ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ಹೋಗಿದ್ದರು. ಮೋದಿ ಆಗಮನದ ಹಿನ್ನೆಲೆ ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ 23 ಕೋಟಿ ರೂಪಾಯಿ ಖರ್ಚು ಮಾಡಿ ತರಾತುರಿಯಲ್ಲಿ ಮೋದಿ ಓಡಾಡುವ ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ನಗರದಲ್ಲಿಅಭಿವೃದ್ಧಿ ಮಾಡಿತ್ತು. 14 ಕೋಟಿ ಕೇವಲ ರಸ್ತೆಗೆ ಡಾಂಬಾರೀಕರಣ ಮಾಡಲೆಂದೇ ಬಿಬಿಎಂಪಿ ವ್ಯಯ ಮಾಡಿತ್ತು. ಇದು ಭಾರೀ ಜನಾಕ್ರೋಶಕ್ಕೂ ಕಾರಣವಾಗಿತ್ತು. ಆದರೆ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡಿ ಟಾರು ಹಾಕಿದ ರಸ್ತೆಗಳು ಮೋದಿ ಬಂದು ಹೋಗಿ ಕೇವಲ ಮೂರ್ನಾಲ್ಕು ದಿನಕ್ಕೆ ಕಿತ್ತು ಬಂದಿದೆ.
ಬೆಂಗಳೂರಿಗೆ ಬಂದಿದ್ದ ಮೋದಿ ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. HAL ಗೆ ಬಂದಿಳಿದ ನಮೋ ಹಲವು ಕಾರ್ಯಕ್ರಮಗಳ ನಿಮಿತ್ತ ರಸ್ತೆ ಮೂಲಕವೇ ಓಡಾಡಿದ್ದರು. ಹೀಗಾಗಿ ಮೋದಿ ಓಡಾಡುವ ರಸ್ತೆಗಳೆಲ್ಲಾ ಡಾಂಬರೀಕರಣ ಮಾಡಿ ಅಂದಗಾಣಿಸಲಾಗಿತ್ತು. ಮುಖ್ಯವಾಗಿ ಜ್ಞಾನಭಾರತಿಯಲ್ಲಿರುವ ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್‌ನಲ್ಲಿ (ಬೇಸ್) ಕಾಯ್ರಕಮ್ರಕ್ಕೆ ಆಗಮಿಸಿದ್ದ ಮೋದಿಗಾಗಿ ಪಾಲಿಕೆ ರಸ್ತೆ ತುಂಬಾ ಟಾರು ಹಾಕಿ ಸುಗಮ ಓಡಾಟಕ್ಕೆ ಅನುವುಮಾಡಿಕೊಡಲಾಗಿತ್ತು. ಆದರೆ ಈ ಬೇಸ್ ನ ಕೆಲವೇ ದೂರದ ಅಂತರದಲ್ಲಿ ಹಾಕಲಾಗಿದ್ದ ಡಾಂಬಾರು ಮೋದಿ ಬಂದು ಹೋದ ಮೂರೇ ದಿನಕ್ಕೆ ಇದೀಗ ಕಿತ್ತು ಬಂದಿದೆ.
ಸುಮಾರು 2 ವರ್ಷಗಳಿಂದಲೂ ಕೂಡ ಈ ರಸ್ತೆಯನ್ನು ಡಾಂಬರೀಕರಣ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಆಮೆವೇಗದಲ್ಲಿ ಕೆಲಸ ಮಾಡುತ್ತಿತ್ತು. ಟೆಂಡರ್ ಕೂಡ ಕರೆದು ಖಾಸಗಿ ಕಂಪೆನಿಯೊಂದಕ್ಕೆ ಡಾಂಬರೀಕರಣದ ಹೊಣೆಯನ್ನೂ ಜಾಬ್ ಕಾಡ್ ಸಮೇತ ನೀಡಿತ್ತು. ಆದರೆ ಪ್ರಧಾನಿ ಮೋದಿ ಆಗಮನದ ಹಿನ್ನೆಲೆ ಖಾಸಗಿ ಕಂಪೆನಿಗೆ ಕಾಯದೆ ಸ್ವತಃ ಬಿಬಿಎಂಪಿಯೇ ಟಾರು ಹಾಕಿತ್ತು. ಆದರೆ ಟಾರು ಹಾಕಿದ ಕೆಲವೇ ದಿನಕ್ಕೆ ಕಿತ್ತು ಬಂದಿದ್ದು ಲಕ್ಷಾಂತರ ರೂಪಾಯಿ ಜನರ ತೆರಿಗೆ ಹಣವನ್ನು ಪಾಲಿಕೆ ಈ ಮೂಲಕ ನೀರು ಪಾಲು ಮಾಡಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
10 ದಿನ.. 28 km.. 23 ಕೋಟಿ..!
ಮೋದಿ ಬರ್ತಾರೆ ಅಂತ ಬಿಬಿಎಂಪಿ 28 ಕಿಲೋಮೀಟರ್ ಉದ್ದದ ರಸ್ತೆಗೆ ಒಟ್ಟಾರೆ ಹತ್ತು ದಿನಗಳಲ್ಲಿ ಡಾಂಬರೀಕರಣ ಮಾಡಿ ಮುಗಿಸಿದೆ. ಒಂದು ಕಿಲೋಮೀಟರ್ ರಸ್ತೆಗೆ ಒಂದು ವಾರ ತೆಗೆದುಕೊಳ್ಳುವ ಪಾಲಿಕೆಯ ಈ ಕಾರ್ಯವೈಖರಿಗೆ ಆರಂಭದಲ್ಲೇ ಜನರು ಛೀಮಾರಿ ಹಾಕಿದ್ದರು. ಆದರೆ ಮೋದಿ ಬರುವ ಹಿನ್ನೆಲೆ 10 ದಿನಗಳಲ್ಲಿ 28 km ಡಾಂಬರೀಕರಣಕ್ಕೆ 23 ಕೋಟ ಖರ್ಚು ಮಾಡಿ ಮಾಡಿರುವ ಕೆಲಸ ಆರಂಭದಲ್ಲೇ ಅನುಮಾನ ಮೂಡಿತ್ತು. ಇದೀಗ ಬಿಬಿಎಂಪಿಯ ಫಟಾಫಟ್ ಕಾಮಗಾರಿಯ ಅಸಲಿಯತ್ತು ಬಯಲಾಗಿದ್ದು, ಮತ್ತೆ ಜನರಿಂದ ಉಗಿಸಿಕೊಂಡಿದೆ.

ಡ್ರೈನೇಜ್ ಲೀಕೇಜ್ ಸಬೂಬು ಕೊಟ್ಟ ಬಿಬಿಎಂಪಿ !
ಈ ಬಗ್ಗೆ ಸಬೂಬು ಕೊಟ್ಟ ಬಿಬಿಎಂಪಿಯ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದ ಇಂಜಿನಿಯರ್ ಚೀಫ್ ಪ್ರಹ್ಲಾದ್, ರಸ್ತೆ ಡಾಂಬಾರು ಕಿತ್ತು ಬಂದಿರುವ ನಿಗದಿತ ಜಾಗದಲ್ಲಿ ಡ್ರೈನೇಜ್ ಲೀಕ್ ಇದ್ದ ಕಾರಣ ಹೊಸದಾಗಿ ಹಾಕಿದ ಡಾಂಬಾರು ಸರಿಯಾಗಿ ಒಣಗಿಲ್ಲ. ಹೀಗಾಗಿ ಕಿತ್ತು ಬಂದಿದೆ ಎಂದು ಸಬೂಬು ನೀಡಿ ಕೈತೊಳೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಚೀಫ್ ಕಮಿಷನರ್ ತುಷಾರ್ ಗಿರಿನಾಥ್‌ರನ್ನು ಕೇಳಿದರೆ ವರದಿ ತರಿಸಿಕೊಳ್ತೀನಿ ಅಂತ ಹೇಳಿದೆ. ಇದರ ಮಧ್ಯೆ ಈ ಪ್ರಕರಣ ಸಂಬಂಧ ಆರ್‌ಆರ್ ನಗರ ವ್ಯಾಪ್ತಿಯ AE, AEEಗೆ ಶೋಕಾಸ್ ನೋಟೀಸ್ ಕೊಟ್ಟು ಆಯುಕ್ತರು ಕಾರಣ ಕೇಳಿದ್ದಾರೆ.
PMOದಿಂದ ರಾಜ್ಯ ಸರ್ಕಾರಕ್ಕೆ ವರದಿ ಕೊಡುವಂತೆ ಸೂಚನೆ !
ಮೋದಿ ಬಂದು ಹೋದ ಮೂರೇ ದಿನಕ್ಕೆ ಕಿತ್ತು ಬಂದ ಟಾರು ದೃಶ್ಯಗಳೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತ್ತು. ಇದು ರಾಜ್ಯಕ್ಕೆ ಭಾರೀ ಮುಖಭಂಗ ಉಂಟು ಮಾಡಿದೆ. ಹೀಗಾಗಿ ಕಿತ್ತು ಬಂದ ಟಾರಿನ ಬಗ್ಗೆ ವರದಿ ಕೊಡುವಂತೆ ಪ್ರಧಾನಿ ಮೋದಿ ಆಪ್ತಕಾರ್ಯಾಲಯದಿಂದ ವರದಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಒಟ್ಟಾರೆ ಮತ್ತೊಮ್ಮೆ ಬಿಬಿಎಂಪಿ ಕಾಮಗಾರಿಯ ಗುಣಮಟ್ಟ ಬಟಾಬಯಲಾಗಿದೆ. ಪ್ರಧಾನಿ ಮೋದಿಗಾಗಿ ಮಾಡಿದ ತಯಾರಿಯಲ್ಲೂ ಪಾಲಿಕೆ ಮಾನಕಳೆದುಕೊಂಡಿದೆ.
ಯಾವ ಯಾವ ರಸ್ತೆಗೆ ಎಷ್ಟೆಷ್ಟು ಖರ್ಚು?
ಪ್ರಧಾನಿ ಭೇಟಿಗೂ ಮುನ್ನ ಬಿಬಿಎಂಪಿ ಒಟ್ಟು 14.05 ಕಿ.ಮೀ ರಸ್ತೆಯನ್ನು ಮರು ಅಭಿವೃದ್ಧಿಗೊಳಿಸಿತ್ತು. ಬಿಬಿಎಂಪಿ ಅಂಕಿಅಂಶಗಳ ಪ್ರಕಾರ, ನಾಗರೀಕ ಸಂಸ್ಥೆ ಬಳ್ಳಾರಿ ರಸ್ತೆಯ 2.4 ಕಿ.ಮೀ ಮಾರ್ಗಕ್ಕೆ 4.06 ಕೋಟಿ ರೂ., ತುಮಕೂರು ರಸ್ತೆಯ 0.9 ಕಿ.ಮೀ ಮಾರ್ಗಕ್ಕೆ 1.55 ಕೋಟಿ ರೂ., ಯೂನಿವರ್ಸಿಟಿ ರಸ್ತೆಯ 3.6 ಕಿ.ಮೀ ಮಾರ್ಗಕ್ಕೆ 6.05 ಕೋಟಿ ರೂ. ಮೈಸೂರು ರಸ್ತೆಯ 0.15 ಕಿ.ಮೀ ಮಾರ್ಗಕ್ಕೆ 35 ಲಕ್ಷ ರೂ. ಮತ್ತು ಕೊಮ್ಮಘಟ್ಟ ರಸ್ತೆಯ 7 ಕಿ.ಮೀ ಮಾರ್ಗಕ್ಕೆ 11.5 ಕೋಟಿ ರೂ. ಖರ್ಚು ಮಾಡಲಾಗಿದೆ.












