ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಟಿಬೆಟಿಯನ್ ಧಾರ್ಮಿಕ ಗುರು ದಲೈ ಲಾಮಾ ಅವರು ಡಿಸೆಂಬರ್ನಲ್ಲಿ ಕರ್ನಾಟಕದ ಮಂಡ್ಯಕ್ಕೆ ಭೇಟಿ ನೀಡಿ, ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಧ್ಯಮಗಳು ಗುರುವಾರ (ಆಗಸ್ಟ್ 31) ವರದಿ ಮಾಡಿವೆ.
ಮಂಡ್ಯದ ಹಲ್ಲೆಗೆರೆ ಗ್ರಾಮದಲ್ಲಿ ಭೂತಾಯಿ ಟ್ರಸ್ಟ್ ಈ ಆಧ್ಯಾತ್ಮಿಕ ಕೇಂದ್ರವನ್ನು ನಿರ್ಮಿಸುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಗುರುವಾರ ತಿಳಿಸಿದೆ.
ಈ ಸಂಬಂಧ ಅಮೆರಿಕದ ವೈದ್ಯ ಡಾ.ಲಕ್ಷ್ಮೀನರಸಿಂಹಮೂರ್ತಿ ನೇತೃತ್ವದ ನಿಯೋಗ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಹಲ್ಲೇಗೆರೆ ಗ್ರಾಮಕ್ಕೆ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸಲು ನೆರವು ನೀಡುವಂತೆ ಕೋರಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರವೇ ಅಧಿಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಆಧ್ಯಾತ್ಮಿಕ ಕೇಂದ್ರದ ಕಾರ್ಯವೈಖರಿಯನ್ನು ವಿವರಿಸಿದ ನಿಯೋಗದ ಸದಸ್ಯರು, ಹಲ್ಲೇಗೆರೆ ಮಂಡ್ಯ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದ್ದಾರೆ.
ಭೂತಾಯಿ ಟ್ರಸ್ಟ್ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರವನ್ನು ಸ್ಥಾಪಿಸುವ ಮಹದಾಶಯ ಹೊಂದಿದೆ. ಇದರ ಶಂಕುಸ್ಥಾಪನೆಗಾಗಿ ಬರಾಕ್ ಒಬಾಮಾ ದಂಪತಿ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಆಗಮಿಸುವರು. ಹೀಗಾಗಿ ಹಲ್ಲೇಗೆರೆ ಗ್ರಾಮದಲ್ಲಿ ಹೆಲಿಪ್ಯಾಡ್, ರಸ್ತೆ ನಿರ್ಮಾಣ, ವಿದ್ಯುತ್ ದೀಪಗಳ ವ್ಯವಸ್ಥೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸರಕಾರದಿಂದ ಒದಗಿಸಿಕೊಡಬೇಕೆಂದು ನಿಯೋಗದ ಸದಸ್ಯರು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಅಮೆರಿಕ ಹಾಲಿ ಅಧ್ಯಕ್ಷರಾದ ಜೋ ಬೈಡನ್ ಅವರ ವೈದ್ಯಕೀಯ ಸಲಹೆಗಾರ ಡಾ. ವಿವೇಕ್ ಮೂರ್ತಿ ಅವರು ಭಾರತೀಯ ಮೂಲದವರು. ಡಾ.ವಿವೇಕ ಮೂರ್ತಿ ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ವೈದ್ಯಕೀಯ ಸಲಹೆಗಾರರಾಗಿದ್ದರು.
ಡಾ.ವಿವೇಕ್ ಮೂರ್ತಿ ಅವರ ತಂದೆ, ಅನಿವಾಸಿ ಭಾರತೀಯ ಡಾ. ಲಕ್ಷ್ಮಿನರಸಿಂಹ ಮೂರ್ತಿ (ಎಲ್.ಎನ್.ಮೂರ್ತಿ) ಅವರು ತಮ್ಮ ಮಾತೃಭೂಮಿಯ ಅಭ್ಯುದಯಕ್ಕೆ ಪಣ ತೊಟ್ಟಿದ್ದಾರೆ. ಅವರ ಸ್ವಂತ ಊರು ಮಂಡ್ಯ ಜಿಲ್ಲೆಯ ಹಲ್ಲೆಗೆರೆಯಾಗಿದ್ದು, ಇಲ್ಲಿ 13 ಎಕರೆ ಪಿತ್ರಾರ್ಜಿತ ಜಮೀನಿದೆ. ಅದರಲ್ಲಿ ಭೂತಾಯಿ ಟ್ರಸ್ಟ್ ನಿಂದ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಮತ್ತು ಧ್ಯಾನ ಕೇಂದ್ರ ತೆರೆಯಲು ಯೋಜಿಸಿ, ಕಾರ್ಯಪ್ರವೃತ್ತರಾಗಿದ್ದಾರೆ.