ಬನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶ್ರೀರಾಮುಲು ಎಂಬ ಐದು ವರ್ಷದ ಗಂಡು ಮಾರಿಯಾನೆ ಉದ್ಯಾನ ಸಮೀಪದ ಉದುಗೆ ಬಂಡೆಯಿಂದ ಜಾರಿ ಕೆಳಗೆ ಬಿದ್ದು ಮೃತಪಟ್ಟಿದೆ.
ಇತ್ತಿಚಿಗಷ್ಟೇ ಯದುನಂದನ ಎಂಬ ಹೆಸರಿನ ಜಿರಾಫೆ ಆಹಾರ ತಿನನ್ನಲು ತನ್ನ ಕುತ್ತಿಗೆಯನ್ನು ಹೊರಚಾಚಿದಾಗ ಉದ್ಯಾನವನ ಆವರಣದ ಗೋಡೆಯ ಆಂಗಲ್‌ಗೆ ಸಿಲುಕಿ ಸಾವನಪ್ಪಿತ್ತು. ಇದೀಗ, ಈ ಘಟನೆ ಮಾಸುವ ಮುನ್ನವೇ ಮರಿಯಾನೆ ಸಾವನಪ್ಪಿರುವುದು ಪ್ರಾಣಿಪ್ರಿಯರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಈ ಮರಿಯಾನೆ ಕಳೆದ ಭಾನುವಾರ ಆನೆಗಳ ಹಿಂಡಿನಿಂದ ಕಣ್ಮರೆಯಾಗಿತ್ತು. ರಾತ್ರಿ ವೇಳೆ ಕಾಡಿಗೆ ಹೋಗುವ ಉದ್ಯಾನದ ಆನೆಗಳ ಹಿಂಡು ಮರಳಿ ಬೆಳ್ಳಗೆ ಉದ್ಯಾನದ ಕಡೆ ತಿರುಗಿ ಬರುತ್ತಿದ್ದವು. ಭಾನುವಾರ ಹೋದ ಆನೆ ಶ್ರೀರಾಮುಲು ಸೋಮವಾರ ಉದ್ಯಾನದ ಅನೆಗಳ ಹಿಂಡಿನ ಜೊತೆ ಕಾಣಿಸಲಿಲ್ಲ. ಕೆಲವೊಮ್ಮೆ ಆನೆಗಳು ಕಾಡಾನೆಗಳ ಜೊತೆ ಒಂದೆರಡು ದಿನ ಇದ್ದು ವಾಪಸ್ ಉದ್ಯಾನದ ಆನೆಗಳ ಜೊತೆ ಕೂಡಿಕೊಳ್ಳತ್ತಿತ್ತು ಇದು ಸಹ ಹಾಗೆಯೇ ಹಾಗಿರಬಹುದು ಎಂದು ಉದ್ಯಾನದ ಸಿಬ್ಬಂದಿ ಭಾವಿಸಿದರು.
ಶ್ರೀರಾಮುಲು ಹಿಂಡಿನಿಂದ ಕಾಣೆಯಾಗಿ ವಾಪಸ್ ಕೂಡಿಕೊಳ್ಳದಿರುವುದು ಉದ್ಯಾನದ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಸಿಬ್ಬಂದಿಯು ಉದ್ಯಾನಕ್ಕೆ ಹೊಂದಿಕೊಂಡಿದ್ದ ಕಾಡಿನಲ್ಲಿ ಶೋಧ ನಡೆಸಿದಾಗ ಆನೆ ಪತ್ತೆಯಾಗಿರಲಿಲ್ಲ. ಬುಧವಾರ ಬೆಳ್ಳಗೆ ಸಿಬ್ಬಂದಿ ಹುಡುಕಾಟದಲ್ಲಿ ತೊಡಗಿದ್ದ ಸಮಯದಲ್ಲಿ ಉದ್ಯಾನದ ಸಮೀಪವಿರುವ ಉದುಗೆ ಬಂಡೆಯಿಂದ ಕೆಳಗೆ ಉರುಳಿ ಬಿದ್ದು ಕೊಳೆತ ಸ್ಥಿತಿಯಲ್ಲಿದ್ದ ಆನೆಯ ಮೃತದೇಹ ಪತ್ತೆಯಾಗಿದೆ. ಎತ್ತರದಿಂದ ಬಿದ್ದ ರಭಸಕ್ಕೆ ಅದರ ದಂತ ಮುರಿದು ಹೋಗಿದೆ.
ಕಳೆದ ಒಂದು ವಾರದಿಂದ ಮಳೆ ಸತತವಾಗಿ ಸುರಿಯುತ್ತಿರುವ ಕಾರಣ ರಾತ್ರಿ ವೇಳೆ ಹುಲ್ಲು ಮೇಯಲು ಹೋದಾಗ ಆನೆ ಬಂಡೆಯಿಂದ ಜಾರಿ ಕೆಳಗೆ ಬಿದ್ದಿರಬಹುದು ಎಂದು ಉದ್ಯಾನದ ಸಿಬ್ಬಂದಿ ಶಂಕಿಸಿದ್ದಾರೆ. ಆನೆ ಬಿದ್ದಿರುವ ಸ್ಥಳವು ಗುಡ್ಡದಿಂದ ಸುಮಾರು 100 ಮೀಟರ್‌ಗೂ ಹೆಚ್ಚು ಆಳದಲ್ಲಿದೆ. ಆನೆ ಬಿದ್ದಿರುವ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಉದ್ಯಾನವನದ ಸಿಬ್ಬಂದಿ ಇತರೆ ಆನೆಗಳ ಸಹಾಯದೊಂದಿಗೆ ಆನೆಯ ಮೃತದೇಹವನ್ನ ಮೇಳಕ್ಕೆತ್ತಿದ್ದರು.
2016ರ ನವೆಂಬರ್ 6ರಂದು ಈ ಮರಿಯಾನೆಯು ನಿಸರ್ಗ ಎಂಬ ಹೆಣ್ಣು ಅನಗೆ ಜನಿಸಿತ್ತು. ಆನೆಗೆ ಶ್ರೀರಾಮುಲು ಎಂದು ಉದ್ಯಾನವನದ ಸಿಬ್ಬಂದಿ ನಾಮಕರಣ ಮಾಡಿದ್ದರು. ಈ ಮರಿಯಾನೆಯನ್ನು ಕೆಲವು ದಿನಗಳ ಹಿಂದೆ ಜರ್ನಾಧನ ರೆಡ್ಡಿ ಶ್ರೀರಾಮುಲುನನ್ನು ದತ್ತು ಪಡೆದಿದ್ದರು.