ಬೆಂಗಳೂರು: ಜೆಪಿ ನಗರದ ತಿಪ್ಪಸಂದ್ರದಲ್ಲಿ ಭೂಕಬಳಿಕೆದಾರರಿಂದ ಅತಿಕ್ರಮವಾಗಿದ್ದ ಸುಮಾರು ಒಂದೂವರೆ ಎಕರೆ ಜಾಗವನ್ನು ಬಿಡಿಎ ಸೋಮವಾರ ವಶಕ್ಕೆ ತೆಗೆದುಕೊಂಡಿದೆ.
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಕುಮಾರ್ ನಾಯಕ್ ಅವರ ಸೂಚನೆ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಮತ್ತು ಇನ್ಸ್ ಪೆಕ್ಟರ್ ಲಕ್ಷ್ಮಯ್ಯ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಈ ಜಾಗವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರತಿಷ್ಠಿತ ಬಡಾವಣೆ ಎನಿಸಿರುವ ಜೆಪಿ ನಗರದ 9 ನೇ ಹಂತದ 4 ನೇ ಬ್ಲಾಕ್ ನ ತಿಪ್ಪಸಂದ್ರದ ಸರ್ವೇ ನಂಬರ್ 10 ರಲ್ಲಿ ಬಿಡಿಎಗೆ ಸೇರಿದ್ದ ಸುಮಾರು ಒಂದೂವರೆ ಎಕರೆ ಪ್ರದೇಶವನ್ನು ಕೆಲವು ಭೂಗಳ್ಳರು ಕಬಳಿಸಿ ಕಾಂಪೌಂಡ್ ಹಾಕಿದ್ದರು. ಅಲ್ಲದೇ, ವಾಹನ ತೂಕ ಹಾಕುವ ಯಂತ್ರ ಸೇರಿದಂತೆ ಕಟ್ಟಡ ಬಳಕೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು.
ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ, ಸದರಿ ಜಾಗವನ್ನು ತೆರವುಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಯಪಾಲಕ ಅಭಿಯಂತರ ಸುರೇಶ್ ನೇತೃತ್ವದ ಎಂಜಿನಿಯರ್ ಗಳ ತಂಡವು ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾಂಪೌಂಡ್ ಅನ್ನು ನೆಲಸಮ ಮಾಡಿ, ಸದರಿ ಜಾಗವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ನಗರದಲ್ಲಿ ಹಲವು ಮಂದಿ ಬಿಡಿಎ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇಂತಹ ಭೂಕಬಳಿಕೆದಾರರ ವಿರುದ್ಧ ಬಿಡಿಎ ನಿರಂತರವಾಗಿ ಸಮರವನ್ನು ಮುಂದುವರಿಸಿದೆ. ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಿಎಗೆ ಸಂಬಂಧಿಸಿದ ಜಾಗವನ್ನು ವಶಪಡಿಸಿಕೊಳ್ಳುತ್ತೇವೆ.