ಪ್ರತಿಯೊಂದು ವಿಚಾರದಲ್ಲಿಯೂ ರಾಜಧಾನಿ ಬೆಂಗಳೂರು ಅಗ್ರ ಸ್ಥಾನದಲ್ಲಿರುತ್ತಿತ್ತು. ಆದರೆ ಚುನಾವಣೆ ಬಂತಂದ್ರೆ ಸಾಕು ಕೊನೆಯ ಸ್ಥಾನಕ್ಕೆ ಹೋಗಿಬಿಡುತ್ತೆ. ಇದೀಗ ಮತ್ತೆ ಆಧಾರ್ ಲಿಂಕ್ ಮಾಡುವುದರಲ್ಲಿ ಬೆಂಗಳೂರು ಕೊನೆಯ ಸ್ಥಾನಕ್ಕೆ ಕುಗ್ಗಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಐಟಿಬಿಟಿ ಸಿಟಿಯಾಗಿ ಬೆಂಗಳೂರು ಬೆಳೆಯುತ್ತಿದೆ. ಆದರೆ ಜವಾಬ್ದಾರಿ ಹೊಂದುವಲ್ಲಿ ಇಲ್ಲಿನ ಜನರು ಹಿಂದೇಟು ಹಾಕ್ತಿದಾರೆ ಎಂದೆನಿಸುತ್ತಿದೆ. ಯಾಕೆಂದರೆ ಇಲ್ಲಿನ ಜನರು ಮತ ಹಾಕಲು ಮಾತ್ರವಲ್ಲ ವೋಟರ್ ಐಡಿ ಜೊತೆ ಆಧಾರ ಲಿಂಕ್ ಮಾಡಿಸಲು ಬೆಂಗಳೂರಿಗರ ನಿರುತ್ಸಾಹ ತೋರುತ್ತಿದಾರೆ. ಅಕ್ರಮ ಮತದಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಲಿಂಕ್ ಕಾರ್ಯ ಶುರುವಾಗಿದೆ. ಸದ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹೊಸ್ತಿನಲ್ಲಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ವೋಟರ್ ಐಡಿ ಜೊತೆ ಆಧಾರ ಲಿಂಕ್ ಮಾಡುತ್ತಿದೆ. ವೋಟರ್ ಐಡಿ ಆಪ್ ಲಿಂಕ್ ಮಾಡುವಲ್ಲಿ ಬೆಂಗಳೂರಿಗರು ಕೊನೆಯ ಸ್ಥಾನದಲ್ಲಿದ್ದಾರೆ. ಅಚ್ಚರಿ ವಿಷಯವೆಂದರೆ ರಾಜಧಾನಿ ಪಕ್ಕದ ತುಮಕೂರಿನ ಸಿರಾ ವಿಧಾನಸಭಾ ಕ್ಷೇತ್ರದ ಮತದಾರರು ಶೇ. 60ರಷ್ಟು ಲಿಂಕ್ ಮಾಡಿಸಿದ್ದಾರೆ. ಆದರೆ ಬೆಂಗಳೂರಿಗರ ಲಿಂಕ್ ಮಾಡಿಸಿರುವುದು ಶೇಕಡವಾರು ಶೇ.1ರಷ್ಟು ಇಲ್ಲ.
ಅತಿ ಕಡಿಮೆ ವೋಟರ್ ಐಡಿ ಲಿಂಕ್ ಮಾಡಿಸಿರುವ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳೆಂದರೆ, ಸಿವಿ ರಾಮನ್ ನಗರ – ಶೇ. 0.39, ಮಲ್ಲೇಶ್ವರ – ಶೇ. 0.46, ಚಾಮರಾಜಪೇಟೆ – ಶೇ. 0.47, ಶಾಂತಿನಗರ – ಶೇ. 0.63, ಚಿಕ್ಕಪೇಟೆ – ಶೇ. 0.71, ಹೆಬ್ಬಾಳ – ಶೇ. 0.72 ಇದೆ. ಇನ್ನು ರಾಜ್ಯದಲ್ಲಿ ಅತಿ ಹೆಚ್ಚು ವೋಟರ್ ಐಡಿ ಲಿಂಕ್ ಆದ ಕ್ಷೇತ್ರಗಳು ಎಂದರೆ, ಶಿರಾ – ಶೇ. 60, ಯಮಕನಮರಡಿ – ಶೇ. 57, ಕಾಗವಾಡ – ಶೇ. 55, ಚಿಂಚೋಳಿ – ಶೇ. 54, ಬಾದಾಮಿ – ಶೇ.53, ಗುಬ್ಬಿ – ಶೇ. 53 ಇದೆ.

ಹೀಗೆ ಆಧಾರ್ ಲಿಂಕ್ ಮಾಡಿಕೊಳ್ಳಲು ಸಿಲಿಕಾನ್ ಸಿಟಿ ಜನರ ಹಿಂದೇಟು ಹಾಕ್ತಿದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 94 ಲಕ್ಷಕ್ಕೂ ಅಧಿಕ ಜನ ಮತದಾರರಿದ್ದಾರೆ. ಈ ಪೈಕಿ ಕೇವಲ 940 ಮಂದಿ ಮತದಾರರು ಮಾತ್ರ ಎಪಿಕ್ ಆಧಾರ್ ಲಿಂಕ್ ಮಾಡಿಸಿದ್ದಾರೆ. ಆಗಸ್ಟ್ 1 ರಿಂದ ಆಗಸ್ಟ್ 22ರವರೆಗೆ ಬೆಂಗಳೂರಿನಲ್ಲಿ ಕೇವಲ 1 % ಜನರಷ್ಟೇ ವೋಟರ್ ಐಡಿಯನ್ನ ಆಧಾರ್ ಗೆ ಲಿಂಕ್ ಮಾಡಿಸಿದ್ದಾರೆ. ರಾಜ್ಯದ ಇತರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.40-60ರಷ್ಟು ಇದ್ದರೆ ರಾಜಧಾನಿಯ 28 ವಿಧಾನಸಭಾ ಕ್ಷೇತ್ರದಲ್ಲಿ ಶೇ.1ರಷ್ಟೂ ಇಲ್ಲ. ಇದು ಬಿಬಿಎಂಪಿ, ರಾಜ್ಯ ಚುನಾವಣೆ ಆಯೋಗಕ್ಕೆ ದೊಡ್ಡ ತಲೆನೋವಾಗಿ ಮಾರ್ಪಾಟಾಗಿದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಅಭಿಯಾನ ಇನ್ನಷ್ಟು ಹೆಚ್ಚು ಮಾಡಲು ಬಿಬಿಎಂಪಿ ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರಿಗರಲ್ಲಿ ಮತದಾನ, ವೋಟಿಂಗ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಆಧಾರ್ ವೋಟರ್ ಐಡಿ ಲಿಂಕ್ ನ್ನು ರಾಜ್ಯ ಚುನಾವಣಾ ಆಯೋಗದಿಂದ ಕಡ್ಡಾಯ ಮಾಡಿಲ್ಲ. ಇದರಿಂದ ಬೆಂಗಳೂರಿಗರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ ಇದು ಸದುದ್ದೇಶಕ್ಕೆ ಎಂಬುದು ಜನರಿಗೆ ಮನವರಿಕೆಯನ್ನು ಸರ್ಕಾರ ಮಾಡಬೇಕಿದೆ.