ಭಾರತದಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಇಲ್ಲದವರ ಸಂಖ್ಯೆ ವಿರಳಾತಿ ವಿರಳ. ಈಗ ಹುಟ್ಟಿದ ಕೂಸಿನಿಂದ ಹಿಡಿದು ಇನ್ನೇನು ಸಾಯುತ್ತಾರೆ ಎನ್ನುವವರೂ ಚೆಂಡು-ಬ್ಯಾಟು-ವಿಕೆಟ್ ಒಳಗೊಂಡ ಆಟದ ಮೇಲೆ ಹೊಂದಿರುವ ಅದಮ್ಯ ಅಭಿಮಾನ ಕ್ರಿಕೆಟ್ ಅನ್ನು ‘ಭಾರತದ ಧರ್ಮ’ ಎನ್ನುವಷ್ಟರ ಮಟ್ಟಿಗೆ ಬೆಳೆಸಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಹೀಗೆ ನಾನಾ ಮಾಜಿ, ಹಾಲಿ ಆಟಗಾರರು ಅಭಿಮಾನಿಗಳ ಆರಾಧ್ಯ ದೈವಗಳಾಗಿದ್ದಾರೆ. ಈ ರೀತಿಯ ಹುಚ್ಚು ಅಭಿಮಾನವೇ ಕ್ರಿಕೆಟ್ ಹಾಗೂ ಅದನ್ನು ನಿಯಂತ್ರಿಸುವ ಸಂಸ್ಥೆ, ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯನ್ನು (ಬಿಸಿಸಿಐ) ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆಯನ್ನಾಗಿ ಬೆಳೆಸಿದೆ.
ಭಾರತದ ಕ್ರೀಡಾ ವಲಯಕ್ಕೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ಅನುದಾನ 2,500 ಕೋಟಿ ರುಪಾಯಿ ದಾಟುವುದಿಲ್ಲ. ಸನ್ನಿವೇಶ ಹೀಗಿರುವಾಗ 13 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯ ಹೊಂದಿರುವ ಒಂದು ಸಂಸ್ಥೆಗೆ ಹೊಸ ಅಧ್ಯಕ್ಷರ ನೇಮಕದ ವಿಚಾರ ಸದ್ದು ಮಾಡದೇ ಇರುತ್ತದೆಯೇ? ಕ್ರಿಕೆಟ್ ವಿಚಾರದಲ್ಲಿ ಸಣ್ಣ ಸೂಜಿ ಬಿದ್ದರೂ ದೇಶದ ಜನರ ಕಿವಿಗಳು ನಿಮಿರುವಾಗ, ಹಣದ ಥೈಲಿ ಹೊಂದಿರುವ ಬಿಸಿಸಿಐ ಆಡಳಿತದ ಚುಕ್ಕಾಣಿಯನ್ನು ಯಶಸ್ವಿ ಹಾಗೂ ಮಾಜಿ ಕ್ರಿಕೆಟಿಗ, ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಹಿಡಿಯುತ್ತಾರೆ ಎಂದರೆ ಅದು ಆಸಕ್ತಿ ಕೆರಳಿಸದೆ ಇರುತ್ತದೆಯೇ? ಅದರಲ್ಲೂ ಕುಟುಂಬ ರಾಜಕಾರಣ ಹಾಗೂ ಪ್ರಭಾವಿ ಸ್ಥಾನಗಳನ್ನು ಬಲಾಢ್ಯರ ಮಕ್ಕಳು ಪಡೆಯುವುದರ ಕಡು ವಿರೋಧಿಯಾದ ದೇಶದ ಗೃಹ ಸಚಿವ ಅಮಿತ್ ಶಾ ಅವರ ಪುತ್ರನಾದ ಜಯ್ ಶಾ ಅವರೇ ಬಿಸಿಸಿಐ ಕಾರ್ಯದರ್ಶಿಯಾಗುವುದು, ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಸಹೋದರ ಖಜಾಂಚಿಯಾಗಿ ಆಯ್ಕೆಯಾಗುವ ವಾರ್ತೆ ಗಮನಸೆಳೆಯದೆ ಇದ್ದೀತೆ? ಇದೆಲ್ಲಕ್ಕೂ ಮಿಗಿಲಾದುದು 2021ರ ಮೇನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಾಗೂ ಬಂಗಾಳದ ಹುಲಿ ಗಂಗೂಲಿ ಆಯ್ಕೆ.
