ಶ್ರಮಕ್ಕೆ ತಕ್ಕ ಫಲ,
ದುಡಿಮೆಗೆ ತಕ್ಕ ಸಂಬಳ ಇಲ್ಲದ ಸಮಾಜದಲ್ಲಿ ಗ್ಯಾರಂಟಿಗಳು ದುಡಿಯುವ ವರ್ಗಗಳ ಪ್ರಾಣವಾಯು: ಕೆ.ವಿ.ಪ್ರಭಾಕರ್ ಕಾರ್ಪೋರೇಟ್ ಗಳಿಗೆ ಫ್ರೀಬಿ ಕೊಟ್ಟರೆ ಡೆವಲಪ್ಮೆಂಟು, ಶ್ರಮಿಕರಿಗೆ ಕೊಟ್ಟರೆ ಆರ್ಥಿಕತೆಗೆ ನಷ್ಟವಾ: ಕೆ.ವಿ.ಪಿ ಪ್ರಶ್ನೆ ಸಾಮಾಜಿಕ ನ್ಯಾಯ, ಅಂಬೇಡ್ಕರ್ ಆಶಯ, ಬಸವಣ್ಣನವರ ಮಾರ್ಗ ಸಿದ್ದರಾಮಯ್ಯ ಅವರ ಭಾಗ್ಯಗಳ ಹಿಂದೆ ಕೆಲಸ ಮಾಡಿದೆ: ಕೆವಿಪಿ ವಿಶ್ಲೇಷಣೆ*

ಪತ್ರಿಕಾ ಭವನದಲ್ಲಿ “ಬಡವರ ಭಾಗ್ಯವಿಧಾತ ಸಿದ್ದರಾಮಯ್ಯ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಕಾರ್ಪೋರೇಟ್ ಗಳಿಗೆ ಫ್ರೀಬಿ ಕೊಟ್ಟರೆ ಡೆವಲಪ್ಮೆಂಟು ಅಂತಲೂ, ಶ್ರಮಿಕರಿಗೆ ಕೊಟ್ಟರೆ ಆರ್ಥಿಕತೆಗೆ ನಷ್ಟವೆಂದು ಹೇಳುವವರಿಗೆ ಗ್ರಹಿಕೆ ಮತ್ತು ದೃಷ್ಟಿದೋಷ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಜಾರಿ ಮಾಡಿದ ಗ್ಯಾರಂಟಿಗಳು ಕನ್ನಡ ನೆಲದ ಬಡವರು ಮತ್ತು ಮಧ್ಯಮ ವರ್ಗಗಳ ಪಾಲಿನ ಪ್ರಾಣವಾಯು ಆಗಿವೆ. ಹಲವಾರು ಆರ್ಥಿಕ ಸಮೀಕ್ಷೆಗಳು ಈ ಮಾತನ್ನು ಖಚಿತ ಪಡಿಸಿವೆ ಎಂದರು.
ಸಾಮಾಜಿಕ ನ್ಯಾಯದ ಬದ್ಧತೆ, ಅಂಬೇಡ್ಕರ್ ಆಶಯ, ಬಸವಣ್ಣನವರ ನ ಮಾರ್ಗ ಮತ್ತು ರಾಜಕೀಯ ಹಿತಾಸಕ್ತಿಗಳು ಸಿದ್ದರಾಮಯ್ಯ ಅವರ ಭಾಗ್ಯಗಳ ಹಿಂದೆ ಕೆಲಸ ಮಾಡಿವೆ ಎಂದು ಕೆವಿಪಿ ವಿಶ್ಲೇಷಣೆ ಮಾಡಿದರು.

