ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಬೆಂಗಳೂರು ಟೆಕ್ ಸಮ್ಮಿಟ್ ಇಂದಿಗೆ ಮುಕ್ತಾಯಗೊಂಡಿದೆ. ತಾಂತ್ರಿಕವಾಗಿ ಮತ್ತು ಅವಿಷ್ಕಾರದ ನೆಲೆಗಟ್ಟಿನಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಧ್ಯೇಯದೊಂದಿಗೆ ಪ್ರತಿ ವರ್ಷ ನಡೆಯುವ ಬೆಂಗಳೂರು ತಂತ್ರಜ್ಞಾನ ಶೃಂಗ ಈ ಬಾರಿಯೂ ಬಹಳ ಅದ್ದೂರಿಯಾಗಿ, ರಚನಾತ್ಮಕವಾಗಿ ನಡಿದಿದೆ.
ನವೆಂಬರ್ 17ರಂದು ಆದಿಯಾಗಿ ಇಂದು ಕೊನೆಗೊಂಡ ಬೆಂಗಳೂರು ಟೆಕ್ ಸಮ್ಮಿಟ್ ತನ್ನ 24ನೇ ಆವೃತ್ತಿಯ ಮತ್ತೊಂದು ಅಧ್ಯಾಯವನ್ನು ಮುಗಿಸಿದೆ. ದೇಶದ ಐಟಿ ಬಿಟಿ ರಾಜಧಾನಿಯಾಗಿರುವ ಬೆಂಗಳೂರು ಪ್ರತಿ ಬಾರಿ ಜಗತ್ತಿನ ಹಲವು ಐಟಿ ಬಿಟಿ ತಾಂತ್ರಿಕ ಕಂಪೆನಿಗಳು ಭಾಗವಹಿಸಿದ್ದವು. ನಗರದ ಖಾಸಗಿ ಹೋಟೆಲ್ ನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಈ ಶೃಂಗದಲ್ಲಿ ಒಟ್ಟು 75 ಪೂರ್ವ ನಿರ್ಧರಿತ ಕಾರ್ಯಾಗಾರ ಹಾಗೂ 18 ಆಧ್ಯತೆ ಮೇರೆಗೆ ಕಾರ್ಯಾಗಾರ ನಡೆಸಲಾಗಿದೆ. ಇದರ ಜೊತೆಗೆ ಶೃಂಗದಲ್ಲಿ 350 ಪ್ರಮುಖರಿಂದ ಭಾಷಣ ನಡೆದಿದೆ. ಒಟ್ಟು 48 ದೇಶ ಈ ಬಾರಿಯ ಸಮ್ಮಿಟ್ ನಲ್ಲಿ ಭಾಗಿಯಾಗಿದೆ. ಮೂರು ದಿನಗಳ ಕಾರ್ಯಾಗಾರದಲ್ಲಿ 211 ಸ್ಟಾರ್ಟ್ ಅಪ್ಸ್ ಪಾಲ್ಗೊಂಡಿದೆ. ಅಲ್ಲದೆ ಕೇವಲ ಬೆಂಗಳೂರಿಗೆ ಮಾತ್ರ ಒತ್ತು ಕೊಡದೆ ಈ ಬಿಟಿಎಸ್ ಅಂಗವಾಗಿ ರಾಜ್ಯ ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರಿನಲ್ಲೂ ಕಾರ್ಯಾಗಾರ ಏರ್ಪಡಿಸಲಾಗಿದ್ದು ರಚನಾತ್ಮಕವಾಗಿ ನಡೆದಿದೆ.
