ಕರ್ನಾಟಕ ಸರ್ಕಾರ ತನ್ನ ಆರ್ಥಿಕ ಇಲಾಖೆ ಸೇರಿದಂತೆ ಬೇರೆ ಬೇರೆ ಹಣದ ವ್ಯವಹಾರವನ್ನು ಎಸ್‌ಬಿಐ ಹಾಗು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ತೆರೆಯಲಾಗಿದ್ದ ಎಲ್ಲಾ ಅಕೌಂಟ್‌ಗಳನ್ನ ಸ್ಥಗಿತ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಆರ್ಥಿಕ ವ್ಯವಹಾರವನ್ನು ಎಸ್‌ಬಿಐ ಹಾಗು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಮಾಡಬಾರದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಕರ್ನಾಟಕ ಸರ್ಕಾರದ ಆದೇಶದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಬಿಜೆಪಿ ರಾಜ್ಯಸಭಾ ಸಂಸದ ಲೇಹರ್ ಸಿಂಗ್ ಸರ್ಕಾರದ ಮೇಲೆ ಗುಮಾನಿ ವ್ಯಕ್ತಪಡಿಸಿದ್ದರು. ಸರ್ಕಾರದ ನಿರ್ಧಾರ ನಿರಂಕುಶ ಪ್ರಭುತ್ವವನ್ನು ತೋರಿಸುತ್ತದೆ ಎಂದಿದ್ದರು.
ಇತ್ತೀಚಿನ ದಿನಗಳಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದ್ದು, ಸರ್ಕಾರದ ಈ ನಡೆ ಆ ಹಗರಣಕ್ಕೂ ಸಂಬಂಧ ಇರುವಂತೆ ಕಾಣಿಸುತ್ತಿದೆ. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂದು x ಪೋಸ್ಟ್‌ನಲ್ಲಿ ಒತ್ತಾಯ ಮಾಡಿದ್ರು. ಇಷ್ಟೆಲ್ಲಾ ಆಗ್ತಿತ್ತ ಹಾಗೆ ರಾಜ್ಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ರು. ಎಸ್‌ಬಿಐ ಹಾಗು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸರ್ಕಾರದ ಅಕೌಂಟ್ಸ್ ಕ್ಲೋಸ್ ಮಾಡುವ ವಿಚಾರದಲ್ಲಿ ನಿರ್ಧಾರ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ, ಸುತ್ತೋಲೆ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿತು.
ರಾಜ್ಯ ಸರ್ಕಾರದ ಜೊತೆಗೆ ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ವಿನೋದ್ ಜೈಸ್ವಾಲ್ ಹಾಗು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ದೀಪಕ್ ಕುಮಾರ್ ಶ್ರೀವಾತ್ಸವ್ ಅವರು ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಠೇವಣಿ ಹಣ ವಾಪಸ್ ಮಾಡಲು ಹದಿನೈದು ದಿನಗಳ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಹದಿನೈದು ದಿನಗಳವರೆಗೆ ತಾತ್ಕಾಲಿಕವಾಗಿ ಸುತ್ತೋಲೆ ಹಿಂಪಡೆಯಲಾಗಿದೆ ಎಂದು ಆರ್ಥಿಕ ಇಲಾಖೆ ಸ್ಪಷ್ಟನೆ ನೀಡಿದೆ. ಆದೇಶ ಹಿಂಪಡೆದು ಸರ್ಕಾರದ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ 2 ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ವಹಿವಾಟು ಸ್ಥಗಿತ ಮಾಡುವ ನಿರ್ಧಾರಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ.
ಕೆಐಎಡಿಬಿ ಸಂಸ್ಥೆಯ ನಿಶ್ಚಿತ ಠೇವಣಿ ವಿಚಾರವಾಗಿ ಈ ಎರಡೂ ಬ್ಯಾಂಕ್‌ಗಳು ನಡೆದುಕೊಂಡ ರೀತಿನೀತಿಗಳಿಂದ ಬೇಸತ್ತ ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಆದರೆ ಸರ್ಕಾರ ಗಟ್ಟಿ ನಿರ್ಧಾರದಿಂದ ಕಂಗಾಲಾಗಿ, ಠೇವಣಿ ವಾಪಸ್ ಮಾಡುವ ನಿರ್ಧಾರ ಪ್ರಕಟಿಸಿದ್ದು, ಮುಂದಿನ 15 ದಿನಗಳ ಕಾಲಾವಕಾಶ ಕೋರಿದ್ದಾರೆ. ಇದೀಗ ರಾಜ್ಯ ಸರ್ಕಾರಕ್ಕೆ ಮೇಲುಗೈ ಆದಂತಾಗಿದ್ದು, ಠೇವಣಿ ವಾಪಸ್ ಬರುವ ಸಾಧ್ಯತೆಯಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಠೇವಣಿ ವಾಪಸ್ ಆಗದಿದ್ದರೆ ಆದೇಶ ಯಥಾಸ್ಥಿತಿ ಜಾರಿ ಆಗಲಿದೆ. ಇದೇ ಕಾರಣಕ್ಕೆ ನೂತನ ಸುತ್ತೋಲೆಯಲ್ಲಿ ತಾತ್ಕಾಲಿಕವಾಗಿ 15 ದಿನಗಳ ಕಾಲ ತಡೆಹಿಡಿಯಲಾಗಿದೆ ಎಂದು ಪ್ರಕಟಿಸಿದ್ದಾರೆ.
ಕೃಷ್ಣಮಣಿ