• Home
  • About Us
  • ಕರ್ನಾಟಕ
Wednesday, October 1, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಡಿಜಿಟಲ್‌ ಯುಗದಲ್ಲಿ ಭಗತ್‌ ಸಿಂಗ್‌-ನಾಸ್ತಿಕತೆ

ಪ್ರತಿಧ್ವನಿ by ಪ್ರತಿಧ್ವನಿ
September 28, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ರಾಜಕೀಯ ಕ್ರಾಂತಿಕಾರಿ ಭಗತ್‌ ಸಿಂಗ್‌ ಮಾರ್ಕ್ಸ್‌ವಾದಿ ನೆಲೆಯ ನಾಸ್ತಿಕ ಚಿಂತಕನೂ ಹೌದು
ನಾ ದಿವಾಕರ

ADVERTISEMENT

 ವರ್ತಮಾನದ ಡಿಜಿಟಲ್‌ ಯುಗದಲ್ಲಿ, ಮಿಲೆನಿಯಂ ಯುವ ಸಮುದಾಯ ಸಮಕಾಲೀನ ಮಾರ್ಗದರ್ಶಕ ಮಾದರಿ ವ್ಯಕ್ತಿತ್ವಗಳನ್ನೇ ಕಾಣಲಾಗದ ಸ್ಥಿತಿಯಲ್ಲಿರುವಾಗ, ಸಹಜವಾಗಿಯೇ ನಾವು ಚರಿತ್ರೆಯ ಕಡೆ ಹೊರಳಬೇಕಾಗುತ್ತದೆ. ಸ್ವತಂತ್ರ ಭಾರತ ಇಂತಹ ಅನುಕರಣೀಯ ಮಾದರಿ ವ್ಯಕ್ತಿತ್ವ ಅಥವಾ ಚಿಂತನಾಧಾರೆಗಳನ್ನು ಸೃಷ್ಟಿಸಿಲ್ಲ ಎಂಬ ಹತಾಶೆಯ ನಡುವೆಯೇ, ಸ್ವಾತಂತ್ರ್ಯದ ಪೂರ್ವಸೂರಿಗಳಲ್ಲಿ ಸಮಾಧಾನಕರ ಬೌದ್ಧಿಕ ಆಲೋಚನೆಗಳನ್ನು ಗುರುತಿಸಬಹುದು. ಗಾಂಧಿ, ಫುಲೆ, ಠಾಗೋರ್‌, ನಾರಾಯಣಗುರು, ಅಂಬೇಡ್ಕರ್‌ ಮೊದಲಾದ ದಾರ್ಶನಿಕರ ನಡುವೆ, ಇಂದಿನ ಯುವ ಸಮೂಹದ ಅಭ್ಯುದಯದ ಹಾದಿಯಲ್ಲಿ ನಮಗೆ ಕಾಣುವ ವ್ಯಕ್ತಿ ಶಹೀದ್‌ ಭಗತ್‌ ಸಿಂಗ್. 1907ರಲ್ಲಿ ಜನಿಸಿ, ತನ್ನ ಕ್ರಾಂತಿಕಾರಿ ಹೋರಾಟ ಮತ್ತು ಸಂದೇಶದೊಂದಿಗೆ, 1931ರಲ್ಲಿ ಬ್ರಿಟೀಷ್‌ ವಸಾಹತುಶಾಹಿಯ ಕ್ರೌರ್ಯಕ್ಕೆ ಬಲಿಯಾದ ಭಗತ್‌ ಸಿಂಗ್‌ನ ಜೀವನ ಸಂದೇಶ ಮತ್ತು ಅದರ ಔದಾತ್ಯವನ್ನು  ಎರಡು ನೆಲೆಗಳಲ್ಲಿ ವ್ಯಾಖ್ಯಾನಿಸಬಹುದು.

