ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ವರಿಷ್ಠರು, ಪಕ್ಷದ ಬಣ, ಜಾತಿ, ಪ್ರದೇಶ ಮುಂತಾದ ವಿಷಯಗಳನ್ನು ಪರಿಶೀಲಿಸಿ ಅಳೆದು ತೂಗಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿ ಅವರ ಪುತ್ರ, ಸಾದರ ಲಿಂಗಾಯತ ಸಮುದಾಯದ ಅನುಭವಿ ನಾಯಕನನ್ನು ಆಯ್ಕೆ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದ ಒಂದು ಡಜನ್ಗೂ ಹೆಚ್ಚು ನಾಯಕರ ಹೆಸರುಗಳು ಚರ್ಚೆಯಲ್ಲಿದ್ದವು. ಆ ಪೈಕಿ ಕೊನೆಗೂ ಬೊಮ್ಮಾಯಿ ಹೆಸರು ಅಂತಿಮಗೊಂಡಿದೆ ಎಂಬುದು ಗೊತ್ತಿರುವ ಸಂಗತಿ.
ಆದರೆ, ಬೊಮ್ಮಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದೇ ಸ್ವತಃ ಯಡಿಯೂರಪ್ಪ ಮತ್ತು ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವುದೇ ಆದರೆ ಮಾತ್ರ ತಾವು ರಾಜೀನಾಮೆ ನೀಡಿ ಪಕ್ಷದ ಕೆಲಸ ಮಾಡುವುದಾಗಿ ಬಿಎಸ್ ವೈ ವರಿಷ್ಠರಿಗೆ ಷರತ್ತು ಹಾಕಿದ್ದರು. ಆ ಕುರಿತು ವರಿಷ್ಠರ ಒಪ್ಪಿಗೆಯ ಸಂದೇಶವನ್ನು ಕುರಿತೇ ಅವರು ಜು.25ರ ಸಂದೇಶದ ಬಗ್ಗೆ ಪದೇಪದೆ ಪ್ರಸ್ತಾಪಿಸುತ್ತಿದ್ದರು ಎಂಬುದು ತೆರೆಮರೆಯ ಸಂಗತಿ.

ಇದೀಗ ತಮ್ಮ ನಿರೀಕ್ಷೆಗೆ ತಕ್ಕಂತೆ ಬಿಜೆಪಿ ದೆಹಲಿ ವರಿಷ್ಠರನ್ನು ಮಣಿಸುವಲ್ಲಿ ಯಡಿಯೂರಪ್ಪ ಪಟ್ಟು ಯಶಸ್ವಿಯಾಗಿದೆ ಎಂಬುದಕ್ಕೆ ಬೊಮ್ಮಾಯಿ ನೇಮಕ ಮಾತ್ರವಲ್ಲ, ಸಂಭಾವ್ಯ ಉಪ ಮುಖ್ಯಮಂತ್ರಿಗಳ ಪಟ್ಟಿಯಲ್ಲೂ ನಿದರ್ಶನಗಳು ಸಿಕ್ಕಿವೆ.