ಗ್ಯಾರಂಟಿಗಳ ಮಹತ್ವ ಏನು ಎಂದು ಅರ್ಥವಾಗಬೇಕಾದರೆ, ಇವು ಜಾರಿಯಾದ ಸಂದರ್ಭವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನೋಟ್ ಬ್ಯಾನ್ ಕಾರಣದಿಂದ ಗಾರ್ಮೆಂಟ್ಸ್ ಗಳು, ಸಣ್ಣ ಪುಟ್ಟ ಉದ್ಯಮಗಳೆಲ್ಲಾ ಉಸಿರಾಡಲಾಗದೆ ಬಂದ್ ಆಗಿದ್ದವು.
ಈ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಂತೆ ಕೋವಿಡ್ ಬಂತು. ದುಡಿಯುವ ವರ್ಗಗಳನ್ನು ಇದು ಬಾಣಲಿಯಿಂದ ಬೆಂಕಿಗೆ ಬಿಸಾಡಿತು. ಹೀಗೆ ನಿರಂತರ ಐದು ವರ್ಷಗಳ ಕಾಲ ಬಡವರ ಆರ್ಥಿಕ ಸ್ಥಿತಿ ಉಸಿರುಗಟ್ಟಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಡವರ ಪಾಲಿಗೆ ಪ್ರಾಣವಾಯು ಆಯ್ತು ಎಂದು ವಿವರಿಸಿದರು.
ನೋಟ್ ಬ್ಯಾನ್ ಮತ್ತು ಕೋವಿಡ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸುಮಾರು 12000 ಸಾವಿರ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಕಾರ್ಮಿಕರು ಕೆಲಸ ಕಳೆದುಕೊಂಡು ವಿಪರೀತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನ್ನೂ ಮರೆಯಬಾರದು ಎಂದರು.
ಕಾರ್ಪೋರೇಟ್ ಕಣ್ಣುಗಳಿಂದ, ಹೊಟ್ಟೆ ತುಂಬಿದ ಕಣ್ಣುಗಳಿಂದ ಗ್ಯಾರಂಟಿಗಳನ್ನು ನೋಡಿದಾಗ ಅದು ಕಾಣುವ ರೀತಿಯೇ ಬೇರೆ. ಹಸಿದ ಸಮಾಜದ ಕಣ್ಣುಗಳಿಂದ ನೋಡಿದಾಗ ಅಲ್ಲಿ “ಬಡವರ ಭಾಗ್ಯವಿಧಾತ” ಕಾಣಿಸುತ್ತಾನೆ ಎಂದರು.

ಬಡ ಕುಟುಂಬದಿಂದ ಬಂದ ಪತ್ರಕರ್ತ ಯತೀಶ್ ಬಾಬು ಅವರು ಹಸಿದ ಸಮಾಜದ ಕಣ್ಣುಗಳಿಂದ ಗ್ಯಾರಂಟಿಗಳ ಮೌಲ್ಯವನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಆಲೆಮನೆಯಲ್ಲಿ ಕೆಲಸ ಮಾಡುತ್ತಾ, ವೆಲ್ಡರ್ ಆಗಿ, ಸೆಕ್ಯುರಿಟಿ ಗಾರ್ಡ್ ಆಗಿ ವಿದ್ಯಾಭ್ಯಾಸ ಮಾಡಿ ಉಪನ್ಯಾಸಕ, ಪತ್ರಕರ್ತನಾದ ಯತೀಶ್ ಬಾಬುಗೆ ಬೆವರಿನ ಬೆಲೆ ಗೊತ್ತಿದೆ. ಅದಕ್ಕೇ ಈ ಗ್ಯಾರಂಟಿಗಳ ಹಿಂದೆ ಇರುವ ಬೆವರಿನ ಮೌಲ್ಯವನ್ನು ಕಾಣಲು ಸಾಧ್ಯವಾಗಿದೆ ಎಂದರು.
ಅರ್ಥಶಾಸ್ತ್ರ ಉಪನ್ಯಾಸಕರೂ ಆಗಿರುವ ಯತೀಶ್ ಬಾಬು ಕೇವಲ ಶಾಸ್ತ್ರಕ್ಕಾಗಿ ಆರ್ಥಿಕತೆ ಅಧ್ಯಯನ ಮಾಡಲಿಲ್ಲ.
ಬಡವರ ಮತ್ತು ಮಧ್ಯಮ ವರ್ಗದವರ ಆರ್ಥಿಕತೆಗೆ ಈ ಗ್ಯಾರಂಟಿಗಳು ಹೇಗೆ ಮತ್ತು ಎಷ್ಟು ಚೈತನ್ಯ ನೀಡಿದವು ಎನ್ನುವುದನ್ನು ಗ್ರಹಿಸಿ, ದಾಖಲಿಸಿದ್ದಾರೆ.
ಸರ್ಕಾರದ ನಿರ್ಧಾರಗಳನ್ನು, ಯೋಜನೆಗಳನ್ನು ಈ ರೀತಿ ವಿಮರ್ಶೆ ಮಾಡುವಂತಹ ಕೆಲಸಗಳು ಹೆಚ್ಚೆಚ್ಚು ಆಗಬೇಕು. ಅದರಿಂದ ಸರ್ಕಾರಗಳು ಯಾವುದೇ ಯೋಜನೆಗಳನ್ನು ರೂಪಿಸುವಾಗ ಹೆಚ್ಚು ಜಾಗರೂಕರಾಗವಾಗಿರುತ್ತವೆ. ಜನ ಕೂಡ ಯೋಜನೆಯ ಎಲ್ಲಾ ಆಯಾಮಗಳನ್ನು ತಿಳಿಯಲು ಅನುಕೂಲ ಆಗುತ್ತದೆ.

ಯತೀಶ್ ಬಾಬು ಅವರು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ವಿಮರ್ಶೆ ಮಾಡುವಾಗ ಹಲವು ಆರ್ಥಿಕ ತಜ್ಞರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಅಂದರೆ ತಾನೊಬ್ಬ ಪತ್ರಕರ್ತ, ಬರಹಗಾರನಾಗಿ ಈ ಯೋಜನೆಗಳನ್ನು ನೋಡುವುದರ ಜೊತೆಗೆ ಆರ್ಥಿಕ ತಜ್ಞರ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಆ ಮೂಲಕ ಈ ಪುಸ್ತಕಕ್ಕೆ ವಿಶಿಷ್ಟ ಮೌಲ್ಯ ಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು.
ಶೇ3 ರಷ್ಟಿರುವ ಕಾರ್ಪೋರೇಟ್ ಗಳಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದನ್ನು ಅಭಿವೃದ್ಧಿಯ ಮಾದರಿ ಎನ್ನುವುದು ಮಾಧ್ಯಮಗಳ ದೃಷ್ಟಿ ದೋಷ ತಾನೇ?
ನಾವು ಏಕಲವ್ಯನ ಬೆರಳು ಕತ್ತರಿಸುವ ಆರ್ಥಿಕತೆ ಪರವಾಗಿ ಇರಬೇಕೋ? ಏಕಲವ್ಯನ ಬೊಗಸೆ ತುಂಬ ಅಕ್ಕಿ ನೀಡುವ ಆರ್ಥಿಕತೆ ಪರವಾಗಿ ಇರಬೇಕೋ ಎನ್ನುವುದನ್ನು ಯತೀಶ್ ಬಾಬು ಅವರು ತಮ್ಮ “ಭಾರತ ಭಾಗ್ಯವಿಧಾತ” ಪುಸ್ತಕದಲ್ಲಿ ಚರ್ಚಿಸಿದ್ದಾರೆ ಎಂದರು.

ಬಿಟ್ಟಿಭಾಗ್ಯ ಎಂದು ರಾಜ್ಯದ ಆರು ಕೋಟಿ ಫಲಾನುಭವಿಗಳನ್ನು ಅವಮಾನಿಸುತ್ತಿರುವವರ ಗೊಡ್ಡುತನಕ್ಕೆ “ಭಾರತ ಭಾಗ್ಯವಿಧಾತ” ಉತ್ತರ ನೀಡಿದೆ ಎಂದು ವಿವರಿಸಿದರು.
ಹೀಗಾಗಿ ಈ ಪುಸ್ತಕ ಆರೋಗ್ಯಕರವಾದ ಕಣ್ಣುಗಳಿಗೆ ಕಂಡಿರುವ ಬೆವರಿನ ಮೌಲ್ಯವನ್ನು ಹೇಳುತ್ತಿದೆ. ಈ ಮೂಲಕ ಸರ್ಕಾರಿ ಕಾರ್ಯಕ್ರಮಗಳನ್ನು ಜನರ ಪಕ್ಷಪಾತಿಯಾಗಿ ನಿಂತು ಹೇಗೆ ವಿಶ್ಲೇಷಣೆ ಮಾಡಬೇಕು ಎನ್ನುವುದಕ್ಕೆ ಒಂದು ಮಾದರಿಯನ್ನು ಹಾಕಿಕೊಟ್ಟಿದೆ ಎಂದರು.

ಶಾಸಕ ರವಿ ಗಣಿಗ, ಹಿರಿಯ ಪತ್ರಕರ್ತ ಧರಣೇಶ್ ಬೂಕನಕೆರೆ, ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.