ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಜಾಮೀನು ಮಂಜೂರಾಗಿದೆ.
ಬಿಜೆಪಿ ವಿರುದ್ಧ ಶೇ 40ರಷ್ಟು ಭ್ರಷ್ಟಾಚಾರ ಆರೋಪ ಮಾಡಿ ಜಾಹೀರಾತು ಪ್ರಕಟಿಸಿದ್ದಕ್ಕೆ ಕಾನೂನು ಸಂಘರ್ಷ ಎದುರಿಸುತ್ತಿರುವ ಇಬ್ಬರೂ ನಾಯಕರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಜಾಹೀರಾತು ಒಂದನ್ನು ಪ್ರಕಟಿಸಿತ್ತು. ಇದರಲ್ಲಿ 40% ಕಮಿಷನ್ ಆರೋಪ ಮಾಡಿ ಕಾಂಗ್ರೆಸ್ ಜಾಹೀರಾತು ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಹೀಗಾಗಿ ಇಂದು ಕೋರ್ಟ್ ಗೆ ಸಿಎಂ ಹಾಗೂ ಡಿಸಿಎಂ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೇಶವ್ ಪ್ರಸಾದ್ ದೂರು ದಾಖಲಿಸಿದ್ದರು.
ಇಬ್ಬರಿಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು. ಕೋರ್ಟ್ ಗೆ ಬಂದಿದ್ದ ಸಿಎಂ, ಡಿಸಿಎಂ ಅವರನ್ನು ಸರ್ಕಾರಿ ಅಭಿಯೋಜಕರ ಕೊಠಡಿಯಲ್ಲಿ ಕುಳಿತುಕೊಳ್ಳಲು ಸೂಚಿಸಲಾಯಿತು. ಆದರೆ, ಇದಕ್ಕೆ ಇಬ್ಬರು ಬೇಡ ಎಂದು ಸಾಮಾನ್ಯರಂತೆ ನ್ಯಾಯಾಲಯದ ಹೊರಗಡೆ ಸಿಎಂ ಮತ್ತು ಡಿಸಿಎಂ ಕುಳಿತಿದ್ದರು. ನಾಯಕರ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಹಮ್ಮದ್ ಹಾಜರಿದ್ದರು. ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಹಾಜರಿದ್ದರು.