 ಕ್ರಾಂತಿಯ ಆದರ್ಶ ಮತ್ತು ಮಾರ್ಗ

 ಮೊದಲನೆಯದಾಗಿ,  ಒಬ್ಬ ಯುವ ಕ್ರಾಂತಿಕಾರಿಯಾಗಿ ತನ್ನ ಸೈದ್ದಾಂತಿಕ ಸ್ಪಷ್ಟತೆ, ತಾತ್ವಿಕ ಬದ್ಧತೆ ಮತ್ತು ಅಪ್ರತಿಮ ದೇಶಪ್ರೇಮದ ಮೂಲಕ ಆ ಯುಗದ ಯುವ ಸಮೂಹವನ್ನು ವಸಾಹತು ದಾಸ್ಯದ ವಿರುದ್ದ ಹೋರಾಡಲು ಹುರಿದುಂಬಿಸಿದ ಸಂಗ್ರಾಮಿಯಾಗಿ. ಭಗತ್‌ ಸಿಂಗ್‌ನ ತಾತ್ವಿಕ ನೆಲೆಗಳು ಕೇವಲ ವಸಾಹತುಶಾಹಿಗೆ ಸೀಮಿತವಾಗಲಿಲ್ಲ, ಅದನ್ನೂ ದಾಟಿ ಇಂದಿಗೂ ವಿಶ್ವದ ದುಡಿಯುವ ವರ್ಗಗಳಿಗೆ ಕಂಟಕಪ್ರಾಯವಾಗಿರುವ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗೂ ವಿಸ್ತರಿಸಿತ್ತು. ಅಂಬೇಡ್ಕರ್‌ ಸ್ವಾತಂತ್ರ್ಯವನ್ನು ಆರ್ಥಿಕ-ರಾಜಕೀಯ-ಸಾಮಾಜಿಕ ಎಂಬ ಮೌಲ್ಯಗಳ ದೃಷ್ಟಿಯಿಂದ ನಿರ್ವಚಿಸಿದ ಹಾಗೆಯೇ ಭಗತ್‌ ಸಿಂಗ್‌ ಭಾರತದ ಸ್ವಾತಂತ್ರ್ಯವನ್ನು ಶ್ರಮಜೀವಿಗಳ ವಿಮೋಚನೆ ಮತ್ತು ಬಂಡವಾಳಶಾಹಿಯ ದಾಸ್ಯದಿಂದ ಮುಕ್ತಗೊಳಿಸುವ ಕನಸು ಕಂಡಿದ್ದರು.

 ಇಂದು ಪ್ರಪಂಚದ ವಿವಿಧ ದೇಶಗಳ , ವಿಶೇಷವಾಗಿ ನೆರೆ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಆಳ್ವಿಕೆಗಳನ್ನು ಪಲ್ಲಟಗೊಳಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿರುವ Gen Z ಎಂದರೆ, ನವ ಯುಗದ ತಲೆಮಾರಿನ ಭವಿಷ್ಯದ ಕನಸುಗಳನ್ನು ನನಸು ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ, ನೂರು ವರ್ಷದ ಹಿಂದೆ ಭಗತ್‌ ಸಿಂಗ್‌ ಯುವ ಸಮುದಾಯಕ್ಕೆ ನೀಡಿದ ಸಂದೇಶಗಳು ಸಹಜವಾಗಿ ಪ್ರಸ್ತುತ ಎನಿಸುತ್ತವೆ. ಭಗತ್‌ ಸಿಂಗ್‌ ಮತ್ತು ಆತನ ಸಂಗಡಿಗರು ಅನುಸರಿಸಿದ ಮಾರ್ಗವನ್ನು ಹಿಂಸಾತ್ಮಕ ಎಂದು ಬಣ್ಣಿಸಿದ ಚಾರಿತ್ರಿಕ ಪ್ರಮಾದವನ್ನು ಬದಿಗಿಟ್ಟು ನೋಡಿದಾಗ, ಆಳುವ ವರ್ಗಗಳ ಶೋಷಣೆ ಮತ್ತು ದಬ್ಬಾಳಿಕೆಗಳನ್ನು ಸಮರ್ಥವಾಗಿ ಎದುರಿಸಲು ಆತ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗುತ್ತವೆ.

 ಭಗತ್‌ ಸಿಂಗ್‌ ಮತ್ತು ಆತನ ಸಂಗಡಿಗರಿಗೆ ಕ್ರಾಂತಿ ಎನ್ನುವುದು ಕೇವಲ ಶಸ್ತ್ರಾಸ್ತ್ರಗಳ ಮೂಲಕ, ಹಿಂಸಾತ್ಮಕ ಮಾರ್ಗದಲ್ಲಿ ಆಳುವವರನ್ನು ಪಲ್ಲಟಗೊಳಿಸುವ, ವ್ಯವಸ್ಥೆಯನ್ನು ಪರಿವರ್ತಿಸುವ ಕಲ್ಪನೆ ಆಗಿರಲಿಲ್ಲ. ವರ್ತಮಾನದ ಕೆಲವು ಸಶಸ್ತ್ರ ಹೋರಾಟಗಳ ದೃಷ್ಟಿಯಿಂದ ನೋಡಿದಾಗ, ಭಗತ್‌ ಸಿಂಗ್‌ಗೆ ಕ್ರಾಂತಿಯ ಹಾದಿ Romanticism ಆಗಿರಲಿಲ್ಲ. ಅಥವಾ ಅಂದಿನ ನಾಯಕರು ಭಾವಿಸಿದ್ದಂತೆ ಅರಾಜಕತಾವಾದವೂ ಆಗಿರಲಿಲ್ಲ. ಒಂದು ಸ್ವತಂತ್ರ ರಾಷ್ಟ್ರವನ್ನು ಸಾರ್ವಭೌಮತ್ವದ ನೆಲೆಯಲ್ಲಿ, ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ, ಸರ್ವ ಸಮಾನತೆಯ ಕಲ್ಪನೆಯೊಂದಿಗೆ ಕಟ್ಟುವ ಕನಸು ಆತನದಾಗಿತ್ತು. ಆ ಹೋರಾಟದ ಹಾದಿಯಲ್ಲಿ ನಡೆದ ಕೆಲವು ಘಟನೆಗಳನ್ನು ಹೊರತುಪಡಿಸಿದರೆ, ಸೈದ್ದಾಂತಿಕವಾಗಿ ಭಗತ್‌ ಸಿಂಗ್‌ ವಿಶ್ವಮಾನವತೆ ಮತ್ತು ಅಂತಾರಾಷ್ಟ್ರೀಯ ಭ್ರಾತೃತ್ವ-ಸೋದರಿತ್ವವನ್ನು ಸಾಧಿಸಲು ಅವಲಂಬಿಸಿದ್ದು, ಮಾರ್ಕ್ಸ್‌ವಾದವನ್ನು ಮತ್ತು ಲೆನಿನ್‌ ಅನುಸರಿಸಿದ ಹಾದಿಯನ್ನು.

