ರಾಜ್ಯದ ಈ ಬಾರಿಯ ಉಪಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯು ನಿರೀಕ್ಷೆಯಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಾಗೂ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗಿತ್ತು. ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಮತ್ತು ಅವೆರಡೂ ಪಕ್ಷಗಳು ಹಾಕಿದ ಶ್ರಮವೂ ಫಲಿತಾಂಶದಲ್ಲೂ ಎದ್ದುಕಂಡವು. ಕೊನೆಯವರೆಗೂ ಮತ ಎಣಿಕೆಯು ತೀರಾ ಕ್ರಿಕೆಟ್ ನ ಟಿ20 ಕದನಕ್ಕಿಂತ ರೋಚಕವಾಗಿದ್ದೇ ಈ ಪೈಪೋಟಿಗೆ ಸಾಕ್ಷಿ.
ಮತ ಎಣಿಕೆಯ ಪ್ರತಿ ಸುತ್ತೂ ಸಖತ್ ಪೈಪೋಟಿಯಿಂದ ಕೂಡಿತ್ತು. 12ನೇ ಸುತ್ತಿನಿಂದ 47 ನೇ ಸುತ್ತಿನವರೆಗೂ ಮಂಗಳಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದ ಮಂಗಳಾ ಅಂಗಡಿ, ಅವರನ್ನು ಜಾರಕಿಹೊಳಿ ಓವರ್ ಟೇಕ್ ಮಾಡಿದಾಗ ಕೈ ಕಾರ್ಯಕರ್ತರಲ್ಲಿ ಸಂಭ್ರಮ, ಕಮಲ ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ. ಮುಂದೆ ನಾ ಮುಂದೆ ನೀ ಹಿಂದೆ ಪೈಪೋಟಿ ಮುಂದುವರಿದು, ಸತೀಶ್ ಜಾರಕಿಹೊಳಿ ದೊಡ್ಡ ಅಂತರದ ಮುನ್ನಡೆ ಸಾಧಿಸಿದ್ದರೂ ಅದು ಕ್ರಮೇಣ ಕ್ಷೀಣಿಸಿ, 77 ನೇ ಸುತ್ತಿನಲ್ಲಿ ಆ ಮುನ್ನಡೆ ಬರೀ 1620ಕ್ಕೆ ಬಂದಿತ್ತು. ಆ ಅಂತರವೂ ಕ್ರಮೇಣ ಸಣ್ಣದಾಗುತ್ತಾ ಬಂದು, ಮಂಗಳಾ ಅಂಗಡಿ ಒಂದೊಂದೇ ಮತಗಳಿಂದ ಮುಂದೆ ಸಾಗುತ್ತಿದ್ದಂತೆ ಬಿಜೆಪಿಯ ಕಾರ್ಯಕರ್ತರಲ್ಲಿ ಸಂಭ್ರಮ, ಕೈ ಕಾರ್ಯಕರ್ತರಲ್ಲಿ ತಲ್ಲಣ ಜೋರಾಗತೊಡಗಿತ್ತು. ಕೊನೆಗೆ 5240 ಅಂತರದ ಗೆಲುವು ಬಿಜೆಪಿಯ ಪಾಲಿಗೆ ಒಲಿಯಿತು.
ಮಾಜಿ ಕೇಂದ್ರ ಸಚಿವ, ಸಂಸದ ಸುರೇಶ್‍ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕ್ಷೇತ್ರವಾಗಿದ್ದರಿಂದ ಬಿಜೆಪಿ ಮೊದಲ ದಾಳ ಉರುಳಿಸಿತ್ತು. ಅನುಕಂಪದ ಮತಗಳ ಬುಟ್ಟಿಗೆ ಕೈಹಾಕುವ ಉದ್ದೇಶದಿಂದ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡುವ ನಿರ್ಧಾರ ಬಿಜೆಪಿಗೆ ಗೆಲುವಿನ ಮೊದಲ ಮೆಟ್ಟಿಲು ಎಂದೇ ಚುನಾವಣಾ ಪಂಡಿತರು ತರ್ಕಿಸಿದ್ದರು.
ಬಿಜೆಪಿ ಅಸ್ತ್ರಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಿದ್ದ ಕಾಂಗ್ರೆಸ್ ಬೆಳಗಾವಿ ಕ್ಷೇತ್ರಕ್ಕೆ ತನ್ನ ಪ್ರಬಲ ಸ್ಪರ್ಧಿ ಸತೀಶ್‍ಜಾರಕಿಹೊಳಿಯವರನ್ನು ಕಣಕ್ಕಿಳಿಸಿತು. ಬೆಳಗಾವಿ ಕದನ ಕಣ ಕುತೂಹಲಕರವಾಗಿ ಪರಿವರ್ತಿತವಾಗಿದ್ದೇ ಆಗ. ಈ ಕ್ಷೇತ್ರದಿಂದ ಪ್ರಸಕ್ತ ಸನ್ನಿವೇಶದಲ್ಲಿ ಸತೀಶ್ ಜಾರಕಿಹೊಳಿ ಅವರಿಗಿಂತ ಪ್ರಬಲ ಅಭ್ಯರ್ಥಿಯೇ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆ ಬಹುಶಃ ಸಿಗುತ್ತಿರಲಿಲ್ಲವೇನೋ. ಏಕೆಂದರೆ, ಇನ್ನೇನು ಗೆಲುವಿನ ಶಿಖರವನ್ನು ಮುಟ್ಟಿಯೇ ಬಿಟ್ಟರು ಎಂಬಷ್ಟರ ಮಟ್ಟಿಗೆ ಅವರು ತಲುಪಿದ್ದರು. ಅದೃಷ್ಟ ಈ ಬಾರಿ ಸಾಥ್ ಕೊಡಲಿಲ್ಲವಷ್ಟೇ.
ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಡಿಕೆಶಿ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಳಗಾವಿಯಲ್ಲಿ ಸಹಜವಾಗಿಯೇ ಪಕ್ಷದ ಬೇರುಗಳನ್ನು ಬಲಪಡಿಸುವ ಮಹತ್ವಾಕಾಂಕ್ಷೆ ಇತ್ತು. ಜತೆಗೆ ಸೋತರೂ ಗೆದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮತದಾರರಲ್ಲಿ ಪುನರ್ ಜಾಗೃತಿ ಮೂಡಿಸಿ ಪಕ್ಷದ ಕೈ ಬಲಪಡಿಸುವ ಲೆಕ್ಕಾಚಾರವನ್ನೂ ಹಾಕಿದ್ದರು. ಆ ಲೆಕ್ಕಾಚಾರದ ಫಲಶ್ರುತಿಯೇ ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಒಪ್ಪಿಸಿದ್ದು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿಯವರು ಮೂರು ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಜಯಭೇರಿ ಬಾರಿಸಿದ್ದರು. ಅವರ ಪರ ಪತ್ನಿ ಕಣಕ್ಕಿಳಿದರೆ ಅನುಕಂಪದ ಮತಗಳು ಬೀಳುವುದು ಗ್ಯಾರಂಟಿ. ಆದರೆ ಪ್ರಸಕ್ತ ಕೋವಿಡ್ ಪರಿಸ್ಥಿತಿ ನಿರ್ವಹಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಅಲೆ ಇರುವುದರಿಂದ ಅಷ್ಟೊಂದು ಮತಗಳು ಬೀಳದಿರುವ, ಹಾಗೂ ಬಿಜೆಪಿ-ಶಿವಸೇನೆ ಈಗ ಹಾವು-ಮುಂಗುಸಿಯಂತಾಗಿರುವುದು ಬೆಳಗಾವಿ ಭಾಗದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳುವ ನಿರೀಕ್ಷೆ ಕಾಂಗ್ರೆಸ್ ನದಾಗಿತ್ತು. ಅಲ್ಲದೆ ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ಆಡಳಿತದಲ್ಲಿ ಪಾಲುದಾರರಾಗಿರುವುದರಿಂದ ಕಾಂಗ್ರೆಸ್ ಪರ ತಂತ್ರ ಹೆಣೆಯಲು ಶಿವಸೇನೆ ಕೂಡ ಸಹಕರಿಸುವ ವಿಶ್ವಾಸಗಳಿದ್ದವು. ಇದೆಲ್ಲ ಲೆಕ್ಕಾಚಾರಗಳನ್ನು ಮನಗಂಡ ಬಳಿಕವೇ ಸತೀಶ್ ಜಾರಕಿಹೊಳಿ ಕಣಕ್ಕೆ ಧುಮುಕಲು ಸಜ್ಜಾಗಿದ್ದು.
