ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಶಾಂತಿ-ಸೌಹಾರ್ದತೆ ಕದಡುವ ಮತ್ತು ಅಶಾಂತಿ ಸೃಷ್ಟಿಸುವ ಷಡ್ಯಂತ್ರಗಳ ವಿರುದ್ಧ ರಾಷ್ಟ್ರವು ಎಚ್ಚರಿಕೆಯಿಂದ ಇರಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೋವಲ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಧಾರ್ಮಿಕ ಮುಖಂಡರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಏಕತೆ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲು ಭಾಗವಹಿಸಿದ್ದರು. ಸಭೆಯ ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ PFI ಯಂತಹ “ವಿಭಜಕ ಕಾರ್ಯಸೂಚಿಯನ್ನು ಅನುಸರಿಸುತ್ತಿರುವ” ಸಂಘಟನೆಗಳನ್ನು ನಿಷೇಧಿಸುವಂತೆ ನಿರ್ಣಯ ಕೈಗೊಂಡಿದ್ದಾರೆ.
“ಕೆಲವು ಶಕ್ತಿಗಳು ಭಾರತದ ಪ್ರಗತಿಯನ್ನು ಹಾಳುಮಾಡುವ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಅವರು ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಕ್ರೌರ್ಯ ಮತ್ತು ಘರ್ಷಣೆಯನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಇದು ದೇಶದ ಹೊರಗೆ ಕೂಡ ಹರಡುತ್ತಿದ್ದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ” ಎಂದು ದೋವಲ್ ಹೇಳಿದರು.
“ನಮ್ಮ ದೇಶ ಇಂದು ಪ್ರಗತಿಯತ್ತ ಸಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಯ ಕೆಲವು ಜನರು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಸೌಹಾರ್ದತೆ ಮತ್ತು ಶಾಂತಿಗಾಗಿ ಜತೆಯಾಗಿ ಕೆಲಸ ಮಾಡಬೇಕು ಹಾಗೂ ನಮ್ಮ ದೇಶವನ್ನು ಒಗ್ಗಟ್ಟಿನಿಂದ ಇರಿಸುವಂತಹ ಸಾಮಾನ್ಯ ಭಾವನೆಯನ್ನು ಹೊಂದಿರಬೇಕು” ಎಂದಿದ್ದಾರೆ.

ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಟಿವಿಯಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಅವಹೇಳಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿ ಎರಡು ತಿಂಗಳ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ಈ ಎಚ್ಚರಿಕೆ ಬಂದಿದೆ. ಈ ಒಂದು ವಿವಾದ ಇದು ಗಲ್ಫ್ ರಾಷ್ಟ್ರಗಳು ಸಹ ಖಂಡಿಸಿದ್ದವು.
ಮಾಧ್ಯಮಗಳಿಗೆ ಬಿಡುಗಡೆಯಾದ ಸಭೆಯ ಒಟ್ಟು ಎಂಟು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. “ನಮ್ಮ ನಾಗರಿಕರ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸುವ ಹಾಗೂ ವಿಭಜನೀಯ ಕಾರ್ಯಸೂಚಿ ಹೊಂದಿರುವ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುವ ಪಿಎಫ್‌ಐ ಮತ್ತು ಅಂತಹ ಇತರೆ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ನಮ್ಮ ದೇಶದ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ಸಮಯದಲ್ಲಿ, ಯಾವುದೇ ವಿಧಾನದ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಸಾಕ್ಷ್ಯದೊಂದಿಗೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯು ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನಿನ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ,” ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.