ಭಾರತ ಇಂದಿಗೂ ಹಸಿವೆ, ಬಡತನ, ನಿರುದ್ಯೋಗ, ಅನಕ್ಷರತೆ, ಮೂಢ ನಂಬಿಕೆಗಳು, ಅಂಧಶ್ರದ್ಧೆ ಮತ್ತು ದಬ್ಬಾಳಿಕೆಗಳ ಆಕರಗಳಾದ ಪಿತೃಪ್ರಧಾನತೆ, ಊಳಿಗಮಾನ್ಯತೆ ಮತ್ತು ಆರ್ಥಿಕ ಶೋಷಣೆಗಳಿಂದ ಮುಕ್ತವಾಗಿಲ್ಲ ಎಂಬ ವಾಸ್ತವವನ್ನು ಗಮನದಲ್ಲಿಟ್ಟು ನೋಡಿದಾಗ, ಭಗತ್‌ ಸಿಂಗ್‌ ಕಂಡ ಕನಸುಗಳು ಎಂತಹ ದಾರ್ಶನಿಕ ಔದಾತ್ಯವನ್ನು ಹೊಂದಿದ್ದವು ಎಂದು ಅರಿವಾಗುತ್ತದೆ. ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿ, ತಳಸಮಾಜದಲ್ಲಿ ಹಿಗ್ಗಿಸುತ್ತಿರುವ ಅಸಮಾನತೆಗಳನ್ನು ಮತ್ತು ಹೆಚ್ಚಿಸುತ್ತಿರುವ ದೌರ್ಜನ್ಯಗಳನ್ನು ಗಮನಿಸಿದಾಗ, ವರ್ತಮಾನ ಭಾರತದ ಮಿಲೆನಿಯಂ ಸಮೂಹಕ್ಕೆ ಭಗತ್‌ ಸಿಂಗ್‌ ಹಾಕಿಕೊಟ್ಟ ಉದಾತ್ತ ಮಾರ್ಗಗಳನ್ನು ತಲುಪಿಸುವುದು ನಮ್ಮ ಆಯ್ಕೆ ಮತ್ತು ಆದ್ಯತೆಯಾಗುತ್ತದೆ. ಭಗತ್‌ ಸಿಂಗ್‌ ಸಾಂದರ್ಭಿಕವಾಗಿ ಅನುಸರಿಸಿದ ಮಾರ್ಗಗಳಿಗೂ, ಭವಿಷ್ಯದ ದೃಷ್ಟಿಯಿಂದ ರೂಪಿಸಿದ ತಾತ್ವಿಕತೆಗೂ ಇರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸಬೇಕಿರುವುದು ವರ್ತಮಾನದ ತುರ್ತು.

 ವೈಚಾರಿಕ-ವೈಜ್ಞಾನಿಕ ಅರಿವಿನ ಹಾದಿ

 ಎರಡನೆಯದಾಗಿ ನಾವು ಗುರುತಿಸಬೇಕಿರುವುದು, ಕ್ರಾಂತಿ-ಹೋರಾಟ-ಚಳುವಳಿಗಳಿಂದಾಚೆಗೆ ಭಗತ್‌ ಸಿಂಗ್‌ ಅನುಸರಿಸಿದ ಹಾಗೂ ವ್ಯಾಖ್ಯಾನಿಸಿದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು. ಬಹಳ ಮುಖ್ಯವಾಗಿ ಇದನ್ನು ಭಗತ್‌ ಸಿಂಗ್‌ನ ನಾಸ್ತಿಕತೆಯಲ್ಲಿ ಗುರುತಿಸಲಾಗುತ್ತದೆ.  ಆತನ ʼ ನಾನೇಕೆ                 ನಾಸ್ತಿಕ ʼ ಕೃತಿಯನ್ನು ಮಿಲೆನಿಯಂ ಸಮೂಹ ಗಂಭೀರವಾಗಿ ಅಧ್ಯಯನ ಮಾಡಬೇಕಿದೆ. ಏಕೆಂದರೆ ಅದು ಕೇವಲ ದೇವರು ಅಥವಾ ಅತೀತತೆಯನ್ನು ನಂಬದ, ಮೂರ್ತಿಭಂಜಕ, ಯಾವುದೇ ಮತ ಅಥವಾ ಧಾರ್ಮಿಕ ಸಂಪ್ರದಾಯಗಳನ್ನು ಸ್ವೀಕರಿಸದ ತಾತ್ವಿಕ ನಿಲುವು ಆಗಿರಲಿಲ್ಲ. ಇದನ್ನೂ ದಾಟಿ, ಬ್ರಿಟೀಷ್‌ ವಸಾಹತುಶಾಹಿಯ ಆಡಳಿತಾತ್ಮಕ ದೌರ್ಜನ್ಯ, ಭಾರತದ ಶ್ರೇಣೀಕೃತ ಸಮಾಜದ ಜಾತಿ ದೌರ್ಜನ್ಯ-ತಾರತಮ್ಯ, ಪಿತೃಪ್ರಧಾನ ಸಮಾಜದ ಮಹಿಳಾ ವಿರೋಧಿ ತಾರತಮ್ಯ ಮತ್ತು ಆಳುವ ವರ್ಗಗಳ ದಮನಕಾರಿ ನೀತಿಗಳು, ಇವೆಲ್ಲವನ್ನೂ ವೈಚಾರಿಕ ನೆಲೆಯಲ್ಲಿ ವ್ಯಾಖ್ಯಾನಿಸುವ  ನಾಸ್ತಿಕತೆಯ ಒಂದು ಮಾದರಿಯಾಗಿತ್ತು.

