ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಎರಡೂವರೆ ವರ್ಷದ ಹಿಂದೆಯೇ ನಡೆಯಬೇಕಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಹತ್ತಾರು ಕಾರಣಗಳನ್ನು ಇಟ್ಟುಕೊಂಡು ಚುನಾವಣೆ ಮುಂದೂಡುವ ಪ್ರಯತ್ನ ಮಾಡಿತ್ತು. ಅಂತಿಮವಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ ತಾಕೀತು ಮಾಡಿದರೂ ಚುನಾವಣೆ ನಡೆಸದೆ ಕಾಲಹರಣ ಮಾಡಿತ್ತು. ವಾರ್ಡ್ ಪುನರ್ ವಿಂಗಡಣೆ ಸೇರಿದಂತೆ ಸಾಕಷ್ಟು ವಿಚಾರಗಳು ಬಿಜೆಪಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ. ಇಷ್ಟು ದಿನಗಳ ಕಾಲ ಆಡಳಿತ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದು, ಬಿಬಿಎಂಪಿ ಚುನಾವಣೆ ನಡೆಸುವ ಸಿದ್ಧತೆಯಲ್ಲಿದೆ. ಇಂದು ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ನಾಯಕರ ಜೊತೆಗೆ ಸಭೆ ನಡೆಸಲಾಗ್ತಿದೆ.
ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ತಯಾರಿ ಹೇಗಿದೆ..?
ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೆ ಬಿಬಿಎಂಪಿ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಿದ್ಧತೆ ಆರಂಭ ಮಾಡಿದೆ. ಮಾಜಿ ಮೇಯರ್‌ಗಳ ಜೊತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದಿರುವ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಗೆಲ್ಲಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗು ವಾರ್ಡ್ ಮರುವಿಂಗಡಣೆ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗುವ ಲಾಭ ನಷ್ಟ, ಕಾನೂನು ತೊಡಕು ನಿವಾರಣೆ ಬಗ್ಗೆ ಡಿ.ಕೆ ಶಿವಕುಮಾರ್ ಮಾಜಿ ಮೇಯರ್‌ಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಇನ್ನು ನಮ್ಮ ಸರ್ಕಾರ ಬಂದಿದೆ ಬಿಬಿಎಂಪಿ ಚುನಾವಣೆಗೆ ಅನುಕೂಲ ಆಗುವಂತೆ ಬೆಂಗಳೂರಿಗರಿಗೆ ಏನಾದರೂ ಉಡುಗೊರೆ ಕೊಡಿ ಎಂದು ನಾಯಕರು ಕೇಳಿದ್ದಕ್ಕೆ ಅಸ್ತು ಎಂದಿದ್ದಾರೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ ಶಿವಕುಮಾರ್.
ಜೂನ್ ಅಂತ್ಯದ ತನಕ ರಿಯಾಯ್ತಿ ತೆರಿಗೆಗೆ ಅವಕಾಶ..!
ಬೆಂಗಳೂರಿನ ಆಸ್ತಿದಾರರು ತೆರಿಗೆ ಪಾವತಿ ಮಾಡಲು ಮೇ 30ರ ತನಕ ಶೇಕಡ 5ರಷ್ಟು ರಿಯಾಯ್ತಿ ಘೋಷಣೆ ಮಾಡಲಾಗಿತ್ತು. ಇದೀಗ ಬಿಬಿಎಂಪಿ ಮಾಜಿ ಮೇಯರ್‌ಗಳ ಮನವಿ ಮೇರೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ ಶಿವಕುಮಾರ್ , ರಿಯಾಯ್ತಿ ತೆರಿಗೆ ಪಾವತಿ ಅವಧಿಯನ್ನು ಜೂನ್ 30ರ ತನಕ ವಿಸ್ತರಣೆ ಮಾಡಲಾಗಿದೆ. ಇನ್ನು ಬಿಬಿಎಂಪಿ ಚುನಾವಣೆ ನಡೆಸುವ ಸಲುವಾಗಿ ಈಗಾಗಲೇ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಚುನಾವಣಾ ಪೂರ್ವ ತಯಾರಿ ಸಮಿತಿ ರಚನೆ ಮಾಡಲಾಗಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಬಿಬಿಎಂಪಿ ಚುನಾವಣೆ ನಡೆಸುವ ಮೂಲಕ ಸಂಪೂರ್ಣ ಲಾಭ ಪಡೆದುಕೊಳ್ಳುವ ಲೆಕ್ಕಾಚಾರ ಹಾಕಲಾಗಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹವಾ ಕೆಲಸ ಮಾಡಿ ಬಿಜೆಪಿ ಪುಟಿದು ತಿರುಗೇಟು ಕೊಟ್ಟರೆ ಬಿಬಿಎಂಪಿಯಲ್ಲಿ ಮತ್ತೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈಗಲೇ ಚುನಾವಣೆ ನಡೆಸಿದರೆ ವಿರೋಧ ಪಕ್ಷಗಳನ್ನು ಸುಲಭವಾಗಿ ಮಣಿಸಬಹುದು ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ.
ಬಿಬಿಎಂಪಿ ಗೆಲುವು ಕಾಂಗ್ರೆಸ್ ನೀರು ಕುಡಿದಷ್ಟುಸುಲಭ..!
ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸಿವೆ. ಆದರೆ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳು ಜಾರಿ ಆಗುತ್ತಿರುವ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಕಾಂಗ್ರೆಸ್ ಪಾಲಿಗೆ ವರವಾಗುವ ಎಲ್ಲಾ ಲಕ್ಷಗಳು ಕಾಣಿಸುತ್ತಿವೆ. ಇಂದು ನಡೆಯುವ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಪ್ರತಿಯೊಬ್ಬ ವ್ಯಕ್ತಿಗೂ ತಲಾ 10 ಕೆಜಿ ಅಕ್ಕಿ ಹಾಗು ಪ್ರತಿಯೊಂದು ಕುಟುಂಬಕ್ಕೂ ತಿಂಗಳಿಗೆ 200 ಯೂನಿಟ್ ವಿದ್ಯುತ್ ನೀಡುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿದರೆ ಕಾಂಗ್ರೆಸ್ ಪಾಲಿಗೆ ಬಿಬಿಎಂಪಿ ಅಧಿಕಾರ ಕಟ್ಟಿಟ್ಟ ಬುತ್ತಿ. ಇನ್ನುಳಿದ ಎರಡು ಗ್ಯಾರಂಟಿಗಳಾದ ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ಹಾಗು ನಿರುದ್ಯೋಗ ಯುವಕ ಯುವತಿಗೆ ಯುವನಿಧಿ ಮೂಲಕ 3000 ಹಾಗು 1500 ರೂಪಾಯಿ ನೀಡುವ ಯೋಜನೆಗೆ ಚಾಲನೆ ನೀಡದರೆ ಲಡ್ಡು ಬಂದು ಬಾಯಿಗೆ ಬಿತ್ತು ಎನ್ನುವಂತಾಗುತ್ತದೆ ಎನ್ನಬಹುದು.
ಕೃಷ್ಣಮಣಿ