ಉಡುಪಿ: ಕಾರ್ಕಳ(Karkala) ತಾಲೂಕಿನ ಉಮಿಕಲ್ ಬೆಟ್ಟದ ಮೇಲಿರುವ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ(Parshuram Theme Park )ನಡೆದ ತಾಮ್ರದ ಹೊದಿಕೆ ಕಳ್ಳತನ ಪ್ರಕರಣವನ್ನು ಕಾರ್ಕಳ ಪೊಲೀಸರು ಭೇದಿಸಿದ್ದು, ಮಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರಿಫ್ (37) ಮತ್ತು ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು.

ಆರೋಪಿಗಳಿಂದ ಸುಮಾರು 45 ಸಾವಿರ ರೂಪಾಯಿ ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ, ಥೀಮ್ ಪಾರ್ಕ್‌ನಿಂದ ಕಳವು ಮಾಡಿದ್ದ ಎರಡು ಸೀಲಿಂಗ್ ಫ್ಯಾನ್‌ಗಳು, ಕಳ್ಳತನಕ್ಕೆ ಬಳಸಿದ್ದ ಗೂಡ್ಸ್ ಆಟೋ ಹಾಗೂ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಶುರಾಮ ಪ್ರತಿಮೆ ನಿರ್ಮಾಣ ಹಾಗೂ ಥೀಮ್ ಪಾರ್ಕ್ ಯೋಜನೆಗೆ ಸಂಬಂಧಿಸಿದ ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಯೋಜನಾ ಸ್ಥಳವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ಭದ್ರತೆ ಕೊರತೆಯನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು, ಪರಶುರಾಮ ಸನ್ನಿಧಾನದ ಮೇಲ್ಚಾವಣಿಯಿಂದ ತಾಮ್ರದ ತಗಡುಗಳನ್ನು ಕಳವು ಮಾಡಿದ್ದರು.

ಈ ಘಟನೆ ಜನವರಿ 3ರಂದು ನಡೆದಿದ್ದು, ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಕಾರ್ಕಳ ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ನಡೆಸಿ, ಆರೋಪಿಗಳ ಚಲನವಲನಗಳ ಬಗ್ಗೆ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಕೊನೆಗೂ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇತರೆ ಆರೋಪಿಗಳ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಪಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್. ಥೀಮ್ ಪಾರ್ಕ್ ಮೇಲ್ಚಾವಣಿ ಕದ್ದವರು ಕಾಂಗ್ರೆಸ್‌ನ ಬ್ರದರ್ಸ್. ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ, ಮೊಘಲರು ಒಡೆದರೆ, ಥೀಮ್ ಪಾರ್ಕ್‌ನ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು. ಪರಶುರಾಮ ಸೃಷ್ಟಿ ಎಂದು ಹೆಸರಾದ ಕರಾವಳಿಯಲ್ಲಿ ಪರಶುರಾಮನ ಹೆಜ್ಜೆಗುರುತುಗಳಿರಬಾರದು ಎಂದು ಥೀಮ್ ಪಾರ್ಕ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.






