• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಂಗಾರಪ್ಪ ಸಹೋದರರ ಕುಬಟೂರು ಮಾತುಕತೆ ಮತ್ತು ಸಿದ್ದರಾಮಯ್ಯ ಭೇಟಿ

Shivakumar by Shivakumar
October 15, 2021
in ಕರ್ನಾಟಕ
0
ಬಂಗಾರಪ್ಪ ಸಹೋದರರ ಕುಬಟೂರು ಮಾತುಕತೆ ಮತ್ತು ಸಿದ್ದರಾಮಯ್ಯ ಭೇಟಿ
Share on WhatsAppShare on FacebookShare on Telegram

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರು ಏಕಕಾಲಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದೆ.

ADVERTISEMENT

ಶುಕ್ರವಾರ ಬೆಂಗಳೂರಿನ ಸಿದ್ದರಾಮಯ್ಯ ಅಧಿಕೃತ ನಿವಾಸದಲ್ಲಿ ಮಧು ಮತ್ತು ಕುಮಾರ್ ಬಂಗಾರಪ್ಪ ಮುಖಾಮುಖಿಯಾದರು. ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಕೂಡ ಚರ್ಚಿಸಿದ್ದರು. ಇತ್ತೀಚೆಗೆ ತಾನೆ ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮೂಲಕ ಸುದ್ದಿಯಲ್ಲಿದ್ದ ಮಧು, ಇದೀಗ ವಿಜಯದಶಮಿಯ ದಿನವೇ ಪಕ್ಷದ ರಾಜ್ಯ ನಾಯಕ ಹಾಗು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಹೊತ್ತಲ್ಲೇ ಅವರ ಸಹೋದರ ಹಾಗೂ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಕೂಡ ಅಲ್ಲಿ ಕಾಣಿಸಿಕೊಂಡಿರುವುದು ಸಹಜವಾಗೇ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆದರೆ, ಮಧು ಮತ್ತು ಕುಮಾರ್ ಬಂಗಾರಪ್ಪ ಪರಸ್ಪರ ಮುಖಾಮುಖಿಯಾದರೂ ಮಾತನಾಡಿಲ್ಲ ಎಂಬುದು ಗಮನಾರ್ಹ. ಸುಮಾರು ಒಂದು ದಶಕದಿಂದ ಸಹೋದರರ ನಡುವೆ ಇರುವ ರಾಜಕೀಯ ಮತ್ತು ವೈಯಕ್ತಿಕ ವಿರೋಧ, ವಾಗ್ವಾದಗಳ ಹಿನ್ನೆಲೆಯಲ್ಲಿ ಹೀಗೆ ಮುಖಾಮುಖಿಯಾದರೂ ಮಾತನಾಡದೆ ಇರುವುದು ಹೊಸತೇನಲ್ಲ. ಆದರೆ, ಇಬ್ಬರೂ ಒಂದೇ ಸಮಯಕ್ಕೆ ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ನೀಡಿರುವುದು ವಿಶೇಷ.

ಕಾಂಗ್ರೆಸ್ ಮುಖಂಡರಾಗಿ ಮಧು ಬಂಗಾರಪ್ಪ ತಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದು ಸಹಜವೇ. ಆದರೆ, ಬಿಜೆಪಿಯ ಶಾಸಕರಾಗಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಈ ತಮ್ಮ ಭೇಟಿಯ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕುಮಾರ್, ತಮ್ಮ ಪುತ್ರಿಯ ಮದುವೆ ಆಮಂತ್ರಣ ನೀಡಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದಾಗಿಯೂ, ಈ ವೇಳೆ ತಮ್ಮ ಸಹೋದರ ಇಲ್ಲಿಯೇ ಇರುವುದನ್ನು ಕಂಡು ಸಂತೋಷವಾಯಿತೆಂದೂ ಹೇಳಿದ್ದಾರೆ.

ಜೊತೆಗೆ, “ಸಿದ್ದರಾಮಯ್ಯ ನಮ್ಮ ವಿರೋಧ ಪಕ್ಷದ ನಾಯಕರು. ಮುಖ್ಯಮಂತ್ರಿಗಳಾಗಿದ್ದವರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನನಗೂ ಅವರು ನಾಯಕರಾಗಿದ್ದವರು. ಆ ಹಿನ್ನೆಲೆಯಲ್ಲಿ ಆಹ್ವಾನ ನೀಡಲು ಬಂದಿರುವೆ. ಇದನ್ನು ಹೊರತುಪಡಿಸಿ ಕಾಂಗ್ರೆಸ್ ಸೇರುತ್ತೇನೆ ಎಂಬ ಊಹಾಪೋಹಗಳೆಲ್ಲಾ ಸುಳ್ಳು. ನಾನು ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಹಾಗೇ ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ನನಗೆ ಆಹ್ವಾನ ನೀಡಿಲ್ಲ. ಅವರು ಅನುಭವಿ ರಾಜಕಾರಣಿ. ಅವರಿಗೆ ನಾವು ಯಾವಾಗ, ಏನು- ಯಾವ ವಿಚಾರ ಮಾತನಾಡಬೇಕು ಎಂಬುದು ತಿಳಿದಿದೆ. ಸಿದ್ದರಾಮಯ್ಯ ಅವರಾಗಲಿ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಾಗಲಿ ಪಕ್ಷ ಸೇರಲು ನನಗೆ ಆಹ್ವಾನ ಕೊಟ್ಟಿಲ್ಲ” ಎಂದು ಕುಮಾರ್ ಹೇಳಿರುವುದಾಗಿ ವರದಿಯಾಗಿದೆ.

ಪುತ್ರಿಯ ವಿವಾಹದ ಹಿನ್ನೆಲೆಯಲ್ಲಿ ಕುಮಾರ್ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಭೇಟಿ ನೀಡಿರಬಹುದು ಮತ್ತು ಅದೇ ಹೊತ್ತಿಗೆ ಅಚಾನಕ್ಕಾಗಿ ಅವರ ಸಹೋದರ ಮಧು ಅಲ್ಲಿದ್ದದ್ದು ಕೇವಲ ಕಾಕತಾಳೀಯವೂ ಇರಬಹುದು. ಆದರೆ, ತೀರಾ ಸಹಜವಾಗಿ ಕಾಣಬೇಕಿದ್ದ ಈ ಭೇಟಿ ರಾಜಕೀಯ ವಲಯದಲ್ಲಿ ಇಷ್ಟೊಂದು ಕುತೂಹಲ ಕೆರಳಿಸಲು ಕಾರಣಗಳು ಇಲ್ಲದೇ ಇಲ್ಲ. ಮುಖ್ಯವಾಗಿ 2018ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದ ಕುಮಾರ್ ಬಂಗಾರಪ್ಪ ಅವರಿಗೆ ಅಂದಿನಿಂದ ಈವರೆಗೆ ಮೂರೂವರೆ ವರ್ಷ ಕಳೆದರೂ ಬಿಜೆಪಿಯ ಸಂಸ್ಕೃತಿಗೆ ಒಗ್ಗಿಕೊಳ್ಳಲು ಆಗುತ್ತಿಲ್ಲ. ಹಾಗಾಗಿಯೇ ಸೊರಬ ತಾಲೂಕು ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲಾ ಬಿಜೆಪಿಯ ವಲಯದಲ್ಲಿ ಅವರಿಗೆ ಹೊಂದಾಣಿಕೆ ಸಾಧಿಸಲು ಸಾಧ್ಯವಾಗಿಲ್ಲ. ಆ ಕಾರಣದಿಂದಲೇ ಕಳೆದ ಮೂರೂವರೆ ವರ್ಷದಿಂದಲೂ ಶಾಸಕರಾಗಿ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಮೂಲ ಬಿಜೆಪಿಗರು ಮತ್ತು ಸಂಘಪರಿವಾರದ ಮಂದಿಯೇ ಪ್ರಬಲ ಪ್ರತಿಪಕ್ಷದಂತಾಗಿದ್ದು, ಅವರ ಪ್ರತಿ ನಡೆಗೂ ಅಡ್ಡಿ ಮತ್ತು ಅಡ್ಡಗಾಲು ಹಾಕಲಾಗುತ್ತಿದೆ.

