ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಭಾನುವಾರ (ಆಗಸ್ಟ್ 27) ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಮುಂದಿನ ವಿಧಾನಸಭೆಯಲ್ಲಿ ಬಿಜೆಪಿಗೆ ಸೋಲು ಖಚಿತ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ದಲಿತ ಯುವಕನನ್ನು ಹೊಡೆದು ಕೊಲೆ ಮಾಡಲಾಗಿದೆ. ಗೂಂಡಾಗಳು ಯುವಕನ ತಾಯಿಯನ್ನು ಬಿಟ್ಟಿಲ್ಲ. ಬಿಜೆಪಿ ಮಧ್ಯಪ್ರದೇಶವನ್ನು ದಲಿತ ದೌರ್ಜನ್ಯಗಳ ಪ್ರಯೋಗಶಾಲೆಯನ್ನಾಗಿ ಮಾಡಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ಅಪರಾಧಗಳ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಗರದಲ್ಲಿ ಸಂತ ರವಿದಾಸ್ ದೇವಾಲಯ ನಿರ್ಮಿಸುತ್ತೇನೆ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದಲ್ಲಿ ದಲಿತ ಹಾಗೂ ಆದಿವಾಸಿಗಳ ಮೇಲಿನ ನಿರಂತರ ದೌರ್ಜನ್ಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಖರ್ಗೆ, ಕ್ಯಾಮೆರಾ ಮುಂದೆ ಹಿಂದುಳಿದವರ ಪಾದಗಳನ್ನು ತೊಳೆಯುವ ಮೂಲಕ ತಮ್ಮ ಅಪರಾಧವನ್ನು ಮರೆಮಾಚಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಜನರು ಬಿಜೆಪಿಯ ಬಲೆಗೆ ಬೀಳುವುದಿಲ್ಲ. ಕೆಲವೇ ತಿಂಗಳಲ್ಲಿ ಸಮಾಜದ ಶೋಷಿತ ವರ್ಗಗಳ ಸಂಕಟಕ್ಕೆ ತಕ್ಕ ಉತ್ತರ ಸಿಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.