ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸಿದ್ದು ಹೇಗೆ..? NIAಗೆ ಕ್ಲೂ ಸಿಕ್ಕಿದ್ದು ಹೇಗೆ ಅನ್ನೋದು ಭಾರೀ ಚರ್ಚೆಗೆ ಗ್ರಾಸ ಆಗಿದೆ. ಆದರೆ ಆರೋಪಿ ಬಾಂಬ್ ಸ್ಫೋಟಿಸಿದ ಬಳಿಕ ಬಟ್ಟೆ ಬದಲಾಯಿಸಿ ಹೋಗುವಾಗ ಟೋಪಿ ಎಸೆದು ಹೋಗಿದ್ದ. ಆ ಒಂದು ಟೋಪಿಯನ್ನು ಹಿಡಿದು ತನಿಖೆಗೆ ಇಳಿದಿದ್ದ NIA ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.

ಟೋಪಿ ಹಿಡಿದು ಚೆನ್ನೈನ ಮಾಲ್ ಒಂದಕ್ಕೆ ಎಂಟ್ರಿ ಕೊಟ್ಟಿದ್ದ NIA ತನಿಖಾ ತಂಡ, ಟೋಪಿ ಖರೀದಿಸಿದ್ದು ಮುಸಾವಿರ್ ಅನ್ನೋದನ್ನು ಪತ್ತೆ ಮಾಡಿತ್ತು. ಮಾಲ್‌ನಲ್ಲಿ ಸಿಕ್ಕ ದೃಶ್ಯದಿಂದ ಮುಸಾವಿರ್ ಗುರುತು ಪತ್ತೆಯಾಗಿತ್ತು. ಮಾಲ್‌ನಲ್ಲಿನ ಎಲ್ಲಾ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯ ಸಂಗ್ರಹ ಮಾಡಿ ಮಂಗಳೂರಿನ ಶಾರಿಕ್ ಜೊತೆಗಿನ ನಂಟಿನ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಂಡಿತ್ತು. ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿತ್ತು.
ಓರ್ವ ಬಸ್ ಮೂಲಕ ಸಂಚಾರ ಮಾಡಿದ್ದು, ಬಿಎಂಟಿಸಿ ಬಸ್‌ನಲ್ಲಿ ಹೋಗಿ ಅಲ್ಲಿಂದ ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕಲಬುರಗಿಗೆ ಹೋಗಿ ಆ ಬಳಿಕ ಪಶ್ಚಿಮ ಬಂಗಾಳ ಸೇರಿಕೊಂಡಿದ್ದ. ಇನ್ನೋರ್ವ ತಮಿಳುನಾಡು ಮಾರ್ಗದಿಂದ ಪಶ್ಚಿಮ ಬಂಗಾಳ ಸೇರಿಕೊಂಡಿದ್ದ. ಇಬ್ಬರೂ ಪರಸ್ಪರ ಸಂಪರ್ಕದಲ್ಲಿ ಇದ್ದರು. ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರಕ್ಕೆ ಪ್ರಯಾಣ ಮಾಡಿ ನಕಲಿ ಐಡೆಂಟಿ ಕಾರ್ಡ್ ಮೂಲಕ ವಶವಾಗಿದ್ದರು. ಗುಪ್ತಚರ ಮಾಹಿತಿ ಆಧರಿಸಿ ದಿಘಾದಲ್ಲಿ ಶಂಕಿತರ ಬಂಧನ ಮಾಡಲಾಗಿದೆ.

ಶಂಕಿತ ಉಗ್ರರ ಬಂಧನ ಬಳಿಕ ಪೂರ್ವ ಮಿಡ್ನಾಪುರ್ ಎಸ್‌ಪಿ ಸೌಮ್ಯದೀಪ್ ಭಟ್ಟಾಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಮಗೆ ಶುಕ್ರವಾರ ರಾತ್ರಿ ಶಂಕಿತರು ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಬಂದಿತ್ತು. ಕೇಂದ್ರ ಗುಪ್ತಚರ ಇಲಾಖೆ ಹಾಗು ಪಶ್ಚಿಮ ಬಂಗಾಳ ಪೊಲೀಸ್ರು ಜಂಟಿ ಕಾರ್ಯಾಚರಣೆ ನಡೆಸಿ ಮಾಹಿತಿ ಸಿಕ್ಕ ಕೇವಲ 2 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡಿದ್ದೇವೆ ಎಂದಿದ್ದಾರೆ. ಶನಿವಾರ ರಾತ್ರಿ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಲಾಗುತ್ತದೆ.






