ಶ್ರೀಸಾಮಾನ್ಯರ ಮುಂದೆ ಘರ್ಜಿಸುವ ಬಿಬಿಎಂಪಿ ಬುಲ್ಡೋಜರ್ ಗಳು ದೊಡ್ಡವರ ಮುಖ ಕಾಣುತ್ತಿದ್ದಂತೆ ಬಿಲ ಸೇರಿಕೊಳ್ಳುತ್ತಿದೆ. ಮೂರ್ನಾಲ್ಕು ದಿನಗಳ ಬಳಿಕ ಒತ್ತುವರಿ ತೆರವು ಅಂತ ಫೀಲ್ಡಿಗೆ ಇಳಿದ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಂದು ವಿಪ್ರೋ ಕಂಪೆನಿ ಮುಂದೆ ಮಂಡಿಯೂರಿದ್ದಾರೆ.
ಮಾರ್ಕಿಂಗ್ ಮಾಡಿದ್ದು 8 ಅಡಿ.. ಆದರೆ ಕಿತ್ತು ಹಾಕಿದ್ದು ನಾಲ್ಕೇ ನಾಲ್ಕು ಕಲ್ಲು !!
ಗಂಟೆ ಬೆಳಗ್ಗೆ 11:30. ಒತ್ತುವರಿ ತೆರವಿಗೆ ಅಂತ ಬಿಬಿಎಂಪಿ ಅಧಿಕಾರಿಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ವಿಪ್ರೋಗೆ ಬಂದಿದ್ದರು. ಬಂದವರೇ ಕಳೆದ ದಿನ ಮಾರ್ಕಿಂಗ್ ಮಾಡಲಾದ ಜಾಗವನ್ನು ಮತ್ತೊಮ್ಮೆ ದೃಢೀಕರಿಸಿ, ತೆರವು ಕಾರ್ಯಾಚರಣೆಗೆ ಬುಲ್ಡೋಜರ್ ತರಿಸಿಕೊಂಡರು. ಸರಿಯಾಗಿ 12 ಗಂಟೆಗೆ ಬುಲ್ಡೋಜರ್ ವಿಪ್ರೋ ಒತ್ತುವರಿ ಮಾಡಿ ಕಟ್ಟಿರುವ ತಡೆಗೋಡೆಯನ್ನು ಡ್ರಿಲ್ ಮಾಡಿ ಹೊಡೆದು ಉರುಳಿಸಿತು. ಒಂದು ತಾಸುಗಳ ಕಾಲ ನಿರಂತರವಾಗಿ ವಿಪ್ರೋದಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು. ಅಷ್ಟೊತ್ತಿಗೆ ಬೆಂಗಳೂರು ಪೂರ್ವ ತಾಲೂಕಿನ ತಹಶಿಲ್ದಾರ್ ಅಜಿತ್ ರೈ ಸ್ಥಳಕ್ಕೆ ಆಗಮಿಸಿದರು. ತಹಶಿಲ್ದಾರ್ ಅಜಿತ್ ರೈ ಆಗಮನದೊಂದಿಗೆ ಬಿರುಸಿನಿಂದ ಸಾಗಿದ್ದ ತೆರವು ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತು.

ವಿಪ್ರೋ ತೆರವು ಕಾರ್ಯಾಚರಣೆ ಮಧ್ಯೆ ಅಧಿಕಾರಿಗಳಿಗೆ ಬಂತು ಪೋನ್ ಕರೆ !!
ಅಸಲಿಗೆ ವಿಪ್ರೋ, ಸಲಾರ್ಪುರಿಯಾ ಕಂಪೆನಿಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿ, ಹಾಲನಾಯಕನಹಳ್ಳಿ ಕೆರೆಯಿಂದ ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಎರಡೂ ಸಂಸ್ಥೆಗಳು ಒಟ್ಟಾರೆ 300 ಮೀಟರ್ ಯದ್ದ ಹಾಗೂ 8 1/2 ಅಡಿ ಅಗಲ ರಾಜಕಾಲುವೆ ನುಂಗಿ ನೀರು ಕುಡಿದಿದೆ. ಈ ವಿಚಾರ 2016ರಲ್ಲಿ ಪಾಲಿಕೆ ನಡೆಸಿದ SWD ಸರ್ವೇಯಲ್ಲೇ ಬಹಿರಂಗಗೊಂಡಿತ್ತು. ಇದೀಗ ವಿಪ್ರೋದ ಕಂಪೌಂಡ್ ವಾಲ್ ತೆರವುಗೊಳಿಸುತ್ತಿದ್ದಂತೆ ಅಧಿಕಾರಿಗಳ ಮೊಬೈಲ್ ಗೆ ಬಂದ ಕರೆಯೊಂದರ ಕಾರಣದಿಂದಾಗಿ ಇಡೀ ಕಾರ್ಯಾಚರಣೆಯೇ ಸ್ಥಗಿತಗೊಂಡಿದೆ. ಅಲ್ಲದೆ ಗ್ರಿಲ್ ಇರುವ ಕಾರಣಕ್ಕೆ ಗ್ಯಾಸ್ ಕಟರ್ ತರುವುದು ಮರೆತುಹೋಗಿದೆ. ಕಾರ್ಯಾಚರಣೆ ನಾಳೆ ಮುಂದುವರೆಯುತ್ತೆ ಅಂತ ಬಿಬಿಎಂಪಿ ಅಧಿಕಾರಿಗಳು ನೌಟಂಕಿ ಆಟವಾಡಿದ್ದಾರೆ. ಈ ಮೂಲಕ ಬಿಬಿಎಂಪಿ ಪೌರುಷ ಶ್ರೀಸಾಮಾನ್ಯರ ಮುಂದೆ ಮಾತ್ರ ಎಂಬುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಕ್ಕೆ ಮಾಧ್ಯಮಗಳು ತಹಶಿಲ್ದಾರ್ ಅಜಿತ್ ರೈ ಅನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಏಕಾಏಕಿ ತಹಶಿಲ್ದಾರ್ ಸಾಹೇಬರು ಗರಂ ಆಗಿ, ಸಿಟ್ಟು ತಡೆಯಲಾರದೆ ತನ್ನ ಜಾಗದ ತೂಕವನ್ನೂ ಲೆಕ್ಕಿಸಿದೆ ಅನಾಮಿಕರೊಬ್ಬರ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅಲ್ಲದೆ ಮಾಧ್ಯಮಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಅಂತಿದ್ದಾರೆ. ಒಟ್ಟಾರೆ ಶ್ರೀಸಾಮಾನ್ಯರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಅಂತ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪದೇ ಪದೇ ಸಾಬೀತು ಮಾಡ್ತಿದ್ದಾರೆ. ಬಡಬಗ್ಗರ ಮನೆ ಮುಂದೆ ತೋರುವ ಪ್ರತಾಪ ದೊಡ್ಡವರ ಮುಂದೆ ಬಿಬಿಎಂಪಿ ಅಧಿಕಾರಿಗಳು ತೋರದೆ ಅವರ ಅಣತಿಯಂತೆ ಕೆಲಸ ಮಾಡುವರಂತೆ ಕಾಣುತ್ತಿದ್ದಾರೆ. ಇದಕ್ಕೆ ಇಂದು ವಿಪ್ರೋ ಒತ್ತುವರಿ ತೆರವು ಕಾರ್ಯಾಚರಣೆಯೇ ಸಾಕ್ಷಿ.