ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕುವೆಂಪು, ನಾರಾಯಣ ಗುರು ಪಠ್ಯ ವಿವಾದದ ಬೆನ್ನಲ್ಲೇ ಇದೀಗ ಬಸವಣ್ಣನವರ ಪಠ್ಯ ತಿರುಚಿರುವ ಕುರಿತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆಕ್ರೋಶ ವ್ಯಕ್ತಪಡಿಸಿದೆ.
ಹೌದು, ನಡಿನ ಸಮಸ್ತ ಲಿಂಗಾಯತ ಮಠಗಳ ಮಠಾಧೀಶರು ಬಸವಣ್ಣನವರ ಕುರಿತು ತಿರುಚಿರುವ ಪಠ್ಯವನ್ನು ಕೂಡಲೇ ಸರಿಪಡಿಸಬೇಕು ಇಲ್ಲವೇ ಪ್ರಮಾಣದ ಪ್ರತಿಭಟನೆ ಅನಿವಾರ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದಿದೆ.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಮಸ್ತಕದಲ್ಲಿ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ಬಸವಣ್ಣನವರು ತಮ್ಮ ಸಹೋದರಿ ಅಕ್ಕನಾಗಾಯಿಗೆ ಇಲ್ಲದ ಉಪನಯನ ನನಗೇಕೆ? ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋದುದು ಐತಿಹಾಸಿಕ ಸಂಗತಿ ಎಂದು ಪತ್ರದಲ್ಲಿ ಬರೆಯಲಾಗಿದೆ.
1. “ಶೈವ-ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು” ಎಂದು ಬರೆಯಲಾಗಿದೆ. ಇದು ಸಹ ತಪ್ಪು.
ಶೈವಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು, ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು. ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬಂದದು. ಅವರೇ ಇಷ್ಟಲಿಂಗದ ಜನಕರು. ಅಲ್ಲಮಪ್ರಭುದೇವರಾದಿಯಾಗಿ ಎಲ್ಲ ಶರಣರು ತಮ್ಮ ವಚನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಕೆ ನೀನೆ ರೂಪಾದೆ’ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ” ಎಂದು ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.

2. “ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಈಗ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಕೂಡ ಶುದ್ಧ ತಪ್ಪು.
ವೀರಶೈವ ಶೈವದ ಶಾಖೆ. ಅದು ಮತವಿರಬಹುದು ಈಗ ಅದನ್ನು ಅಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ. ಸರಕಾರದ ದಾಖಲೆಗಳಲ್ಲಿ ಕ್ರಿ.ಶ.1871 ರಿಂದಲೂ ಇದನ್ನು ಕಾಣಬಹುದು. ಆದರೆ ಬಸವಣ್ಣನವರು ಅಂಗಾಯತ ಧರ್ಮದ ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಶೈವದಲ್ಲಿ ವರ್ಣಾಶ್ರಮದ ಆಚರಣೆ ಇದೆ. ಅಂಗಾಯತರಲ್ಲಿ ವರ್ಣಾಶ್ರಮ ಭೇದಗಳಲ್ಲ. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದು ಶುದ್ಧ ಅನೈತಿಹಾಸಿಕ” ಎಂದು ಮಠಾಧಿಪತಿಗಳು ತಿಳಿಸಿದ್ದಾರೆ.
3. ಕಳೆದ ವರ್ಷ ಪಠ್ಯದಲ್ಲಿದ್ದ – ವೈದಿಕ ಧರ್ಮದ ಆಚರಣೆಗಳ ನಿರಾಕರಣೆ, ಮಾನವೀಯ ಮಾಲ್ಯಗಳಿಂದ ಕೂಡಿದ ಸಿದ್ಧಾಂತದ ಪ್ರತಿಪಾದನೆ, ಅನಿಷ್ಟ ಪದ್ಧತಿಗಳ ವಿರುದ್ಧದ ಹೋರಾಟ, ಸ್ವಾವಲಂಬನೆ, ದೇಹವೇ ದೇಗುಲ ತತ್ವಗಳ ಬೋಧನೆ ಮುಂತಾದವುಗಳ ಜೊತೆಗೆ ಅವರು ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳುವಳಿಯನ್ನು ಜನಮುಖಿಯಾಗಿಸಿದರು ಎನ್ನುವಂತಹ ಸಾಲುಗಳನ್ನು ಕೈಬಿಟ್ಟಿರುವುದು ದುರ್ದೈವದ ಸಂಗತಿ ಎಂದು ಮಠಾಧಿಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದಲ್ಲಿ ಆಗಿರುವ ಈ ಎಲ್ಲ ದೋಷಗಳನ್ನು ನಿವಾರಿಸಿ ಪಠ್ಯಪುಸ್ತಕ ಮುದ್ರಿಸಬೇಕು. ಅನ್ಯಥಾ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುವುದಲ್ಲದೆ ವೈಶಿಷ್ಟ್ಯಪೂರ್ಣವಾದ ಲಿಂಗಾಯತ ಧರ್ಮಕ್ಕೆ ಮತ್ತು ಬಸವಣ್ಣನವರಿಗೆ ಅಪಚಾರವೆಸಗಿದಂತಾಗುತ್ತದೆ. ಲಿಂಗಾಯತ ಧರ್ಮದ ಅನುಯಾಯಿ ಮತ್ತು ಬಸವಣ್ಣನವರ ಹೆಸರಿನವರಾದ ತಾವು ಮುಖ್ಯ ಮಂತ್ರಿಯಾಗಿರುವ ಸಮಯದಲ್ಲಿ ಇಂತಹ ಅಪಚಾರವಾಗಿರುವುದು ನಮಗೆ ಆಘಾತಕಾರಿಯಾಗಿದೆ. ಬಹುಸಂಖ್ಯಾತ ಲಿಂಗಾಯತರು ಮತ್ತು ಲಿಂಗಾಯತ ಮಠಾಧಿಪತಿಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸುವ ಮೊದಲು ಈ ತಪ್ಪು ಸರಿಪಡಿಸಿ ಪಠ್ಯ ಮಸ್ತಕಗಳನ್ನು ಪ್ರಕಟಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸೂಕ್ತ ಸಂದರ್ಭದಲ್ಲಿ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ” ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಇದೇ ರೀತಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಮತ್ತು ನಾಡಗೀತೆಯ ಬಗ್ಗೆಯೂ ಅವಹೇಳನಕಾರಿ ವಿಷಯ ಪ್ರಕಟವಾಗಿರುವುದು ಸರಿಯಾದ ರೀತಿಯಲ್ಲ. ಇದು ಅತ್ಯಂತ ಖಂಡನೀಯವಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

