ಮೆಟ್ರೋಪಾಲಿಟನ್ ಸಿಟಿ ಬೆಂಗಳೂರು ಮಕ್ಕಳಿಗೆ ಬದುಕಲು ಯೋಗ್ಯವಿಲ್ಲವೇ ಎಂಬ ಪ್ರಶ್ನೆಯನ್ನು ಮೂಡಿಸತೊಡಗಿದೆ. ಇತ್ತೀಚೆಗೆ ನ್ಯಾಷನಲ್ ಕ್ರೈಂ ಬ್ಯೂರೋ ರೆಕಾರ್ಡ್ಸ್ (NCRB) ಹೊರ ಬಿಟ್ಟಿರುವ ಮಾಹಿತಿ ಪ್ರಕಾರ ರಾಜಧಾನಿ ಬೆಂಗಳೂರು ಹಾಗೂ ಕರ್ನಾಟಕ ಮಕ್ಕಳ ಪಾಲಿಗೆ ಸುರಕ್ಷಿತವಲ್ಲದ ರಾಜ್ಯ ಹಾಗೂ ನಗರವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ಕೆಲವೊಂದು ದತ್ತಾಂಶಗಳನ್ನು ಹೊರ ಬಿಟ್ಟಿದ್ದು, ಆಘಾತ ಮೂಡಿಸುವಂತಿದೆ.
ಮಕ್ಕಳು ನಿರ್ಗತಿಕರಾಗುವ ಪಟ್ಟಿಯಲ್ಲಿ ಬೆಂಗಳೂರು ನಂ.2
ಪೋಷಕರು ಹಲವು ಕಾರಣಗಳಿಂದ ಮಕ್ಕಳನ್ನು ಬೀದಿಗೆ ಬಿಡುತಿದ್ದಾರೆ ಎಂಬುವುದು ಹೊಸ ಸುದ್ದಿಯೇನಲ್ಲ. ಇದೇ ಕಾರಣದಿಂದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಕ್ಕಳ ಭಿಕ್ಷಾಟನೆ ಕೂಡ ಯತೇಚ್ಛವಾಗಿದೆ. ಈಗಾಗಲೇ ಭಿಕ್ಷಾಟನೆ ಮುಕ್ತ ಕರ್ನಾಟಕ ಎಂಬ ಜನಾಂದೋಲನವೇ ಶುರುವಾಗಿದ್ದು, ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಈ ನಡುವೆ ನ್ಯಾಷನಲ್ ಕ್ರೈಂ ಬ್ಯೂರೋ ರೆಕಾರ್ಡ್ಸ್ (NCRB) ನಡೆಸಿರುವ ಅಧ್ಯಯನದಲ್ಲಿ ಬೆಂಗಳೂರಿನಲ್ಲಿ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದಾರೆ ಎಂದು ಉಲ್ಲೇಖವಾಗಿದೆ.
ಇಡೀ ದೇಶದಲ್ಲೇ ರಾಷ್ಟ್ರ ರಾಜಧಾನಿ ದೆಹಲಿ ಈ ಪೈಕಿ ಮುಂಚೂಣಿಯಲ್ಲಿದ್ದು 2015 ರಿಂದ 2020ರ ಅವಧಿಯಲ್ಲಿ 221 ಮಕ್ಕಳು ಬೀದಿಗೆ ಬಿದ್ದಾರೆ ಎಂದು ಗೊತ್ತಾಗಿದೆ. ದೆಹಲಿಯ ನಂತರದಲ್ಲಿ ಬೆಂಗಳೂರಿದ್ದು, ಈ ಅವಧಿಯಲ್ಲಿ 156 ಮಕ್ಕಳು ನಿರ್ಗತಿಕರಾಗಿ ದಿಕ್ಕು ದಿಸೆ ಕಳಕೊಂಡಿದ್ದಾರೆ. ನಂತರದ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಸಮವಾಗಿ ಅಹ್ಮದಬಾದ್ ನಲ್ಲಿ 75 ಮಕ್ಕಳು ಹಾಗೂ ಇಂಧೋರ್‌ನಲ್ಲಿ 65 ಮಕ್ಕಳು ಈ ಅವಧಿಯಲ್ಲಿ ತಂದೆ ತಾಯಿಯನ್ನು ಹಲವು ಕಾರಣಗಳಿಂದ ಕಳಕೊಂಡು ಬೀದಿಗೆ ಬಿದ್ದಿದ್ದಾರೆ.