 ಭಗತ್‌ ಸಿಂಗ್‌ ಮಾರ್ಕ್ಸ್-ಏಂಗೆಲ್ಸ್‌ ಅವರ ಚಾರಿತ್ರಿಕ ಭೌತವಾದ, ವೈಜ್ಞಾನಿಕ ಸಮಾಜವಾದ ಮತ್ತು ಗತಿತಾರ್ಕಿತೆಯ ಸೈದ್ಧಾಂತಿಕ ನೆಲೆಯಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕ ಪ್ರಜ್ಞೆ ಮತ್ತು ನಾಸ್ತಿಕತೆಯನ್ನು ರೂಢಿಸಿಕೊಂಡಿದ್ದನ್ನು ಗುರುತಿಸಬಹುದು. ಪೆರಿಯಾರ್‌ ತಮ್ಮ ನಾಸ್ತಿಕತೆಯನ್ನು ಮೂರ್ತಿಭಂಜಕ ಕ್ರಿಯೆಗಳ ಮೂಲಕ ವ್ಯಕ್ತಪಡಿಸಿದರೆ, ಭಗತ್‌ ಸಿಂಗ್‌ ತಮ್ಮ ನಾಸ್ತಿಕ ಚಿಂತನೆಗಳಿಗೆ ಭಾರತದ ಶೋಷಿತ ವರ್ಗಗಳ ಅಸಮಾನತೆಯ ಬದುಕು ಮತ್ತು ಶೋಷಣೆಯ ಆಯಾಮಗಳನ್ನು ಆಧಾರವಾಗಿ ಪರಿಗಣಿಸಿದ್ದರು. ಬ್ರಿಟೀಷ್‌ ಬಂಡವಾಳಶಾಹಿ ಮತ್ತು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಇವೆರಡನ್ನೂ ಮೀರಿ, ತಳಸಮಾಜದ ಸಮಸ್ತರನ್ನೂ ಆವರಿಸಿದ್ದ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು, ಈ ಅಸಮಾನತೆಗಳನ್ನು ಶಾಶ್ವತವಾಗಿಸುವ ಸಾಧನಗಳು ಎಂಬ ವಾಸ್ತವವನ್ನು ಅರಿತಿದ್ದರಿಂದಲೇ, ಭಗತ್‌ ಸಿಂಗ್‌ ಅಂಧ ಶ್ರದ್ಧೆ ಮತ್ತು ಆಚರಣಾತ್ಮಕ ಮೌಢ್ಯಗಳನ್ನು ವಿರೋಧಿಸಿದ್ದನ್ನು ಗುರುತಿಸಬಹುದು.

