ದಿನಾಂಕ ೦೫ˌ ನವಂಬರ್ˌ ೨೦೧೬ ರಂದು history of mysuru ಹೆಸರಿನ ಜಾಲತಾಣದ ಬ್ಲಾಗ್ಸ್ಪಾಟ್ನಲ್ಲಿ ‘ದಿ ಟೋಲ್ಡ್ ಆಂಡ್ ಅನ್-ಟೋಲ್ಡ್ ಹಿಸ್ಟರಿ ಆಫ್ ಮೈಸೂರ್ ಕಿಂಗಡಮ್’ ಎಂಬ ಶಿರ್ಷಿಕೆಯ ಅಡಿಯಲ್ಲಿ ಲೇಖಕರ ಹೆಸರಿಲ್ಲದೆ ಪ್ರಕಟವಾಗಿರುವ ಅಂಕಣವೊಂದರಲ್ಲಿ ರಾಜಕೀಯ ಪ್ರೇರಿತ ಧಾರ್ಮಿಕ ಸಂಘರ್ಷಗಳ ಸಂದರ್ಭದಲ್ಲಿ ಹಿಂದೂ ಲಿಂಗಾಯತರ ಮೇಲಿನ ಆಕ್ರಮಣಗಳು ಹಾಗು ಹತ್ಯಾಕಾಂಡಗಳು ಎನ್ನುವ ತಲೆಬರಹದಲ್ಲಿ ಅನೇಕ ಸತ್ಯ ಸಂಗತಿಗಳನ್ನು ಪ್ರಾಸ್ತಾಪಿಸಲಾಗಿದೆ. ಆ ಲೇಖನದ ಸಾರಾಂಶವನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಆ ಲೇಖನವುˌ ಪ್ರಸ್ತುತ ದಿನದಲ್ಲಿ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ದಂಗೆಗಳು ಮತ್ತು ಜನಾಂಗೀಯ ಹಲ್ಲೆಗಳ ಕುರಿತು ಸಮಾಜದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ ಎಂದು ಆರಂಭಗೊಂಡು ಒಂದು ನಿರ್ಧಿಷ್ಟ ಧರ್ಮದ ಪ್ರಜೆಗಳು ತಮ್ಮದೆ ಧರ್ಮದ ರಾಜರು ಅಥವಾ ಯೋಧರಿಂದ ಕೊಲ್ಲಲ್ಪಟ್ಟ ನಿದರ್ಶನಗಳು ಇತಿಹಾಸದಲ್ಲಿ ಅಪರೂಪವಾಗಿ ನೋಡಲ್ಪಡುತ್ತವೆ ಎನ್ನುತ್ತಾ ಮುಂದುವರೆಯುತ್ತದೆ.
ನಾವು ಆ ಇತಿಹಾಸದ ಕಾಲಘಟ್ಟವನ್ನು ಒಮ್ಮೆ ಅವಲೋಕಿಸುವ ಮೂಲಕ ಇಂದಿನ ದಿನಮಾನದಲ್ಲಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುತ್ತಾ ಅಂತಹ ಘಟನೆಗಳ ಬಗ್ಗೆ ನಿರ್ಲಿಪ್ತ ಭಾವ ತಾಳಬೇಕಾಗುತ್ತದೆ ಎಂದು ಬರೆಯಲಾಗಿದೆ. ಹೀಗೆˌ ನಾವು ಇತಿಹಾಸ ಕಾಲದ ಇಂತಹ ಸಂಗತಿಗಳನ್ನು ತಿಳಿದುಕೊಳ್ಳುವುದು ಭಾರತದಂತಹ ವೈವಿಧ್ಯಮಯ ದೇಶದ ಸಂಕೀರ್ಣ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಧರ್ಮ ಆಧಾರಿತ ಘರ್ಷಣೆಗಳ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ಉದ್ಭವಿಸುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಅಪಾರವಾಗಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಲೇಖಕರು. ಈ ಲೇಖನವು ಕರ್ನಾಟಕದಲ್ಲಿ ಅದೂ ವಿಶೇಷವಾಗಿ ಆಧುನಿಕ ಹಿಂದೂ ಧರ್ಮದ ಇತಿಹಾಸದಲ್ಲಿ ಅಂತಹ ಒಂದು ಅಮಾನುಷ ಘಟನೆಯನ್ನು ನಮಗೆ ಪರಿಚಯಿಸುತ್ತದೆ, ಅದರಲ್ಲಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿರುವ ರಾಜನಿಂದಾದ ಅದೇ ಹಿಂದೂ ಲಿಂಗಾಯತ ಪಂಗಡಕ್ಕೆ ಸೇರಿದ ಜನರಿಗೆ ನೀಡಲಾದ ಕಿರುಕುಳ ಮತ್ತು ಲಿಂಗಾಯತರ ಸಾಮೂಹಿಕ ಹತ್ಯೆಯ ಘಟನೆಯನ್ನು ವಿವರಿಸುತ್ತದೆ.
ಆ ಲೇಖನವು ೧೭ ಮತ್ತು ೧೮ನೇ ಶತಮಾನದ ಉತ್ತರಾರ್ಧದ ಸಂಘರ್ಷಗಳನ್ನು ವಿಶೇಷವಾಗಿ ವಿವರಿಸಿದೆ. ವಿವಿಧ ರಾಜಕೀಯ ಪಕ್ಷಗಳು ಅನುಸರಿಸುತ್ತಿರುವ ಧರ್ಮಾಧಾರಿತ ರಾಜಕೀಯಕ್ಕೆ ಧನ್ಯವಾದಗಳನ್ನು ಹೇಳುವ ಲೇಖಕ, ವಿವಿಧ ಧಾರ್ಮಿಕ ನಂಬಿಕೆಗಳುಳ್ಳ ಅನೇಕ ರಾಜರ ನಡುವಿನ ಸಂಘರ್ಷಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಈ ಘಟನೆಗಳು ರಾಜರುಗಳ ಸ್ವಾರ್ಥ ಜನರ ನಂಬಿಕೆ ಕಳೆದುಕೊಂಡ ರಾಜಸತ್ತೆಗಳ ಕ್ರೂರತೆಯನ್ನು ತೋರಿಸುತ್ತದೆ ಎನ್ನಲಾಗಿದೆ. ಇತಿಹಾಸದ ಆ ನಿರ್ಧಿಷ್ಟ ಕಾಲಘಟ್ಟದಲ್ಲಿ ರಾಜರುˌ ವಿಶೇಷವಾಗಿ ಹಿಂದೂ ವಿರೋಧಿ ಎಂದು ಆರೋಪಿಸಲಾಗುವ ಮುಸ್ಲಿಂ ಆಡಳಿತಗಾರರು ಮುಸ್ಲಿಮೇತರರ ಹತ್ಯಾಕಾಂಡಗಳನ್ನು ಮಾಡಿದ್ದಾರೆ ಎಂದು ಹಿಂದೂತ್ವವಾದಿಗಳು ಆಗಾಗ್ಗೆ ಆರೋಪಿಸುವುದನ್ನು ಇಲ್ಲಿ ಚರ್ಚಿಸಲಾಗಿದೆ. ಭಾರತದ ಇತರ ಪ್ರದೇಶಗಳಲ್ಲಿ ನಡೆದಂತೆಯೆ ಅಂದಿನ ಅಧುನಿಕ ಕರ್ನಾಟಕದ ಮೈಸೂರು ಸಾಮ್ರಾಜ್ಯವು ವಿಭಿನ್ನ ಧರ್ಮಾಧಾರಿತ ನಂಬಿಕೆಯುಳ್ಳ ಆಡಳಿತಗಾರರ ನಡುವಿನ ಸಂಘರ್ಷಗಳಿಗೆ ಸಾಕ್ಷಿಯಾಗಿದೆ ಎನ್ನುತ್ತದೆ ಲೇಖನ. ಉದಾಹರಣೆಗೆ, ವಿಪರ್ಯಾಸವೆನ್ನುವಂತೆ ಹಿಂದೂ ಮರಾಠರೊಂದಿಗೆ ಮೈತ್ರಿ ಮತ್ತು ರಕ್ತ ಸಂಬಂಧ ಹೊಂದಿದ್ದ ಬಿಜಾಪುರದ ಮುಸ್ಲಿಂ ಸುಲ್ತಾನರು ಬಸವಾಪಟ್ಟಣದ ಹಿಂದೂ ದೊರೆ ಹನುಮಪ್ಪ ನಾಯಕರೊಂದಿಗೆ ಸದಾ ಕದನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ ಎನ್ನುವುದು ಲೇಖನದ ಮುಖ್ಯಾಂಶವಾಗಿದೆ(೧).
