ಬಿಬಿಎಂಪಿ ಅಧಿಕಾರಿಗಳು ಮಾಡೋ ಎಡವಟ್ಟು ಒಂದಲ್ಲ ಎರಡಲ್ಲಾ. ಚಿಲುಮೆ ಎನ್ನುವ ಸಂಸ್ಥೆಗೆ ಮತದಾರರಿಗೆ ಅರಿವು ಮೂಡಿಸೋಕೆ ಗುತ್ತಿಗೆ ಕೊಟ್ಟು ಈಗ ಪೇಚಿಗೆ ಸಿಲುಕಿದೆ. ಕಾಂಗ್ರೆಸ್ ಬಿಜೆಪಿ ವಿರುದ್ಧ ಮಸಲತ್ತು ನಡೆಸೋಕೆ ಇದು ಈಗ ಕಾರಣವಾಗಿದೆ. ಅಷ್ಟಕ್ಕೂ ಈ ಪ್ರಕರಣದಲ್ಲಿ ಬಿಬಿಎಂಪಿ ಪಾತ್ರವೇನು..?
ಚಿಲುಮೆ ವಿರುದ್ಧ ಸಿಟ್ಟಿಗೆದ್ದ ಬಿಬಿಎಂಪಿ.. ತನಿಖೆಗೆ ಮುಂದಾದ ಪಾಲಿಕೆ
ಮುಂದಿನ ವರ್ಷ ಚುನಾವಣೆ ಪರ್ವ ಇರೋದ್ರಿಂದ ಬಿಬಿಎಂಪಿ ಖಾಸಗಿ ಸಂಸ್ಥೆ ಚಿಲುಮೆಗೆ ಜನರಲ್ಲಿ ಮತದಾನದ ಅರಿವು ಮೂಡಿಸೋದಕ್ಕೆ ಗುತ್ತಿಗೆ ನೀಡಿತ್ತು. ಪೂರ್ವಭಾವಿಯಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ವ್ಯವಸ್ಥಿತ ಅರಿವು ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಎಂಬ ವಿಶೇಷ ಮತದಾರ ಜಾಗೃತಿ ಅಭಿಯಾನವನ್ನು ನಡೆಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆಯು ಈ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ. ತನ್ನ ನೂರಾರು ಏಜೆಂಟರುಗಳಿಗೆ ಅವರನ್ನು ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳೆಂಬಂತೆ ಬಿಂಬಿಸುವ ನಕಲಿ ಗುರುತುಕಾರ್ಡ್ಗಳನ್ನು ನೀಡಿ, ಕಾರ್ಯನಿರ್ವಹಿಸಿದೆ. ಚಿಲುಮೆ ಸಂಸ್ಥೆಯ ಕಾರ್ಯಕರ್ತರು ಬಿಬಿಎಂಪಿ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಮತದಾರರಿಂದ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿಗತಿ, ವಯಸ್ಸು, ಲಿಂಗ, ಉದ್ಯೋಗ ಹಾಗೂ ಶೈಕ್ಷಣಿಕ ವಿವರಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಮತದಾರರ ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ, ವಿಳಾಸ, ಮತದಾರರ ಐಡಿ ಸಂಖ್ಯೆ ಹಾಗೂ ಇಮೇಲ್ ವಿಳಾಸವನ್ನು ಕೂಡಾ ಸಂಗ್ರಹಿಸಿದ್ದಾರೆ. ಇದು ಈಗ ರಾಜ್ಯದಲ್ಲಿ ದೊಡ್ಡದಾದ ರಾಜಕೀಯ ಕೋಲಾಹಲವನ್ನೇ ಸೃಷ್ಟಿಸಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ, ಚಿಲುಮೆ ಸಂಸ್ಥೆಗೆ ಜನರಲ್ಲಿ ಮತದಾನದ ಜಾಗೃತಿ ಮೂಡಿಸೋದಕ್ಕೆ ಅಷ್ಟೇ ನಾವು ಅನುಮತಿ ಕೊಟ್ಟಿದ್ದೇವೆ. ಡೇಟಾ ಕಲೆಕ್ಟ್ ಮಾಡಿ ಎಂದು ಅನುಮತಿ ಕೊಟ್ಟಿರಲಿಲ್ಲ. ಆದರೆ ಡೇಟಾ ಕಲೆಕ್ಟ್ ಮಾಡ್ತಾ ಇದ್ದಾರೆ ಎಂಬ ಅನುಮಾನ ಮೂಡಿದೆ. ಹಾಗಾಗಿ ನಾವು ಅವರಿಗೆ ನೀಡಿದ್ದ ಅನುಮತಿಯನ್ನು ಕ್ಯಾನ್ಸಲ್ ಮಾಡಿದ್ದೇವೆ. ಈಗ ಈ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ದೂರು ನೀಡಿದ್ದೇವೆ ಎಂದರು.
ಮತದಾರರ ಮಾಹಿತಿ ಸಂಗ್ರಹಣೆ ಹಾಗೂ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸ. ಖಾಸಗಿ ಸಂಸ್ಥೆಗೆ ಯಾವ ಮಾನದಂಡದ ಆಧಾರದಲ್ಲಿ ಈ ಜವಾಬ್ಧಾರಿ ನೀಡಲಾಗಿದೆ. ಈ ಅಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳು ಪಾಲು ಇದ್ದಂತಿದೆ. ಓಟರ್ ಐಡಿ ಹಗರಣದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎನ್ನಲಾಗಿದೆ. ಹಾಗಾಗಿ ಈ ಕೂಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಈ ಆರೋಪದ ಬಗ್ಗೆ ಸವಿಸ್ತಾರ ತನಿಖೆ ನಡೆಸಬೇಕೆಂದು ಕಾಂಗ್ರೇಸ್ ಆಗ್ರಹಿಸಿದೆ.
ಖಾಸಗಿ ಎನ್ಜಿಒ ಸಂಸ್ಥೆಯೊಂದು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ತನ್ನ ಏಜೆಂಟರ ಮೂಲಕ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿರುವುದು ಈಗ ಬಯಲಾಗಿದೆ. ಅಚ್ಚರಿಯೆಂದರೆ ಸರಕಾರದ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡು ಈ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆಯೆಂಬ ವಿಚಾರ ಈಗ ಬಯಲಾಗಿದ್ದು, ಇದರಲ್ಲಿ ಬಿಬಿಎಂಪಿಯ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಅನುಮಾನವೂ ಇದೆ. ಒಟ್ಟಾರೆ ಬಿಬಿಎಂಪಿ ಅಧಿಕಾರಿಗಳು ಖಾಸಗಿ ಸಂಸ್ಥೆಗೆ ಮತದಾನದ ಅರಿವು ಮೂಡಿಸೋಕ್ಕೆ ಅನುಮತಿ ಕೊಟ್ಟು ಪೇಚಿಗೆ ಸಿಲುಕಿದೆ. ಇದು ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡಮಟ್ಟದ ಕೋಲಾಹಲ ಸೃಷ್ಟಿಸಿದೆ. ಆದರೆ ಮುಂದೇನು ಅನ್ನೋದು ಈಗ ಎಲ್ಲರನ್ನೂ ಕಾಡುತ್ತಿರುವ ಏಕೈಕ ಪ್ರಶ್ನೆ.