ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಬೆಳಗಾವಿಯಲ್ಲಿ ಕಂಚಿನ ಪುತ್ಥಳಿ ದ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವೀಟರ್ ನಲ್ಲಿ ಬರೆದುಕೊಂಡಿದ್ದು, ʻಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವದಂದು ವೀರ ಮರಣ ಹೊಂದಿರುವ ಅಪ್ರತಿಮ ವೀರನಿಗೆ ಅಪಮಾನ ಮಾಡಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನೆವನ್ನೇ ಮುಡಿಪಿಟ್ಟ ಅಪ್ರತಿಮ ವೀರ ಹೋರಾಟಗಾರನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅನಗೋಳ ಪ್ರದೇಶದ ಕನಕದಾಸ ಕಾಲೋನಿಯಲ್ಲಿರುವ ರಾಯಣ್ಣನ ಪ್ರತಿಮೆಯನ್ನು ಶನಿವಾರ ಬೆಳಗಿನ ಜಾವ 3ರ ಸುಮಾರಿಗೆ ಕಿಡಿಗೇಡಿಗಳು ತಲ್ವಾರ್ ಬಳಸಿ ವಿರೂಪಗೊಳಿಸಿದ್ದಾರೆ. ಪ್ರತಿಮೆಯಲ್ಲಿದ್ದ ಖಡ್ಗವನ್ನು ಸಹ ಕಿತ್ತು ಬಿಸಾಡಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ನಡೆದ ಪ್ರದೇಶದಲ್ಲಿ ಪೊಲೀಸರು ನಿಷೇದಾಜ್ಞೆ ಜಾರಿ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 27 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.






