ಬೆಳಗಾವಿ: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಶೀತಲ ಸಮರ ತಣ್ಣಗಾದ ಬೆನ್ನಲ್ಲೇ ಇಂದಿನಿಂದ ಚಳಿಗಾಲ( winter session) ಅಧಿವೇಶನ ಆರಂಭವಾಗಿದೆ.

ಡಿಸೆಂಬರ್ ೮ ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳು ತಂತ್ರ-ಪ್ರತಿತಂತ್ರವನ್ನು ರೂಪಿಸಿ ಸದನದಲ್ಲಿ ಕದನಕ್ಕೆ ರೆಡಿಯಾಗಿವೆ.

ಒಂದೆಡೆ ರಾಜ್ಯದ ನೂರಾರು ಸಮಸ್ಯೆಗಳನ್ನು ಮುಂದಿಟ್ಟು ಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ ಸೇರಿದಂತೆ ವಿಪಕ್ಷಗಳು ಸಜ್ಜಾಗಿದ್ದರೆ, ವಿಪಕ್ಷಗಳಿಗೆ ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ಕಾಂಗ್ರೆಸ್ ನಾಯಕರು ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ.

ಇನ್ನು ಕುರ್ಚಿ ಕಾದಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತ, ಅನುದಾನ ಬಿಡುಗಡೆ ವಿಳಂಬ, ಮೆಕ್ಕೆಜೋಳ, ಕಬ್ಬಿಗೆ ಬೆಂಬಲ ಬೆಲೆ, ಖರೀದಿ ಕೇಂದ್ರ ಸ್ಥಾಪನೆ, ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದೆ ಎನ್ನುವ ವಿಚಾರಗಳನ್ನು ಅಧಿವೇಶನದಲ್ಲಿ ಸರ್ಕಾರದ ಮುಂದಿಟ್ಟು ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ. ಬಿಜೆಪಿಯ ಈ ಬಾಣಗಳಿಗೆ ಕಾಂಗ್ರೆಸ್ ಯಾವ ಪ್ರತಿ ಬಾಣ ಹೂಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












