ಸ್ವತಂತ್ರ ಭಾರತ #ಆತ್ಮನಿರ್ಭರತೆಯಿಂದ 75ನೆಯ ವರ್ಷಕ್ಕೆ ಕಾಲಿಡುತ್ತಿದ್ದು ಅಮೃತ ಮಹೋತ್ಸವದ ವಿಜೃಂಭಣೆಗೆ ಸಜ್ಜಾಗುತ್ತಿದೆ. 74 ವರ್ಷಗಳು ನಡೆದು ಬಂದ ಹಾದಿಯನ್ನು ಪರಾಮರ್ಶಿಸುತ್ತಾ, ಹಿಂದಿರುಗಿ ನೋಡುತ್ತಲೇ ಮುಂದಿನ ಹೆಜ್ಜೆಗಳನ್ನು ನಿರ್ಧರಿಸುವ ನಿಟ್ಟಿನಲ್ಲಿ ಈ ದೇಶದ ಸಾರ್ವಭೌಮ ಜನತೆ ಭಾರತವನ್ನು ಒಂದು ಸಂಪದ್ಭರಿತ-ಸೌಹಾರ್ದಯುತ ದೇಶವನ್ನಾಗಿ ಕಟ್ಟಲು ಸಜ್ಜಾಗಬೇಕಿದೆ. ಕಳೆದ 74 ವರ್ಷಗಳಲ್ಲಿ ಭಾರತ ಮುನ್ನಡೆದಿದೆ, ಮುಂದುವರೆದಿದೆ ಹಾಗೆಯೇ ತನ್ನೊಳಗಿನ ವೈರುಧ್ಯಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡೇ ವಾಸ್ತವಿಕ ಸನ್ನಿವೇಶಗಳೊಡನೆ ಸಂಘರ್ಷನಿರತವಾಗಿದೆ. ಈ ವೈರುಧ್ಯಗಳಲ್ಲಿ ಮುಖ್ಯವಾಗಿ ಕಾಣುವುದು ಈ ದೇಶದ ಮಹಿಳಾ ಸಮುದಾಯ ಎದುರಿಸುತ್ತಿರುವ ಶೋಷಣೆಯ ವಿಭಿನ್ನ ಆಯಾಮಗಳು.
ಇತ್ತೀಚೆಗೆಷ್ಟೇ ಸಮಾಪ್ತಿಯಾದ ಸಂಸತ್ ಅಧಿವೇಶನದಲ್ಲಿ , ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೇ ನೀಡುವ ಸಂವಿಧಾನದ 127ನೆಯ ತಿದ್ದುಪಡಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಂಸತ್ ಕಲಾಪವನ್ನು ಬಹಿಷ್ಕರಿಸುತ್ತಿದ್ದ ಎಲ್ಲ ವಿರೋಧ ಪಕ್ಷಗಳೂ ಈ ತಿದ್ದುಪಡಿಯ ಸಲುವಾಗಿ ತಮ್ಮ ಹಕ್ಕೊತ್ತಾಯಗಳನ್ನು ತಾತ್ಕಾಲಿಕವಾಗಿ ಬದಿಗೊತ್ತಿ ಮಸೂದೆಯನ್ನು ಅಂಗೀಕರಿಸಿರುವುದು, ಒಂದು ರೀತಿಯಲ್ಲಿ ಸಂಸದೀಯ ಐಕ್ಯತೆಯನ್ನು ತೋರುತ್ತದೆ. ಈ ಐಕ್ಯತೆಯನ್ನು ಸ್ವಾಗತಿಸೋಣ, ಆದರೆ ಇದೇ ಒಮ್ಮತವನ್ನು ಮಹಿಳಾ ಮೀಸಲಾತಿ ವಿಚಾರದಲ್ಲಿ ಏಕೆ ಪ್ರದರ್ಶಿಸುತ್ತಿಲ್ಲ ಎಂದು ಯೋಚಿಸಿದಾಗ ನಮ್ಮ ಆಳುವ ವರ್ಗಗಳಲ್ಲಿನ ಸಂಕುಚಿತ ವಕ್ರದೃಷ್ಟಿಯನ್ನು ಕಾಣಲು ಸಾಧ್ಯ.
ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ನಂತರವೂ ನಿರಂತರ ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾಗಿರುವ ಎರಡು ಸಮುದಾಯಗಳೆಂದರೆ ಮಹಿಳೆಯರು ಮತ್ತು ಅಸ್ಪೃಶ್ಯ ದಲಿತರು. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಎಲ್ಲ ಸರ್ಕಾರಗಳೂ ಕ್ರಾಂತಿಕಾರಕ ಯೋಜನೆಗಳನ್ನು ಹಮ್ಮಿಕೊಂಡೇ ಬಂದಿವೆ, ಮಹಿಳಾ ಸಾಕ್ಷರತೆ ಹೆಚ್ಚಾಗಿದೆ, ಉದ್ಯೋಗ ಕ್ಷೇತ್ರದಲ್ಲಿ, ಮಾರುಕಟ್ಟೆಯಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗುತ್ತಿದೆ. ರಾಜಕಾರಣದಲ್ಲೂ ಮಹಿಳೆಯರ ಧ್ವನಿ ಗಟ್ಟಿಯಾಗಿಯೇ ಕೇಳಿಬರುತ್ತಿದೆ. ಆದರೆ ಸಂಸದೀಯ ಪ್ರಾತಿನಿಧ್ಯ ಮತ್ತು ಅಧಿಕಾರ ರಾಜಕಾರಣದ ಪ್ರಾತಿನಿಧಿಕ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ಮಹಿಳೆಯರು ಇನ್ನೂ ಸಾಕಷ್ಟು ಹಾದಿ ಕ್ರಮಿಸಬೇಕಿದೆ. ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ, ಪ್ರಸ್ತುತ ಸಾಂಸ್ಕೃತಿಕ ರಾಜಕಾರಣದ ವಾತಾವರಣದಲ್ಲಿ, ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ.
ಈ ಪ್ರಾತಿನಿಧ್ಯದ ಕೊರತೆಯೇ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳು ಹೆಚ್ಚಾಗಲು ಕಾರಣವಾಗಿವೆ. ಶಾಸನ ಸಭೆಗಳಲ್ಲಿ ಮಹಿಳೆಯರ ನೋವು ಪ್ರತಿಧ್ವನಿಸಬೇಕಾದರೆ ಸಂಸದೀಯ ಪ್ರಾತಿನಿಧ್ಯವೂ ಹೆಚ್ಚಾಗಬೇಕಲ್ಲವೇ ? ಇದು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯೊಂದಿಗೇ ನಾವು ಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ವಿಮರ್ಶಾತ್ಮಕವಾಗಿ ನೋಡಬೇಕಿದೆ. ಸಂಸತ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ರಾಜಧಾನಿಯಲ್ಲಿ ಒಂಬತ್ತು ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ, ಕೊಲೆಯಾಗುತ್ತಾಳೆ ಆದರೆ ಇದು ಸಂಸತ್ತಿನಲ್ಲಿ ಧ್ವನಿಸುವುದೇ ಇಲ್ಲ ಎಂದರೆ, ನಮ್ಮ ಮಹಿಳಾ ಸಂಸದರೂ ಸ್ತ್ರೀ ಸಂವೇದನೆಯನ್ನು ಕಳೆದುಕೊಂಡಿದ್ದಾರೆ ಎಂದೇ ಅರ್ಥ ಅಲ್ಲವೇ ? ಈ ಹಿನ್ನೆಲೆಯಲ್ಲೇ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಗಮನಿಸಬೇಕಿದೆ.
ಅತ್ಯಾಚಾರ-ದೌರ್ಜನ್ಯದ ತವರು
1972ರ ಮಥುರಾ ಪ್ರಕರಣದಿಂದ 2021ರ ದೆಹಲಿ ಘಟನೆಯವರೆಗಿನ ಮಹಿಳೆಯ ಮೇಲಿನ ಅತ್ಯಾಚಾರಗಳು ಮತ್ತು ದೌರ್ಜನ್ಯದ ಇತಿಹಾಸವನ್ನು ಗಮನಿಸಿದರೆ, ಭಾರತದ ಮಹಿಳೆಯರು ಘನತೆಯಿಂದ ಬದುಕುವುದು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಒಂದೆಡೆ ಸಾಮಾನ್ಯವಾಗಿ ಮಹಿಳೆ ಎಂಬ ಕಾರಣಕ್ಕೇ ಸಂಪ್ರದಾಯ ಮತ್ತು ಮತಧಾರ್ಮಿಕ ಸಂಸ್ಕೃತಿಗಳ ಸಂಕೋಲೆಗಳಲ್ಲಿ ಬಂಧಿಸಲ್ಪಡುವ ಭಾರತದ ಮಹಿಳಾ ಸಮುದಾಯ ಮತ್ತೊಂದೆಡೆ ಜಾತಿ ಶ್ರೇಷ್ಠತೆಯ ಸಂಕೋಲೆಗಳಲ್ಲಿ ಸಿಲುಕಿ ನಿರಂತರ ಜಾತಿ ದೌರ್ಜನ್ಯ ಮತ್ತು ಅತ್ಯಾಚಾರಕ್ಕೊಳಗಾಗುತ್ತಿರುವುದನ್ನು ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಮನಿಸಲೇಬೇಕಿದೆ.
ಕಾರ್ಪೋರೇಟ್ ಸಾಮ್ರಾಜ್ಯದ ಉನ್ನತ ಸ್ಥಾನಗಳಲ್ಲಿ ವಿಜೃಂಭಿಸುವ, ಕ್ರೀಡೆಗಳಲ್ಲಿ ವಿಶ್ವಮಾನ್ಯತೆ ಪಡೆದು ಮೆರೆಯುವ, ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಮಹಿಳೆಯರ ಸಾಧನೆಗಳನ್ನು ಕೊಂಡಾಡುವ ಭಾರತದ ಸುಶಿಕ್ಷಿತ ಸಮಾಜ ದಿನನಿತ್ಯ ಅತ್ಯಾಚಾರಕ್ಕೀಡಾಗುತ್ತಿರುವ, ದೌರ್ಜನ್ಯ ಎದುರಿಸುತ್ತಿರುವ ಲಕ್ಷಾಂತರ ಹೆಣ್ಣುಮಕ್ಕಳನ್ನು ಕಣ್ಣೆತ್ತಿಯೂ ನೋಡದೆ ಇರುವುದು ಶತಮಾನದ ವೈರುಧ್ಯ ಎಂದರೂ ತಪ್ಪೇನಿಲ್ಲ. ಸಾಧಕರಲ್ಲಾಗಲೀ, ಶೋಷಿತರಲ್ಲಾಗಲೀ, ದೌರ್ಜನ್ಯಕ್ಕೀಡಾದವರಲ್ಲಾಗಲೀ ಜಾತಿ ಚಹರೆಗಳನ್ನು ಹೆಕ್ಕಿ ತೆಗೆದು ಸ್ಪಂದಿಸುವ ಒಂದು ವಿಕೃತಿಯನ್ನು ಭಾರತೀಯ ಸಮಾಜ ಮೈಗೂಡಿಸಿಕೊಂಡಿರುವುದರಿಂದ, ತುಳಿತಕ್ಕೊಳಗಾದ ಮಹಿಳೆಯರ ನೋವಿನ ಧ್ವನಿಗಳು ಹಾಥ್ರಸ್‍ನ ಸಂತ್ರಸ್ತೆಯಂತೆ ನಡುರಾತ್ರಿಯಲ್ಲೇ ಸುಟ್ಟುಹೋಗುತ್ತವೆ.
1972 ಮಥುರಾ ಅತ್ಯಾಚಾರ ಪ್ರಕರಣ ಭಾರತದ ಮಹಿಳೆಯರ ಪಾಲಿಗೆ ಮಹತ್ತರವಾದ ತಿರುವು ನೀಡಿದ ಒಂದು ದುರಂತ ಕ್ಷಣ. ಏಕೆಂದರೆ ಸ್ವಾತಂತ್ರ್ಯ ಗಳಿಸಿದ 25 ವರ್ಷಗಳ ನಂತರ ಭಾರತದ ಆಳುವ ವರ್ಗಗಳಿಗೆ ಸ್ತ್ರೀ ಸಂವೇದನೆಯ ಚುರುಕು ಮುಟ್ಟಿತ್ತು. ಕೆಳಸ್ತರದ ಸಮಾಜದ ಭಾರತೀಯ ಮಹಿಳೆಯರು ಜಾತಿ ಸಂಕೋಲೆಗಳಿಂದಲೂ, ದೇಶದ ಸಮಸ್ತ ಮಹಿಳೆಯರು ಪಿತೃಪ್ರಧಾನ ಸಂಸ್ಕೃತಿಯ ಸಂಕೋಲೆಗಳಿಂದಲೂ ಇನ್ನೂ ವಿಮೋಚನೆ ಹೊಂದಿಲ್ಲ ಎಂದು ಅರಿವು ಮೂಡಿಸಿದ ಘಟನೆ ಅದು. ಆದರೆ ಈ ಘಟನೆ ನಡೆದು 50 ವರ್ಷಗಳೇ ಸಂದಿವೆ. ಇಂದಿಗೂ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಪಿತೃಪ್ರಧಾನ ಧೋರಣೆ ಮತ್ತು ಪುರುಷ ಸಮಾಜದ ಆಧಿಪತ್ಯದ ಅಹಮಿಕೆ ಯಥಾಸ್ಥಿತಿಯಲ್ಲಿರುವುದು ದೆಹಲಿಯ ಒಂಬತ್ತು ವರ್ಷದ ಹಸುಳೆ ಸಾರಿ ಹೇಳುತ್ತಿದೆ.
ವಸಾಹತು ಸಂಕೋಲೆಗಳಿಂದ ವಿಮೋಚನೆ ಪಡೆದ ಒಂದು ದೇಶ ತನ್ನ ಸ್ವತಂತ್ರ ಇತಿಹಾಸದ ಹೆಜ್ಜೆಗುರುತುಗಳನ್ನು ಗಮನಿಸುವಾಗ ದೇಶದ ಸಮಸ್ತ ಜನಸಮುದಾಯಗಳೂ ಶೋಷಣೆಯಿಂದ ಮುಕ್ತರಾಗಿರುವ ಕುರುಹುಗಳನ್ನಾದರೂ ಕಾಣುವಂತಾದರೆ, ವಿಮೋಚನೆಯ ಸಾರ್ಥಕತೆಯನ್ನು ಕಾಣಲು ಸಾಧ್ಯ.. ಆದರೆ ಮಹಿಳೆಯರ ವಿಚಾರದಲ್ಲಿ ಭಾರತ ಇಲ್ಲಿ ಎಡವಿದೆ. ಹೆಜ್ಜೆ ಹೆಜ್ಜೆಗೂ ಸಾಧನೆಗಳನ್ನು ಗುರುತಿಸುತ್ತಾ ಪಿ ಟಿ ಉಷಾ ರಿಂದ ಸುಧಾ ಮೂರ್ತಿಯವರೆಗೆ, ಇಂದಿರಾ ನೂಯಿಯಿಂದ ಮೀರಾಬಾಯಿ ಚಾನುವರೆಗೆ ಗುರುತಿಸುವ ನಾವು, ಹಾಗೆಯೇ ಮಥುರಾದಿಂದ ಹಾಥ್ರಸ್‍ವರೆಗಿನ ಆಕ್ರಂದನದ ಧ್ವನಿಗಳಿಗೂ ಕಿವಿಗೊಡದೆ ಹೋದರೆ, ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ.
ಅತ್ಯಾಚಾರ ದೌರ್ಜನ್ಯದ ಇತಿಹಾಸ
1973 26 ವರ್ಷದ ಶುಶ್ರೂಷಕಿ ಅರುಣಾ ಶಾನಭಾಗ್ ಆಸ್ಪತ್ರೆಯ ವಾರ್ಡ್‍ನಲ್ಲೇ ಸೋಹನ್‍ಲಾಲ್ ಭಾರತ ವಾಲ್ಮೀಕಿ ಎಂಬ ವಿಕೃತ ಕಾಮಿಯ ದಾಹಕ್ಕೆ ಬಲಿಯಾಗುತ್ತಾಳೆ. 40 ವರ್ಷಗಳ ಕಾಲ ಪ್ರಪಂಚದ ಪರಿವೆಯೇ ಇಲ್ಲದೆ ಬದುಕುವ ಅರುಣಾ 2015ರಲ್ಲಿ ಕೊನೆಯುಸಿರೆಳೆಯುತ್ತಾಳೆ.
1990 ಕೊಲ್ಕತ್ತಾ ನಗರದ 14 ವರ್ಷದ ಶಾಲಾ ಬಾಲಕಿ, ಹೇತಲ್ ಪರೇಖ್ ಧನಂಜಯ್ ಚಟರ್ಜಿ ಎಂಬ ವ್ಯಕ್ತಿಯಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾಗುತ್ತಾಳೆ.
1992 – ಭಾವರಿದೇವಿ ಎಂಬ ಕೆಳಜಾತಿಯ ಮಹಿಳೆ ಐವರು ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಾಳೆ. 1995ರಲ್ಲಿ ಜೈಪುರ ಹೈಕೋರ್ಟ್ ಐವರು ಆರೋಪಿಗಳನ್ನು ದೋಷಮುಕ್ತರೆಂದು ಬಿಡುಗಡೆ ಮಾಡುತ್ತದೆ. ಆರೋಪಿಗಳು ಮೇಲ್ಜಾತಿಗೆ ಸೇರಿದವರಾಗಿರುವುದರಿಂದ ಒಬ್ಬ ಕೆಳಜಾತಿಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಸಂಭವ ಇಲ್ಲ ಎಂಬ ನ್ಯಾಯಾಲಯದ ವ್ಯಾಖ್ಯಾನ ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ಚಾಲ್ತಿಯಲ್ಲಿದೆ.
1996 – ದೆಹಲಿಯ ಫ್ಲಾಟ್ ಒಂದರಲ್ಲಿ ಪ್ರಿಯದರ್ಶಿನಿ ಮಟ್ಟೂ ಎಂಬ ಕಾನೂನು ವಿದ್ಯಾರ್ಥಿನಿಯ ಮೇಲೆ ಸಹಪಾಠಿಯೊಬ್ಬನಿಂದ ಅತ್ಯಾಚಾರ ಮತ್ತು ಕೊಲೆ ನಡೆಯುತ್ತದೆ. ಪೊಲೀಸ್ ಅಧಿಕಾರಿಯ ಮಗನಾಗಿದ್ದ ಕಾರಣ ಈ ಆರೋಪಿಯ ಬಿಡುಗಡೆಯಾದರೂ, ನಂತರ ಸಾರ್ವಜನಿಕ ಒತ್ತಡದಿಂದ ಗಲ್ಲುಶಿಕ್ಷೆಗೊಳಗಾಗುತ್ತಾನೆ.
2012 – 23 ವರ್ಷದ ನಿರ್ಭಯಾ ಚಲಿಸುತ್ತಿರುವ ದೆಹಲಿಯಲ್ಲಿ ಚಲಿಸುತ್ತಿರುವ ವಾಹನವೊಂದರಲ್ಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗುತ್ತಾಳೆ. ಇದು ಭಾರತದಲ್ಲಿ ಸ್ತ್ರೀ ಸಂವೇದನೆಯನ್ನು ಚುರುಕುಗೊಳಿಸಿದ ಪ್ರಕರಣ ಎಂದರೂ ತಪ್ಪೇನಿಲ್ಲ. ಇದರ ನಂತರ ರಚಿಸಲಾದ ವರ್ಮಾ ಆಯೋಗದ ಶಿಫಾರಸುಗಳನ್ನು ಆಧರಿಸಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನು ಜಾರಿಗೊಳಿಸಲಾಗುತ್ತದೆ.
2018 –ಉತ್ತರ ಭಾರತದ ಕಥುವಾ ಎಂಬಲ್ಲಿ 8 ವರ್ಷದ ಹಸುಳೆಯನ್ನು ದೇವಸ್ಥಾನದಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗುತ್ತದೆ. ಹಿಂದೂ ಪುರೋಹಿತನನ್ನೂ ಒಳಗೊಂಡಂತೆ ಆರು ಜನರು ಜೀವಾವಧಿ ಶಿಕ್ಷೆಗೊಳಗಾಗುತ್ತಾರೆ.
2018 ಜುಲೈ – ತಮಿಳುನಾಡಿನ ಚೆನ್ನೈ ನಗರದಲ್ಲಿ 12 ವರ್ಷದ ಬಾಲಕಿಯೊಬ್ಬಳನ್ನು ಏಳು ತಿಂಗಳ ಕಾಲ ಕೂಡಿಹಾಕಿ ಸತತವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬರುತ್ತದೆ. ಈ ಬಾಲಕಿಗೆ ಮಾದಕ ದ್ರವ್ಯಗಳನ್ನು ನೀಡಿ ದೌರ್ಜನ್ಯ ಎಸಗಲಾಗುತ್ತಿತ್ತು ಎಂದು ಆರೋಪಿಸಲಾಗಿತ್ತು.
2018- ಅಕ್ಟೋಬರ್ – ಕೇರಳದ ಕ್ಯಾಥೊಲಿಕ್ ಬಿಷಪ್ ಫ್ರಾಂಕೋ ಮುಲಕ್ಕಲ್ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಸತತ ಎರಡು ವರ್ಷ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಾರೆ.
2019 ಜುಲೈ – ಉನ್ನಾವೋ, ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ತು ವರ್ಷ ಜೈಲುಶಿಕ್ಷೆಗೊಳಗಾಗುತ್ತಾನೆ. ಇವನನ್ನು ಬಿಜೆಪಿಯಿಂದ ಉಚ್ಚಾಟಿಸಿ ಇವನ ಪತ್ನಿಗೆ ಬಿಜೆಪಿ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ನೀಡುತ್ತದೆ.
2019 ನವಂಬರ್ – ಪಶುವೈದ್ಯೆಯೊಬ್ಬಳ ಸುಟ್ಟ ಮೃತದೇಹ ಹೈದರಾಬಾದ್‍ನ ಮೇಲ್ಸೇತುವೆಯ ಬಳಿ ದೊರೆಯುತ್ತದೆ. ಸಾಮೂಹಿಕ ಅತ್ಯಾಚಾರದ ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗುತ್ತದೆ.
2019ರ ಡಿಸೆಂಬರ್ – ಉತ್ತರಪ್ರದೇಸದ ಉನ್ನಾವೋದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ 23 ವರ್ಷದ ಮಹಿಳೆಯನ್ನು ನ್ಯಾಯಾಲಯಕ್ಕೆ ಹೋಗುವ ಮಾರ್ಗದಲ್ಲೇ ಆರೋಪಿ ಮತ್ತು ಸಹಚರರು ಜೀವಂತ ದಹನ ಮಾಡಿ ಕೊಲ್ಲುತ್ತಾರೆ.
2020 ಸೆಪ್ಟಂಬರ್ – ಉತ್ತರಪ್ರದೇಶದ ಹಾಥ್ರಸ್ ಜಿಲ್ಲೆಯ ಭೂಲ್ಗರಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ದಲಿತ ಮಹಿಳೆಯನ್ನು ಠಾಕೂರ್ ಸಮುದಾಯಕ್ಕೆ ಸೇರಿದ ನಾಲ್ವರು ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯ ನಾಲಿಗೆ ಕತ್ತರಿಸಿ ಬಿಸಾಡಿ ಹೋಗುತ್ತಾರೆ. ಪೊಲೀಸರು ಮೃತ ದೇಹವನ್ನು ನಡುರಾತ್ರಿಯಲ್ಲೇ ಸುಟ್ಟುಹಾಕುವ ಮೂಲಕ ಇರುವ ಸಾಕ್ಷ್ಯಾಧಾರಗಳೂ ನಾಶವಾಗುತ್ತವೆ.
2021 –ದೆಹಲಿಯಲ್ಲಿ ಮಸಣದ ಅರ್ಚಕನೊಬ್ಬ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿ ಆಕೆಯ ದೇಹವನ್ನು ಪೋಷಕರಿಗೂ ಒಪ್ಪಿಸದೆ ತಾನೇ ಸುಟ್ಟುಹಾಕುತ್ತಾನೆ.
ಅಮೃತ ಮಹೋತ್ಸವದ ಹೊಸ್ತಿಲಲ್ಲಿ
ಮೇಲೆ ಉಲ್ಲೇಖಿಸಿರುವ ಘಟನಾವಳಿಗಳನ್ನು ಗಮನಿಸಿದಾಗ ಸಾಮಾನ್ಯ ಮಹಿಳೆಯ ಪಾಲಿಗೆ, ದಲಿತ ಅಸ್ಪೃಶ್ಯ ಶೋಷಿತ ಮಹಿಳೆಯ ಪಾಲಿಗೆ ಸ್ವತಂತ್ರ ಭಾರತ ಹೇಗೆ ಇಂದಿಗೂ ಒಂದು ಕರಾಳ ಅಧ್ಯಾಯವಾಗಿಯೇ ಉಳಿದಿದೆ ಎಂದು ಅರಿವಾಗುತ್ತದೆ ಅಲ್ಲವೇ ? 2012ರ ನಿರ್ಭಯಾ ಘಟನೆಯ ನಂತರ ರೂಪಿಸಿದ ಕಠಿಣ ಕಾನೂನುಗಳು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಹೋಗಲಾಡಿಸುತ್ತದೆ ಎಂಬ ಭ್ರಮೆ ಈಗ ಉಳಿದಿಲ್ಲ. ಏಕೆಂದರೆ 2001 ರಿಂದ 2017ರವೆಗಿನ ಅವಧಿಯಲ್ಲಿ ದಾಖಲಾಗಿರುವ ಅತ್ಯಾಚಾರದ ಪ್ರಕರಣಗಳು 4,15,786. ಅಂದರೆ ದಿನಕ್ಕೆ 67 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ, ನಿರ್ಭಯಾ ಪ್ರಕರಣದ ನಂತರದಲ್ಲಿ, ಅತ್ಯಾಚಾರ ಪ್ರಕರಣಗಳು ಶೇ 44ರಷ್ಟು ಹೆಚ್ಚಾಗಿರುವುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. (ಎನ್‍ಸಿಆರ್‍ಬಿ ಮಾಹಿತಿ)
ಶೇ 93ರಷ್ಟು ಅತ್ಯಾಚಾರಗಳು ಸಂತ್ರಸ್ತೆಯ ನಿಕಟವರ್ತಿಗಳಿಂದಲೇ ನಡೆಯುತ್ತದೆ ಎಂದು ಎನ್‍ಸಿಆರ್‍ಬಿ ಮಾಹಿತಿ ತಿಳಿಸುತ್ತದೆ. ಕಳೆದ ಏಳು ವರ್ಷಗಳಲ್ಲಿ, ಕೇಂದ್ರ ಸರ್ಕಾರದ “ ಹೆಣ್ಣು ಮಕ್ಕಳನ್ನು ಓದಿಸಿ ಹೆಣ್ಣು ಮಕ್ಕಳನ್ನು ರಕ್ಷಿಸಿ ” ಯೋಜನೆಯ ನೆರಳಲ್ಲೇ ದೇಶದಲ್ಲಿ 2,08,807 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದು 2019ರವರೆಗಿನ ಅಂಕಿಅಂಶ. 2019ರ ಎನ್‍ಸಿಆರ್‍ಬಿ ವರದಿಯ ಅನುಸಾರ ಉತ್ತರಪ್ರದೇಶದಲ್ಲಿ 59853 ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. (ಇದು ನವ ಆತ್ಮನಿರ್ಭರಭಾರತದ ಮಾದರಿ ರಾಜ್ಯ). ಈ ದೇಶದಲ್ಲಿ ದಿನಕ್ಕೆ 8 ದಲಿತ ಮಹಿಳೆಯರು ಅತ್ಯಾಚಾರ ಮತ್ತು ದೌರ್ಜನ್ಯಕ್ಕೀಡಾಗುತ್ತಾರೆ. ದಲಿತ ಮಹಿಳೆಯರ ಮೇಲೆ ನಡೆಯುವ ಶೇ 80ರಷ್ಟು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ಮೇಲ್ಜಾತಿಯವರಿಂದಲೇ ನಡೆಯುತ್ತವೆ.
ಇವು ದಾಖಲಾಗಿರುವ ಪ್ರಕರಣಗಳು. ಭಾರತದ ಕುಗ್ರಾಮಗಳಲ್ಲಿ, ಐಷಾರಾಮಿ ನಗರಗಳಲ್ಲಿ ವರದಿಯಾಗದೆ ಉಳಿದುಹೋಗುವ ಪ್ರಕರಣಗಳು ಇನ್ನೆಷ್ಟೋ. ವರ್ಮಾ ಆಯೋಗದ ಶಿಫಾರಸಿನ ಮೇರೆಗೆ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆಗೊಳಪಡಿಸಲು ತ್ವರಿತ ನ್ಯಾಯಾಲಯಗಳನ್ನೂ ಸ್ಥಾಪಿಸಲಾಗಿದೆ. ಆದರೂ ಲಕ್ಷಾಂತರ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿಯೇ ಉಳಿದಿವೆ. ಎಷ್ಟೋ ಆರೋಪಿಗಳು ಅಧಿಕಾರ ರಾಜಕಾರಣದ ಭಾಗವಾಗಿದ್ದರೂ ಅಚ್ಚರಿಯೇನಿಲ್ಲ. ಏಕೆಂದರೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ 27.8ರಷ್ಟಿದೆ. ಸಾಕ್ಷ್ಯಾಧಾರಗಳ ಕೊರತೆ ಮತ್ತು ನಾಶ, ಆರೋಪಿಗಳಿಗೆ ದೊರೆಯುವ ರಾಜಕೀಯ ಶ್ರೀರಕ್ಷೆ ಮತ್ತು ಜಾತಿ ಶ್ರೇಷ್ಠತೆಯ ಸಾಮಾಜಿಕ ಚೌಕಟ್ಟು, ಈ ದೇಶದ ಅಸಂಖ್ಯಾತ ಮಹಿಳೆಯರನ್ನು ನ್ಯಾಯವಂಚಿತರನ್ನಾಗಿ ಮಾಡುತ್ತಲೇ ಇದೆ.
