
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಅಕ್ರಮವೆಸಗಿದ ಆರೋಪದಡಿ ಕಳೆದ 20 ದಿನದಿಂದ ಬಿಬಿಎಂಪಿಯ ಹಲವು ಇಂಜಿನಿಯರ್ಗಳ ವಿಚಾರಣೆಯನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನಡೆಸುತ್ತಿದ್ದಾರೆ.
ಕೊಳವೆಬಾವಿ ಹಾಗೂ ಆರ್ಓ ಪ್ಲಾಂಟ್ ಅಳವಡಿಕೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣದ ಬಗ್ಗೆ ಇಂಚಿಂಚು ಮಾಹಿತಿಯನ್ನು ಪಡೆಯಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಸುಮಾರು 969 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ವರ್ಗ ಭಾಗಿಯಾಗಿರುವ ಬಗ್ಗೆ ಇಡಿ ವಿಚಾರಣೆ ನಡೆಸುತ್ತಿದೆ.
ಆಕ್ರಮಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿಯ ಹಣಕಾಸು ಇಲಾಖೆಗೆ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಖುದ್ದು ವಿಚಾರಣೆಗೆ ಹಾಜರಾಗಲು ಇಡಿ ಅಧಿಕಾರಿಗಳು ತಿಳಿಸಿದ್ದು, ಫೆಬ್ರವರಿ 7 ರಂದು ಇಡಿ ಕಛೇರಿಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿದೆ.

ಕಳೆದ 2016 ರಿಂದ 2019ರವರೆಗೆ ಕೊಳವೆ ಬಾವಿ ಹಾಗೂ ಆರ್ಓ ಪ್ಲಾಂಟ್ಗೆ ಎಷ್ಟು ಹಣ ಬಿಡುಗಡೆಯಾಗಿದೆ? ಯಾರಿಗೆ, ಯಾರಿಂದ ಹಣ ಬಿಡುಗಡೆ ಮಾಡಲಾಗಿದೆ? ಯಾವ್ಯಾವ ವಾರ್ಡಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಲಾಗಿದೆ? ಬಿಲ್ ಪಾವತಿ ಮಾಡುವಾಗ ಯಾವ ಮಾನದಂಡ ಅನುಸರಿಸಲಾಗಿದೆ? ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವೆ ನಡೆದ ಹಣದ ವ್ಯವಹಾರಕ್ಕೆ ಆಧಾರ ಏನಿದೆ? ಹೀಗೆ ನೋಟಿಸ್ನಲ್ಲಿ ಕೆಲ ಪ್ರಶ್ನೆಗಳನ್ನೂ ಇಡಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೇಳಿದ್ದಾರೆ. ಈ ಹಿಂದೆ ಬಿಬಿಎಂಪಿ ಅಧಿಕಾರಿಗಳನ್ನು ಕರೆದೊಯ್ದು ಸ್ಥಳ ಮಹಜರು ಸಹ ಮಾಡಿಸಲಾಗಿದೆ. ಮಹಜರಿನ ವೇಳೆ ಸಲ್ಲಿಸಿರುವ ದಾಖಲೆಗೂ ಮೌಖಿಕ ಹೇಳಿಕೆಗೂ ಭಾರಿ ವ್ಯತ್ಯಾಸ ಕಂಡುಬಂದಿದ್ದು, ಮೇಲ್ನೋಟಕ್ಕೆ ಕೊಳವೆ ಬಾವಿ ಹಗರಣದಲ್ಲಿ ಅಕ್ರಮ ನಡೆದಿರೋದು ಸಾಬೀತಾಗಿರುವ ಹಿನ್ನೆಲೆ ಬಿಬಿಎಂಪಿ ಹಣಕಾಸು ವಿಭಾಗಕ್ಕೆ ಇಡಿ ನೋಟಿಸ್ ಜಾರಿ ಮಾಡಿದೆ.