 ಇಂದು, 21ನೆ ಶತಮಾನದ ಡಿಜಿಟಲ್‌ ತಂತ್ರಜ್ಞಾನ ಯುಗದಲ್ಲಿ ನಿಂತು ನೋಡಿದಾಗ, ಈ ಅಂಧ ಶ್ರದ್ಧೆ ಮತ್ತು ಮೌಢ್ಯಗಳಿಂದ ಜನಸಾಮಾನ್ಯರನ್ನು ಆಚೆಗೆ ತರಲು ವಿಭಿನ್ನ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಅತೀತತೆಯಲ್ಲಿನ ನಂಬಿಕೆ ಮೂಲ ಇರುವುದೇ ಸಮಾಜದ ಪ್ರಜ್ಞೆಯಲ್ಲಿ ಮತ್ತು ಜನರು ಜೀವನದಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ಅಳವಡಿಸಿಕೊಳ್ಳುವ ಸಾಂಪ್ರದಾಯಿಕ ಆಚರಣೆಗಳಲ್ಲಿ. ಈ ಆಚರಣೆಗಳನ್ನು ಜನಸಾಂಸ್ಕೃತಿಕ ನೆಲೆಯಲ್ಲಿ ನಿರ್ವಚಿಸುವಾಗ, ವ್ಯಾಖ್ಯಾನಿಸುವಾಗ, ಜನಪದೀಯ ಸಮಾಜಗಳಲ್ಲೂ ಸಹ ಹಲವು ರೀತಿಯ ಮೂಢ ನಂಬಿಕೆ ಮತ್ತು ಮೌಢ್ಯಾಚರಣೆಗಳು ಅಡಕವಾಗಿರುವುದನ್ನು ಗುರುತಿಸಬಹುದು. ಈ ಮೌಢ್ಯವನ್ನು ಹೋಗಲಾಡಿಸಿ, ಜನಪದೀಯ ನೆಲ ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ, ನಾಸ್ತಿಕತೆಗಿಂತಲೂ ಹೆಚ್ಚಾಗಿ ಅಗತ್ಯ ಎನಿಸುವುದು ವೈಚಾರಿಕತೆ (Rationali̧sm) .

 ನೆಲ ಸಂಸ್ಕೃತಿ-ವೈಚಾರಿಕ ಪ್ರಜ್ಞೆ

 ಇದು ಮುಖ್ಯವಾಗುವ ಕಾರಣವೆಂದರೆ, ಇಂದು ತಳಸಮುದಾಯಗಳು (Subaltern communities) ಬೌದ್ಧಿಕವಾಗಿ-ಸಾಂಸ್ಕೃತಿಕವಾಗಿ ಜಾಗೃತವಾಗಿವೆ.  ಜ್ಯೋತಿ ಬಾ ಫುಲೆ ಮತ್ತು ಅಂಬೇಡ್ಕರ್‌ ಅವರು ಸಂಶೋಧನಾತ್ಮಕವಾಗಿ ನಿರೂಪಿಸಿದ ಭಾರತದ ಜನಸಾಂಸ್ಕೃತಿಕ ನೆಲೆಗಳನ್ನು, ಪೌರಾಣಿಕ ನೆಲೆಯಲ್ಲಿ, ಹಿಂದೂ ಧರ್ಮದ ಸಾಂಸ್ಥಿಕ ನೆಲೆಯಲ್ಲಿ ಮರುವಿಶ್ಲೇಷಿಸುವ ಬೌದ್ಧಿಕ ಪ್ರಯತ್ನಗಳು ಇಂದು ಹೆಚ್ಚಾಗಿವೆ. ತಮ್ಮ ಆದಿಯನ್ನು ಈ ಸಾಂಸ್ಥಿಕ ನೆಲೆಯಿಂದ ಭಿನ್ನವಾಗಿಸಿ, ಇಂದಿಗೂ ತಳಸಮಾಜದಲ್ಲಿ ಪ್ರಚಲಿತವಾಗಿರುವ ದೈವತ್ವಗಳಲ್ಲಿ, ದೈವೀಕ ಕಲ್ಪನೆಗಳಲ್ಲಿ ಹಾಗೂ ಅತೀತ ಶಕ್ತಿಗಳ ಪರಿಕಲ್ಪನೆಗಳಲ್ಲಿ, ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ತಳಸಮುದಾಯಗಳು, ನೆಲ ಮೂಲ ಸಂಸ್ಕೃತಿಯ ಆಳ ಮತ್ತು ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ.  ಈ ಬೌದ್ಧಿಕ ಪ್ರಯತ್ನಗಳು ವಿಭಿನ್ನ ಜಾತಿ ಸಮುದಾಯಗಳ ಅಸ್ಮಿತೆಗಳ ಚೌಕಟ್ಟುಗಳಲ್ಲಿ ತೆರೆದುಕೊಂಡಾಗ, ಪ್ರತಿಯೊಂದು ಜಾತಿಯೂ ಕಾಲ್ಪನಿಕ-ಪೌರಾಣಿಕ ಅಥವಾ ಚಾರಿತ್ರಿಕವಲ್ಲದ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