ಆ ಮೂಲಕ ತಮ್ಮ ವಿರೋಧಿ ಬಂಡಾಯಗಾರರಿಗೆ, ತಾವು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಸಿಕೊಳ್ಳುವ ಮಂದಿಯಲ್ಲ, ಜಗಜಟ್ಟಿ ಎಂಬ ಸಂದೇಶ ರವಾನಿಸಿದ್ದಾರೆ. ಹಾಗೆ ನೋಡಿದರೆ ಯಡಿಯೂರಪ್ಪ ಅವರ ಈ ವರಸೆ ಇದೇ ಮೊದಲೇನಲ್ಲ. 2010-11ರಲ್ಲಿ ಇದೇ ರೀತಿಯ ಭ್ರಷ್ಟಾಚಾರ ಆರೋಪ, ಸ್ವಪಕ್ಷೀಯರ ಬಂಡಾಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೂಡ ಪಕ್ಷದ ಹೈಕಮಾಂಡಿಗೆ ಷರತ್ತು ಹಾಕಿ ತಮ್ಮ ನಂಬಿಕಸ್ತ ಡಿ ವಿ ಸದಾನಂದಗೌಡರನ್ನು ಸಿಎಂ ಕುರ್ಚಿಯಲ್ಲಿ ಕೂರಿಸುವಲ್ಲಿ ಬಿಎಸ್ ವೈ ಯಶಸ್ವಿಯಾಗಿದ್ದರು. ಇದೀಗ ಅದೇ ಇತಿಹಾಸವನ್ನು ಮತ್ತೆ ಮರು ನಿರ್ಮಾಣ ಮಾಡಿದ್ದಾರೆ. ಆ ಮೂಲಕ ಬಿಜೆಪಿಯ ಹೈಕಮಾಂಡ್ ದೇಶದ ಇತರೆ ರಾಜ್ಯಗಳ ಬಿಜೆಪಿ ಘಟಕಗಳಿಗೆ ಮತ್ತು ಪ್ರತಿಪಕ್ಷಗಳಿಗೆ ಎಷ್ಟೇ ಬಲಿಷ್ಠವೆನಿಸಿದರೂ, ತಮ್ಮ ಪಾಲಿಗೆ ಅದು ತಾವು ಹಾಕಿದ ಗೆರೆ ದಾಟಲಾಗದ ವ್ಯವಸ್ಥೆ ಎಂಬುದನ್ನೂ ಮತ್ತೊಮ್ಮೆ ಸಾಬೀತುಮಾಡಿದ್ದಾರೆ!
Also Read: ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!
ಹಾಗಾಗಿ, ತಾವು ಎಷ್ಟೇ ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಮತ್ತೆ ಪರೋಕ್ಷವಾಗಿ ಯಡಿಯೂರಪ್ಪ ಆಡಳಿತವೇ ಮುಂದುವರಿದಿರುವುದರಿಂದ ಅವರ ವಿರುದ್ಧ ಬಹಿರಂಗ ಸವಾಲು ಹಾಕಿ, ಷಢ್ಯಂತ್ರ ಹೆಣೆದು ದೆಹಲಿಗೆ ದೂರು ಹೊತ್ಯೊಯ್ದ ವಿರೋಧಿ ಬಣದ ನಾಯಕರ ಮುಂದಿನ ಹೆಜ್ಜೆ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.
ಇನ್ನೇನು ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿಯೇಬಿಡುತ್ತೇವೆ. ಯಡಿಯೂರಪ್ಪ ಇನ್ನು ರಾಜ್ಯ ರಾಜಕಾರಣದ ಮುಗಿದ ಅಧ್ಯಾಯ ಎಂದುಕೊಂಡಿದ್ದ ಆ ವಿರೋಧಿ ಬಣದ ವಿರುದ್ಧ ಸ್ವತಃ ಯಡಿಯೂರಪ್ಪ ಇನ್ನು ಹೂಡುವ ಬಾಣಗಳು ಕೂಡ ಕದನಕುತೂಹಲ ಮೂಡಿಸಿವೆ.
ತಮ್ಮನ್ನು ಬದಿಗೊತ್ತಿ ಕರ್ನಾಟಕದಲ್ಲಿ ರಾಜಕಾರಣ ಮಾಡಲಾಗದು ಎಂಬ ಸಂದೇಶವನ್ನು, ತಮ್ಮ ಬಲಗೈ ಬಂಟ ಬೊಮ್ಮಾಯಿ ಆಯ್ಕೆಯ ಮೂಲಕ ಬಿಎಸ್ ವೈ ಈಗಾಗಲೇ ರವಾನಿಸಿದ್ದಾರೆ.
ತಮ್ಮ ಮೂಗಿನ ನೇರಕ್ಕೆ ಆಡಳಿತ ಇರುವಂತೆ ತಂತ್ರ ಹೂಡಿರುವ ಯಡಿಯೂರಪ್ಪ ಮುಂದಿನ ಒಂದು ಮುಕ್ಕಾಲು ವರ್ಷದಲ್ಲಿ ರಾಜ್ಯರಾಜಕಾರಣದಲ್ಲಿ ಆಡುವ ಆಟಗಳು ಕುತೂಹಲ ಮೂಡಿಸಿವೆ.