ಬ್ರಿಟಿಷರ ವಿರುದ್ಧದ ಸೆಡ್ಡು ಹೊಡೆದು ಸ್ವಾಭಿಮಾನದ ಸಂಕೇತವಾಗಿ 1928ರಲ್ಲಿ ಆಯ್ದ ಆಟಗಾರರು ದೆಹಲಿಯಲ್ಲಿ ಆರಂಭಿಸಿದ ಬಿಸಿಸಿಐ ಇಂದು ರಾಜಕಾರಣಿಗಳು ಹಾಗೂ ಉದ್ಯಮಿಗಳು ಮರ್ಜಿಗೆ ಸಿಲುಕಿ ನಲುಗುತ್ತಿರುವುದು ಹೊಸ ವಿಚಾರವೇನಲ್ಲ. ಆಟದ ಒಳಿತು, ಕೆಡಕಿನ ಬಗ್ಗೆ ಗಮನಹರಿಸಲು ಆರಂಭವಾದ ಸಂಸ್ಥೆ ಇಂದು ಅಧಿಕಾರ ದಾಹ ತೀರಿಸಿಕೊಳ್ಳಲು ಬಳಕೆಯಾಗುತ್ತಿದೆ ಎಂಬ ಆರೋಪದಲ್ಲಿ ಲವಲೇಶದಷ್ಟೂ ಅನುಮಾನವಿಲ್ಲ. 2021ರ ಮೇನಲ್ಲಿ 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ಅಧಿಕಾರ ಹಿಡಿಯುವ ಹವಣಿಕೆಯಲ್ಲಿರುವ ಬಿಜೆಪಿಗೆ ‘ಬಂಗಾಳ ಅಸ್ಮಿತೆ’ ಹೋರಾಟ ಎತ್ತಿ ಹಿಡಿಯುವ ಪ್ರಬಲ ಸ್ಥಳೀಯ ಮುಖವಿಲ್ಲ. ಇದಕ್ಕಾಗಿ ಕ್ರಿಕೆಟ್ ಮೂಲಕ ಸಾಕಷ್ಟು ವರ್ಚಸ್ಸು ಗಳಿಸಿರುವ, ಬಂಗಾಳದ ಹುಲಿ ಎಂದೇ ಖ್ಯಾತರಾದ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಅಮಿತ್ ಶಾ ಅವರನ್ನು ಗಂಗೂಲಿ ಕೆಲವು ದಿನಗಳ ಹಿಂದೆ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ನ್ಯಾ. ಲೋಧಾ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಮುಂದಿನ 10 ತಿಂಗಳು ಮಾತ್ರ ಬಿಸಿಸಿಐ ಅಧ್ಯಕ್ಷರಾಗಿರಲಿರುವ ಗಂಗೂಲಿ, ಆನಂತರ ನಿರ್ದಿಷ್ಟ ಅವಧಿಗೆ ಕ್ರಿಕೆಟ್ ಆಡಳಿತದ ಚಟುವಟಿಕೆಯಿಂದ ದೂರ ಉಳಿಯಬೇಕಿದೆ. ಇದೇ ಸಂದರ್ಭಕ್ಕೆ 2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಪರವಾಗಿ ಗಂಗೂಲಿ ಪ್ರಚಾರ ನಡೆಸಬೇಕು. ಇಲ್ಲವೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂಬ ಒಪ್ಪಂದ ಅಮಿತ್ ಶಾ ಹಾಗೂ ಗಂಗೂಲಿ ನಡುವೆ ನಡೆದಿದೆ ಎನ್ನಲಾಗುತ್ತಿದೆ. ಇಂಥ ಒಳ ಒಪ್ಪಂದ ನಡೆದಿಲ್ಲ ಎಂದಿರುವ ಅಮಿತ್ ಶಾ, “ಗಂಗೂಲಿ ಬಿಜೆಪಿ ಸೇರಿದರೆ ಸ್ವಾಗತ” ಎನ್ನುವ ಮೂಲಕ ತಾನೊಬ್ಬ ವೃತ್ತಿಪರ ರಾಜಕಾರಣಿ ಎಂಬುದನ್ನು ನೆನಪಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಆಡಳಿತಾರೂಢ ಟಿಎಂಸಿಗೆ ಪ್ರಬಲ ಪೈಪೋಟಿ ಒಡ್ಡಿ 18 ಸ್ಥಾನ ಗೆದ್ದಿರುವ ಬಿಜೆಪಿ ಶೇ. 