಮರೆಯಬೇಕು ಎಂಬುದಕ್ಕೆ ಕಾಶ್ಮೀರ್ ಫೈಲ್ಸ್ ಚಿತ್ರ ಮೂರು ಕಾರಣಗಳನ್ನು ನಮಗೆ ಒದಗಿಸುತ್ತದೆ ಎನ್ನುತ್ತಾ ಆ ಕಾರಣಗಳನ್ನು ಆ ಚಿತ್ರದ ವೈದಿಕ ನಿರೂಪಣೆಯ ಪ್ರಕಾರ ಈ ರೀತಿಯಾಗಿ ಮುಖರ್ಜಿಯವರು ಗುರುತ್ತಿಸುತ್ತಾರೆ:
◼️ಹಿಂದೂಗಳೆಲ್ಲರೂ ಒಳ್ಳೆಯವರು ಮತ್ತು ಮುಸ್ಲಿಮರೆಲ್ಲರೂ ಕೆಟ್ಟವರು.
◼️ಜಾತ್ಯತೀತ ಬುದ್ಧಿಜೀವಿಗಳು ಮತ್ತು ಅಂತಹ ಬುದ್ದಿಜೀವಿಗಳಿರುವ ಸಂಸ್ಥೆಗಳು ಕಾಶ್ಮೀರ ವಿಷಯವನ್ನು ತಪ್ಪಾಗಿ ಗ್ರಹಿಸಿವೆ.
◼️ಅಂತಿಮವಾಗಿ, ಕಾಶ್ಮೀರಿ ಮುಸ್ಲಿಮರು ಯಾವುದೇ ರೀತಿಯಲ್ಲೂ ಕ್ಷಮೆಗೆ ಅರ್ಹರಲ್ಲ ಏಕೆಂದರೆ ಅವರು ಹಿಂದೂಗಳ ನರಮೇಧ ಮಾಡಿದ್ದಾರೆ.
ಭಾರತದ ಸರ್ವಧರ್ಮ ಸಮಭಾವ ಸಿದ್ಧಾಂತವನ್ನು ಅಪೂರ್ಣ ಹಾಗು ಅರ್ಥಹೀನಗೊಳಿಸುತ್ತಿರುವ ವೈದಿಕವಾದಿಗಳ ಕಾರ್ಯಗಳು ಈ ದೇಶವನ್ನು ಎಷ್ಟರಮಟ್ಟಿಗೆ ಪ್ರಪಾತಕ್ಕೆ ತಳ್ಳುತ್ತಿವೆ ಎಂಬುದನ್ನು ಭಾರತೀಯರಾದ ನಾವು ಕಣ್ಣು ತೆರೆದೆ ನೋಡುವ ಅಗತ್ಯವಿದೆ. ಮೊಹಮ್ಮದ್ ಅಲಿ ಜಿನ್ನಾ ಮತ್ತು ಅನೇಕ ಪಾಶ್ಚಿಮಾತ್ಯ ವಿದ್ವಾಂಸರು 1947 ರಲ್ಲಿ ಭಾರತವು ಕೇವಲ ವಸಾಹತುಶಾಹಿಗಳ ನಿರ್ಮಾಣವಾಗಿದ್ದು ಅದು ಶೀಘ್ರದಲ್ಲೇ ಒಣಗಿ ಹೋಗುತ್ತದೆ ಎಂದು ಭಾವಿಸಿದ್ದರು. ಇಂದು ಅದೇ ವಸಹಾತುಶಾಹಿಗಳ ಆರ್ಥಿಕ ನೆರವಿನಿಂದ ಅಧಿಕಾರದ ಗದ್ದುಗೆ ಹಿಡಿದು ಕುಳಿತಿರುವ ಹಿಂದುತ್ವ ಪ್ರಣೀತ ರಾಷ್ಟ್ರೀಯತೆಯ ನಿಯಂತ್ರಣದಲ್ಲಿರುವ ಪ್ರಭುತ್ವವು ಅಂದಿನ ವಸಾಹತುಶಾಹಿ ಭವಿಷ್ಯವಾಣಿಯನ್ನು ಇಂದು ಈಡೇರಿಸುತ್ತಿದೆ ಎಂದು ರಾಹುಲ್ ಮುಖರ್ಜಿಯವರು ಖಚಿತವಾಗಿ ಅಭಿಪ್ರಾಯಪಟ್ಟಿದ್ದಾರೆ.
~ ಡಾ. ಜೆ ಎಸ್ ಪಾಟೀಲ.