ಬೆಂಗಳೂರು: ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ನಿರಂತರ ಮಳೆಗೆ (Karnataka Rain) ಜನರು ಕಂಗಲಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ (School Holidays) ನಾಳೆ (ಬುಧವಾರ) ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಡಿಸಿ ಜಗದೀಶ್ ಮಾಹಿತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಳೆ ಒಂದು ದಿನ ರಜೆ ನೀಡಲು ನಿರ್ಧಾರ ಮಾಡಲಾಗಿದೆ. ಮಳೆಯ ಸ್ಥಿತಿಗತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು. ಖಾಸಗಿ ಹಾಗೂ ಸರ್ಕಾರಿ ಎರಡೂ ಶಾಲಾ ಕಾಲೇಜಿಗೆ ರಜೆ ನೀಡಲು ನಿರ್ಧಾರ ಮಾಡಲಾಗಿದೆ.
ಮಳೆಗೆ ರಸ್ತೆಗಳು ಜಲಾವೃತ:ಬೆಂಗಳೂರಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ. ವೈಟ್ ಫೀಲ್ಡ್, ಮಾರತಹಳ್ಳಿ, ಸರ್ಜಾಪುರ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಡ್ರೈನೇಜ್ ಪೈಪ್ ಹೊಡೆದು ರಸ್ತೆ ಮಧ್ಯೆ ಮೋರಿ ನೀರು ಹಾರಿಯುತ್ತಿದೆ. ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇತ್ತ ಹಲಸೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಗುಪ್ತ ಲೇಔಟ್‌ನಲ್ಲಿ ಮ್ಯಾನ್ ಹೋಲ್ ಉಕ್ಕಿ ಹರಿದಿದೆ. ಭಾರಿ ಮಳೆಗೆ ಬನಶಂಕರಿ ಸಿಂಡಿಕೇಟ್ ಕಾಲೋನಿ ಸಮೀಪ ಮರವೊಂದು ನೆಲಕ್ಕೆ ಉರುಳಿದೆ. ಅದೃಷ್ಟವಶಾತ್ ಮಳೆ ಕಾರಣಕ್ಕೆ ಜನರ ಓಡಾಟ ಇರಲಿಲ್ಲ ಹೀಗಾಗಿ ಅನಾಹುತ ಸಂಭವಿಸಿಲ್ಲ.