 ಭಾರತದಲ್ಲಿ ಹಿಂದುತ್ವ ರಾಜಕಾರಣ ಬಲಗೊಳ್ಳುತ್ತಿರುವ ಹೊತ್ತಿನಲ್ಲಿ, ಪ್ರಾಚೀನ ಸಾಂಪ್ರದಾಯಿಕ ಮೌಲ್ಯಗಳೂ ಗಟ್ಟಿಯಾಗುತ್ತಿರುವುದರಿಂದ, ಸಾವಿರಾರು ವರ್ಷಗಳ  ಭಾರತದ ಜನಪದೀಯ ಸಾಂಸ್ಕೃತಿಕ ನೆಲೆಗಳನ್ನು ಹಾಗೂ ನೆಲ ಸಂಸ್ಕೃತಿಯಲ್ಲಿ ಇಂದಿಗೂ ಜೀವಂತವಾಗಿರುವ ನಂಬಿಕೆಗಳನ್ನು ಮರಳಿ ಗುರುತಿಸಿಕೊಳ್ಳುವುದು ಅತ್ಯವಶ್ಯ. ಆದರೆ ಹೀಗೆ ಗುರುತಿಸಿಕೊಳ್ಳುವಾಗ, ನಮ್ಮ ನಂಬಿಕೆಗಳು ಆಧುನಿಕ ಜಗತ್ತಿಗೆ ಅಗತ್ಯವಾದ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನಗಳನ್ನು ಭಂಗಗೊಳಿಸದಂತೆ ಎಚ್ಚರ ವಹಿಸುವುದು ಮುಖ್ಯ. ಜನಪದೀಯ ಸಂಸ್ಕೃತಿಯಲ್ಲಿ ಇರುವ ಪಿತೃಪ್ರಧಾನ ಮೌಲ್ಯಗಳು ಮತ್ತು ಪ್ರಾಚೀನ-ಮಧ್ಯಕಾಲೀನ ಭಾರತೀಯ ಸಮಾಜದ ಆಚರಣೆಗಳಲ್ಲಿ ಗುರುತಿಸಬಹುದಾದ ಮೂಢ ನಂಬಿಕೆ-ಮೌಢ್ಯಾಚರಣೆಗಳನ್ನು ಮರುನಿರ್ವಚಿಸಬೇಕಾಗುತ್ತದೆ. ಇಲ್ಲವಾದಲ್ಲಿ, ಸನಾತನವಾದ/ಪ್ರಾಚೀನ ಧಾರ್ಮಿಕ ಸಂಹಿತೆಗಳಿಗೆ ಅಪ್ಯಾಯಮಾನವಾಗುವ ಆರಾಧನೆಯ ಮಾದರಿಗಳನ್ನು, ಆಚರಣಾತ್ಮಕ ವಿಧಾನಗಳನ್ನು, ನೆಲ ಸಂಸ್ಕೃತಿಗೂ ಅನ್ವಯಿಸುವ ಅಪಾಯವನ್ನು ಎದುರಿಸಬೇಕಾಗುತ್ತದೆ. ಮೈಸೂರಿನಲ್ಲಿ ಮಹಿಷಾಸುರ ಸುತ್ತ ಬೆಳೆಯುತ್ತಿರುವ ಸಂಕಥನಗಳು, ಪುಷ್ಪಾರ್ಚನೆಯಂತಹ ಆಚರಣೆಗಳು ಸಮಾಜದ ದಿಕ್ಕುತಪ್ಪಿಸುತ್ತವೆ.

 ಭಗತ್‌ ಸಿಂಗ್‌ನ ನಾಸ್ತಿಕತೆಯನ್ನು ಸಮಕಾಲೀನ ಯುಗದಲ್ಲಿ ಚರ್ಚಿಸುವಾಗ, ನಮಗೆ ಡಿಜಿಟಲ್‌ ಯುಗದ ಯುವ ಸಮೂಹ ದೃಷ್ಟಿಯಲ್ಲಿರಬೇಕು. ಆತನ ನಾಸ್ತಿಕತೆಯ ಪ್ರತಿಪಾದನೆಯನ್ನೂ ದಾಟಿ ಯೋಚಿಸಬೇಕಾದ ತುರ್ತು ನಮ್ಮ ಮುಂದಿದೆ. ಅಂದರೆ, ನಾಸ್ತಿಕತೆಯನ್ನು ಕೇವಲ ಮೂರ್ತಿ ಭಂಜಕ, ದೈವತ್ವ ವಿರೋಧಿ, ಧಾರ್ಮಿಕ ಸಂಪ್ರದಾಯ-ಆಚರಣೆ-ಆರಾಧನೆ ವಿರೋಧಿ ದೃಷ್ಟಿಯಿಂದ ನಿರ್ವಚಿಸುವ ಬದಲು, ಇನ್ನೂ ವಿಶಾಲ ಹಂದರದಲ್ಲಿ (Wider Canvas) ಚರ್ಚೆಗೊಳಪಡಿಸಬೇಕಾಗುತ್ತದೆ. ಇಂದು ಯುವ ಸಮುದಾಯ ಮುಖಾಮುಖಿಯಾಗುತ್ತಿರುವ ಸಾಂಸ್ಕೃತಿಕ ಪರಿಸರದಲ್ಲಿ, ಸಾಮಾಜಿಕ ಜೀವನದಲ್ಲಿ ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ ಮತ್ತು ಬಲಾಢ್ಯ ವರ್ಗಗಳ ಊಳಿಗಮಾನ್ಯ ದಬ್ಬಾಳಿಕೆಗಳು ಪ್ರಧಾನವಾಗಿ ಕಾಣುತ್ತವೆ. ನವ ಉದಾರವಾದಿ-ಬಂಡವಾಳಶಾಹಿಯು ಈ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾಧ್ಯಮ-ಶಿಕ್ಷಣ ಮತ್ತು ಸಂವಹನ ಸಾಧನಗಳ ಮೂಲಕ ತನ್ನದೇ ಆದ ನಿರೂಪಣೆಗಳನ್ನು (Narratives) ಸೃಷ್ಟಿಸುತ್ತದೆ.

