ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ಶ್ಯೂರಿಟಿ ಬಾಂಡ್ ಗೆ ಸಹಿ ಹಾಕಲು ಇಂದು ಸೋಮವಾರ ಆಸ್ಪತ್ರೆಯಿಂದ ಹೊರಬಂದು ಸೆಷನ್ಸ್ ಕೋರ್ಟ್ ಗೆ ಹಾಜರಾಗಿದ್ದಾರೆ.
ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರು ಆದ ನಂತರ ಕಳೆದ ಒಂದೂವರೆ ತಿಂಗಳ ಹಿಂದೆ ತೀವ್ರ ಬೆನ್ನು ನೋವು ಎಂದು ಬೆಂಗಳೂರಿನ ಕೆಂಗೇರಿಯಲ್ಲಿರುವ BGS ಆಸ್ಪತ್ರೆಗೆ ದಾಖಲಾಗಿದ್ದರು.ಆಸ್ಪತ್ರೆಯಲ್ಲಿಯೇ ಇಷ್ಟು ದಿನ ವಿಶ್ರಾಂತಿ ಪಡೆಯುತ್ತಿದ್ದ ದರ್ಶನ್ ಗೆ ವೈದ್ಯರು ಸರ್ಜರಿ ಮಾಡಿಲ್ಲ.
ಕಳೆದ ವಾರ ಹೈಕೋರ್ಟ್ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಎಲ್ಲರಿಗೂ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಶ್ಯೂರಿಟಿ ಬಾಂಡ್ ಗೆ ಸಹಿ ಹಾಕಲು ಕೋರ್ಟ್ ಗೆ ವೈದ್ಯರ ಸಲಹೆ ಮೇರೆಗೆ ಬಂದರು.ಈ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಇದ್ದರು.
ಇನ್ನೂ ನಿರ್ಧಾರವಾಗದ ಆಪರೇಶನ್: ತೀವ್ರ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ಗೆ ಆಪರೇಷನ್ ಮಾಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆಪರೇಷನ್ ಮಾಡಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಇನ್ನೊಮ್ಮೆ ವೈದ್ಯರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.