ಸಾಲು ಸಾಲು ದುರಂತಗಳ ಬಳಿಕ ಕೊನೆಗೂ ಬಿಬಿಎಂಪಿ ಚೀಫ್ ಕಮಿಷನರ್ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ನವೆಂಬರ್ 15ರೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್ ಗಳ ಕಿವಿ ಹಿಂಡುವ ಕೆಲಸಕ್ಕೆ ಚೀಫ್ ಕಮಿಷನರ್ ಮುಂದಾಗಿದ್ದಾರೆ.
ಶೀಘ್ರವೇ ವಾಹನ ಸವಾರರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್
ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳು ಬಾರಿ ಸದ್ದು ಮಾಡಿತ್ತು. ಸಾಲು ಸಾಲು ಸಾವುಗಳ ಸಂಭವಿಸಿದ್ದರೂ ಕೂಡ ತಮಗೂ ಅದಕ್ಕೆ ಸಂಬಂಧವೇ ಇಲ್ಲ ಎಂಬಂತೆ ಬಿಬಿಎಂಪಿ ಇಂಜಿನಿಯರ್ ಗಳು ನಡೆದುಕೊಂಡಿದ್ದರು. ರಸ್ತೆಗುಂಡಿಯಿಂದ ಸಾವಾದರೆ ಪರಿಹಾರ ಕೊಟ್ಟು ಪ್ರತಿ ಸಲ ಪಾಲಿಕೆ ಕೈತೊಳೆದು ಕೊಳ್ಳುತ್ತಿತ್ತು. ಇದೀಗ ಬೆಂಗಳೂರಿನ ರಸ್ತೆ ಗುಂಡಿ ವಿಚಾರವಾಗಿ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಗುಂಡಿ ಮುಚ್ಚುವ ವಿಚಾರದಲ್ಲಿ ಅಧಿಕಾರಿಗಳಿಗೆ ಚೀಫ್ ಕಮಿಷನರ್ ಡೆಡ್ ಲೈನ್ ಕೊಟ್ಟಿದ್ದಾರೆ.
ನವೆಂಬರ್ 15 ರೊಳಗೆ ಬೆಂಗಳೂರು ರಸ್ತೆಗಳು ಪಾಟ್ ಹೋಲ್ ಫ್ರಿ
ಹೌದು, ನವೆಂಬರ್ 15ರೊಳಗೆ ಎಲ್ಲಾ ಗುಂಡಿಗಳನ್ನೂ ಮುಚ್ಚಬೇಕು, ಅಕಸ್ಮಾತ್ ಗುಂಡಿ ಮುಚ್ಚದಿದ್ರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಪಾಲಿಕೆ ಇಂಜಿನಿಯರ್ ಗಳಿಗೆ ತುಷಾರ್ ಗಿರಿನಾಥ್ ಕೊಟ್ಟಿದ್ದಾರೆ. ಸಾರ್ವಜನಿಕರಿಂದ ಮತ್ತೆ ಗುಂಡಿ ದೂರು ಬಂದ್ರೆ, ಆಯಾ ವಲಯದ ಇಂಜಿನಿಯರ್ಗಳೇ ಹೊಣೆ ಮಾಡಲಾಗುತ್ತೆ. ಯುದ್ದೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಬೇಕು. ಡೆಡ್ ಲೈನ್ ಮೀರಿದ್ರೆ ಸೀದ ಮನೆಗೆ ಅಂತ ಇಂಜಿನಿಯರ್ ಗಳಿಗೆ ಸಸ್ಪೆಂಡ್ ಎಚ್ಚರಿಕೆ ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯದ AE, AEE, EE, CEಗಳಿಗೆ ಈ ಮೂಲಕ ತ್ವರಿತಗತಿಯಲ್ಲಿ ಗುಂಡಿಗೆ ಅಸ್ಫಾಲ್ಟ್ ಮಾಡೋದಕ್ಕೆ ಸೂಚಿಸಲಾಗಿದೆ. ಈಗಾಗಲೇ ಪ್ರತಿ ವರ್ಷ ನೂರಾರು ಕೋಟಿ ಬೆಂಗಳೂರಿನ ರಸ್ತೆ ಮೇಲೆ ಪಾಲಿಕೆ ಚೆಲ್ಲುತ್ತಿದೆ. ಆದರೂ ನಗರದ ರಸ್ತೆಗಳು ಅದ್ವಾನವಾಗಿ ಬಿದ್ದಿದೆ. ಇದರಿಂದ ಆಗಾಗ್ಗೆ ಅಪಘಾತಗಳು ನಡೆದು ಜನರು ಪ್ರಾಣವನ್ನೇ ಚೆಲ್ಲುತ್ತಿದ್ದಾರೆ. ಇದೀಗ ಈ ಬಗ್ಗೆ ಇಂಜಿನಿಯರ್ ಗಳಿಗೆ ಬಿಬಿಎಂಪಿ ಚೀಫ್ ಕಮಿಷನರ್ ಖಡಕ್ ಸೂಚನೆ ಕೊಟ್ಟಿದ್ದು, ಗುಂಡಿ ಮುಚ್ಚದಿದ್ದರೆ ಸಸ್ಪೆಂಡ್ ಅಂತ ತಾಕೀತು ಮಾಡಿದ್ದಾರೆ. ಹೀಗಾಗಿ ಈಗಲಾದರೂ ಇಂಜಿನಿಯರ್ ಗಳು ಎಚ್ಚೆತ್ತುಕೊಂಡು ಕೆಲಸ ಮಾಡ್ತಾರಾ..? ಅಥವಾ ಅದೇ ಹಳೆಯ ರಾಗ ಮತ್ತೆ ಮುಂದುವರೆಸ್ತಾರ..? ಕಾದು ನೋಡಬೇಕಿದೆ.