ಯಾವುದೇ ಕಾನೂನು, ಸಂಹಿತೆ ಅಥವಾ ಕಠಿಣ ಶಿಕ್ಷೆಯ ಪ್ರಮಾಣ ಮಹಿಳೆಯರ ರಕ್ಷಣೆಗೆ ಬರುತ್ತಿಲ್ಲ ಎನ್ನುವುದು ಸರ್ಕಾರದ ಅಂಕಿಅಂಶಗಳಿಂದಲೇ ವ್ಯಕ್ತವಾಗುತ್ತಿದೆ. ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಸಾಂಪ್ರದಾಯಿಕ ಸಾಂಸ್ಕೃತಿಕ ನೆಲೆಗಳ ಪ್ರಭಾವದಿಂದ ಇಂದಿಗೂ ಪಿತೃಪ್ರಧಾನ ಧೋರಣೆಯಿಂದ ಹೊರಬರಲಾಗದೆ ಆಧುನಿಕ ಭಾರತೀಯ ಸಮಾಜ ಸ್ತ್ರೀ ಸಂವೇದನೆಯನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬಂಡವಾಳ ವ್ಯವಸ್ಥೆ ಮತ್ತು ಪುರುಷಪ್ರಧಾನ ರಾಜಕೀಯ ವ್ಯವಸ್ಥೆಯ ನಡುವೆ ಸಿಲುಕಿರುವ ಮಹಿಳಾ ಸಮುದಾಯ ತನ್ನ ಪ್ರಾತಿನಿಧಿಕ ಅಸ್ತಿತ್ವಕ್ಕಾಗಿಯೇ ಹೋರಾಡಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ವಿಮೋಚನೆಯ ಹಾದಿಯನ್ನು ಸುಗಮಗೊಳಿಸಬಹುದಾದ ರಾಜಕೀಯ ಪ್ರಾತಿನಿಧ್ಯದಿಂದ ಮಹಿಳಾ ಸಮುದಾಯವನ್ನು ನಿರಂತರವಾಗಿ ವಂಚಿಸಲಾಗುತ್ತಿದೆ.
ಸ್ವತಂತ್ರ ಭಾರತ ತನ್ನ 75ನೆಯ ವಸಂತವನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಾದರೂ ನಮ್ಮೊಳಗಿನ ಸ್ತ್ರೀ ಸಂವೇದನೆ ಜಾಗೃತಗೊಂಡು, ಈ ದೇಶದ ಮಹಿಳೆಯರಿಗೆ ಘನತೆವೆತ್ತ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕಿದೆ ಅಲ್ಲವೇ ? ಸಾಧಕ ಮಹಿಳೆಯರತ್ತ ಹೆಮ್ಮೆಯಿಂದ ನೋಡುತ್ತಲೇ ತುಳಿತಕ್ಕೊಳಗಾದ, ಘನತೆಗಾಗಿ ಹಗಲಿರುಳೂ ಹೋರಾಡುತ್ತಿರುವ ಕೋಟ್ಯಂತರ ಮಹಿಳೆಯರತ್ತ ಗಮನ ಹರಿಸುವುದಾದರೆ, ಕೆಂಪುಕೋಟೆಯ ಅಮೃತಮಹೋತ್ಸವದ ಮನದ ಮಾತುಗಳು ಸಾರ್ಥಕವಾಗಬಹುದು.