ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಮಹಾತ್ವಾಕಾಂಕ್ಷೆ ಯೋಜನೆಗಳನ್ನು ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಡೆ ಹಿಡಿದಿದ್ದಾರೆ.
ಈ ಯೋಜನೆಗಳು ಯಾವುದೇ ಪ್ರಗತಿ ಕಾಣದೆ ವೇಗವನ್ನು ಕಳೆದುಕೊಂಡಿರುವ ಕಾರಣ ಮತ್ತು ಯೋಜನೆಯ ನಿರ್ವಹಣೆಗೆ ಹೊಸ ಟ್ರಸ್ಟ್ಗಳನ್ನು ಮರು ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ತೀವ್ರ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗುತ್ತಿದೆ.
2019ರಲ್ಲಿ ಬಿ.ಎಸ್.ವೈ ಮುಖ್ಯಮಂತ್ರಿಯಾದ ಹೊಸದರಲ್ಲಿ ಬೆಂಗಳೂರು ಮಿಷನ್ 2022 ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದರು. ಆಯೋಜನೆಯ ಭಾಗವಾಗಿ ಹೊಸ ಸರ್ಕಾರಿ ವಿದ್ಯುತ್ ಕಾರ್ಖಾನೆಯಲ್ಲಿ ಟ್ರೀ ಪಾರ್ಕ್ ಸ್ಥಾಪನೆ ಮತ್ತು ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಮೇಕ್ಓವರ್ನ ಭಾಗವಾಗಿತ್ತು ಇದಕ್ಕಾಗಿ ಪ್ರತ್ಯೇಕ ಅನುದಾನವನ್ನ ಮೀಸಲಿಡಲಾಗಿತ್ತು.

ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಆವರಣದಲ್ಲಿ ವಸ್ತು ಸಂಗ್ರಹಾಲಯ, ಮನರಂಜನಾ ಸ್ಥಳ, ಸಾಂಸ್ಕೃತಿಕ ಕೇಂದ್ರ ಮತ್ತು 105 ಎಕರೆ ಜಾಗ ವಿಸ್ತೀರಣದಲ್ಲಿರುವ ಎನ್ ಜಿಇಎಫ್ ಜಾಗವನ್ನು ಸಮಾವೇಶ ಕೇಂದ್ರ ಸೇರಿದಂತೆ ಸಾರ್ವಜನಿಕ ಸ್ಥಳವನ್ನಾಗಿ ಪರಿವರ್ತಿಸಲು ʻಎಕ್ಸ್ಪೀರಿಯೆನ್ಸ್ ಬೆಂಗಳೂರುʼ ಎಂಬ ಯೋಜನೆಯಡಿ ಘೋಷಿಸಲಾಗಿತ್ತು.
ಈ ವರ್ಷ ಜೂನ್ನಲ್ಲಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ʻಬೆಂಗಳೂರು ಹೆರಿಟೇಜ್ ಮತ್ತು ಎನ್ವಿರಾನ್ಮೆಂಟ್ʼ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಟ್ರಸ್ಟ್ ಒಂದನ್ನು ನೋಂದಾಯಿಸಿತ್ತು ಮತ್ತು ಈ ಟ್ರಸ್ಟ್ ಏಕಕಾಲದಲ್ಲಿ ವಿನ್ಯಾಸವನ್ನು ಸಿದ್ದಪಡಿಸುವ ಕೆಲಸವನ್ನು ಸರ್ಕಾರ ಈ ಟ್ರಸ್ಟ್ಗೆ ವಹಿಸಿತ್ತು.
ಬೆಂಗಳೂರು ಮಿಷನ್ ಯೋಜನೆಯಡಿ ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ ಸಾಧಿಸಿರುವ ಪ್ರಗತಿಯ ರೀತಿ ಈ ಯೋಜನೆಯು ಇನ್ನು ಪ್ರಾರಂಭವಾಗದೇ ಇರುವುದರಿಂದ ಈ ಯೋಜನೆಗಳನ್ನು ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಯೋಜನೆಗಳನ್ನು ಹಂತ ಹಂತವಾಗಿ ಕಾರ್ಯಗತ್ತಗೊಳಿಸಲಾಗುವುದು ಮತ್ತು ಎನ್ಜಿಇಎಫ್ ಭೂಮಿಯಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಾವು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತೆರವುಗೊಳಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಮೈಸೂರು ಲ್ಯಾಂಪ್ಸ್ ಕುರಿತು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿಯವರು ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ಲ್ಯಾಂಪ್ಸ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿದ್ದರು. ಆದರೆ, ಕಾರಣಾಂತರಗಳಿಂದ ಯೋಜನೆಯನ್ನು ಕಡೇ ಕ್ಷಣದಲ್ಲಿ ಸರ್ಕಾರ ಕೈಬಿಟ್ಟಿತ್ತು ಎಂದು ತಿಳಿದು ಬಂದಿದೆ.
ಬೆಂಗಳೂರು ಮಿಷನ್ ಕಾರ್ಯಕ್ರಮದಡಿ ಬರುವ ಎಲ್ಲಾ ಯೋಜನೆಗಳ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಗಳು ಪ್ರತ್ಯೇಕವಾಗಿ ಈ ಎರಡು ಯೋಜನೆಗಳಿಗೆ ತಡೆ ನೀಡಿದ್ದಾರೆ. ಉಳಿದಂತೆ ಮಿಕ್ಕೆಲ್ಲಾ ಯೋಜನೆಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.







