ಭಾರತೀಯ ಮೂಲದ ಉದ್ಯಮಿ ಹಾಗೂ ಪದ್ಮಶ್ರೀ ವಿಜೇತ ಬಿ.ಆರ್ ಶೆಟ್ಟಿ ಯ ಸೇರಿದಂತೆ ಆರು ಮಂದಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ (ABDB) ಆರೋಪಿತರ ಹಾಗೂ ಕುಟುಂಬ ಸದಸ್ಯರ ಚರಾಸ್ತಿ,ಸ್ಥಿರಾಸ್ತಿ ವಿಲೇವಾರಿಯನ್ನು ಮತ್ತು ಖಾತೆಗಳ ವ್ಯವಹಾರವನ್ನು ತಕ್ಷಣವೇ ತಡೆಹಿಡಿಯಬೇಕೆಂದು ಮನವಿ ಮಾಡಿದೆ.
ಬಿ.ಆರ್.ಶೆಟ್ಟಿ ಮಾಲಿಕತ್ವದ NMC Health ಕಂಪೆನಿಯು ದಿವಾಳಿಯ ಅಂಚಿಗೆ ಬಂದಿದ್ದು, ಕಂಪೆನಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಇಂಗ್ಲೆಂಡಿನ ನ್ಯಾಯಲಯಕ್ಕೆ ದಾವೆ ಹೂಡಿರುವ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್(ADCB) ,NMC ಹೆಲ್ತ್ ಕಂಪೆನಿಯು ಈಗಾಗಲೇ ತನ್ನಿಂದ 3.6 ಬಿಲಿಯನ್ ಡಾಲರ್ ಸಾಲಕ್ಕೆ ಬಾಧ್ಯಸ್ಥಗೊಂಡಿದ್ದು ತನಗೆ ಒದಗಿಸಿದ ದಾಖಲೆಯ ವಿರುದ್ಧವಾಗಿ ಎಂಬತ್ತಕ್ಕೂ ಮಿಕ್ಕಿ ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ತನ್ನ ಸಾಲವನ್ನು ವಿಸ್ತರಿಸಿಕೊಂಡು ಹಣಕಾಸು ದಾಖಲೆ ಸಂಬಂಧಿಸಿದಂತೆ ವಂಚನೆ ನಡೆಸಿದೆ. ಕಂಪೆನಿಯು ADCB ಗೆ ಸೇರಿ ವಿವಿಧ ಬ್ಯಾಂಕುಗಳಿಗೆ ಸುಮಾರು 10 ಬಿಲಿಯನ್ ಡಾಲರಿನಷ್ಟು ಸಾಲ ಬಾಕಿಯಿದೆ. ಅದನ್ನು ತೀರಿಸುವ ಪರಿಸ್ಥಿತಿಯಲ್ಲಿ NMC ಹೆಲ್ತ್ ಕಂಪೆನಿಯು ಇಲ್ಲ. ಹಾಗಾಗಿ ಅದರ ಮೇಲೆ ‘ಜಂಟಿ ಆಡಳಿತ’ಕ್ಕಾಗಿ ಮನವಿ ಮಾಡಿದೆ. ಲಂಡನ್ ಸ್ಟಾಕ್ ಎಕ್ಸ್ಚೇಂಜಿನ ಪಟ್ಟಿಯಲ್ಲಿ NMC ಹೆಲ್ತ್ ಕಂಪೆನಿ ಇರುವುದರಿಂದ ಇಂಗ್ಲೆಂಡ್ ನ್ಯಾಯಾಲಯವು ಕಂಪೆನಿಯ ಮೇಲ್ವಿಚಾರಣೆ ನಡೆಸುತ್ತಿದೆ ಎಂದು CNBC TV18 ವರದಿ ಮಾಡಿದೆ.
1975 ರಲ್ಲಿ ಬಿ.ಆರ್.ಶೆಟ್ಟಿಯು ಸ್ಥಾಪಿಸಿದ NMC ಹೆಲ್ತ್ ಕಂಪೆನಿಯು 19 ದೇಶಗಳಿಗೆ ತನ್ನ ಕಾರ್ಯಚಟುವಟುವಟಿಕೆಯನ್ನು ವಿಸ್ತರಿಸಿಕೊಂಡಿದ್ದು ಸದ್ಯ 2000 ವೈದ್ಯರು ಹಾಗೂ 20000 ಇತರೆ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.
ಅವ್ಯವಹಾರದ ಆರೋಪ ಕೇಳಿಬಂದ ಬೆನ್ನಿಗೆ ಕಂಪೆನಿಯ ಷೇರುಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ಬಿ.ಆರ್.ಶೆಟ್ಟಿ ರಾಜಿನಾಮೆ ಸಲ್ಲಿಸಿದ್ದಾರೆ. ಅಲ್ಲದೆ ತನ್ನ ಮಾಲಿಕತ್ವದ ʼಫಿನ್‌ಬ್ಲೆರ್ʼ ಕಂಪೆನಿಯ ಮೇಲಿದ್ದ ಅಧಿಕಾರ ಸ್ಥಾನಕ್ಕೂ ರಾಜಿನಾಮೆ ಕೊಟ್ಟಿದ್ದಾರೆ.
ಬಿ.ಆರ್.ಶೆಟ್ಟಿ ಸ್ಥಾಪನೆಯ UAE ಎಕ್ಸ್‌ಚೇಂಜ್ ಮೇಲೆ UAE ಕೇಂದ್ರ ಬ್ಯಾಂಕ್ ತನಿಖೆ ನಡೆಸುತ್ತಿದ್ದು, ಸದ್ಯ ಬಿ.ಆರ್.ಶೆಟ್ಟಿ ಭಾರತಕ್ಕೆ ಪಲಾಯನ ಮಾಡಿದ್ದಾರೆಂದು ಅರಬ್ ಪತ್ರಿಕೆಗಳು ವರದಿ ಮಾಡಿದೆ.
ಈ ಕುರಿತು ‘ದಿ ನ್ಯಾಷನಲ್’ ಬಿ.ಆರ್.ಶೆಟ್ಟಿಯವರನ್ನು ಸಂಪರ್ಕಿಸಿದಾಗ, “ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಬಂದಿದ್ದು ಲಾಕ್‌ಡೌನ್ ಮುಕ್ತಾಯಗೊಂಡು ವಿಮಾನಯಾನ ಪ್ರಾರಂಭವಾದ ಬಳಿಕ UAE ಗೆ ಹಿಂತಿರುಗುವುದಾಗಿ ಹೇಳಿದ್ದಾರೆ. ಉಳಿದಂತೆ ಪ್ರಕರಣದ ಕುರಿತು ತನಗೆ ಹೆಚ್ಚಿನ ಮಾಹಿತಿಯಿಲ್ಲ, ತನಿಖೆ ನಡೆಯುತ್ತಿರುವುದಾಗಿ” ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಕಂಪೆನಿ ಸಂಬಂಧಿಸಿದ ಹಲವಾರು ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿರುವ ADC ಬ್ಯಾಂಕ್ ಆರೋಪಿತರ ಹಾಗೂ ಕುಟುಂಬದವರ ಆಸ್ತಿ ವಿಲೇವಾರಿ ಮಾಡದಂತೆ ಮತ್ತು ಖಾತೆಯನ್ನು ಫ್ರೀಝ್ ಮಾಡಿ ವಿದೇಶಿ ಪ್ರಯಾಣ ತಡೆಯುವಂತೆ ತನ್ನ ದೂರಿನಲ್ಲಿ ಕೋರಿಕೊಂಡಿದೆ. ರಾಜ್ಯದ ಒಳಗೆ ಮತ್ತು ಹೊರಗಡೆ ಕಂಪೆನಿಗೆ ಸಂಬಂಧಿಸಿದ ಎಲ್ಲಾ ಸ್ವತ್ತು, ರಿಯಲ್ ಎಸ್ಟೇಟ್, ದಾಖಲೆ ಕಡತಗಳು, ಕಂಪ್ಯೂಟರ್‌ಗಳು ಹಾಗೂ ಇತರೆ ಯಾವುದೇ ಸಂಬಂಧಿತ ಪುರಾವೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಆರೋಪಿಗಳ ನಿವಾಸದ ಮೇಲೆ ದಾಳಿ ನಡೆಸಿ ಶೋಧನೆ ಮಾಡಲು ಅಧಿಕಾರ ನೀಡಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದಾರೆಂದು “ಖಲೀಜ್ ಟೈಮ್ಸ್” ವರದಿ ಮಾಡಿದೆ.
2.4 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪೆನಿಯು ಒಟ್ಟು 6.6 ಬಿಲಿಯನ್ ಡಾಲರ್ ಸಾಲ ಹೊಂದಿದೆ. 2019 ಡಿಸೆಂಬರ್ ವೇಳೆಗೆ ಅಮೇರಿಕಾ ಮೂಲದ ಮಡ್ಡಿ ವಾಟರ್ಸ್ ರಿಸರ್ಚಿನ ‘ಕಾರ್ಸನ್ ಬ್ಲಾಕ್’ NMC ಹೆಲ್ತ್ ಸಂಸ್ಥೆಯ ಅವ್ಯವಹಾರಗಳನ್ನು ಕುರಿತು ವರದಿ ತಯಾರಿಸಿದ ಬಳಿಕ ಕಂಪೆನಿಯ ಷೇರಿನಲ್ಲಿ 70 ಶೇಕಡಾ ಕುಸಿದಿದೆ ಎಂದು ಒಂದು ತಿಂಗಳ ಹಿಂದೆ “ಅರೇಬಿಯನ್ ಬ್ಯುಸಿನೆಸ್” ತನ್ನ ವರದಿಯಲ್ಲಿ ಹೇಳಿತ್ತು.
ಸದ್ಯ ಭಾರತದಲ್ಲಿ ನೆಲೆಸಿರುವ ಬಿ.ಆರ್.ಶೆಟ್ಟಿಯ ಬ್ಯಾಂಕಿಂಗ್ ಮಾನ್ಯತೆಯನ್ನು ಭಾರತದಲ್ಲಿನ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ. ಮಾಹಿತಿಗಳ ಪ್ರಕಾರ UAE ಯಲ್ಲಿ ಬಿ.ಆರ್.ಶೆಟ್ಟಿಯ ಮೇಲೆ ಐದು ಕಾನೂನು ಪ್ರಕರಣಗಳು ದಾಖಲಾಗಿವೆ ಎಂದು ಔಟ್‌ಲುಕ್ ತನ್ನ ವರದಿಯಲ್ಲಿ ಹೇಳಿದೆ.
ಇದೊಂದು ವಿಶ್ವಮಟ್ಟದ ವಂಚನೆಯ ಪ್ರಕರಣವಾಗಿದ್ದು ಕಂಪೆನಿಯ ಆಡಳಿತ ಮಂಡಳಿ ಹಾಗೂ ಸದಸ್ಯರನ್ನು ಹೊಣೆಗಾರರನ್ನಾಗಿಸಬೇಕೆಂದು UAE ಬ್ಯಾಂಕ್ ಒಕ್ಕೂಟಗಳ ಅಧ್ಯಕ್ಷ ಅಬ್ದುಲ್ ಅಝೀಝ್ ಅಲ್‌ಗುರೈರ್ ಹೇಳಿದ್ದಾರೆ.
RSS ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಉಡುಪಿ ಮೂಲದ ಬಿ.ಆರ್.ಶೆಟ್ಟಿ ಜನಸಂಘದಿಂದ (ಈಗಿನ ಬಿಜೆಪಿ) ಸ್ಥಳೀಯ ಸಂಸ್ಥೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಬಾರಿ ವಿಜೇತರಾಗಿದ್ದರು. 2017 ರಲ್ಲಿ “ಏಷಿಯಾನೆಟ್ ನ್ಯೂಸೇಬಲ್” ವೆಬ್ ಅವತರಣಿಕೆಯು ವರದಿ ಮಾಡಿದ ಪ್ರಕಾರ ಬಿ.ಆರ್.ಶೆಟ್ಟಿಗೆ ಚುನಾವಣಾ ಪ್ರಚಾರದಲ್ಲಿ ವಾಜಪೇಯಿ ಹಾಗೂ ಅಂದಿಗೆ ಹದಿನಾರು ವರ್ಷದ ಪ್ರಾಯದ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಭಾರತದ ಪದ್ಮಶ್ರೀ ಪ್ರಶಸ್ತಿ ವಿಜೇತರಾಗಿದ್ದ ಬಿ.ಆರ್.ಶೆಟ್ಟಿ ʼಫೋರ್ಬ್ಸ್ʼ ಮಾಡಿದ್ದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಭಾವಿ ಭಾರತೀಯ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.