ಯಮನಕರಡಿ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿರುವ ಸತೀಶ್‍ಜಾರಕಿಹೊಳಿ ಯಾವಾಗಲೂ ಚಾಣಾಕ್ಷ ರಾಜಕಾರಣದ ಮೂಲಕ ರಾಜ್ಯದ ರಾಜಕೀಯ ಭೂಪಟದಲ್ಲಿ ಹೆಸರು ಮಾಡಿದವರು. ಅವರು ಕಣಕ್ಕಿಳಿದರೆ ಕೇವಲ ಪೈಪೋಟಿಯಲ್ಲ ಗೆಲುವೂ ಬಂದೇ ಬರುತ್ತದೆ ಎಂಬುದು ಡಿಕೆಶಿ ಯೋಚನೆಯಾಗಿತ್ತು. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಕಾರ್ಯತಂತ್ರ ರೂಪಿತವಾಗಿತ್ತು. ಇಲ್ಲಿ ಗೆಲುವೇ ಅಂತಿಮ ಗುರಿ. ಗೆಲ್ಲದಿದ್ದರೂ ಪಕ್ಷ ಬಲವರ್ಧನೆ ದೊಡ್ಡ ಮಟ್ಟದಲ್ಲಿ ಮಾಡುವುದು ಇನ್ನೊಂದು ಗುರಿ. ಫಲಿತಾಂಶ ನೋಡಿದರೆ ಅವರು ತಮ್ಮ ತಂತ್ರದಲ್ಲಿ ಯಶಸ್ವಿಯಾಗಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.
ಬಿಜೆಪಿಯ ಮಂಗಳಾ ಅಂಗಡಿ ಅವರಿಗೆ ಬಿದ್ದಿರುವ ಮತಗಳ ಸಂಖ್ಯೆ 4, 40, 327. ಅದೇ ವೇಳೆ ಕಾಂಗ್ರೆಸ್ ನ ಸತೀಶ್‍ಜಾರಕಿಹೊಳಿ ಅವರಿಗೆ ಲಭ್ಯವಾದ ಮತಗಳು 4,35, 087. ಅಂದರೆ ಕೇವಲ 5240 ಮತಗಳ ವ್ಯತ್ಯಾಸ!
ಬಿಜೆಪಿಗೆ ಮುಳುವಾಗಲಿದ್ದ ಮರಾಠ ಮತಗಳು:
ಈ ಸಲ ಈ ಕ್ಷೇತ್ರದ ಮರಾಠ ಮತಗಳು ಬಿಜೆಪಿಯ ಕೈಬಿಟ್ಟಿದ್ದು ಇನ್ನೊಂದು ಪ್ರಮುಖ ಬೆಳವಣಿಗೆ. ಎಂಇಎಸ್ ಹಾಗೂ ಶಿವಸೇನೆ ಬೆಂಬಲಿತ ಅಭ್ಯರ್ಥಿಯಾಗಿದ್ದ ಶುಭಂ ಶೆಳಕೆ ಬರೋಬ್ಬರಿ 1,17,174 ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇದು ಬಿಜೆಪಿಗೆ ಈ ಬಾರಿ ಮರಾಠ ಮತಗಳು ಕೈಕೊಟ್ಟಿರುವುದರ ಸ್ಪಷ್ಟ ನಿದರ್ಶನ.
ಶೆಳಕೆ ಪಡೆದ ಮತಗಳಲ್ಲಿ ಅರ್ಧವಾದರೂ ಬಿಜೆಪಿಗೆ ಬರುವಂಥ ಮತಗಳಾಗಿದ್ದವು. ಮಂಗಳಾ ಅಂಗಡಿ ಹಾಗೂ ಬಿಜೆಪಿಯ ಅದೃಷ್ಟ ಚೆನ್ನಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅವರ ಗೆಲುವಿಗೆ ಆಪತ್ತು ತರುವ ಕೆಲಸವನ್ನು ಪ್ರತಿಸ್ಪರ್ಧಿ ಶುಭಂ ಶೆಳಕೆ ಮಾಡುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ.
ಇನ್ನೊಂದೆಡೆ ಸುಮಾರು 10 ಸಾವಿರದಷ್ಟು ಮತಗಳು ನೋಟಾ ಪಾಲಾಗಿದ್ದು, ಇನ್ನೊಂದು ಲೆಕ್ಕಾಚಾರಕ್ಕೆ ಕಾರಣವಾಗಿದೆ. ಆ ಮತಗಳು ಯಾವ ಪಕ್ಷದ್ದಾಗಿರಬಹುದು? ಕಾಂಗ್ರೆಸ್ ಗೆ ಅವೆಲ್ಲವೂ ಬಿದ್ದಿದ್ದರೆ ಗೆಲುವು ಕೈ ಪಾಳಯದ್ದಾಗಿರುತ್ತಿತ್ತು ಎಂಬ ತರ್ಕಗಳೂ ಕೇಳಿಬರುತ್ತಿವೆ.
ಜಾರಕಿಹೊಳಿ, ಹೆಬ್ಬಾಳ್ಕರ್ ಜಂಟಿ ಹೋರಾಟದ ಬಲ:
ಈ ಬಾರಿ ಬೆಳಗಾವಿ ಉಪ ಚುನಾವಣೆ ಸಂದರ್ಭ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಗೆ ದೊಡ್ಡ ಲಾಭವಾಗಿದೆ. ಅಲ್ಲಿನ ರಾಜಕೀಯ ವೈಷಮ್ಯ, ಒಳ ಜಗಳದಿಂದ ಕಂಗಾಲಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಲಾಭವಾಗಿದ್ದು, ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜಂಟಿ ಹೋರಾಟ. ತಮ್ಮ ವೈಷಮ್ಯ ಮರೆತು ಅವರಿಬ್ಬರೂ ತಮ್ಮ ಕಾರ್ಯಕರ್ತ, ಬೆಂಬಲಿಗರ ಪಡೆಗಳೊಂದಿಗೆ ಬಿಜೆಪಿ ವಿರುದ್ಧ ಹೋರಾಡಿದ ರೀತಿ, ಪಕ್ಷ ಸಂಘಟಿಸಿದ ಕ್ರಮ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದ ಲಾಭ ತಂದು ಕೊಡಲಿದೆ ಎಂದು ರಾಜಕೀಯ ಪಂಡಿತರು ಮಾತಾಡಿಕೊಳ್ಳುತ್ತಿದ್ದಾರೆ.
ಈ ಚುನಾವಣೆಯ ಸೋಲು ಕಾಂಗ್ರೆಸ್ ನ ಆತ್ಮವಿಶ್ವಾಸ ಕುಂದಿಸಿಲ್ಲ. ಬದಲಿಗೆ ಹೆಚ್ಚಿಸಿದೆ. ಈ ವೀರೋಚಿತ ಸೋಲು ಪಕ್ಷವನ್ನು ಆಂತರಿಕವಾಗಿ ಸಶಕ್ತವಾಗಿಸುವ ಸಾಧ್ಯತೆಯಿದೆ. ನಾಯಕರ ಒಳಜಗಳಗಳಿಂದ ಸುಸ್ತಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ಒಗ್ಗಟ್ಟು ಹೊಸ ಚೈತನ್ಯವನ್ನು ಮೂಡಿಸಿದೆ. ಹೊಸ ಹುಮ್ಮಸ್ಸೂ ಹುಟ್ಟುಹಾಕಿದೆ.
ಬೆಳಗಾವಿ ಬಿಜೆಪಿಗೆ ಚಿಂತೆ ತಂದ ಎಂಇಎಸ್ :
ಉಪಚುನಾವಣೆ ಫಲಿತಾಂಶ ಪ್ರಕಟವಾದೊಡನೆಯೇ ಎಂಇಎಸ್ ಪುಂಡರು ಮತ್ತೆ ಕ್ಯಾತೆ ಶುರುವಿಟ್ಟಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ಇನ್ನೇನು ಬರಲಿದ್ದು, ಅಷ್ಟರಲ್ಲಿ ಮತ ಬ್ಯಾಂಕ್‍ಗಟ್ಟಿ ಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದೆ. ‘ಸಿಂಹ ಘರ್ಜನೆ ದಿಲ್ಲಿಗೂ ತಲುಪಿತು’ ಎಂದು ಮರಾಠಿ ಭಾಷಿಕರು ಹೆಚ್ಚಿರುವ ಬಡಾವಣೆಗಳ ಯುವಕ ಸಂಘಗಳ ಬೋರ್ಡ್ ನಲ್ಲಿ ಬರವಣಿಗೆಗಳು ಕಂಡು ಬರುತ್ತಿರುವುದು ಬೆಳಗಾವಿ ಜಿಲ್ಲಾ ಬಿಜೆಪಿಗೆ ಮುಂದಿನ ದಿನಗಳಲ್ಲಿ ತಲೆನೋವು ಉಂಟಾಗುವುದರ ಮುನ್ಸೂಚನೆಯಾಗಿದೆ.
ಅಲ್ಲದೆ ಮುಂದಿನ ದಿನಗಳಲ್ಲಿ ಮರಾಠ ನೆಲೆಯಲ್ಲಿ ರಾಜಕೀಯ ಮಾಡುವ ಎನ್.ಸಿ.ಪಿ, ಎಂಇಎಸ್ ಹಾಗೂ ಶಿವಸೇನೆ ಒಂದಾಗಿ ಮಹಾನಾಗರ ಪಾಲಿಕೆ ಚುನಾವಣೆ ಕಣಕ್ಕೆ ಇಳಿದು, ಬಿಜೆಪಿಗೆ ಭಾರಿ ಏಟು ಕೊಡಲು ಸಜ್ಜಾಗಿರುವ ಸೂಚನೆಗಳೂ ಸಿಗಲಾರಂಭಿಸಿದೆ. ಸೋತ ಬಳಿಕ ಮಾತನಾಡಿದ್ದ ಶುಭಂ ಶೆಳಕೆ, ಈ ಬಾರಿ ಬೆಳಗಾವಿಯಲ್ಲಿ ಭಗವಾ ಧ್ವಜ ಹಾರಲಿದೆ ಎಂದು ಹೇಳುವ ಮೂಲಕ ತೊಡೆ ತಟ್ಟಿದ್ದಾರೆ. ಇದೆಲ್ಲ ಬೆಳವಣಿಗೆಗಳು ಬೆಳಗಾವಿಯೆಂಬ ಬಿಜೆಪಿಯ ಭದ್ರಕೋಟೆಯಲ್ಲಿ ಬಿರುಕು ಮೂಡಿಸುವ ಸೂಚನೆ ನೀಡಿವೆ.
ಬಿಜೆಪಿಗೆ ಕಷ್ಟದ ಗೆಲುವು, ಕಾಂಗ್ರೆಸ್ ಸೋಲಿನ ಹಿಂದಿನ ಮರ್ಮಗಳು:
ಆಡಳಿತ ಪಕ್ಷ ಬಿಜೆಪಿಗೆ ಈ ಬಾರಿ ಅಗತ್ಯವಸ್ತುಗಳ ಬೆಲೆ ಏರಿಕೆ, ಆಡಳಿತ ವಿರೋಧಿ ಅಲೆ ಇದ್ದಿದ್ದು ಹೌದು. ಆದರೂ ಪಕ್ಷದ ನಾಯಕರಲ್ಲಿ ಅತಿ ವಿಶ್ವಾಸ ಇತ್ತು. ಹೀಗಾಗಿ ಟಿಕೆಟ್ ಕೊಡುವಾಗ ಉಂಟಾದ ಆಕಾಂಕ್ಷಿಗಳ ಅಸಮಾಧಾನವನ್ನು ತಣ್ಣಗಾಗಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ದೊಡ್ಡ ಹಿನ್ನಡೆಯಾಯಿತು. ಕುಟುಂಬ ರಾಜಕಾರಣದ ವಿರುದ್ಧವಿರುವ ಮಾತನಾಡುವ ಪಕ್ಷವೇ ಕುಟುಂಬ ರಾಜಕೀಯಕ್ಕೆ ಒತ್ತು ನೀಡುತ್ತಿರುವುದು ಅನೇಕ ಕಾರ್ಯಕರ್ತರು, ನಾಯಕರಲ್ಲಿ ಅತೃಪ್ತಿ ಮೂಡಿಸಿತ್ತು. ಚುನಾವಣೆ ಉಸ್ತುವಾರಿ ಹೊಣೆ ಹುಬ್ಬಳ್ಳಿಯಿಂದ ಬಂದ ಜಗದೀಶ ಶೆಟ್ಟರ್ ಗೆ ನೀಡಿದ್ದು ಈ ಭಾಗದ ನಾಯಕರಲ್ಲಿ ಆಕ್ರೋಶ ಮೂಡಿಸಿತ್ತು. ಅಲ್ಲದೆ ಅಭ್ಯರ್ಥಿ ಘೋಷಿಸುವಾಗ ಆದ ವಿಳಂಬ, ಸಿಎಂ ಯಡಿಯೂರಪ್ಪ ಅವರಿಗೆ ಕೊರೋನೋದ ಕಾಟ ಪ್ರಚಾರಕ್ಕೆ ಅಡ್ಡಿಯಾಗಿದ್ದು, ರಮೇಶ್ ಜಾರಕಿಹೊಳಿ ಪ್ರಚಾರದಿಂದ ಹೊರಗುಳಿಯುವಂತಾಗಿದ್ದು, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಕೊನೆ ಕ್ಷಣದಲ್ಲಿ ಮಾತ್ರ ಪ್ರಚಾರಕ್ಕೆ ಬಂದಿದ್ದು, ಈ ಎಲ್ಲದರ ನಡುವೆ ಪ್ರಚಾರ ಕಾರ್ಯದಲ್ಲಿ ಬಿಜೆಪಿ ನಾಯಕರ ನಡುವಿನ ಸಮನ್ವಯದ ಕೊರತೆ ಪಕ್ಷಕ್ಕೆ ಹಿನ್ನಡೆ ತಂದಿತು.
ಮತ್ತೊಂದೆಡೆ, ಡಿಕೆಶಿ, ಜಾರಕಿಹೊಳಿ, ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಗೆಲ್ಲಲೇಬೇಕೆಂದು ಪಣ ತೊಟ್ಟರೂ ಎಲ್ಲ ಕೈ ನಾಯಕರು ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಅಭ್ಯರ್ಥಿ ಘೋಷಣೆಯಲ್ಲೂ ವಿಳಂಬವಾಗಿದ್ದಲ್ಲದೆ, ಶಾಸಕ ಸತೀಶ್ ಜಾರಕಿಹೊಳಿ ಪರ ಸೋದರರಾದ ರಮೇಶ್, ಲಖನ್ ಜಾರಕಿಹೊಳಿ ಬೆಂಬಲಕ್ಕಿಳಿಯದಿದ್ದು ಹಿನ್ನಡೆಯಾಯಿತು ಎನ್ನಲಾಗುತ್ತಿದೆ. ಎಲ್ಲ ವಿಧಾನಸಭೆಯ ಕ್ಷೇತ್ರದ ಕೈ ನಾಯಕರು ಒಮ್ಮನಿಸಿನಿಂದ ಪ್ರಚಾರಕ್ಕೆ ಇಳಿಯಲೂ ಇಲ್ಲ, ಪರಿಣಾಮಕಾರಿಯಾಗಿ ಕೆಲಸ ಮಾಡಲೂ ಇಲ್ಲ. ಹಾಗೇನಾದರೂ ಆಗಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎನ್ನಲಾಗುತ್ತಿದೆ.
ಸತೀಶ್ ಜಾರಕಿಹೊಳಿಗೆ ಮೊದಲ ಸೋಲು:
ಇತ್ತ ರಾಜಕೀಯಕ್ಕಿಳಿದ ಮೇಲೆ ಎಂದೂ ಸೋಲು ಕಾಣದ ಸತೀಶ್ ಜಾರಕಿಹೊಳಿ ಈ ಬಾರಿ ಸೋಲಿನ ರುಚಿ ಕಾಣುವಂತಾಗಿದೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 2008, 2013, 2018 ಹೀಗೆ ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಬಾರಿಸಿ ಗೆದ್ದು ಸಚಿವರೂ ಆಗಿ,ತಾಜ್ಯದ ಪ್ರಭಾವಿ ನಾಯಕನಾಗಿ ರೂಪುಗೊಂಡಿರುವ ಅವರು, 2018ರಲ್ಲಿ ಪ್ರಚಾರ ಮಾಡದೆಯೇ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ ರಾಜ್ಯದ ಗಮನ ಸೆಳೆದಿದ್ದರು.
ಆದರೆ ಈ ಬಾರಿಯ ಸೋಲು ಕೂಡ ಅವರ ಪಾಲಿಗೆ ಗೆಲುವು ಎನ್ನಲಾಗುತ್ತಿದೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ವರ್ಚಸ್ಸನ್ನು ಇಡೀ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ವಿಸ್ತರಿಸುವಲ್ಲಿ ಅವರು ಯಶಸ್ವಿಯಾಗಿರುವುದೇ ಇದಕ್ಕೆ ಕಾರಣ.
ಅಲ್ಲದೆ ಬೆಳಗಾವಿ ಲೋಕಸಭಾ ಕ್ಷೇತ್ರದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ ದೊರಕಿದೆ. ಗೋಕಾಕ ಕ್ಷೇತ್ರ ಹೊರತುಪಡಿಸಿ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದು ಕೈ ಮುಂದಿರುವುದು ಕಾಂಗ್ರೆಸ್ ಪಾಲಿಗೆ ಶುಭ ಸೂಚನೆ ಎನ್ನಬಹುದು.