ಅದು ಗ್ರಾಮ ಪಂಚಾಯ್ತಿ ಮತ್ತು ಪುರಸಭೆ ಚುನಾವಣೆಗಳಿರಬಹುದು, ಅಧಿಕಾರ ಹಿಡಿಯುವ ಯತ್ನಗಳಿರಬಹುದು, ಪ್ರತಿ ನಿರ್ಣಾಯಕ ಸಂದರ್ಭದಲ್ಲಿಯೂ ಬಿಜೆಪಿ ಶಾಸಕ ಕುಮಾರ್ ಅವರಿಗೆ ಪ್ರಬಲ ವಿರೋಧ, ಸಂಘರ್ಷ ಎದುರಾಗುತ್ತಿರುವುದು ಸ್ವಪಕ್ಷೀಯರಿಂದಲೇ. ಹಾಗಾಗಿ ಸೊರಬ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಅಲ್ಲಿ ಬಿಜೆಪಿ ಬೇರೆಯೇ ಇದೆ, ಬಿಜೆಪಿ ಶಾಸಕ ಕುಮಾರ್ ಹಿಂಬಾಲಕರು, ಬೆಂಬಲಿಗರೇ ಬೇರೆ ಇದ್ದಾರೆ. ಹಾಗಾಗಿ ಯೋಜನೆಗಳ ಜಾರಿ ವಿಷಯವಿರಬಹುದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿರಬಹುದು, ಪಕ್ಷದ ಪದಾಧಿಕಾರಿಗಳ ನೇಮಕವಿರಬಹುದು, ಪ್ರತಿ ಹಂತದಲ್ಲೂ ಶಾಸಕರ ಬಣ ಮತ್ತು ಮೂಲ ಬಿಜೆಪಿ ನಡುವೆ ಸಂಘರ್ಷ ಸಾಮಾನ್ಯ. ಕೆಲವು ಬಾರಿ ಆ ಸಂಘರ್ಷ ಪರಸ್ಪರ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋದ ನಿದರ್ಶನಗಳೂ ಇವೆ.