ಈ ಬಾರಿಯ ಟೆಕ್ ಸಮ್ಮಿಟ್ ನಿಂದಾಗಿ ಉದ್ಯೋಗಗಳು ಸೃಷ್ಟಿಯಾಗುವ ಭರವಸೆಯನ್ನು ಐಟಿ ಬಿಟಿ ಸಚಿವ ಅಶ್ವಥ್ ನಾರಾಯಣ್ ನೀಡಿದ್ದಾರೆ. ಈ ಶೃಂಗದಿಂದ ಬೆಂಗಳೂರಿನಲ್ಲಿಮಾತ್ರ 4 ಲಕ್ಷ ಉದ್ಯೋಗಗಳು ಬೇಗನೆ ತೆರೆದುಕೊಳ್ಳಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗದಲ್ಲಿನ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತೆ. ಡಿಜಿಟಲ್ & ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುವ ಉದ್ದೇಶವಿದೆ. ಮುಂದಿನದ್ದು ಡಿಜಿಟಲ್ ಯುಗ, ಈಗಲೇ ನಾವು ಅದರ ಬಗ್ಗೆ ಯೋಚಿಸಿ ಕಾರ್ಯಕ್ರಮ ರೂಪಿಸಬೇಕು. ಆವಿಷ್ಕಾರ ಮತ್ತು ಸ್ಟಾರ್ಟಪ್ಸ್ ಕ್ಷೇತ್ರಕ್ಕೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಇಡೀ ದೇಶಕ್ಕೆ ಬೆಂಗಳೂರು ಸ್ಟಾರ್ಟ್ ಅಪ್ ರಾಜಧಾನಿ ಕೂಡ. ಹೀಗಾಗಿ ಮುಂದಿನ ದಿನಗಳಲ್ಲಿ ನವೋದ್ಯಮಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟು ಬಂಡವಾಳ ಹೂಡಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಈ ಬಾರಿ BTS ನಲ್ಲಿ ಒಪ್ಪಂದವಿಲ್ಲ.!!
ಇನ್ನು ಪ್ರತಿ ಬಾರಿಯ ಶೃಂಗದಲ್ಲಿ ಕರ್ನಾಟಕ ಹಲವು ಅಂತರಾರಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುತ್ತಿತ್ತು. ಆದರೆ ಈ ಬಾರಿ ಯಾವುದೇ ಒಪ್ಪಂದ ಮಾಡಿಲ್ಲ. ಇದಕ್ಕೆ ಕಾರಣ, ಎಂಎಲ್‌ಸಿ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆ. ಹೀಗಾಗಿ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಂದು ಸಭೆ ನಡೆಸಿ ಹಲವು ಒಪ್ಪಂದಗಳಿಗೆ ಕರ್ನಾಟಕ ಸಾಕ್ಷಿಯಾಗಲಿದೆ. ಇನ್ನು ಈ ಬಾರಿಯ ಬಿಟಿಎಸ್‌ನಿಂದಾಗಿ ಐದು ಪ್ರಮುಖ ಕಂಪೆನಿಗಳು ಕರ್ನಾಕದ ಡಿಜಿಟಲ್ ಹಾಗೂ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಐದು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಭರಸವೆ ಹುಟ್ಟಿಸಿದೆ.

ಅಂದಹಾಗೆ, ಈ ಬಾರಿಯ ಬಿಎಟಿಎಸ್‌ನಲ್ಲಿ ಒಟ್ಟು 14 ಸಾವಿರ ಬ್ಯುಸಿನೆಸ್ ಮೀಟಿಂಗ್‌ಗಳು ನಡಿದಿದೆ. ಮುಂದಿನ ವರ್ಷ ಬೆಂಗಳೂರು ಟೆಕ್ ಸಮ್ಮಿಟ್ ನ 25ನೇ ಆವೃತ್ತಿಯಾಗಿರುವುದರಿಂದ ಹಿಂದೆಂದೂ ನಡೆಯದ ರೀತಿಯಲ್ಲಿ ಬಿಟಿಎಸ್ ಅನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಆವೃತ್ತಿಯ ಬಿಟಿಎಸ್ ನವೆಂಬರ್ 16, 17, 18ರಂದು ನಡೆಸಲು ಐಟಿ ಬಿಟಿ ಸಚಿವಾಲಯ ನಿರ್ಧರಿಸಿದೆ. ಒಟ್ಟಾರೆ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ ಈ ಬಾರಿಯೂ ಬಹಳ ಅರ್ಥಪೂರ್ಣವಾಗಿ, ಮುಂದಿನ ದಿನಗಳನ್ನು ಉಜ್ವಲವಾಗಿಸುವ ಭರಸವೆಯನ್ನು ಮೂಡಿಸಿದೆ.











