ನಾ ದಿವಾಕರ ಅವರ ಬರಹ- ಭಾಗ – 1
ಆನೇಕಲ್ ಬಳಿಯ ಅತ್ತಿಬೆಲೆಯಲ್ಲಿ ಇತ್ತೀಚೆಗೆ ನಡೆದ ಪಟಾಕಿ ಮಳಿಗೆಯ ದುರಂತ ಮತ್ತೊಮ್ಮೆ ನಮ್ಮ ಸಾರ್ವಜನಿಕ ಜಾಗೃತ ಪ್ರಜ್ಞೆಗೆ ಬಲವಾದ ಪೆಟ್ಟು ನೀಡಿದೆ. ಪ್ರತಿ ವರ್ಷದ ದೀಪಾವಳಿ ಸಂದರ್ಭದಲ್ಲೂ ಪಟಾಕಿಯ ಸಿಡಿತದಿಂದ ಕಣ್ಣು ಕಳೆದುಕೊಳ್ಳುವವರು, ಜೀವ ತೆರುವವರು, ಊನ ಅನುಭವಿಸುವವರು ಸುದ್ದಿಗೆ ಗ್ರಾಸವಾಗುತ್ತಲೇ ಇರುತ್ತದೆ. ಪ್ರತಿಬಾರಿ ದೀಪಾವಳಿ ಹಬ್ಬದಾಚರಣೆಯಲ್ಲಿ ಮಕ್ಕಳು ಪಟಾಕಿಯ ಅವಘಡಗಳಿಗೆ ಈಡಾದಾಗ ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಸ್ವರ ಎಂದರೆ “ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು” !!!. ನಿಜ, ಪಟಾಕಿಯನ್ನು ಸಿಡಿಸುವಾಗ ಮಕ್ಕಳೊಂದಿಗೆ ಜಾಗ್ರತೆಯಿಂದಿರಬೇಕು. ಆದರೆ ಪಟಾಕಿಯ ಸಿಡಿತದಿಂದ ಅಪಾಯವಾಗಲಿಲ್ಲ ಎಂದ ಮಾತ್ರಕ್ಕೆ ಅದರಿಂದ ಹೊರಡುವ ವಿಷದ ಹೊಗೆ ಅಪಾಯಕಾರಿ ಅಲ್ಲ ಎಂದು ಹೇಳಲಾಗುವುದಿಲ್ಲ. ಹಿರಿಯರೂ ಈ ವಿಚಾರದಲ್ಲಿ ಜಾಗ್ರತೆಯಿಂದಿರಬೇಕಲ್ಲವೇ ? ಪರಿಸರದ ಪರಿವೆ ಇಲ್ಲದ ನಂಬಿಕೆ-ಆಚರಣೆಗಳಿಗೆ ಆತುಕೊಂಡ ಒಂದು ಸಮಾಜದಲ್ಲಿ ಈ ಪ್ರಶ್ನೆಯೇ ನೂರಾರು ಪ್ರಶ್ನೆಗಳನ್ನು ಸೃಷ್ಟಿಸುತ್ತದೆ.
ಆನೇಕಲ್ ದುರಂತದ ಸಂದರ್ಭದಲ್ಲಿ ನಾವು ನೋಡಬೇಕಿರುವುದು ಅಲ್ಲಿ ಮಡಿದ ಅಮಾಯಕ ಜೀವಗಳ ಕಡೆಗೆ ಎನ್ನುವುದು ಸತ್ಯ. ಆದರೆ ಪಟಾಕಿಯ ತಯಾರಿಕೆ, ಸಾಗಾಣಿಕೆ, ಸಂಗ್ರಹ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರು ತಮ್ಮ ದುಡಿಮೆಯ ಜೀವನದುದ್ದಕ್ಕೂ ಇದೇ ವಿಷದ ನಡುವೆಯೇ ಸಾಗುತ್ತಾರೆ ಎನ್ನುವುದೂ ನಮ್ಮ ಗಮನಸೆಳೆಯಬೇಕಲ್ಲವೇ ? ದೀಪಾವಳಿಯ ಆಚರಣೆಗೂ ಪಟಾಕಿ ಸಿಡಿಸುವುದಕ್ಕೂ ಇರುವ ಸಂಬಂಧವನ್ನು ಆಧುನಿಕ ಮಾನವ ಸಮಾಜ ರೂಢಿಸಿಕೊಂಡಿರುವುದೇ ಹೊರತು ಪಾರಂಪರಿಕವೇನೂ ಅಲ್ಲ. ದೀಪಗಳ ಹಬ್ಬವನ್ನು ಶಬ್ದಗಳ ಹಬ್ಬವನ್ನಾಗಿ ಮಾಡುವ ಮೂಲಕ ಆಧುನಿಕ ನಾಗರಿಕತೆಯು ಪಟಾಕಿ ಉದ್ಯಮದ ಮಾರುಕಟ್ಟೆಗೆ ಒಂದು ಲಾಭದಾಯಕ ಭೂಮಿಕೆಯನ್ನು ನೀಡಿದೆ. ಜನಸಾಮಾನ್ಯರ ನಂಬಿಕೆಗಳು ಸುಲಭವಾಗಿ ಸಡಿಲವಾಗುವುದಿಲ್ಲವಾದ್ದರಿಂದ, ದೀಪಾವಳಿ-ಪಟಾಕಿಯ ಸಂಬಂಧವೂ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ.