ಸೊರಬದಲ್ಲಿ ಹೀಗೆ ತಾವೇ ಆಯ್ಕೆ ಮಾಡಿದ ಶಾಸಕರ ವಿರುದ್ಧ ಮೂಲ ಬಿಜೆಪಿಗರೇ ಪ್ರತಿಪಕ್ಷ ಪಾತ್ರ ವಹಿಸಲು ಕುಮಾರ್ ಬಂಗಾರಪ್ಪ ಅವರು ಪ್ರತಿ ವಿಷಯದಲ್ಲಿ ಪಕ್ಷವನ್ನು ವಿಶ್ವಾಸಕ್ಕೆ ಪಡೆಯದೆ ಕೇವಲ ತಮ್ಮ ಬೆಂಬಲಿಗರ ಮಾತು ಕೇಳುವುದು ಕಾರಣ ಎಂಬ ಒಂದು ವಾದವಿದೆ. ಆದರೆ, ಮೂಲಭೂತವಾಗಿ ಸೊರಬದಲ್ಲಿ ಕುಮಾರ್ ತಾವು ಎಣಿಸಿದಂತೆ ತಮ್ಮ ದಾಳವಾಗಿಲ್ಲ. ಬದಲಾಗಿ ಎಂದಿನಂತೆ ಸ್ವಂತಿಕೆ, ಜಿಗುಟತನಕ್ಕೆ ಜೋತು ಬಿದ್ದಿದ್ದಾರೆ. ಹಾಗಾಗಿ ಅವರಿಂದ ತಮಗೆ ಏನೂ ಲಾಭವಾಗದು ಎಂಬ ತೀರ್ಮಾನಕ್ಕೆ ಬಂದಿರುವ ಯಡಿಯೂರಪ್ಪ ಮತ್ತು ಪುತ್ರದ್ವಯರು, ಸೊರಬಕ್ಕೆ ತಮ್ಮ ನಿಷ್ಠರನ್ನೇ ಮುಂದಿನ ಬಾರಿ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಜೊತೆಗೆ ಸಂಘಪರಿವಾರ ಮತ್ತು ಬಿಜೆಪಿ ಮೂಲ ಕಾರ್ಯಕರ್ತರಿಗೂ ಕುಮಾರ್ ಅವರಿಗೆ ಎಣ್ಣೆ ಸೀಗೆಕಾಯಿ ಎಂಬಂತಾಗಿದೆ. ಹಾಗಾಗಿ ಮುಂದಿನ ಚುನಾವಣೆಗೆ ಕುಮಾರ್ ಗೆ ಕೇಸರಿ ಪಾಳೆಯದ ಟಿಕೆಟ್ ಕೈತಪ್ಪಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆ ಹಿನ್ನೆಲೆಯಲ್ಲಿಯೇ ಕಳೆದ ಒಂದೂವರೆ ವರ್ಷದಿಂದಲೇ ಸೊರಬ ಮತ್ತು ಶಿವಮೊಗ್ಗ ರಾಜಕೀಯ ವಲಯದಲ್ಲಿ ಕುಮಾರ್ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂಬ ಗುಸುಗುಸು ಸದ್ದು ಮಾಡುತ್ತಿದೆ. ಅದರಲ್ಲೂ ಅವರ ಸಹೋದರ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಇಬ್ಬರೂ ಸಹೋದರರು ಕುಬಟೂರಿನ ತಮ್ಮ ಮೂಲ ಮನೆಯಲ್ಲಿ ಪರಸ್ಪರ ಭೇಟಿಯಾಗಿದ್ದರು. ಆ ಭೇಟಿ ವೇಳೆ ಇಬ್ಬರೂ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಮತ್ತು ತಮ್ಮ ನಡುವಿನ ವೈಯಕ್ತಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಿದ್ದಾರೆ. ಕುಟುಂಬದ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಇನ್ನಾದರೂ ಇಬ್ಬರೂ ಜೊತೆಯಾಗಿ ಪರಸ್ಪರ ಅನ್ಯೋನ್ಯವಾಗಿ ಇರೋಣ. ತಮ್ಮ ನಡುವಿನ ವೈಮಸ್ಯದಿಂದ ತಮಗೆ ಈವರೆಗೆ ಯಾವ ಲಾಭವೂ ಆಗಿಲ್ಲ. ಆದರೆ ಅದರಿಂದಾಗಿ ತಮ್ಮ ರಾಜಕೀಯ ವಿರೋಧಿಗಳಿಗೆ, ತಮ್ಮ ತಂದೆಯವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದವರಿಗೇ ಅನುಕೂಲವಾಗಿದೆ. ಹಾಗಾಗಿ ಈಗಲಾದರೂ ತಾವು ಪರಸ್ಪರ ಕೈಜೋಡಿಸೋಣ. ಅದರಿಂದಾಗಿ ಮನೆಮಂದಿಗೂ ನೆಮ್ಮದಿ ಮತ್ತು ತಮ್ಮ ಭವಿಷ್ಯಕ್ಕೂ ಅನುಕೂಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ವದಂತಿಯೂ ಇದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಗಲೂ ಕಾಂಗ್ರೆಸ್ ಪಕ್ಷಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರರ ಎದುರು ಪ್ರಬಲ ಎದುರಾಳಿಯಾಗಬಲ್ಲ ಅಭ್ಯರ್ಥಿ ಇಲ್ಲ. ಕ್ಷೇತ್ರದ ಜಾತಿವಾರು ಲೆಕ್ಕಾಚಾರ, ಪ್ರಭಾವ, ಜನಪ್ರಿಯತೆಗಳ ಆಧಾರದಲ್ಲಿ ಜಿಲ್ಲೆಯಲ್ಲಿ ಈಗಲೂ ಬಿಜೆಪಿ ಮತ್ತು ಯಡಿಯೂರಪ್ಪ ಕುಟುಂಬ ಹೊಂದಿರುವ ಸಂಘಟನೆ, ಜಾತಿ ಬಲ ಮತ್ತು ಹಣ ಬಲದ ಎದುರು ಸೆಣೆಸಬಲ್ಲ ಸಾಧ್ಯತೆ ಇರುವುದು ಕಾಂಗ್ರೆಸ್ ಮತ್ತು ಬಂಗಾರಪ್ಪ ಕುಟುಂಬದ ಕಾಂಬಿನೇಷನ್ ಗೆ ಮಾತ್ರ. ಆ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಸೊರಬ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾದರೆ, ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿದಲ್ಲಿ ಬಿ ವೈ ರಾಘವೇಂದ್ರ ಅವರನ್ನು ಮಣಿಸುವ ಸಾಧ್ಯತೆ ಹೆಚ್ಚು. ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕುಮಾರ್ ಗೆ ಜಾತಿ ಬಲದ ಜೊತೆಗೆ ಅವರ ತಂದೆ ಎಸ್ ಬಂಗಾರಪ್ಪ ಅವರ ವರ್ಚಸ್ಸಿನ ಬಲವೂ ಸಿಗಲಿದೆ. ಉಳಿದಂತೆ ಕಾಂಗ್ರೆಸ್ ನ ಬಲವೂ ಸೇರಿದರೆ, ಗೆಲುವಿನ ದಾರಿ ಸುಗಮವಾಗಲಿದೆ ಎಂಬುದು ಜಿಲ್ಲಾ ಕಾಂಗ್ರೆಸ್ ಆಂತರಿಕ ವಲಯದಲ್ಲೇ ಕೇಳಿಬರುತ್ತಿರುವ ಮಾತು.