ಇನ್ನು ಇಡೀ ದೇಶದಲ್ಲಿ ಈ ವಿಚಾರದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು ದೇಶದಲ್ಲಿ ಈ ಅವಧಿಯಲ್ಲಿ 6,459 ಮಕ್ಕಳು ನಿರ್ಗತಿಕರಾಗಿ ಹೋಗಿದ್ದಾರೆ. ಮಹಾರಾಷ್ಟ್ರ 1,184 ಪ್ರಕರಣಗಳೊಂದಿಗೆ ಮೊದಲಿದ್ದು, ನಂತರ ಮಧ್ಯಪ್ರದೇಶ (1,168) ರಾಜಸ್ಥಾನ (814) ಕರ್ನಾಟಕ (771) ನಾಲ್ಕನೇ ಸ್ಥಾನದಲ್ಲಿದೆ. ಮಕ್ಕಳನ್ನು ತೊರೆಯಲು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿಭಿನ್ನ ಕಾರಣಗಳಿವೆ. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಹೆಚ್ಚಿನ ಪೋಷಕರು ಮಕ್ಕಳನ್ನು ಬೀದಿಗೆ ಎಸೆಯುತ್ತಿದ್ದಾರೆ ಎಂದು NCRB ಅಧ್ಯಯನದಲ್ಲಿ ತಿಳಿದು ಬಂದಿದೆ.
ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಕ್ಕೂ ಬೆಂಗಳೂರೇ ರಾಜಧಾನಿ
2021ರ ಡಿಸೆಂಬರ್‌ನಲ್ಲಿ ಇದೇ NCRBಯ ಮತ್ತೊಂದು ಅಧ್ಯಯನ ವರದಿಯಲ್ಲಿ ದೇಶದಲ್ಲಿನ ಎಲ್ಲಾ ಮೆಟ್ರೋಪಾಲಿಟನ್ ಸಿಟಿಗಳ ಪೈಕಿ ಅತಿ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಬೆಂಗಳೂರಲ್ಲೇ ಎಂದು ಉಲ್ಲೇಖವಿತ್ತು. ಇದು 2020ರ ದತ್ತಾಂಶವನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಬೆಂಗಳೂರಿನಲ್ಲಿ 81 ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ವರದಿಯಾಗಿತ್ತು. ಈ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಿದ್ದು, ಗಂಡು ಹಾಗೂ ಹೆಣ್ಣು ಮಕ್ಕಳ ಮೇಲೆ ಹೆಚ್ಚಾಗಿ ಲೈಂಗಿಕ ದೌರ್ಜನ್ಯವೇ ನಡೆದಿದೆ ಎಂಬುವುದು ವರದಿಯ ಒಟ್ಟು ಸಾರಾಂಶ. ಅಂದಹಾಗೆ, ಇದೇ ಸಾಲಿನಲ್ಲಿ ಇಡೀ ಕರ್ನಾಟಕದಲ್ಲಿ 144 ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
ಬಾಲ್ಯ ವಿವಾಹದಲ್ಲೂ ಕರ್ನಾಟಕವೇ ನಂ.1 2021ರ ಸೆಪ್ಟೆಂಬರ್‌ನಲ್ಲಿ ಹೊರ ಬಿದ್ದ NCRBಯ ಒಂದು ಅಧ್ಯಯನ ಪ್ರಕಾರ ಇಡೀ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹವಾಗಿರುವುದು ಕರ್ನಾಟಕದಲ್ಲೇ ಎಂದು ಗೊತ್ತಾಗಿದೆ. 2020ರ ವರ್ಷವನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದ್ದು ಈ ಸಾಲಿನಲ್ಲಿ ರಾಜ್ಯದಲ್ಲಿ 185 ಬಾಲ್ಯ ವಿವಾಹಗಳು ನಡೆದಿವೆ ಎಂದು ವರದಿ ಹೇಳಿದೆ. ಇದು 2019ಕ್ಕೆ ಹೋಲಿಸಿಕೊಂಡರೆ 66% ಹೆಚ್ಚಳವಾಗಿದೆ. 2019ರಲ್ಲಿ 111 ಬಾಲ್ಯ ವಿವಾಹದ ಪ್ರಕಣಗಳು ದಾಖಲಾಗಿದ್ದವು. ನಂತರದ ಸ್ಥಾನದಲ್ಲಿ ಅಸ್ಸಾಂ (138), ಪಶ್ಚಿಮ ಬಂಗಾಳ (98), ತಮಿಳುನಾಡು (77) ಹಾಗೂ ತೆಲಂಗಾಣ (62) ಸಮವಾಗಿ ಎರಡರಿಂದ ಐದನೇ ಸ್ಥಾನದಲ್ಲಿದೆ.
ರಾಜ್ಯದ ಬಳ್ಳಾರಿ, ಮೈಸೂರಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ, 2020ರಲ್ಲಿ ರಾಜ್ಯದಲ್ಲಿ 2,074 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಈ ಪೈಕಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿರುವುದು ಕೊರೋನಾ ಹೆಚ್ಚಳವಾದ ಸಂದರ್ಭದಲ್ಲಿ. ರಾಜ್ಯದ ಬಳ್ಳಾರಿ (218), ಮೈಸೂರು (177), ಬೆಳಗಾವಿ (131), ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ (107) ಹಾಗೂ ಬೆಂಗಳೂರಿನಲ್ಲಿ 20 ವಿವಾಹಗಳನ್ನು ತಡೆಯಲಾಗಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ. ಅಂದಹಾಗೆ ಈ ಅವಧಿಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು 108 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ.