ಹೊಟ್ಟೆಗೆ ಹಿಟ್ಟಿಲ್ಲ ಅಂದ್ರುನೂ ಬಿಬಿಎಂಪಿಗೆ ಜುಟ್ಟಿಗೆ ಮಲ್ಲಿಗೆ ಹೂವೇ ಬೇಕಂತೆ. ಸಿಲಿಕಾನ್ ಸಿಟಿ ತುಂಬೆಲ್ಲಾ ಹಲವು ಪಾರ್ಕ್ ಗಳನ್ನ ಮಾಡಿ ಅದರ ನಿರ್ವಹಣೆ ಮಾಡದೇ ಬಿಟ್ಟು ಈಗ ವಿವಾದದ ಫ್ಲೈ ಓವರ್ ಕೆಳಗೆ ಕೋಟಿ ಕೋಟಿ ಖರ್ಚು ಮಾಡಿ ಪ್ಲೇ ಏರಿಯಾ ರೆಡಿ ಮಾಡ್ತಾರಂತೆ. ಹಾಗಾದ್ರೇ ಬಿಬಿಎಂಪಿ ಹಾಕಿರುವ ಹೊಸ ಸ್ಕೀಮ್ ಆದ್ರೂ ಏನು..?
ಇರೋದನ್ನೇ ಸರಿಯಾಗಿ ನಿರ್ವಹಣೆ ಮಾಡೋ ತಾಕತ್ತಿಲ್ಲ ಪಾಲಿಕೆಗೆ ಎಂದು ಅಸಮಾಧಾನ
ಈಗಾಗಲೇ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರೋ ಪಾರ್ಕ್, ಪಬ್ಲಿಕ್ ಜಿಮ್ ಗಳು ಒಂದ್ಕಡೆ. ಸೂಕ್ತ ನಿರ್ವಹಣೆ ಇಲ್ಲದೆ ಆಗಾಗ್ಗೆ ತೂತು ಬೀಳೋ ಮೇಲ್ಸೇತುವೆಗಳು. ಸೈಕಲ್ ಬೇಗಳು, ಕಲರ್ ಕಲರ್ ಬಣ್ಣ ಹಚ್ಚಿರೋ ಫುಟ್ ಪಾತ್ ಗಳು, ಸರ್ಕಲ್ ಪಾಯಿಂಟ್ ಗಳು ಹೀಗೆ ಪಾಲಿಕೆ ಅಧಿಕಾರಿಗಳು ಹಳೇ ಕಲ್ಲಿಗೆ ಹೊಸ ಬಿಲ್ಲು ಎಲ್ಲೆಲ್ಲಿ ಹಾಕೋಕಾಗುತ್ತೋ ಅಲ್ಲೆಲ್ಲಾ ಹಾಕಿ ದೋಚಿ ಬಿಡ್ತಾರೆ. ಈಗ ಅಂಥದ್ದೇ ಒಂದು ಹೊಸ ಸ್ಕೀಮ್ ನೊಂದಿಗೆ ಬಿಬಿಎಂಪಿ ಮುಂದೆ ಬಂದಿದೆ. ಇತ್ತೀಚೆಗಷ್ಟೇ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಸಂಚಾರಕ್ಕೆ ಓಪನ್ ಆಗಿ ಬಹಳ ಟೀಕೆಗೆ ಗುರಿಯಾಗಿತ್ತು. ಮೇಲ್ಸೇತುವೆ ಅವೈಜ್ಞಾನಿಕವಾಗಿದೆ ಎಂದು ಚರ್ಚೆಗಳು ನಡೆದಿದ್ದವು. ಕೊನೆಗೆ ಈಗೇನೋ ಫ್ಲೈ ಓವರ್ ಮೇಲೆ ವಾಹನಗಳು ಓಡಾಡ್ತಿವೆ. ಆದರೆ ಇದೀಗ ಇಲ್ಲೂ ಪಾಲಿಕೆ ಹೊಸ ಸ್ಕೀಮೊಂದನ್ನು ಹುಡುಕಿದ್ದು ಒಟ್ಟು 3 ಕೋಟಿ ಯೋಜನೆ ಸಿದ್ಧಪಡಿಸಿದೆ.
3 ಕೋಟಿ ವೆಚ್ಚದಲ್ಲಿ ಶಿವಾನಂದ ಸರ್ಕಲ್ ಸೇತುವೆ ಕೆಳಗಡೆ ಪ್ಲೇ ಏರಿಯಾ ನಿರ್ಮಾಣ
ಹಾಗೆ ನೋಡಿದರೆ ನಗರದ ಫ್ಲೈ ಓವರ್ ಗಳನ್ನು, ಪಾರ್ಕ್ ಗಳನ್ನೇ ಬಿಬಿಎಂಪಿಗೆ ನಿರ್ವಹಣೆ ಮಾಡೋಕೆ ಆಗ್ತಿಲ್ಲ. ಇದರ ನಡುವೆ ಶಿವಾನಂದ ಸರ್ಕಲ್ ಫ್ಲೈ ಓವರ್ ಕೆಳಗೆ 3 ಕೋಟಿ ವೆಚ್ಚದಲ್ಲಿ ಪ್ಲೇ ಏರಿಯಾ ನಿರ್ಮಾಣ ಮಾಡೋಕೆ ಮುಂದಾಗಿದೆ. ಇಲ್ಲಿ ಬಾಸ್ಕೆಟ್ ಬಾಲ್, ಸ್ಕೇಟಿಂಗ್ ಏರಿಯಾ, ಅಂತರಾಷ್ಟ್ರೀಯ ದರ್ಜೆಯ ಸಾರ್ವಜನಿಕ ಶೌಚಾಲಯ, ವಾಕಿಂಗ್ ಬೇ ಹೀಗೆ ಹೊಸದಾದ ಪ್ಲೇ ಏರಿಯಾ ಮಾಡೋಕೆ ನಿರ್ಧರಿಸಿದೆ. ಈ ಎಲ್ಲದಕ್ಕೂ ಬಿಬಿಎಂಪಿ ಹೆಚ್ಚು ಕಮ್ಮಿ 3 ಕೋಟಿ ರೂಪಾಯಿ ವೆಚ್ಚ ಮಾಡಲು ಯೋಚಿಸಿದೆ. ಅಸಲಿಗೆ ಈಗಾಗಲೇ ನಗರದ ಹಲವು ಕಡೆಗಳಲ್ಲಿ ನೆಗೆದು ಬಿದ್ದಿರುವ ಪಾರ್ಕ್, ಶೌಚಾಲಯಗಳನ್ನೇ ಪಾಲಕೆಗೆ ನಿರ್ವಹಣೆ ಮಾಡಿ ಉಳಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಇದರ ನಡುವೆ ಈಗ ಹೊಸ ಯೋಜನೆ ಕೈಗೆತ್ತಿಕೊಂಡಿದ್ದು, ಇದರ ಹಿಂದೆ ಬೇರೆಯೇ ಲೆಕ್ಕಾಚಾರಗಳು ಇವೆ ಎಂಬ ಮಾತು ಕೇಳಿ ಬರುತ್ತಿವೆ.

ಅಭಿವೃದ್ಧಿ ಹೆಸರಲ್ಲಿ ಸುಖಾ ಸುಮ್ಮನೆ ಪೋಲಾಗ್ತಿದೆ ಜನರ ತೆರಿಗೆ ದುಡ್ಡು
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ ಮಾತನಾಡಿದ್ದು, ಬಿಬಿಎಂಪಿ ಅಧಿಕಾರಿಗಳು ಹಣ ಲೂಟಿ ಮಾಡೋಕೆ ಈ ಕಾಮಾಗರಿ ಕೈಗೆತ್ತಿಕೊಂಡಿದ್ದಾರೆ ಎಂದ ಆರೋಪಿಸಿದ್ದಾರೆ. ಈಗಾಗಲೇ ನಗರದ ಹಲವು ಭಾಗದಲ್ಲಿ ಪಾಲಿಕೆಗೆ ಸೇರಿದ ಹಲವು ಮೈದಾನಗಳು, ಪಾರ್ಕ್ ಗಳಿವೆ. ಅದನ್ನು ನಿರ್ವಹಣೆ ಮಾಡಿ ಮೇಲ್ದರ್ಜೆಗೆ ಏರಿಸಿ ಅಲ್ಲಿ ಪ್ಲೇ ಏರಿಯಾ ನಿರ್ಮಾಣ ಮಾಡಬೇಕು. ಟ್ರಾಫಿಕ್ ಇರೋ ಕಡೆ ಮಕ್ಕಳಿಗೆ ಆಟ ಆಡಲು ಜಾಗ ಮಾಡಿಕೊಡ್ತೀವಿ ಅನ್ನೋದು ಮೂರ್ಖತನ ಎಂದು ಹೇಳಿದ್ದಾರೆ.
ಈಗಾಗಲೇ ಬೆಂಗಳೂರನ್ನು ಮತ್ತಷ್ಟು ಸ್ಮಾರ್ಟ್ ಆಗಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ವಿಶೇಷವಾಗಿ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಬಿಬಿಎಂಪಿ ಇರೋದನ್ನು ಉಳಿಸಿಕೊಂಡು ಹೋದರೆ ಸಾಕು. ಆದರೆ ಪಾಲಿಕೆ ಅಧಿಕಾರಿಗಳು ತಿಂಗಳಿಗೊಮ್ಮೆ ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಹೊಸ ಯೋಜನೆ ಜಾರಿ ಮಾಡಿ ತಿಂದು ಹೋದ ಕೊಂಡು ಹೋದ ಅಪಖ್ಯಾತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದಂತಿದೆ. ಈ ಮೂಲಕ ಜನರ ತೆರಿಗೆ ದುಡ್ಡು ಸುಖಾಸುಮ್ಮನೆ ಪೋಲಾಗುತ್ತಿದೆ.