ಅತ್ತಿಬೆಲೆಯಂತಹ ಅವಘಡಗಳು ಸಂಭವಿಸಿದಾಗ ಸಾರ್ವಜನಿಕ ವಲಯದಲ್ಲೂ ಸಹ ಈ ಅಪಾಯಕಾರಿ ಸ್ಫೋಟಕ ವಸ್ತು ಮತ್ತು ಅದರಿಂದ ಹೊರಸೂಸುವ ವಿಷಾನಿಲದ ಬಗ್ಗೆ ಚರ್ಚೆ ಕೇಳಿಬರುತ್ತದೆ. ಇಂತಹ ಅಗ್ನಿ ದುರಂತಗಳಲ್ಲಿ ಹಲವರು ಒಮ್ಮೆಲೆ ದಹಿಸಿ ಹೋಗುತ್ತಾರೆ. ಸಮಾಜದ ಸಹಜ ಅನುಕಂಪ ಪಡೆಯುತ್ತಾರೆ. ಆದರೆ ಶಿವಕಾಶಿಯ ಪಟಾಕಿ ಉತ್ಪಾದನೆಯ ಕಾರ್ಖಾನೆಗಳಲ್ಲಿ ದಿನವಿಡೀ ದುಡಿಯುವ ಲಕ್ಷಾಂತರ ಕಾರ್ಮಿಕರು ಪಟಾಕಿಗೆ ಬಳಸುವ ರಾಸಾಯನಿಕ ವಸ್ತುಗಳು, ಮದ್ದಿನ ಪುಡಿಯ ನಡುವೆಯೇ ತಮ್ಮ ಇಡೀ ಬದುಕು ಸವೆಸುತ್ತಾ, ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದು, ಹಂತಹಂತವಾಗಿ ಸಾಯುತ್ತಿರುವುದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ಅಥವಾ ಸಹಾನುಭೂತಿಗೆ ಕಾರಣವಾಗಿಲ್ಲ. ಬೆಂಕಿ ದುರಂತ ಸಂಭವಿಸಿದ ಕೂಡಲೇ ಎಚ್ಚೆತ್ತಿರುವ ಆಡಳಿತ ವ್ಯವಸ್ಥೆಗೆ ಅತ್ತಿಬೆಲೆಯ ಸುತ್ತಮುತ್ತ 500ಕ್ಕೂ ಹೆಚ್ಚು ಅನಧಿಕೃತ ಪಟಾಕಿ ಮಳಿಗೆಗಳು ಇದ್ದುದು ಈವರೆಗೆ ಏಕೆ ಕಾಣಲಿಲ್ಲ ?
ಅತ್ತಿಬೆಲೆಯ ಪಟಾಕಿ ದುರಂತ : ಶಿವಕಾಶಿಯ ಅಪಾಯಕಾರಿ ಗೂಡುಗಳು
ಇಂತಹ ನೂರಾರು ಅವಘಡಗಳೇ ಶಿವಕಾಶಿಯ ಪಟಾಕಿ ಉದ್ಯಮದಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಕಾರಣವಾಗಿದೆ. ಆದರೆ ದೈಹಿಕವಾಗಿ ಎಂತಹುದೇ ಸುರಕ್ಷತಾ ಕವಚಗಳನ್ನು ಒದಗಿಸಿದರೂ, ಅಲ್ಲಿ ಹಗಲು ರಾತ್ರಿ ದುಡಿಯುವ ಶ್ರಮಿಕರು ಎದುರಿಸುವ ಇತರ ಆರೋಗ್ಯ ಸಮಸ್ಯೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಶ್ವಾಸಕೋಶದ ತೊಂದರೆ, ಚರ್ಮದ ಸಮಸ್ಯೆಗಳು ಮತ್ತಿತರ ದೇಹದ ಆಂತರಿಕ ಅನಾರೋಗ್ಯಗಳು ಎಲ್ಲ ಕಾರ್ಮಿಕರನ್ನೂ ಕಾಡುತ್ತಲೇ ಇರುತ್ತದೆ. ಹಲವಾರು ವರ್ಷಗಳ ಕಾಲ ಈ ವಾತಾವರಣದಲ್ಲೇ ತಮ್ಮ ಬೆವರುಗೂಡುಗಳಲ್ಲಿ ದುಡಿಯುವ ಶ್ರಮಿಕರು ವೃದ್ಧಾಪ್ಯಕ್ಕೆ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಜೀವನಪರ್ಯಂತ ಹಲವು ಕಾಯಿಲೆಗಳಿಂದ ಬಳಲುವ ಈ ಶ್ರಮಿಕ ವರ್ಗ ಅತ್ಯಂತ ನಿರ್ಲಕ್ಷಿತ ಸಮುದಾಯ ಎಂದೇ ಹೇಳಬಹುದು.