ಅಂದಿನ ಕಾಲದಲ್ಲಿ ಆಳುವ ರಾಜನ ಧಾರ್ಮಿಕ ನಂಬಿಕೆಯನ್ನು ಲೆಕ್ಕಿಸದೆ ಹಿಂದಿನ ಮೈಸೂರು ರಾಜ್ಯದಲ್ಲಿ ಧಾರ್ಮಿಕ ಗುಂಪುಗಳ ನಡುವಿನ ಸಂಘರ್ಷವು ಸುದೀರ್ಘ ಇತಿಹಾಸವನ್ನು ಹೊಂದಿದೆ ಎನ್ನುವುದು ಲೇಖನದ ಆಸಕ್ತಿದಾಯಕ ತಿರುಳಾಗಿದೆ. ಅನೇಕ ಮುಸ್ಲಿಮ್ ಸೂಫಿ ಸಂತರು ಮುಸ್ಲಿಮರೇ ಆಳುತ್ತಿದ್ದ ಬಿಜಾಪುರ ಆದಿಲಶಾಹಿ ಸಾಮ್ರಾಜ್ಯದಿಂದ ತಪ್ಪಿಸಿಕೊಂಡು ಹಿಂದೂ ಮೈಸೂರು ಒಡೆಯರ್ ರಾಜಸತ್ತೆಯಲ್ಲಿ ಆಶ್ರಯ ಪಡೆದಿದ್ದರು ಎನ್ನುವ ಸಂಗತಿ ಇತಿಹಾಸಕಾರರು ದಾಖಲಿಸಿದ್ದಾರೆ. ಅದರಂತೆ ಮೊಘಲ್ ಚಕ್ರವರ್ತಿ ಅಲಂಗೀರ್ ಔರಂಗಜೇಬ್ ಭಾರತವನ್ನು ಆಕ್ರಮಿಸಿ ಸ್ವಾಧೀನಪಡಿಸಿಕೊಂಡಾಗ (೨), ಸಾಮಾನ್ಯ ನಿವಾಸಿಗಳು ಇದೇ ರೀತಿಯ ಅನುಭವಗಳನ್ನು ಹೊಂದಿದ್ದರು. ಆಧುನಿಕ ಉತ್ತರ ಕರ್ನಾಟಕದ ಬಹುತೇಕ ಹಿಂದೂಗಳು ಮರಾಠಾ ರಾಜನಾಗಿದ್ದ ಶಿವಾಜಿಯ ಆಕ್ರಮಣಗಳಿಂದ ತೊಂದರೆಯನ್ನು ಅನುಭವಿಸಿದ್ದಾರೆ. ಶಿವಾಜಿ ತನ್ನ ದಾಳಿಗಳಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ, ಕಾರವಾರ, ಅಂಕೋಲಾ ಮುಂತಾದ ಪಟ್ಟಣಗಳನ್ನು ನಾಶ ಮಾಡಿದ್ದ (೩). ಶಿವಾಜಿಯ ನಂತರವೂ ಕೂಡ ಮರಾಠಾ ಆಡಳಿತವು ನೆರೆಯ ಕನ್ನಡ ಸಾಮ್ರಾಜ್ಯಗಳಿಗೆ ಒಳಪಟ್ಟಿದ್ದ ಪಟ್ಟಣ, ಹಳ್ಳಿ, ದೇವಾಲಯ ಮತ್ತು ಕೃಷಿಭೂಮಿಗಳನ್ನ ಲೂಟಿ ಮಾಡಿ ಅಲ್ಲಿ ತ್ಯಾಜ್ಯಗಳನ್ನು ಎಸೆಯುತಿತ್ತು ಎನ್ನುವ ಬಗ್ಗೆ ಐತಿಹಾಸಿಕ ದಾಖಲೆಗಳಿವೆ ಎನ್ನುತ್ತದೆ ಆ ಲೇಖನ.
ಹಿಂದೂ ಒಡೆಯರ್ ಆಳ್ವಿಕೆ ಮತ್ತು ಮುಸ್ಲಿಂ ಹೈದರ್ ಅಲಿ ಮತ್ತು ಟಿಪ್ಪು ಆಡಳಿತದಲ್ಲಿ ಮೈಸೂರು ಸಂಸ್ಥಾನವು ಮರಾಠರ ಆಕ್ರಮಣಕ್ಕೆ ಬಲಿಯಾಗಿತ್ತು. ಮರಾಠರು ಹಿಂದೂ ಪುಣ್ಯಕ್ಷೇತ್ರ ಶೃಂಗೇರಿ ಮಠವನ್ನು ಹಾಳುಗೆಡವಿದರು ಹಾಗು ಅಲ್ಲಿನ ಬ್ರಾಹ್ಮಣ ಪುರೋಹಿತರನ್ನು ಹತ್ಯೆ ಮಾಡಿದ್ದರು ಎನ್ನುತ್ತದೆ ಲೇಖನ (೪ˌ ೫). ಹಿಂದೂ ವಿರೋಧಿಗಳೆಂದು ಗಂಭೀರವಾದ ಆರೋಪಗಳನ್ನು ಎದುರಿಸುವ ಮುಸ್ಲಿಂ ದೊರೆ ಟಿಪ್ಪು ಅನೇಕ ಹಿಂದೂ ದೇವಾಲಯದ ಜೀರ್ಣೋದ್ಧಾರ ಮಾಡಿದ ಬಗ್ಗೆ ದಾಖಲೆಗಳಿವೆ (೬). ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಸಮಕಾಲೀನ ಇತಿಹಾಸಕಾರ ಕಿರ್ಮಾನಿ ಪ್ರಕಾರ, ಮಲಬಾರ್ ಕರಾವಳಿಯಲ್ಲಿ ಮೈಸೂರು ಆಡಳಿತಗಾರರ ವಿಧ್ವಂಸಕ ಕಾರ್ಯಾಚರಣೆಗಳ ಆರಂಭಿಕ ಆಕ್ರಮಣಗಳು ೧೭೫೦ ರ ದಶಕದಲ್ಲಿ ಮೈಸೂರಿನ ಹಿಂದೂ ಒಡೆಯರ್ ಆಳ್ವಿಕೆಯಲ್ಲಿ ಸಂಭವಿಸಿವೆ. ವಾಸ್ತವವಾಗಿ, ಮೈಸೂರು ಮಹಾರಾಜರಿಂದ ಮಲಬಾರ್ ಕರಾವಳಿಯನ್ನು ಕಡಿತಗೊಳಿಸುವ ಅಭಿಯಾನಕ್ಕೆ ನವಾಬ್ ಹೈದರ್ ಅಲಿಯನ್ನು ಕಳುಹಿಸಿದಾಗ ಮೊದಲು ಈ ಪ್ರದೇಶದ ಮೇಲೆ ಆಕ್ರಮಣ ಸಂಭವಿಸಿತು. ಆಗ ಮಲಬಾರ್ ಕರಾವಳಿಯ ಹಿಂದೂ ನಾಯರ್ ಮತ್ತು ಮುಸ್ಲಿಂ ಮಾಪಿಳ್ಳರು ಹೈದರ್ ಅಲಿಯ ಆಕ್ರಮಣವನ್ನು ವಿರೋಧಿಸಿತ್ತಲೆ ಅದರ ಕೆಟ್ಟ ಪರಿಣಾಮಗಳನ್ನು ಅನುಭವಿಸಿದರು ಎಂದು ಹೇಳಲಾಗುತ್ತದೆ(೭). ಈ ಎಲ್ಲ ಘಟನೆಗಳು ವಿವಿಧ ಧಾರ್ಮಿಕ ನಂಬಿಕೆಯುಳ್ಳ ರಾಜರ ಮತ್ತು ಜನರ ನಡುವಿನ ಹಿಂಸಾತ್ಮಕ ಸಂಘರ್ಷಗಳನ್ನು ಮರೆಮಾಡಿವೆ ಎನ್ನುತ್ತದೆ ಲೇಖನ.
೧೭ ನೇ ಶತಮಾನದಲ್ಲಿ ಮೈಸೂರಿನ ಹಿಂದೂ ಒಡೆಯರ್ ಆಳ್ವಿಕೆಯಲ್ಲಿ ಹಿಂದೂ ಲಿಂಗಾಯತರ ಸಾಮೂಹಿಕ ಹಾಗು ಗುಪ್ತ ಹತ್ಯಾಕಾಂಡಗಳ ಕ್ರೌರ್ಯವನ್ನು ನಾವು ನೋಡಬಹುದಾಗಿದೆ. ಟಿಪ್ಪು ಸುಲ್ತಾನ್ ಕೇರಳದ ಹಿಂದೂ ನಾಯರ್‌ಗಳು ಮತ್ತು ಕೊಡವ (೮) ರೊಂದಿಗೆ ಸಂಘರ್ಷಗಳನ್ನು ಹೊಂದಿದ್ದ. ಟಿಪ್ಪು ಸುಲ್ತಾನ ಬಲವಂತದ ಮತಾಂತರ ಮಾಡುತ್ತಿದ್ದ ಎನ್ನುವ ಹಿಂದುತ್ವಮಾದಿ ಧರ್ಮಾಂಧರ ಆರೋಪವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಆದಾಗ್ಯೂ, ವಿಪರ್ಯಾಸದ ಸಂಗತಿ ಏನೆಂದರೆˌ ೧೭ನೇ ಶತಮಾನದ ಅಂತ್ಯದ ವೇಳೆಗೆ ಮೈಸೂರಿನ ಹಿಂದೂ ರಾಜನಾದ ಚಿಕ್ಕದೇವರಾಜ ಒಡೆಯರ್ ತನ್ನ ರಾಜ್ಯದಲ್ಲಿ ಶಾಂತಿಯಿಂದ ಬಾಳುತ್ತಿದ್ದ ಹಿಂದೂ ಲಿಂಗಾಯತರ ಮೇಲೆ ಮಾಡಿದ ಧಾರ್ಮಿಕ ಆಕ್ರಮಣ ಮತ್ತು ಹತ್ಯಾಕಾಂಡಗಳು ಚರ್ಚೆಯ ಮುನ್ನೆಲೆಗೆ ಬರದೆಯಿರುವುದು (೯). ಎಡ್ಗರ್ ಥರ್ಸ್ಟನ್ ಬ್ರಿಟಿಷ್ ಆಡಳಿತದಲ್ಲಿದ್ದ ಒಬ್ಬ ಶ್ರೇಷ್ಟ ಮಾನವಶಾಸ್ತ್ರಜ್ಞನಾಗಿದ್ದು ದಕ್ಷಿಣ ಭಾರತದ ಜಾತಿ ಮತ್ತು ಜಾತಿ ವ್ಯವಸ್ಥೆಯ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಇದರಲ್ಲಿ ‘ಕಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸೌತ್ ಇಂಡಿಯಾ’ ಕೂಡ ಒಂದು. ಈ ಪುಸ್ತಕಕ್ಕೆ ರಂಗಾಚಾರಿ ಕೂಡ ಒಬ್ಬ ಸಹ-ಲೇಖಕರಾಗಿದ್ದಾರೆ.
ಮುಂದುವರೆಯುವುದು…