ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಆರಂಭಿಸಿದ ಬೇಟಿ ಬಚಾವೊ, ಬೇಟಿ ಪಡಾವೊ (BBBP) ಯೋಜನೆಯಲ್ಲಿ ಶೇ.79ರಷ್ಟು ಅನುದಾನವನ್ನು ಜಾಹಿರಾತಿಗಾಗಿ ಖರ್ಚು ಮಾಡಲಾಗಿದೆ ಎಂದು ಸಂಸದೀಯ ಸಮಿತಿಯ ವರದಿ ಹೇಳಿದೆ.
ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ 2016-2019 ರ ಅವಧಿಯಲ್ಲಿ ಬೇಟಿ ಬಚಾವೊ ಮತ್ತು ಬೇಟಿ ಪಢಾವೊ ಯೋಜನೆಗೆ ಬಿಡುಗಡೆಯಾದ ಒಟ್ಟು 446.72 ಕೋಟಿ ರೂ.ಗಳಲ್ಲಿ 78.91% ರಷ್ಟು ಹಣವನ್ನುಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಲ್ಯಾಣ ಕಾರ್ಯಗಳ ಬದಲಿಗೆ ಮಾಧ್ಯಮಗಳ ಜಾಹಿರಾತುಗಳಿಗೆ ಖರ್ಚು ಮಾಡಲಾಗಿದೆ ಎಂಬ ಸತ್ಯ ಬಯಲಾಗಿದೆ.
ಜನರಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಸಂದೇಶವನ್ನು ಹರಡಲು ಮಾಧ್ಯಮ ಪ್ರಚಾರವನ್ನು ಕೈಗೊಳ್ಳುವ ಅಗತ್ಯವನ್ನು ಸಮಿತಿಯು ಒಪ್ಪಿಕೊಂಡಿದ್ದರೂ, ಯೋಜನೆಯ ಮೂಲ ಉದ್ದೇಶಗಳನ್ನು ಸಮತೋಲನ ಮಾಡುವುದು ಅಷ್ಟೇ ಮುಖ್ಯʼ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಮಹಾರಾಷ್ಟ್ರದ ಬಿಜೆಪಿ ಲೋಕಸಭೆ ಸಂಸದೆ ಹೀನಾ ವಿಜಯ್ಕುಮಾರ್ ಗವಿತ್ ಈ ಸಮಿತಿಯ ನೇತೃತ್ವ ವಹಿಸಿರುವರು.
ಬಜೆಟ್ ಮತ್ತು ಕಡಿಮೆ ಖರ್ಚು, ಅದೇ ಅವಧಿಯಲ್ಲಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ 2016-17 ರಲ್ಲಿ “ಅತ್ಯಂತ ಕಡಿಮೆ ಖರ್ಚು” ಎಂದು ಗಮನ ಸೆಳೆದಿತ್ತು.ರಾಜ್ಯ ಮಟ್ಟದಲ್ಲಿ ಈ ಯೋಜನೆಯು ಕಳಪೆಯಾಗಿ ಕಾರ್ಯನಿರ್ವಹಿಸಿದೆ. 2014-15 ಮತ್ತು 2019-20 ರ ನಡುವೆ, ರಾಜ್ಯಗಳು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ 652 ಕೋಟಿ ರೂಪಾಯಿಗಳಲ್ಲಿ ಕೇವಲ 156.46 ಕೋಟಿ ರೂಪಾಯಿಗಳನ್ನು ಬಳಸಿಕೊಂಡಿವೆ, ಇದು ಕೇವಲ ಶೇ. 25.13ರಷ್ಟು ಬಳಕೆಯಾಗಿದೆ. ಕಡಿಮೆ ಪ್ರಮಾಣದ ಹಣ ಬಳಕೆಯು ಯೋಜನೆಯ ಕಳಪೆ ಕಾರ್ಯಕ್ಷಮತೆಗೆ ಕಾರಣವಾಗಿದೆ ಎಂದು ಸಮಿತಿಯು ಟೀಕಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಈ ಯೋಜನೆಯು ಕೇಂದ್ರದಿಂದ 100 ಪ್ರತಿಶತ ಸಹಾಯವನ್ನು ಪಡೆಯುತ್ತದೆ. ಭಾರತದಲ್ಲಿ ಮಕ್ಕಳ ಲಿಂಗ ಅನುಪಾತದಲ್ಲಿನ ಕುಸಿತವನ್ನು ಪರಿಹರಿಸಲು ಇದನ್ನು ಪ್ರಾರಂಭಿಸಲಾಗಿದೆ. “2020-21 ರ ಆರ್ಥಿಕ ವರ್ಷದಲ್ಲಿ BBBP ಯೋಜನೆ ಅಡಿಯಲ್ಲಿ ಒಟ್ಟು ಬಜೆಟ್ ಹಂಚಿಕೆಯು 848 ಕೋಟಿ ರೂಪಾಯಿಯಾಗಿದೆ” ಎಂದು ವರದಿ ಹೇಳಿದೆ.
ಸೃತಿ ಇರಾನಿ ಸಚಿವೆಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ʼಪೋಷಣ್ʼ ಕಾರ್ಯಕ್ರಮದಲ್ಲೂ ಕಳಪೆ ಸಾಧನೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದು. ಕೇಂದ್ರ ನಿಧಿಯಾಗಿ ಬಿಡುಗಡೆಯಾದ 5,31,279.08 ಲಕ್ಷ ರೂ.ಗಳಲ್ಲಿ ಕೇವಲ 2,98,555.92 ಲಕ್ಷ ರೂ. ಬಳಕೆಯಾಗಿದ್ದು, ಇಲ್ಲೂ ಕಳಪೆ ಸಾಧನೆ ಕಂಡುಬಂದಿದೆ.ಇಷ್ಟೆಲ್ಲಾ ಖರ್ಚು ಮಾಡಿದ್ದರೂ ಶಾಲಾ ದಾಖಲಾತಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ ಎಂಬುದನ್ನು ಸಮಿತಿಯೇ ಒಪ್ಪಿಕೊಂಡಿದೆ.