 ನಾಸ್ತಿಕತೆಯ ವಿಶಾಲ ಹಂದರ

 ಈ ನಿರೂಪಣೆಗಳ ಮುಖಾಂತರ ಪ್ರಾಚೀನ ಅಮಾನುಷ ಪದ್ಧತಿಗಳನ್ನು, ಅರ್ಥಹೀನ ಧಾರ್ಮಿಕ ಆಚರಣೆಗಳನ್ನು, ಶ್ರದ್ಧೆಯ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಮತ್ತು ಮೌಢ್ಯಾಚರಣೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿ ಮನದಟ್ಟು ಮಾಡುವಲ್ಲಿ ಸಂವಹನ ಮಾಧ್ಯಮಗಳು ಬಳಕೆಯಾಗುತ್ತವೆ. ಸಾಮಾಜಿಕ ಅಸ್ಮಿತೆಯ ಚೌಕಟ್ಟಿನಲ್ಲಿ ಈ ಎಲ್ಲವೂ ಸಹ ಯುವ ಸಮುದಾಯಕ್ಕೆ ಅಪ್ಯಾಯಮಾನವಾಗಿ ಕಾಣತೊಡಗುತ್ತವೆ. ಹಾಗಾಗಿಯೇ ಬುದ್ಧ ಸಹ ಆರಾಧನೆಗೊಳಪಡುತ್ತಾನೆ. ಮಹಿಷ ಎಂಬ ಪೌರಾಣಿಕ ವ್ಯಕ್ತಿ ಚಾರಿತ್ರಿಕ ರೂಪ ಪಡೆದು ಆರಾಧಿಸಲ್ಪಡುತ್ತಾನೆ. ಈ ಆಚರಣೆಗಳು ಬಹುತೇಕವಾಗಿ ಅಂಧಾನುಕರಣೆಯೇ ಆಗಿರುವುದರಿಂದ, ಮಾನವ ಸಮಾಜ, ವಿಶೇಷವಾಗಿ ಯುವ ಸಮೂಹ, ವಿವೇಚನಾ ಶಕ್ತಿಯನ್ನು ಕಳೆದುಕೊಂಡು, ಕೇವಲ ಅನುಕರಿಸುವುದನ್ನು ಕಲಿಯುತ್ತದೆ. ವಿವೇಚನೆ ಇಲ್ಲದ ಮಿದುಳುಗಳಲ್ಲಿ ವೈಚಾರಿಕತೆ ತಂತಾನೇ ನಾಶವಾಗುತ್ತದೆ. ವೈಚಾರಿಕತೆಯನ್ನು ಕಳೆದುಕೊಂಡ ವ್ಯಕ್ತಿ-ಸಮಾಜ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಅಸಾಧ್ಯವಾಗುತ್ತದೆ.

 ಈ ಪ್ರಕ್ರಿಯೆಯಲ್ಲೇ ನಾಸ್ತಿಕತೆ ಎನ್ನುವ ಉದಾತ್ತ ಕಲ್ಪನೆ ಕೇವಲ ಆಲಂಕಾರಿಕವಾಗಿ, ಅಸ್ತಿತ್ವ ಅಥವಾ ಅಸ್ಮಿತೆಯ ನೆಲೆಯಾಗಿಬಿಡುತ್ತದೆ. ಭಗತ್‌ ಸಿಂಗ್‌ ಜನ್ಮದಿನಾಚರಣೆಯಂದು ಆತನ ನಾಸ್ತಿಕತೆಯ ಬಗ್ಗೆ ಮಾತನಾಡುವಾಗ , ಆ ಉದಾತ್ತ ಚಿಂತನೆಗಳನ್ನು ಸಮಕಾಲೀನಗೊಳಿಸುವ ಅವಶ್ಯಕತೆ ಇಂದು ಹೆಚ್ಚಾಗಿದೆ. ದೈವ ನಂಬಿಕೆ ಇಲ್ಲದಿರುವುದು ಅಥವಾ ಧಾರ್ಮಿಕ ಸಂಪ್ರದಾಯಗಳನ್ನು ವಿರೋಧಿಸುವುದು ಮೂಲತಃ ನಾಸ್ತಿಕತೆ ಎನಿಸಿದರೂ, ನಾಸ್ತಿಕ ಮನಸ್ಸು ಅಥವಾ ವ್ಯಕ್ತಿತ್ವ ಸಮಾಜವನ್ನು ನೋಡಬೇಕಾದ, ಅರ್ಥೈಸಬೇಕಾದ ದೃಷ್ಟಿಕೋನ ಸಂಕುಚಿತವಾಗುತ್ತದೆ. ನಾಸ್ತಿಕ ಮನಸ್ಸು ಲಿಂಗ ಸಮಾನತೆ, ಲಿಂಗ ಸೂಕ್ಷ್ಮತೆ, ಸ್ತ್ರೀ ಸಂವೇದನೆಗಳನ್ನು ಗೌರವಿಸಬೇಕಾಗುತ್ತದೆ. ಮತ್ತೊಂದು ಬದಿಯಲ್ಲಿ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಮುಂತಾದ ಜಾತಿ ತಾರತಮ್ಯಗಳನ್ನು ವಿರೋಧಿಸಬೇಕಾಗುತ್ತದೆ.  ಊಳಿಗಮಾನ್ಯ ದಬ್ಬಾಳಿಕೆ ಮತ್ತು ಆರ್ಥಿಕ ಶೋಷಣೆಗಳನ್ನು ಎದುರಿಸಬೇಕಾದರೆ, ಈ ಮನಸ್ಥಿತಿ ಬಹಳ ಮುಖ್ಯವಾಗುತ್ತದೆ. ಇಲ್ಲವಾದರೆ ಅಸಮಾನತೆಗಳನ್ನು ಕೇವಲ ಮಾರುಕಟ್ಟೆ ಅಂಗಳದಲ್ಲೇ ಹುಡುಕಾಡುತ್ತಿರುತ್ತೇವೆ.

ವೈಜ್ಞಾನಿಕ ನೆಲೆಯಲ್ಲಿ ಕಾರ್ಲ್‌ ಮಾರ್ಕ್ಸ್‌-ಏಂಗೆಲ್ಸ್ ನಿರ್ವಚಿಸಿ, ವ್ಯಾಖ್ಯಾನಿಸಿದ ನಾಸ್ತಿಕತೆ ಮತ್ತು ಭಾರತದ ಪ್ರಾಚೀನ ಇತಿಹಾಸದಲ್ಲೇ ಕಾಣಬಹುದಾದ ನಾಸ್ತಿಕ ಪರಂಪರೆಗಳ ಅನುಸಂಧಾನದ ಮೂಲಕ ಭಾರತೀಯ ಸಮಾಜದಲ್ಲಿ ನಾಸ್ತಿಕತೆಯನ್ನು ವಿಶಾಲ ಹಂದರದಲ್ಲಿ ಚರ್ಚೆಗೊಳಪಡಿಸಿ,  ಬೆಳೆಸುವ ಚಿಂತನೆ ಮಾಡಬಹುದು. ಕ್ರಾಂತಿಕಾರಿ ಯುವ ನಾಯಕ ಭಗತ್‌ ಸಿಂಗ್‌ ಜನ್ಮದಿನದಂದು ಆತನನ್ನು ಸ್ಮರಿಸುವ ಹೊತ್ತಿನಲ್ಲಿ, ರಾಜಕೀಯ ಕ್ರಾಂತಿಗೆ, ಸಾಮಾಜಿಕ ಪರಿವರ್ತನೆಗೆ, ಆರ್ಥಿಕ ಉನ್ನತಿಗೆ, ಮಾನವ ಸಮಾಜದ ವಿಮೋಚನೆಗೆ ಮತ್ತು ಸಮಾಜದ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಿಂತನಾ ಧಾರೆಗಳನ್ನೂ ಸಹ ಗುರುತಿಸುವುದು ವರ್ತಮಾನದ ತುರ್ತು. ಈ ದೃಷ್ಟಿಯಿಂದಲೇ ಭಗತ್‌ ಸಿಂಗ್‌ ಹಾಕಿಕೊಟ್ಟ ಮಾರ್ಗವನ್ನು ಪುನರಾವಲೋಕನ ಮಾಡೋಣ. ಅದೇ ಆತನಿಗೆ ನಾವು ಸಲ್ಲಿಸಬಹುದಾದ ಪ್ರಾಮಾಣಿಕ ಶ್ರದ್ಧಾಂಜಲಿ.

Tags: Naa Divakara
Previous Post

Tamilnadu: ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

Next Post

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

Related Posts

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !
ಇತರೆ / Others

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

by ಪ್ರತಿಧ್ವನಿ
September 30, 2025
0

ಇಂದು ನಗರದಲ್ಲಿನ ಚಂದ್ರ ಲೇಔಟ್‌ನಲ್ಲಿ Sunya IAS ನೂತನ ಸೆಂಟರ್‌ ಉದ್ಘಾಟನೆಗೊಂಡಿತು. ಚಂದ್ರ ಬಡಾವಣೆಯಲ್ಲಿ Civil Services Training Institutions ಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಬೇರೆ ಬೇರೆ...

Read moreDetails
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

September 30, 2025
ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

September 30, 2025
Next Post
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

Recent News

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !
Top Story

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

by ಪ್ರತಿಧ್ವನಿ
September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !
Top Story

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

by ಪ್ರತಿಧ್ವನಿ
September 30, 2025
ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!
Top Story

ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!

by ಪ್ರತಿಧ್ವನಿ
September 29, 2025
ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
Top Story

ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

by ಪ್ರತಿಧ್ವನಿ
September 28, 2025
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ
Top Story

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

by ಪ್ರತಿಧ್ವನಿ
September 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

September 30, 2025
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada