
ಬೆಂಗಳೂರಿಗರು ಧಾರಾಕಾರ ಮಳೆಗೆ ತತ್ತರಿಸಿ ಹೋಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮಳೆ ಅವಾಂತರದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಹೆಚ್ಚು ಮಳೆ ಆಗುತ್ತಿದೆ. ಕೆಲವರು ಮಳೆ ಬೇಡ ಅಂತ ಹೇಳಬಹುದು. ಆದರೆ ನಾನು ಮಳೆ ಬರೋದು ಬೇಡ ಅಂತ ಹೇಳಲ್ಲ. ಮಳೆ ಬರಲಿ, ಭೂಮಿ ಕುಡಿಯಲಿ, ಕೆರೆಗಳು ತುಂಬಲಿ. ಕಾವೇರಿ ನೀರು ತಮಿಳುನಾಡಿಗೆ ಆದಷ್ಟು ಬೇಗ ಹೋಗಲಿ, ಮೇಕೆದಾಟು ಯೋಜನೆ ಬರಲಿ. ಬೆಂಗಳೂರಲ್ಲಿ ಮಳೆ ಅವಾಂತರ ಆಗಿದೆ, ಅದೆಲ್ಲ ಸರಿ ಮಾಡೋಣ ಎಂದಿದ್ದಾರೆ.
ಮಳೆ ಕಡಿಮೆ ಆದಮೇಲೆ ಸಮಸ್ಯೆಗೆ ಏನು ಪರಿಹಾರ ಹುಡುಕಬೇಕು ಹುಡುಕಿ ಮಾಡ್ತೇವೆ. ಮೊದಲು ಮಳೆ ಬರಲಿ, ಆಮೇಲೆ ಎಲ್ಲವನ್ನ ಯೋಚನೆ ಮಾಡೋಣ. ಬೆಳೆ ಹಾನಿ ಮುಖ್ಯವಲ್ಲ, ಅದೆಲ್ಲ ಪರಿಹಾರ ಕೊಡೋದು ಕೇಂದ್ರ ಸರ್ಕಾರ. ತಗ್ಗು ಪ್ರದೇಶಗಳಲ್ಲಿ ಎಲ್ಲೆಲ್ಲಿ ನೀರು ತುಂಬಿಕೊಂಡಿದೆ ಅಲ್ಲೆಲ್ಲಾ ಬೇಗ ಕ್ಲಿಯರ್ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಇಂದು ಸಂಜೆ ಬಳಿಕ ಸಿಟಿ ರೌಂಡ್ಸ್ ಹೋಗುವ ತೀರ್ಮಾನ ಮಾಡಿದ್ದೇನೆ ಎಂದಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಲ್ಲಿ ಲೊ ಪ್ರೆಶರ್‌ನಿಂದ ಕೆಲವು ಏರಿಯಾಗಳು ಜಲಾವೃತ ಆಗಿವೆ. ನಿನ್ನೆಯಿಂದ ಮಳೆ ಅಲರ್ಟ್ ಶುರುವಾಗಿದೆ. ಅಕ್ಟೋಬರ್ 23ರವರೆಗೆ ಯೆಲ್ಲೊ ಅಲರ್ಟ್ ಇದೆ. ಕಳೆದ ಎರಡು ದಿನಗಳಲ್ಲಿ ವಿಪರೀತ ಮಳೆ ಆಗ್ತಿದ್ದು, ಆರ್ ಆರ್ ನಗರ, ಯಶವಂತಪುರ ಎರಡು ಕಡೆ ಮಳೆ ಹೆಚ್ಚಾಗಿದೆ. 97 ಕಡೆ ರಸ್ತೆ ಮೇಲೆ ನೀರು ನಿಂತಿತ್ತು, ಕೆಲವು ಮನೆಗಳಿಗೆ ನೀರು ತುಂಬಿದೆ, ತೆರವು ಮಾಡ್ತಿದ್ದೇವೆ. ಕೆಂಗೇರಿ ಭಾಗದಲ್ಲೂ ಹೆಚ್ಚಿನ ಮಳೆಯಾಗಿದೆ. 7 ಮರಗಳು 13 ಕೊಂಬೆಗಳು ಬಿದ್ದಿವೆ. ಬೃಹತ್ ನೀರುಗಾಲುವೆಗಳಲ್ಲಿ ದೊಡ್ಡ ಜೆಸಿಬಿಗಳ ಮೂಲಕ ಕ್ಲೀನಿಂಗ್ ಮಾಡ್ತಿದ್ದೇವೆ ಎಂದಿದ್ದಾರೆ.
ಮಳೆ ಬಂದ್ರೆ.. ನೀರು ಬರುತ್ತದೆ.. ಹೋಗುತ್ತೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜಕಾಲುವೆ ಪಕ್ಕದಲ್ಲಿ ಇದೆ. ಹಾಗಾಗಿ ನೀರು ನಿಲ್ಲುತ್ತದೆ.. ನಿಮ್ಮನ್ನ ಯಾರೋ ದುಡ್ಡೋ ಕಾಸೋ ಕೊಟ್ಟು ಇಲ್ಲಿಗೆ ಕರೆಸಿರಬೇಕು.. ನಿಮಗೆ ಹೇಗೆ ಬೇಕೋ ಹಾಗೆ ನ್ಯೂಸ್ ಮಾಡಿಕೊಳ್ಳಿ ಅಂತ ಶಾಸಕ ಹ್ಯಾರಿಸ್ ಗರಂ ಆಗಿದ್ದಾರೆ. ಮಳೆ ಬಗ್ಗೆ ಕಾಂಗ್ರೆಸ್ ಶಾಸಕರು ಉಢಾಪೆ ಉತ್ತರ ಕೊಟ್ಟಿದ್ರೆ, ಸಿಎಂ ಸಿದ್ದರಾಮಯ್ಯ ಮಾತ್ರ ಮಳೆಯಿಂದ ಬೆಳೆಗಳು ನಾಶ ಆಗಿಲ್ಲ.. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರೋದ್ರಿಂದ ಮಳೆಯಾಗ್ತಿದೆ ಅಂದಿದ್ದಾರೆ.