ಏಕೆಂದರೆ ಪರೋಕ್ಷವಾಗಿ ತಮ್ಮದೇ ಕೈಯಲ್ಲಿ ಅಧಿಕಾರವನ್ನು ಹಿಡಿದಿಟ್ಟುಕೊಂಡಿರುವ ಯಡಿಯೂರಪ್ಪ ತಮ್ಮ ಅಧಿಕಾರವನ್ನು ಕಿತ್ತುಕೊಳ್ಳಲು ಇಷ್ಟು ದಿನ ನಿರಂತರವಾಗಿ ಬಹಿರಂಗ ಬಂಡಾಯ ಸಾರಿ ಷಡ್ಯಂತ್ರಗಳನ್ನು ಹೂಡಿದ ಬಿಜೆಪಿಯ ತಮ್ಮ ವಿರೋಧಿ ಬಣದ ನಾಯಕರನ್ನು ಈ ಮುಂದಿನ ಅವಧಿಯಲ್ಲಿ ಹೇಗೆ ಹಣಿಯುತ್ತಾರೆ ಎಂಬುದು ಕಾದುನೋಡಬೇಕಿದೆ.
ಏಕೆಂದರೆ ಯಡಿಯೂರಪ್ಪ ವೈಯಕ್ತಿಕವಾಗಿ ತೀರಾ ನೇರಾನೇರ ಹಗೆತನದ, ದ್ವೇಷದ ರಾಜಕಾರಣ ಮಾಡುವವರಲ್ಲ. ಆದರೆ ತಮ್ಮ ವಿರೋಧಿಗಳನ್ನು ಹಣಿಯಲು ಅವರು ಹೂಡುವ ತಂತ್ರಗಳು ಸದಾ ನೀರೊಳಗಿನ ಕತ್ತಿಯಂತೆ ನಾಜೂಕು. ಆ ಹಿನ್ನೆಲೆಯಲ್ಲಿ ನೋಡಿದರೆ, ಈಗಾಗಲೇ ಅವರು ಉಪಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಸ್ಪಷ್ಟ ಸೂಚನೆಯನ್ನು ಕೊಟ್ಟಾಗಿದೆ.
ತಮ್ಮ ಆಪ್ತ ಗೋವಿಂದ ಕಾರಜೋಳ ದಲಿತ ಸಮುದಾಯದಿಂದ, ಮತ್ತೊಬ್ಬ ಆಪ್ತ ಆರ್ ಅಶೋಕ್ ಒಕ್ಕಲಿಗ ಸಮುದಾಯದಿಂದ ಮತ್ತು ನಾಯಕ ಸಮುದಾಯದ ದೊಡ್ಡ ಮತಬ್ಯಾಂಕ್ ಕಾರಣಕ್ಕೆ ಶ್ರೀರಾಮುಲು ಅವರನ್ನ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದಾರೆ. ಬಹುಶಃ ಆ ಆಯ್ಕೆಯೇ ಅಂತಿಮವಾಗಬಹುದು.
ತಮ್ಮ ವಿರುದ್ಧ ಬಂಡೆದ್ದವರು ಮತ್ತು ಷಡ್ಯಂತ್ರ ರೂಪಿಸಿದವರು ಯಾರೊಬ್ಬರೂ ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣಿಸಿಕೊಳ್ಳದಂತೆ ಯಡಿಯೂರಪ್ಪ ತಿರುಗೇಟು ನೀಡಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಲಿಂಗಾಯತ ಸಮುದಾಯದ ತಮ್ಮ ವಿರೋಧಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಉಮೇಶ್ ಕತ್ತಿ, ಮರುಗೇಶ್ ನಿರಾಣಿ ಮುಂತಾದವರು ಸಚಿವ ಸಂಪುಟದ ಒಳಗೆ ಪ್ರವೇಶಿಸುವಂತೆ ನೋಡಿಕೊಳ್ಳುತ್ತಾರೆಯೇ? ಅಥವಾ ಕಾಟಾಚಾರಕ್ಕೆ ಒಂದು ಖಾತೆ ಕೊಟ್ಟು ಹಣಿತ್ತಾರೆಯೇ ಎಂಬುದನ್ನು ಕೂಡ ಕಾದುನೋಡಬೇಕಿದೆ.
ಹಾಗೆಯೇ ಸಿಪಿ ಯೋಗೇಶ್ವರ್, ಸಿಟಿ ರವಿ ಮುಂತಾದ ಒಕ್ಕಲಿಗ ಸಮುದಾಯದ ತಮ್ಮ ವಿರೋಧಿ ಬಣದ ನಾಯಕರ ವಿಷಯದಲ್ಲಿ ಕೂಡ ಯಡಿಯೂರಪ್ಪ ಹೂಡುವ ತಂತ್ರಗಳು ಕುತೂಹಲ ಮೂಡಿಸಿವೆ.
ಇನ್ನು ಬಹಿರಂಗವಾಗಿ ತಮ್ಮ ವಿರುದ್ಧ ಮಾತಾಡದೇ ಇದ್ದರೂ ತಾವು ರಾಜೀನಾಮೆ ಕೊಡುವುದು ಸನ್ನಿಹಿತವಾಗುತ್ತಿದ್ದಂತೆ ವಿರೋಧಿ ಪಾಳಯದಲ್ಲಿ ತೂರಿಕೊಂಡ ತಮ್ಮದೇ ಆಪ್ತವಲಯದ ನಾಯಕರ ಸಮಯಸಾಧಕತನಕ್ಕೆ ಕೊಡ ಯಡಿಯೂರಪ್ಪ ಯಾವ ತಿರುಗೇಟು ಕೊಡುವವರು ಎಂಬುದು ಕೂಡ ಗಮನಿಸಬೇಕಾದ ಸಂಗತಿ.
ಹಿಂದೆ 80-90ರ ದಶಕದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅಧಿಕಾರಕ್ಕೆ ಬರುತ್ತಲೇ ಭವಿಷ್ಯದಲ್ಲಿ ತಮಗೆ ಪ್ರತಿಸ್ಪರ್ಧಿಗಳಾಗಬಹುದಾದ ವೈಕೆ ರಾಮಯ್ಯ ಮುಂತಾದ ನಾಯಕರನ್ನು ವ್ಯವಸ್ಥಿತವಾಗಿ ಬದಿಗೆ ಸರಿಸಿದ್ದರು. ಆ ಮಾತಿಗೆ ಸಿದ್ದರಾಮಯ್ಯ ಕೂಡ ಹೊರತಲ್ಲ. ಅವರು ಜೆಡಿಎಸ್ ತೊರೆಯಲು ಪ್ರಮುಖ ಕಾರಣವೇ ಗೌಡರ ಅಂತಹ ತಂತ್ರಗಾರಿಕೆ.
ಇದೀಗ ತಮ್ಮ ಅಧಿಕಾರ ಕಿತ್ತುಕೊಂಡ ಸೇಡು ಮತ್ತು ತಮ್ಮ ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯದ ಲೆಕ್ಕಾಚಾರದ ಮೇಲೆ ಯಡಿಯೂರಪ್ಪ ಕೂಡ ಅಂತಹದ್ದೇ ದಾರಿ ಹಿಡಿಯುವ ಸೂಚನೆ ನೀಡಿದ್ದಾರೆ.
ಹಾಗಾಗಿ ಮುಂದಿನ ದಿನಗಳಲ್ಲಿ ಅನುಭವಿ ‘ರಾಜಾಹುಲಿ’ ಯಡಿಯೂರಪ್ಪ ಆಡುವ ಆಟಗಳು ತೀವ್ರ ಕುತೂಹಲ ಹುಟ್ಟಿಸಿವೆ. ಆ ಅರ್ಥದಲ್ಲಿ ನಿಜವಾದ ಆಟ ಈಗ ಆರಂಭವಾಗಿದೆ.