ಶಿಕ್ಷಕರ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಪಾರ್ಥ ಚಟರ್ಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ವೇಳೆ ಅವರನ್ನು ಪಕ್ಷದಿಂದ ಕೂಡ ಉಚ್ಛಾಟನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪಾರ್ಥ ಚಟರ್ಜಿ ತಮ್ಮ ಆಪ್ತೆ ಅರ್ಪಿತಾ ಚಟರ್ಜಿ ಮನೆಯಲ್ಲಿ ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣ ಅಡಗಿಸಿಟ್ಟಿದ್ದರು. ಎರಡು ಬಾರಿ ದಾಳಿ ಮಾಡಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಟ್ಟಾರೆ ೫೦ ಕೋಟಿ ರೂ. ನಗದು ಹಾಗೂ ೫ ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.