ಬೆಡ್ ಬ್ಲಾಕಿಂಗ್ ದಂಧೆಗೆ ‘ಮೆಡಿಕಲ್ ಟೆರರಿಸಂ’ ಎಂಬ ಹೊಸ ಟೈಟಲ್ ಸೃಷ್ಟಿಸಿದ್ದ ಭ್ರಷ್ಟ ಬಿಜೆಪಿ ಈಗೇಕೆ ಮೌನವಹಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಖಾತೆಗೆ ಸೋಂಕಿತರಿಂದ ಹಣ ಜಮೆಯಾಗಿದ್ದು ಪತ್ತೆಯಾಗಿದೆ. ಇದರಲ್ಲಿ ಸತೀಶ್ ರೆಡ್ಡಿಯ ಪಾತ್ರದ ಬಗ್ಗೆ ತನಿಖೆ ಇಲ್ಲವೇಕೆ? ಸರ್ಕಾರ ರಕ್ಷಣೆಗೆ ನಿಂತಿದ್ದೇಕೆ?’ ಎಂದು ಪ್ರಶ್ನಿಸಿದೆ.
ಬೆಂಗಳೂರು ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಂಸದ ತೇಜಸ್ವಿ ಸೂರ್ಯ,ಶಾಸಕರಾದ ರವಿ ಸುಬ್ರಹ್ಮಣ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಮೇ ತಿಂಗಳ ಆರಂಭದಲ್ಲಿ ಬಯಲು ಮಾಡಿದ್ದರು.
ಪ್ರಕರಣ ಸಂಬಂಧ ಈ ಮೊದಲೇ ಬಂಧನವಾಗಿದ್ದ ನೇತ್ರಾವತಿ ಆರೋಪಿ ಬಾಬು ಮೂಲಕವೇ ಬೆಡ್ ಬುಕ್ಕಿಂಗ್ ಮಾಡಿಸುತ್ತಿದ್ದರು ಎನ್ನಲಾಗಿದೆ. ತಾನೊಬ್ಬ ಸಮಾಜ ಸೇವಕ ಎಂದು ಹೇಳಿಕೊಂಡಿದ್ದ ಬಾಬು, ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಒಡಾಡಿಕೊಂಡಿದ್ದ. ನೇತ್ರಾವತಿ, ಬಾಬು ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಜಯನಗರ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ಪೂಜಾರ ನೇತೃತ್ವದ ತಂಡ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 250 ಪುಟಗಳ ಆರೋಪ ಪಟ್ಟಿ ನೀಡಿದೆ ಎನ್ನಲಾಗಿದೆ.