ರಾಜ್ಯದಲ್ಲಿ ದಿನಕ್ಕೊಂದು ಅನಗತ್ಯ ವಿವಾದಗಳು ತಲೆ ಎತ್ತುತ್ತಿದ್ದು, ಹಲಾಲ್ ಕಟ್ ಬೆನ್ನಲ್ಲೇ ಇದೀಗ ಅಜಾನ್ ಕಿರಿಕಿರಿ ನೆಪದಲ್ಲಿ ಮಸೀದಿಗಳಲ್ಲಿ ಮೈಕ್ ತೆಗೆದುಹಾಕುವ ಬಗ್ಗೆ ಚರ್ಚೆ ಆರಂಭವಾಗಿದೆ.
ಮಸೀದಿಗಳಲ್ಲಿ ಆಜಾನ್ ಸದ್ದಿನಿಂದ ತೊಂದರೆ ಆಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಧ್ವನಿವರ್ಧಕಗಳಲ್ಲಿನ ಶಬ್ಧದ ತೀವ್ರತೆ ಬಗ್ಗೆ ರಾಜ್ಯ ಪರಿಸರ ನಿಯಂತ್ರಣ ಗಮನ ಹರಿಸಲಿದೆ.

ಧ್ವನಿವರ್ಧಕಗಳಲ್ಲಿ ಶಬ್ಧದ ತೀವ್ರತೆ ಇಂತಿಷ್ಟೇ ಎಂದು ಮಂಡಳಿ ನಿಯಮ ರೂಪಿಸಿದೆ. ಇದಕ್ಕೆಂದೇ ನಾಲ್ಕು ವಲಯಗಳನ್ನು ವಿಭಾಗಿಸಿದೆ. ಬೆಳಗ್ಗೆ ಇಷ್ಟೆ ಡೆಸಿಬಲ್ ಇರಬೇಕು ಎಂದು ಮಂಡಳಿ ಮೂಲಕ “ನಾಯ್ಸ್ ರೂಲ್ಸ್-2000” ಕಾಯ್ದೆ ರೂಪಿಸಿದೆ. ತಾಂತ್ರಿಕ ಮಂಡಳಿಯ ಮುಖ್ಯಸ್ಥ ಮಹೇಶ್ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 6ವರೆಗೆ ಇಂತಿಷ್ಟೇ ಡೆಸಿಬಲ್, ಕೈಗಾರಿಕಾ ವಲಯದಲ್ಲಿ ಬೆಳಗ್ಗೆ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್, ವಾಣಿಜ್ಯ ವಲಯದಲ್ಲಿ ಬೆಳಗ್ಗೆ 65 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್, ನಿಶ್ಯಬ್ಧ ವಲಯದಲ್ಲಿ ಬೆಳಗ್ಗೆ 50 ಡೆಸಿಬಲ್, ರಾತ್ರಿ ವೇಳೆ 40 ಡೆಸಿಬಲ್, ವಸತಿ ವಲಯದಲ್ಲಿ ಬೆಳಗ್ಗೆ 55 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್ ನಿಗದಿಪಡಿಸಲಾಗಿದೆ.