ಕರೋನಾದಿಂದ ಬಿಬಿಎಂಪಿ ಈಗಷ್ಟೇ ಚೇತರಿಸಿಕೊಳ್ತಿದೆ. ಇದರ ನಡುವೆ ಕೆಲ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗಿ ಮತ್ತೊಂದು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕಳೆದ ಕೆಲ ವರ್ಷಗಳಿಂದ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜಾಗೋಕೆ ಕಾರಣವಾಗಿದ್ದ ಕಸದ ಸಮಸ್ಯೆ ಮತ್ತೆ ನಗರದಲ್ಲಿ ಉದ್ಬವಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಬೆಂಗಳೂರಲ್ಲಿ ಮತ್ತೆ ಉಲ್ಬಣಗೊಳ್ಳುತ್ತಾ ಕಸದ ಸಮಸ್ಯೆ?
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ದಿನ ಹತ್ರತ್ರ ನಾಲ್ಕೂವರೆ ಸಾವಿರ ಕಸ ಉತ್ಪತ್ತಿಯಾಗ್ತಿದೆ. ಇಡೀ ನಗರದ ಕಸವನ್ನ ವಿಲೇವಾರಿ ಮಾಡುವವರನ್ನ ಪಾಲಿಕೆ ಕಳೆದ 6 ತಿಂಗಳಿನಿಂದ ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಲ ಕಾಲಕ್ಕೆ ನಿರ್ವಹಣೆ ಮಾಡುವ ಗುತ್ತಿಗೆದಾರರಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲವ ಎಂಬ ಆರೋಪ ಅದು. ಇದರಿಂದಾಗಿ ಸುಮಾರು 500 ರಿಂದ 600 ಕೋಟಿ ಬಾಕಿ ಬರ್ಬೇಕಿದ್ದು, ಮನವಿ ಕೊಟ್ಟರೂ ಪ್ರಯೋಜನ ಆಗಿಲ್ಲ.
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆಯಾಗಿರುವ ತುಳಸಿ ಮದ್ದಿನೇನಿ ವಿನಾಕಾರಣ ಅನುದಾನ ಬಿಡುಗಡೆಗೆ ಕೊಕ್ಕೆ ಹಾಕಿದ್ದಾರಂತೆ. ಮುಖ್ಯ ಆಯುಕ್ತರ ಆದೇಶಕ್ಕೂ ಬೆಲೆ ಕೊಡದೇ ಸರ್ವಾಧಿಕಾರಿ ಧೋರಣೆ ಅನುಸರಿಸ್ತಾ ಇದ್ದಾರಂತೆ. ಇವರ ಈ ನಡೆ ಖಂಡಿಸಿ ಶುಕ್ರವಾರ ಅಂದ್ರೆ ಫೆಬ್ರವರಿ 18 ರಿಂದ ಕಸ ವಿಲೇವಾರಿ ಮಾಡದಿರಲು ನಿರ್ಧರಿಸಿದ್ದು, ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆಗೆ ಮುಂದಾಗಲಿದ್ದಾರೆ ಗುತ್ತಿಗೆದಾರರು.

ಹೌದು, ಸಿಲಿಕಾನ್ ಸಿಟಿಯ ತ್ಯಾಜ್ಯ ವಿಲೇವಾರಿ ಮಾಡುವ ಗುತ್ತಿಗೆದಾರರು ಬಿಬಿಎಂಪಿ ವಿರುದ್ಧ ಸಿಡಿದೆದ್ದಾರೆ. ಕಳೆದ ಆರು ತಿಂಗಳಿನಿಂದ ಕಸ ವಿಲೇವಾರಿ ಮಾಡಿದ ಹಣವನ್ನು ಬಿಬಿಎಂಪಿ ಗುತ್ತಿಗೆದಾರರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ಶುಕ್ರವಾರದಿಂದ ಅನಿರ್ದಿಷ್ಟವಾಗಿ ಧರಣಿ ನಡೆಸಲು ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಸಂಘದ ನಿರ್ಧಾರ ಮಾಡಿದೆ. ಕಳೆದ ಆರು ತಿಂಗಳಿಂದ ಸುಮಾರು 500 ಕೋಟಿಗೂ ಅಧಿಕ ಗುತ್ತಿಗೆ ಬಿಲ್ ಬಾಕಿ ಉಳಿದಿದೆ. ಬಿಬಿಎಂಪಿ ಹಣಕಾಸು ಆಯುಕ್ತರಿಗೆ ಎಷ್ಟೇ ಮನವಿ ಮಾಡಿದರೂ ಬಿಲ್ ಕ್ಲಿಯರ್ ಮಾಡಿಕೊಡುತ್ತಿಲ್ಲ ಎಂದು ಕಸ ಗುತ್ತಿಗೆದಾರರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಸ ಗುತ್ತಿಗೆದಾರ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಕಸ ವಿಲೇವಾರಿಗೆ ಅಂತ ಬಜೆಟ್ ನಲ್ಲಿ ಇಟ್ಟಿರೋ ಹಣ ಎಲ್ಲಿ ಹೋಯ್ತು.? ಇದುವರೆಗೆ ನಯಪೈಸೆನ್ನೂ ಬಿಡುಗಡೆ ಮಾಡಿಲ್ಲ. ಬಿಬಿಎಂಪಿ ಹಣಕಾಸು ಮುಖ್ಯಸ್ಥೆ ತುಳಸಿ ಮದ್ದಿನೇನಿ ಸರ್ವಾಧಿಕಾರಿ ಧೋರಣೆ ಮಾಡ್ತಿದರೆ ಎಂದು ಕಿಡಿ ಕಾರಿದರು.
ಸದ್ಯ ಗುತ್ತಿಗೆದಾರರ ತೀರ್ಮಾನ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ. ಒಂದು ದಿನ ಕಸ ವಿಲೇವಾರ ಆಗಲಿಲ್ಲ ಅಂದರೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಕಸದ ರಾಶಿ ಕಾಣಸಿಗುತ್ತೆ. ಹೀಗಿರುವಾಗ ಅನಿರ್ದಿಷ್ಟಾವಧಿ ಮುಷ್ಕರ ಅಂತ ಕರೆಕೊಟ್ಟಿದ್ದು, ಸರ್ಕಾರಕ್ಕೆ ಸಂಕಟ ಬಂದೊದಗಿದೆ. ಈ ಹಿಂದೆ ಕಸದ ವಿಚಾರದಲ್ಲಿ ಬೆಂಗಳೂರಿನ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿತ್ತು. ಈ ಬಾರಿಯೂ ಅದು ಮತ್ತೆ ಮರುಕಳುಸುತ್ತಾ..? ಅದಕ್ಕೆ ಸರ್ಕಾರ ಅವಕಾಶ ಕೊಡುತ್ತಾ ಕಾದು ನೋಡಬೇಕಿದೆ.