300-350 ರೂಗಳ ದಿನಗೂಲಿಗೆ ದುಡಿಯುವ ಕಾರ್ಮಿಕರು ತಮ್ಮ ಬಹುಪಾಲು ದುಡಿಮೆಯನ್ನು ಸಂಜೆಯ ಸಾರಾಯಿ ಸೇವನೆಗೆ ಮೀಸಲಿಡುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯ. ಶಿವಕಾಶಿ ಬಳಿಯ ಆಲಮರತ್ತುಪಟ್ಟಿ ಗ್ರಾಮದ ಬರಡು ಭೂಮಿಯಲ್ಲಿ ಕಾಣುವುದು ಎರಡೇ. ಒಂದು ಸಾಲು ಸಾಲು ಪಟಾಕಿ ಕಾರ್ಖಾನೆಗಳು, ಎರಡನೆಯದು ಸಾರಾಯಿ ಅಂಗಡಿ. ಪುರುಷರು ತಮ್ಮ ಅರ್ಧ ದುಡಿಮೆಯನ್ನು ಸಾರಾಯಿಯಲ್ಲಿ ಮುಳುಗಿಸುತ್ತಾರೆ. ಇದನ್ನು ಸರಿದೂಗಿಸಲು ತಾವೂ ದುಡಿಯುವ ಕುಟುಂಬದ ಮಹಿಳೆಯರು ತಮ್ಮ ವರಮಾನದಿಂದ ಸಂಸಾರ ನಡೆಸುತ್ತಾರೆ. ಇಷ್ಟೇ ಅಲ್ಲದೆ ಅಧಿಕೃತ ಪರವಾನಗಿ ಇಲ್ಲದೆಯೇ ನಡೆಸಲಾಗುವ ಪಟಾಕಿ ಕಾರ್ಖಾನೆಗಳಲ್ಲಿ ದುಡಿಯುವ ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ದುಡಿಮೆಯೊಂದಿಗೇ ಅಪಾಯಕಾರಿ ರಾಸಾಯನಿಕ ವಸ್ತುಗಳೊಡನೆಯೂ ಸೆಣಸಾಡಬೇಕಾಗುತ್ತದೆ. ಪಟಾಕಿ ಕಾರ್ಖಾನೆಯೊಳಗೆ ಹೊಕ್ಕು ನೋಡಿದರೆ ಅಲ್ಲಿ ಮುಖವೆಲ್ಲಾ ಬೂದಿ ಮೆತ್ತಿಕೊಂಡ, ಕಣ್ಣುಗಳನ್ನು ಕೆಂಪಾಗಿಸಿಕೊಂಡ ಅಮಾಯಕ ಜೀವಗಳನ್ನು ಧಾರಾಳವಾಗಿ ನೋಡಬಹುದು. ದುಡಿಮೆ ಮುಗಿದ ಕೂಡಲೇ ಬೇಗನೆ ಮೈ ತೊಳೆಯದೆ ಹೋದರೆ ಚರ್ಮಕ್ಕೆ ಮೆತ್ತಿದ ಪುಡಿ ಹೋಗುವುದೇ ಕಷ್ಟವಾಗಿ ಚರ್ಮರೋಗಗಳು ಉಂಟಾಗುತ್ತವೆ. ಕತ್ತಿನ ಮೇಲೆ, ಎದೆಯ ಮೇಲೆ, ಹೊಟ್ಟೆಯ ಮೇಲೆ ಇರುವ ಮಚ್ಚೆಗಳಿಗೆ ಮೆತ್ತಿರುವ ಪುಡಿ ಹಾಗೆಯೇ ಉಳಿದು ಸಮಸ್ಯೆ ಉಲ್ಬಣಿಸುತ್ತದೆ.
ಕೆಲವು ಕಾರ್ಮಿಕರು ಸ್ನಾನ ಮಾಡಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಮುಖದಲ್ಲಿ ಬೊಬ್ಬೆಗಳು ಎದ್ದಿರುತ್ತವೆ. ಆಟಂ ಬಾಂಬ್ ತಯಾರಿಕೆಯಲ್ಲಿನ ಕಾರ್ಮಿಕರು ತಮ್ಮ ಬೆರಳುಗಳಿಗೆ ಅಂಟಿಕೊಂಡಂತೆ ಪೇಪರ್ ಸುತ್ತಿರುತ್ತಾರೆ. ಇಲ್ಲವಾದರೆ ಅವರಿಗೆ ಚರ್ಮದ ತುರಿಕೆ ನಿರಂತರವಾಗಿಬಿಡುತ್ತದೆ. ಈ ಕವಚದ ಹೊರತಾಗಿಯೂ ತುರಿಕೆ ಮುಕ್ತರಾಗುವುದಿಲ್ಲ ಎಂದು ಹಲವರು ಹೇಳುತ್ತಾರೆ. ಬಹುಪಾಲು ಕಾರ್ಮಿಕರು ತಯಾರಿಕೆಯ ಪ್ರಕ್ರಿಯೆಯಲ್ಲಿ ಪಟಾಕಿಗಳಿಗೆ ಬಳಸುವ ರಾಸಾಯನಿಕ ವಸ್ತುಗಳನ್ನು ನೇರವಾಗಿ ಕೈಯ್ಯಿಂದಲೇ ಮುಟ್ಟುತ್ತಾರೆ. ಕೈಗವಸು ಬಳಸುವುದು ಅಪರೂಪವಾಗಿ ಕಾಣುತ್ತದೆ. ಬಳಸಿದರೂ ಅದರಿಂದ ಕೆಲಸದ ವೇಗ ಕಡಿಮೆಯಾಗುವ ಧಾವಂತ ಕಾರ್ಮಿಕರಲ್ಲಿರುತ್ತದೆ. ಹೀಗೆ ಕಡಿಮೆಯಾದರೆ ಅವರ ದೈನಂದಿನ ಉತ್ಪಾದನೆ ಕಡಿಮೆಯಾಗಿ ದಿನಗೂಲಿಗೆ ಕತ್ತರಿ ಬೀಳುತ್ತದೆ. ಪಟಾಕಿಗೆ ರಾಸಾಯನಿಕ ಮದ್ದು ಬೆರೆಸುವ ಮತ್ತು ತುಂಬುವ ಅಪಾಯಕಾರಿ ಕೆಲಸದಲ್ಲಿ ತರಬೇತಿ ಪಡೆದವರನ್ನೇ ಬಳಸಲಾಗುತ್ತದೆ, ಉಳಿದೆಲ್ಲಾ ಪ್ರಕ್ರಿಯೆಗಳು ಅಪಾಯಕಾರಿ ಅಲ್ಲ ಎಂಬ ಉದ್ಯಮಿಗಳ ಅರ್ಧಸತ್ಯದ ಮಾತುಗಳು ಸಂಪೂರ್ಣ ಸುಳ್ಳು ಎನ್ನುವುದನ್ನು ಒಳಹೊಕ್ಕು ನೋಡಬಹುದು. ಏಕೆಂದರೆ ಉದ್ಯಮಿಗಳ ದೃಷ್ಟಿಯಲ್ಲಿ ಅಪಾಯಕಾರಿ ಎಂದರೆ ಜೀವಹಾನಿ ಮಾಡುವ ಪ್ರಕ್ರಿಯೆ ಮಾತ್ರ ಎಂದಿರುತ್ತದೆ. ಚರ್ಮರೋಗಗಳು ಇತರ ಶ್ವಾಸಕೋಶದ ಸಮಸ್ಯೆಗಳು ಇವರ ಗಣನೆಗೆ ಬರುವುದೇ ಇಲ್ಲ. ಇಲ್ಲಿ ದುಡಿಯುವವರ ದೇಹವೂ ಸಹ ರಾಸಾಯನಿಕ ವಸ್ತುಗಳಿಗೆ ಒಗ್ಗಿಹೋಗುವಂತಿರಬೇಕು, ಆಗ ಹೆಚ್ಚಿನ ಅಲರ್ಜಿ ಆಗುವುದಿಲ್ಲ ಎಂದು ಕಾರ್ಮಿಕರೇ ಹೇಳುವುದು ದುರಂತ ವಾಸ್ತವದ ಚೋದ್ಯವೇ ಸರಿ.
ಮುಂದುವರೆಯಲಿದೆ…