ಶಿವಮೊಗ್ಗ ಮತ್ತು ಸೊರಬದ ರಾಜಕೀಯ ವರ್ತುಲಗಳಲ್ಲಿ ನಡೆಯುತ್ತಿರುವ ಇಂತಹ ಲೆಕ್ಕಾಚಾರಗಳು, ಕೇಳಿಬರುತ್ತಿರುವ ಊಹಾಪೋಹಗಳ ಹಿನ್ನೆಲೆಯಲ್ಲೇ ಮಗಳ ಮದುವೆಯ ಆಹ್ವಾನ ನೀಡಲು ಹೋದ ಕುಮಾರ್ ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಭೇಟಿ ಸಹಜ ಸೌಜನ್ಯದ ಮಾತುಕತೆಯ ವ್ಯಾಪ್ತಿ ಮೀರಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಅಂತಹ ಲೆಕ್ಕಾಚಾರಗಳು ನಿಜವಾಗಲೂ ಬಹುಶಃ ಈ ವಿಧಾನಸಭಾ ಅವಧಿಯ ಅಂತ್ಯದವರೆಗೆ ಕಾಯಬೇಕಾಗಬಹುದು!

Tags: ಕಾಂಗ್ರೆಸ್ಕುಮಾರ್ ಬಂಗಾರಪ್ಪಬಿ ಎಸ್ ಯಡಿಯೂರಪ್ಪಬಿ ವೈ ರಾಘವೇಂದ್ರಬಿಜೆಪಿಮಧು ಬಂಗಾರಪ್ಪಶಿವಮೊಗ್ಗ ಲೋಕಸಭಾ ಕ್ಷೇತ್ರಸಂಘಪರಿವಾರಸಿದ್ದರಾಮಯ್ಯಸೊರಬ
Previous Post

ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತು

Next Post

ಅನೈತಿಕ ಪೊಲೀಸ್ ಗಿರಿ ಬೆಂಬಲಿಸಿದ ಮುಖ್ಯಮಂತ್ರಿ ವಿರುದ್ಧ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ: ರಕ್ಷಾ ರಾಮಯ್ಯ ಆಕ್ರೋಶ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
Next Post
ಅನೈತಿಕ ಪೊಲೀಸ್ ಗಿರಿ ಬೆಂಬಲಿಸಿದ ಮುಖ್ಯಮಂತ್ರಿ ವಿರುದ್ಧ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ: ರಕ್ಷಾ ರಾಮಯ್ಯ ಆಕ್ರೋಶ

ಅನೈತಿಕ ಪೊಲೀಸ್ ಗಿರಿ ಬೆಂಬಲಿಸಿದ ಮುಖ್ಯಮಂತ್ರಿ ವಿರುದ್ಧ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ: ರಕ್ಷಾ ರಾಮಯ್ಯ ಆಕ್ರೋಶ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada