
ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಯಾವುದೇ ಕ್ಷಣದಲ್ಲಾದರೂ ಬಂಧನವಾಗಲಿದೆ. ಹೀಗಾಗಿ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ5 ಆರೋಪಿಯಾಗಿರುವ ಭೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ. ಹೈಕೋರ್ಟ್ ನಲ್ಲಿ ಜಾಮೀನು ರದ್ದಾದ ಬೆನ್ನಲ್ಲೆ ಸಿಐಡಿ ಅಧಿಕಾರಿಗಳು ಬೈರತಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಕೊಲೆ ಪ್ರಕರಣ ಸಂಬಂಧ ಇದುವರೆಗೂ ಸಿಐಡಿಯಿಂದ ಬಸವರಾಜ್ ವಿಚಾರಣೆ ಆಗಿಲ್ಲ.

ಇನ್ನೂ ಆರೋಪಿಗಳ ಜೊತೆ ನಿಕಟ ಸಂಪರ್ಕದಲ್ಲಿ ಇರುವ ಬಗ್ಗೆ ಸಾಕ್ಷಿಗಳು ಪತ್ತೆಯಾಗಿವೆ. ಇಬ್ಬರು ಅಂದ್ರೆ ಎ1 ಜಗ್ಗ ಮತ್ತು ಭೈರತಿ ಒಂದೇ ಲೋಕೆಷನ್‌ನಲ್ಲಿ ಇರುವುದು ಅಧಿಕಾರಿಗಳಿಗೆ ಪತ್ತೆಯಾಗಿದೆ. ಅಲ್ಲದೆ ಎ20 ಮಲಯಾಳಿ ಅಜೀತ್ ಜೊತೆ ಕೂಡ ಪರ್ಸನಲ್ ಸೆಕ್ರೆಟರಿ ಮೊಬೈಲ್ ಮೂಲಕ ಮಾತನಾಡಿದ್ದಾರೆ. ಹೀಗಾಗಿ ಆರೋಪಿಗೆ ಯಾವುದೇ ರಕ್ಷಣೆ ನೀಡಬಾರದು. ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯವಿದೆ. ಎಲ್ಲಾ ಆರೋಪಿಗಳು ಒಳಸಂಚು ಮಾಡಿದ್ದಾರೆ. ಕೇವಲ ಒಂದು ಪೋಟೊ ಆಧರಿಸಿ ತನಿಖೆ ನಡೆಸಿಲ್ಲ, ಇನ್ನು ಹಲವು ಅಂಶಗಳನ್ನ ಇಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಲಾಗಿದೆ.

ಈ ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ ಆಗುವ ಮೊದಲು ಭಾರತಿನಗರ ಪೊಲೀಸರ ಎದುರು ವಿಚಾರಣೆ ಎದುರಿಸಿದ್ದಾರೆ. ಅಲ್ಲದೆ ಪ್ರಕರಣದ ತನಿಖೆ ಕೂಡ ನಡೆದಿದ್ದು, ಸದ್ಯ ಸಿಐಡಿಯಲ್ಲಿಈ ಕೇಸ್ ತನಿಖೆ ಮುಂದುವರೆದಿದೆ. ಆದರೆ ರಿಮ್ಯಾಂಡ್, ಹಾಗೂ ಕೋಕಾ ಕಾಯ್ದೆ ಅಳವಡಿಸಿದಾಗಲೂ ಕೂಡ ಭೈರತಿ ಮೇಲೆ ಯಾವುದೇ ಆರೋಪ ಬಂದಿಲ್ಲ. ಹೀಗಿದ್ದಾಗಲೂ ಸಹ ಕಸ್ಟೋಡಿಯಲ್ ವಿಚಾರಣೆಗೆ ಮನವಿ ಮಾಡುತ್ತಿರುವುದು ಸರಿಯಲ್ಲ. ಹೀಗಾಗಿ ಭೈರತಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿರುವ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಕೋರ್ಟ್ ಆದೇಶದ ಬೆನ್ನಲ್ಲೇ ಬಿಜೆಪಿ ಶಾಸಕನಿಗೆ ಬಂಧನದ ಭೀತಿ ಶುರುವಾಗಿದ್ದು, ಯಾವುದೇ ಕ್ಷಣದಲ್ಲಿಯೂ ಭೈರತಿ ಬಸವರಾಜ್ ಬಂಧನವಾಗುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಇತರ ಹೊರರಾಜ್ಯಗಳಲ್ಲೂ ಸಿಐಡಿ ಅಧಿಕಾರಿಗಳ 3 ತಂಡಗಳು ಶಾಸಕ ಭೈರತಿ ಬಸವರಾಜ್ ಹುಡುಕಾಟದಲ್ಲಿ ಫುಲ್ ಆಕ್ಟಿವ್ ಆಗಿವೆ. ನಿರೀಕ್ಷಣಾ ಜಾಮೀನು ರದ್ದಾದ ಬೆನ್ನಲ್ಲೆ ಭೈರತಿ ಎಸ್ಕೇಪ್ ಆಗಿದ್ದರು.


