ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ರಸ್ತೆ ಅತಿಕ್ರಮಣ ವಿಚಾರವಾಗಿ ಸಾರ್ವಜನಿಕರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ವ್ಯಾಪಾರಿಯೊಬ್ಬರು ದೇಶದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಅಥಣಿ ಪಟ್ಟಣದ ಹಲ್ಯಾಳ ಸರ್ಕಲ್ ಬಳಿ ವ್ಯಾಪಾರ ನಡೆಸುತ್ತಿರುವ ಇಂತಿಹಾಜ್ ಚಿಂಚಲಿ ಎಂಬ ವ್ಯಾಪಾರಿ, ತಮ್ಮ ಅಂಗಡಿ ಮುಂದೆ ಗ್ರಾಹಕರ ಬೈಕ್‌ಗಳನ್ನು ನಿಲ್ಲಿಸಲು ಬ್ಯಾರಿಕೇಡ್ ಅಳವಡಿಸಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ರಸ್ತೆ ಅತಿಕ್ರಮಣ ಕುರಿತು ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಮಾತಿನ ಚಕಮಕಿ ಉಂಟಾಗಿ, ಬಳಿಕ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಗಲಾಟೆಯ ಸಂದರ್ಭದಲ್ಲೇ ವ್ಯಾಪಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಹಾಗೂ ಅವಮಾನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಧಾನಿ ಅವರ ತಾಯಿಯ ಕುರಿತು ಸಹ ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪಗಳು ವಿಡಿಯೋದಲ್ಲಿ ಕೇಳಿಬರುತ್ತಿದ್ದು, ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ಮಾಹಿತಿ ಹೊರಬಂದ ತಕ್ಷಣವೇ ಸ್ಥಳೀಯ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಧಾನಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ ವ್ಯಕ್ತಿಯ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಅಥಣಿ ತಾಲೂಕು ಬಿಜೆಪಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ಸ್ವೀಕರಿಸಿರುವ ಪೊಲೀಸರು ವೈರಲ್ ವಿಡಿಯೋ ಪರಿಶೀಲನೆ ನಡೆಸುತ್ತಿದ್ದಾರೆ.











