ಉತ್ತರ ಪ್ರದೇಶದ ವಾರಾಣಸಿಯ ಐಐಟಿ- ಬಿಎಚ್‌ಯು ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ನಡೆದು ಎರಡು ತಿಂಗಳ ಬಳಿಕ ಈ ಬಂಧನ ನಡೆದಿದೆ. ಈ ಆರೋಪಿಗಳು ಬಿಜೆಪಿ ಸದಸ್ಯರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡು ಆರೋಪಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುನಾಲ್ ಪಾಂಡೆ, ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಮತ್ತು ಸಾಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಗಳಿಗೆ ಬನಾರಸ್ ಹಿಂದೂ ವಿವಿ ಜತೆ ಯಾವುದೇ ಶೈಕ್ಷಣಿಕ ನಂಟು ಇಲ್ಲ ಎಂಬುದು ತಿಳಿದುಬಂದಿದೆ.
ನವೆಂಬರ್ 2ರಂದು ವಾರಾಣಸಿಯ ಐಐಟಿ- ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಸುಕಿನಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಗಳು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಆಕೆಯ ಬಟ್ಟೆಗಳನ್ನು ಎಳೆದು ಕಿತ್ತಿದ್ದ ದುಷ್ಕರ್ಮಿಗಳು, ತಮ್ಮ ಹೇಯ ಕೃತ್ಯದ ವಿಡಿಯೋ ಕೂಡ ಮಾಡಿದ್ದರು.

ಇದನ್ನು ಅನೇಕ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕು ಮತ್ತು ಕ್ಯಾಂಪಸ್‌ನಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿತ್ತು. ಎರಡು ತಿಂಗಲ ಬಳಿಕ ಈಗ ಈ ಪ್ರಕರಣಕ್ಕೆ ಒಂದು ದಾರಿ ಸಿಕ್ಕಂತಾಗಿದ್ದು ತನಿಖೆ ಮುಂದುವರೆದಿದೆ.










