ಯಾವುದೇ ಸಭ್ಯ ಸಮಾಜ ತಲೆತಗ್ಗಿಸುವಂತೆ, ಮಹಿಳೆಯರ ಕುರಿತ ರಾಜಕೀಯ ನಾಯಕರ ಹೇಳಿಕೆ ಮತ್ತು ನಡವಳಿಕೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಅದರಲ್ಲೂ ಭಾರತೀಯ ಸಂಸ್ಕೃತಿಯ ವಾರಸುದಾರರು ತಾವು ಮಾತ್ರ ಎಂದು ಹೇಳಿಕೊಳ್ಳುವ ಸ್ವಘೋಷಿತ ಸಾಂಸ್ಕೃತಿಕ ವಕ್ತಾರರಾದ ಭಾರತೀಯ ಜನತಾ ಪಕ್ಷದ ಮುಖಂಡರ ಕೀಳು ಮನಸ್ಥಿತಿಯ ಧೋರಣೆಗಳು ಮತ್ತೆ ಮತ್ತೆ ವಿವಾದಕ್ಕೀಡಾಗುತ್ತಲೇ ಇವೆ.
ಇದೀಗ ಗಡಿ ಜಿಲ್ಲೆ ಬೆಳಗಾವಿಯ ಗ್ರಾಮೀಣ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ, ಅಲ್ಲಿನ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ನೀಡಿರುವ ನಾಚಿಕೆಗೇಡಿನ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
“ರಾತ್ರಿ ರಾಜಕೀಯದ ಸಂಸ್ಕೃತಿ ಗೊತ್ತಿದ್ದರಿಂದಲೇ ಹೆಬ್ಬಾಳಕರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲದಿದ್ದರೆ ಅವರು ಶಾಸಕಿ ಆಗುವುದಕ್ಕೆ ಸಾಧ್ಯವಿರಲಿಲ್ಲ” ಎಂದು ಹೇಳುವ ಮೂಲಕ ಜನಪ್ರತಿನಿಧಿಯೊಬ್ಬರ ಬಗ್ಗೆ, ಮಹಿಳಾ ನಾಯಕಿಯೊಬ್ಬರ ಬಗ್ಗೆ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನೀಡಿರುವ ಹೇಳಿಕೆ, ಮಾಜಿ ಶಾಸಕರೂ ಆದ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಮಾತ್ರವಲ್ಲದೆ, ಸದಾ ಮಹಿಳೆಯರು ಮತ್ತು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ, ದೇಶದ ಘನತೆ-ಗೌರವ ಎತ್ತಿಹಿಡಿಯುವ ಮಾತನಾಡುವ ಭಾರತೀಯ ಜನತಾ ಪಕ್ಷ, ವಾಸ್ತವವಾಗಿ ಮಹಿಳೆಯರಿಗೆ ಯಾವ ಮಟ್ಟಿನ ಗೌರವ ನೀಡುತ್ತದೆ ಎಂಬುದಕ್ಕೂ ಸಾಕ್ಷಿಯಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳ ದುಃಸ್ಥಿತಿ ಕುರಿತು ಕಳೆದ ಕೆಲವು ದಿನಗಳಿಂದ ಮಾಜಿ ಶಾಸಕರು ಮತ್ತು ಹಾಲಿ ಶಾಸಕಿ ನಡುವೆ ವಾಕ್ಸಮರ ನಡೆಯುತ್ತಿತ್ತು. ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಅಭಿಮಾನಿಗಳು ಬೆಂಬಲಿಗರ ನಡುವೆ ಪರಸ್ಪರ ಪೋಸ್ಟರ್ ವಾರ್ ಗೂ ಇದು ಕಾರಣವಾಗಿತ್ತು. ಪೋಸ್ಟರ್ ವಿಷಯದಲ್ಲಿ ಪೊಲೀಸ್ ದೂರು ಕೂಡ ದಾಖಲಾಗಿತ್ತು.
ಆದರೆ, ಮಾಜಿ ಶಾಸಕ ಸಂಜಯ್ ಪಾಟೀಲ್ ಗುರುವಾರ ಸಂಜೆ ಮಾಧ್ಯಮಗಳ ಮುಂದೆ, “ಬಿಜೆಪಿಯವರಿಗೆ ನೈಟ್ ಪೊಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸನವರು ನೈಟ್ ಪೊಲಿಟಿಕ್ಸ್ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು. ಹೀಗಾಗಿ ನೈಟ್ ಪೊಲಿಟಿಕ್ಸ್ ಮಾಡಿ ಗೆದ್ದು ಬಂದಿದ್ದಾರೆ” ಎನ್ನುವ ಮೂಲಕ ಸಾರ್ವಜನಿಕ ಸಭ್ಯತೆಯ ಎಲ್ಲೆ ಮೀರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂಜಯ್ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, “ಹೀಗೆ ಆರೋಪ ಮಾಡುವುದು ಸುಲಭ, ಆದರೆ ಇದರಿಂದ ನನ್ನ, ಹಾಗೂ ನಮ್ಮ ಕುಟುಂಬ ಸದಸ್ಯರಿಗೆ ಆಗೋ ನೋವು ನಮಗೆ ಮಾತ್ರ ಗೊತ್ತು. ವಿಕೃತ ಮನಸ್ಥಿತಿ ಇರೋವರಿಗೆ ಈ ರೀತಿ ಆರೋಪ ಮಾಡೊದ್ರಿಂದ ಸಂತೋಷ ಆಗುತ್ತೆ. ಹೆಣ್ಣನ್ನು ಪೂಜಿಸುವ ನಾಡು ನಮ್ಮದು. ಮಹಿಳಾ ಶಾಸಕಿಯ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ ಎರಡನೇ ಅವತಾರವಾಗಿರುವ ಸಂಜಯ್ ಪಾಟೀಲಗೆ ದೇವರು ಒಳ್ಳೆಯದು ಮಾಡಲಿ ” ಎಂದು ಹೇಳಿದ್ದಾರೆ.
ರಾಜಕಾರಣದಲ್ಲಿ ಹೇಳಿಕೆ, ಪ್ರತಿಹೇಳಿಕೆ, ಆರೋಪ, ಪ್ರತ್ಯಾರೋಪಗಳು ಸರ್ವೇಸಾಮಾನ್ಯ. ಆದರೆ, ಜನಪ್ರತಿನಿಧಿಗಳ ಬಗ್ಗೆ, ಅದಲ್ಲೂ ಮಹಿಳಾ ಜನಪ್ರತಿನಿಧಿಗಳ ಬಗ್ಗೆ ಮಾತನಾಡುವಾಗ ಕನಿಷ್ಟ ಗೌರವ ಮತ್ತು ಘನತೆ ಕಾಯ್ದುಕೊಳ್ಳಬೇಕಾದದು ಸಭ್ಯತೆ. ಆದರೆ, ಬಿಜೆಪಿಯ ಈ ನಾಯಕ, ಕೀಳು ಮಾತುಗಳ ಮೂಲಕ ಕೇವಲ ಮಹಿಳಾ ನಾಯಕಿಗೆ ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿಗೇ ಅವಮಾನ ಮಾಡಿದ್ದಾರೆ. ಹಾಗೇ ತಮ್ಮ ಪಕ್ಷ ಮಹಿಳೆಯರನ್ನು, ಮಹಿಳಾ ರಾಜಕಾರಣಿಗಳನ್ನು ಹೇಗೆ ಕಾಣುತ್ತದೆ ಎಂಬುದನ್ನೂ ತಮ್ಮ ಹೇಳಿಕೆಯ ಮೂಲಕ ಬಹಿರಂಗಗೊಳಿಸಿದ್ದಾರೆ. ಹಾಗಾಗಿ, ಕೂಡಲೇ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆ ಕೇಳಬೇಕು ಮತ್ತು ಭಾರತೀಯ ಜನತಾ ಪಕ್ಷ ಕೂಡ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈಗಾಗಲೇ ಬೆಳಗಾವಿ ಸೇರಿದಂತೆ ವಿವಿಧೆಡೆ ಸಂಜಯ್ ಪಾಟೀಲ್ ಹೇಳಿಕೆ ಖಂಡಿಸಿ, ಮತ್ತು ಅವರ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿದೆ.
‘ಚುನಾವಣೆಗೆ ಮುನ್ನ, ನಾನು ನಿಮ್ಮ ಮನೆ ಮಗಳು ಎಂದೆಲ್ಲಾ ಹೇಳಿ ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿದ್ದರು. ಆ ಕನಸುಗಳನ್ನು ನನಸು ಮಾಡಲಾಗಿಲ್ಲ. ಹೀಗಾಗಿ, ಗ್ರಾಮೀಣ ಕ್ಷೇತ್ರದ ಜನರು ಪ್ರತಿಕ್ರಿಯೆ ಕೊಡಲು ಆರಂಭಿಸಿದ್ದಾರೆ. ಅದಕ್ಕೆ ಬಿಜೆಪಿಯ ಹೆಸರನ್ನು ಶಾಸಕಿ ಕೊಡುತ್ತಿದ್ದಾರೆ. ರಾತ್ರಿ ರಾಜಕೀಯ ಮಾಡುವುದು ಬಿಜೆಪಿ ಸಂಸ್ಕೃತಿಯಲ್ಲ. ಅದು ಕಾಂಗ್ರೆಸ್ನವರ ಸಂಸ್ಕೃತಿ’ ಎಂಬ ಹೇಳಿಕೆ ನೀಡಿರುವ ಸಂಜಯ್ ಪಾಟೀಲ್, ತಮ್ಮ ಬಿಜೆಪಿ ಸಂಸ್ಕೃತಿ ಏನು ಎಂಬುದನ್ನು ಸಾರಿ ಹೇಳಿದ್ದಾರೆ. ಇಂತಹ ಕೀಳು ಮನಸ್ಥಿತಿಯ, ಅಸಹ್ಯಕರ ಯೋಚನೆಯ ಮನುಷ್ಯನನ್ನು ಬಿಜೆಪಿ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಕೂಡ ಸಂಜಯ್ ಪಾಟೀಲ್ ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಹಲವು ಮಹಿಳಾ ಲೇಖಕಕಿಯರು, ಹೋರಾಟಗಾರ್ತಿಯರು ಮತ್ತು ವಿವಿಧ ವಲಯದ ಸಂವೇದನಾಶೀಲ ಮಹಿಳೆಯರು ಸಂಜಯ್ ಪಾಟೀಲ್ ಹೇಳಿಕೆಯನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ, “ಭಾರತೀಯ ಸಂಸ್ಕೃತಿ ಮತ್ತು ಮಹಿಳೆಯರ ಬಗ್ಗೆ ಬಾಯಿಮಾತಿನ ಬಡಾಯಿ ಕೊಚ್ಚುವ ಬಿಜೆಪಿ ಮತ್ತು ಅದರ ಮಾತೃಸಂಘಟನೆಗಳಾದ ಸಂಘಪರಿವಾರ, ಈ ವಿಕೃತ ಮನಸ್ಥಿತಿಯ ನಾಯಕನಿಗೆ ಕಿವಿಹಿಂಡಿ ಕ್ಷಮಾಪಣೆ ಕೇಳಿಸಬೇಕು. ಮಹಿಳೆಯರ ಕುರಿತು ಗೌರವ ಮತ್ತು ಘನತೆಯ ನಡವಳಿಕೆಯನ್ನು ತನ್ನ ಶಾಸಕರು, ಮಾಜಿ ಶಾಸಕರು, ನಾಯಕರಿಗೆ ಕಲಿಸಿಕೊಡಲು ಭಾರತೀಯ ಸಂಸ್ಕೃತಿಯ ಸ್ವಘೋಷಿತ ರಕ್ಷಕರು ಮುಂದಾಗಬೇಕು. ಇಲ್ಲವಾದರೆ ಜನ ಬೀದಿಬೀದಿಯಲ್ಲಿ ಬುದ್ದಿಕಲಿಸಬೇಕಾಗುತ್ತದೆ” ಎಂದೂ ಆಗ್ರಹಿಸಿದ್ದಾರೆ.