40.5ರಷ್ಟು ಮತಗಳಿಸಿ ಎರಡನೇ ಅತಿದೊಡ್ಡ ಪಕ್ಷ ಎನಿಸಿಕೊಂಡಿತ್ತು. ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿಗೆ ಸೋಲುಣಿಸಲು ಟೊಂಕಕಟ್ಟಿರುವ ಬಿಜೆಪಿ ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ಬಂಗಾಳ ಸೇರಿದಂತೆ ದೇಶಾದ್ಯಂತ ಜಾರಿಗೊಳಿಸುವುದಾಗಿ ಹೇಳಿದೆ. ಪಶ್ಚಿಮ ಬಂಗಾಳ ಚುನಾವಣೆಯ ಮೇಲೆ ಕಣ್ಣಿಟ್ಟು ಇಂಥ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ. ಈಗ ಸ್ಥಳೀಯ ಜನಪ್ರಿಯ ನಾಯಕತ್ವದ ಹುಡುಕಾಟದಲ್ಲಿರುವ ಬಿಜೆಪಿ ಗಂಗೂಲಿಯ ಬೆನ್ನು ಬಿದ್ದಿದೆ ಎನ್ನಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಎಡಪಕ್ಷದ ಬುದ್ಧದೇವ ಭಟ್ಟಚಾರ್ಯ, ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತನ್ನ ಗುರು ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ, ದಿವಂಗತ ಜಗಮೋಹನ್ ದಾಲ್ಮಿಯಾ ಜೊತೆ ಉತ್ತಮ ಬಾಂಧವ್ಯ ಇರಿಸಿಕೊಂಡು ನಾಜೂಕಾಗಿ ಕ್ಲಿಷ್ಟ ಸಂದರ್ಭದಲ್ಲಿ ಗೆದ್ದಿರುವ ಗಂಗೂಲಿ ಈಗಲೂ ಅದೇ ದಾರಿ ಅನುಸರಿಸುವರೇ? ಕಾದು ನೋಡಬೇಕಿದೆ. ಇನ್ನು ದೊಡ್ಡ ಸಾಧನೆಯ ಹಾದಿಯಲ್ಲಿ ಅನಿವಾರ್ಯ ಹೊಂದಾಣಿಕೆ ಅಗತ್ಯ ಎಂದರಿತು ಅಮಿತ್ ಶಾ ಅವರು ಗಂಗೂಲಿಗೆ ಅಧ್ಯಕ್ಷ ಸ್ಥಾನ ಕರುಣಿಸಿದ್ದಾರೆ ಎನ್ನುವ ಅನುಮಾನವನ್ನು ಅಷ್ಟು ಸುಲಭಕ್ಕೆ ಅಲ್ಲಗಳೆಯಲಾಗದು. ಶತಾಯಗತಾಯ ಗೆಲ್ಲುವುದನ್ನೇ ಗುರಿಯಾಗಿಸಿಕೊಂಡಿರುವ ಬಿಜೆಪಿಯ ಎಲೆಕ್ಷನ್ ಮಷೀನ್ ಅಮಿತ್ ಶಾ ತಂತ್ರಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ.